Wednesday, 11th December 2024

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಅಗತ್ಯ

ದೇಶದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾವಕಾಶ ಕಲ್ಪಿಸುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದ ಆರೋಪ ಕೇಳಿ ಬಂದ ಬೆನ್ನಲ್ಲೇ ಕಾಲೇಜು ಉಪನ್ಯಾಸಕರ ನೇಮಕ ಮತ್ತು ಫೆಲೋಶಿಪ್‌ಗೆ ಮಾನದಂಡವಾಗಿ ಯುಜಿಸಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲೂ ಅಕ್ರಮಗಳು ನಡೆದ ಬಗ್ಗೆ ವರದಿಗಳು ಬಂದಿವೆ.

ಪರೀಕ್ಷೆ ಪಾರದರ್ಶಕವಾಗಿ ನಡೆಯದ ಹಿನ್ನೆಲೆಯಲ್ಲಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಪಡಿಸುವಂತೆ ಶಿಕ್ಷಣ ಸಚಿವಾಲಯ ಆದೇಶ ನೀಡಿದೆ. ಈ ಬಗ್ಗೆ ಸಿಬಿಐ ತನಿಖೆಗೂ ಶಿಫಾರಸು ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಹೊಂಗನಸಿನಲ್ಲಿ ವರ್ಷಗಳ ಕಾಲ ಶ್ರಮಪಟ್ಟು ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ಆದರೆ ಕೆಲವೇ ಕೆಲವು ಸಮಾಜಘಾತುಕ ಶಕ್ತಿಗಳ ಕಾರಣಕ್ಕಾಗಿ ಇವರೆಲ್ಲರ ಭವಿಷ್ಯ ಅಡಕತ್ತರಿಯಲ್ಲಿ ಸಿಕ್ಕಿರುವುದು ದುರದೃಷ್ಟಕರ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಿಗಾ ವ್ಯವಸ್ಥೆ ಇರುವ ಇಂದಿನ ದಿನಗಳಲ್ಲೂ ಒಂದರಿಂದ ಮೂರು ಗಂಟೆ ಅವಧಿಯ ಪರೀಕ್ಷೆಯನ್ನು ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ. ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಿಂದ ಹಿಡಿದು ಜೆಇಇ, ನೀಟ್, ನೆಟ್ ಪರೀಕ್ಷೆಗಳವರೆಗೂ ಔಟ್ ಆಫ್ ಸಿಲೆಬಸ್ ಪ್ರಶ್ನೆಗಳನ್ನು ಕೇಳುವುದು, ಗದ್ದಲವಾದ ಬಳಿಕ ಕೃಪಾಂಕಗಳನ್ನು ನೀಡುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ.

ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿದ ಬಳಿಕವೂ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವ ಅರ್ಹತಾ ಪರೀಕ್ಷೆಗಳಲ್ಲಿ ನಕಲು ನಿಂತಿಲ್ಲ. ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲೂ ಈ ಚಾಳಿ ಮುಂದುವರಿದೆ. ನೀಟ್ ಪರೀಕ್ಷೆ ವಿವಾದವನ್ನು ಈಗ ಸ್ವತ: ಸುಪ್ರೀಂಕೋರ್ಟ್ ವಿಚಾರಣೆ ಗೆತ್ತಿಕೊಂಡಿದೆ. ಈ ಮಧ್ಯೆ ತಮಿಳುನಾಡಿನಂತಹ ರಾಜ್ಯಗಳು ನೀಟ್ ಪರೀಕ್ಷೆಯಿಂದ ದೂರವುಳಿದಿವೆ. ಕರ್ನಾಟಕವೂ ರಾಜ್ಯಮಟ್ಟದ ಪರೀಕ್ಷೆ ಮೂಲಕ ವೈದ್ಯ ಸೀಟುಗಳನ್ನು ಹಂಚಲು ಬೇಡಿಕೆ ಮುಂದಿಟ್ಟಿದೆ. ಇಲ್ಲಿ ಪರೀಕ್ಷೆ ಯಾರು ನಡೆಸುತ್ತಾರೆ ಎಂಬುದು ಮುಖ್ಯವಲ್ಲ, ಹೇಗೆ ಮತ್ತು ಎಷ್ಟು ಪಾರದರ್ಶಕವಾಗಿ ನಡೆಸುತ್ತಾರೆ ಎನ್ನುವುದು ಮುಖ್ಯ.

ಪರೀಕ್ಷಾ ಮಂಡಳಿಯ ಸಿಬ್ಬಂದಿ ಇಲ್ಲವೇ ಕೇಂದ್ರದ ಉಸ್ತುವಾರಿಗಳ ನೆರವಿಲ್ಲದೆ ಇಂತಹ ಅಕ್ರಮಗಳನ್ನು ಎಸಗಲು ಸಾಧ್ಯವಿಲ್ಲ. ಕೋಟ್ಯಂತರ ಯುವ ಜನರ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರು, ನಕಲು ಮಾಡಲು ಸಹಕರಿಸುವವರು ಮತ್ತು ನಕಲು ಮಾಡಿ ದವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ನಕಲು ಮಾಡಿ ಸಿಕ್ಕಿ ಬಿದ್ದವರಿಗೆ ಮತ್ತೆಂದೂ ಪರೀಕ್ಷೆ ಬರೆಯಲು ಅವಕಾಶ ಸಿಗಬಾರದು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆಯಲ್ಲಿನ ಲೋಪ ಗಳನ್ನು ಮೊದಲು ಸರಿಪಡಿಸಬೇಕು.