Saturday, 14th December 2024

ಸೋಲೋ ಎಂಬ ಅಸುನೀಗಿದ ಸೋಜಿಗ

ಸೌರಭ ರಾವ್, ಕವಯತ್ರಿ, ಅಂಕಣಗಾರ್ತಿ

2019ರ ಬೇಸಿಗೆ. ಅದುವರೆಗೂ ಕಾಡುಹುಲಿಗಳನ್ನು ನಾನೆಂದೂ ನೋಡಿರಲಿಲ್ಲ. ಮಧ್ಯಪ್ರದೇಶದ ಬಾಂಧವಗಢ ಹುಲಿ  ಭಯಾರಣ್ಯದಲ್ಲಿ ನನ್ನ ಮೊದಲ ಸಫಾರಿ, ಮಗಧಿ ವಲಯದಲ್ಲಿ. ಬೆಳಗಿನ ಜಾವ ಏಳಕ್ಕೇ ಸೂರ್ಯ ನೆತ್ತಿಯ ಮೇಲೆ ಬಂದಿದ್ದಾ ನೇನೋ ಎನ್ನುವಷ್ಟು ಬಿಸಿಲಿನ ಝಳ. ದಾರಿಯ ಬಾಡಿಗೆ ಒಂದು ಗುಹೆ. ಗುಹೆಯ ಸ್ತಬ್ಧ ಕತ್ತಲಿನಿಂದ ಉದ್ಭವಿಸಿದ ಉಸಿರಾಡುವ ಚಿನ್ನದ ಮೂರ್ತಿಯಂತೆ ಕೂತಿದ್ದಳು ಒಬ್ಬ ಹೆಣ್ಣುಹುಲಿ.

ಒಂದೆರಡು ಕ್ಷಣ ಉಸಿರು ನಿಲ್ಲಿಸುವಂತೆ ಇದ್ದ ಆ ಸ್ಥಿರಚಿತ್ರದಲ್ಲಿ ತಕ್ಷಣ ಚಲನೆ. ಗುಹೆಯ ಮೇಲೆ ಕಂಡದ್ದು ಅವಳ ನಾಲ್ಕು ಪುಟ್ಟ
ಮರಿಗಳು. ಮೃದುರೋಮದ ಚೆಂಡುಗಳು ಉರುಳುರುಳಿ ಹೋದಂತೆ ತಾಯಿಯಿಂದ ತುಸು ದೂರವೇ ಓಡಾಡುಡುತ್ತಿದ್ದವು. ಇಷ್ಟು ಚಿಕ್ಕ ಮರಿಗಳನ್ನು ಪ್ರವಾಸಿಗರ ಉಪಸ್ಥಿತಿಯಲ್ಲಿ ತಲ್ಲಣಗೊಳ್ಳದೇ ಆಡಲು ಬಿಟ್ಟಿದ್ದ ಆ ಹೆಣ್ಣುಹುಲಿ ನಮ್ಮನ್ನೂ ತನ್ನ ಮಕ್ಕಳಂತೆಯೇ ಕಂಡು ನಮ್ಮ ಸಂಭ್ರಮವನ್ನು ತಾಳಿದಂತಿತ್ತು.

ಅಂದು ಕತ್ತಲನ್ನು ಸೀಳಿ ಬೆಳಕಿನಂತೆ ಕಂಡ ಆಕೆ ನಿನ್ನೆ ಕತ್ತಲೆಯೊಳಗೆ ಮರಳದಂತೆ ಕರಗಿದ್ದಾಳೆ. ತನ್ನ ಒಂದು ಮರಿಯೊಡನೆ ಅವಳ ಶವ ಪತ್ತೆಯಾಗಿದೆ. ಮಿಕ್ಕ ಮೂರು ಮರಿಗಳಲ್ಲಿ ಒಂದು ಜೀವಂತವಾಗಿ ಸಿಕ್ಕಿದೆ, ಎರಡು ಮರಿಗಳ ಹುಡುಕಾಟ ಮುಂದು ವರಿದಿದೆ. ಎಂಟು ವರ್ಷ ಪ್ರಾಯದ ಆ ಸ್ನಿಗ್ಧ ಸೌಂದರ್ಯದ ಹೆಣ್ಣುಹುಲಿಯ ಹೆಸರು ಸೋಲೋ (T42). ತಾನೇ ಮರಿಯಾಗಿ ದ್ದಾಗ ತನ್ನ ತಾಯಿ (ರಾಜಬೆಹ್ರಾ) ಮತ್ತು ಅಣ್ಣತಂಗಿಯರನ್ನು ಬಿಟ್ಟು ಏಕಾಂತವಾಗೇ ಬಹಳ ಕಾಲ ಕಳೆಯುತ್ತಿದ್ದ ಕಾರಣಕ್ಕೇ ಅವಳಿಗೆ ಆ ಹೆಸರು.

ವೈಯಕ್ತಿಕ ವ್ಯಾಮೋಹ ಬಿಡಿ, ದೇಶದ ಒಂದು ಪ್ರಮುಖವಾದ ಅಭಯಾರಣ್ಯದಲ್ಲಿ ಬೆಳೆಯುತ್ತಿದ್ದ ನಾಲ್ಕು ಅಮೂಲ್ಯ ಮರಿ ಗಳನ್ನು ಹೊಂದಿದ, ಸಂತಾನೋತ್ಪತ್ತಿ ಚೈತನ್ಯವಿನ್ನೂ ಇದ್ದ ಹೆಣ್ಣುಹುಲಿಯ ನಷ್ಟ ಅಪಾರ. ಪ್ರಾಯದಲ್ಲಿದ್ದ ಈಕೆ ಸತ್ತದ್ದು ಹೇಗೆ? ಹುಲಿಸಂರಕ್ಷಣೆ ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲುಗಳಂದು: ಮಾನವ-ವನ್ಯಜೀವಿ ಸಂಘರ್ಷ. ತನ್ನ ಮತ್ತು ತನ್ನ ಮರಿಗಳ ಹೊಟ್ಟೆ ಹೊರೆಯುವುದಕ್ಕಾಗಿ ಅಭಯಾರಣ್ಯದ ಬಫರ್ ವಲಯಗಳಲ್ಲಿ ಮೇಯುತ್ತಿರುವ ದನಕರುಗಳನ್ನು
ಬೇಟೆಯಾಡಲು ಹೋದ ಸೋಲೋ, ಪಶುಶವಕ್ಕೆ ಪಶುವಿನ ಮಾಲೀಕರು ತಮಗಾದ ನಷ್ಟಕ್ಕೆ ಪ್ರತಿಕ್ರಿಯೆಯಾಗಿ ಹಾಕಿರ ಬಹುದಾದ ವಿಷಸೇವನೆಯಿಂದ ಬಲಿಯಾಗಿರಬಹುದೆಂಬ ಶಂಕೆಯಿದೆ.

ಇದು ಖಂಡಿತ ಒಂದು ಪ್ರತ್ಯೇಕ ಘಟನೆಯಲ್ಲ. ಹುಲಿ ಅಭಯಾರಣ್ಯಗಳಲ್ಲಿ ಅವುಗಳ ಅಪ್ರಾಕೃತಿಕ ಸಾವಿಗೆ ಈ ಸಂಘರ್ಷ ಒಂದು ಬಹುಮುಖ್ಯ ಮತ್ತು ಆವರ್ತಕ ಕಾರಣ. ವಾಸ್ತವವಾಗಿ, ಸೋಲೋಳ ಒಡಹುಟ್ಟಿದ ಮತ್ತೊಂದು ಹೆಣ್ಣುಹುಲಿಯಾದ ಕಣ್ಕಟೀ
ಕೂಡ ಅದೇ ಪ್ರದೇಶದಲ್ಲಿ, ಅಭಯಾರಣ್ಯ ಪ್ರವಾಸಿಗರಿಗೆ ಮುಚ್ಚಿದ್ದ ಮಳೆಗಾಲದಲ್ಲಿ ಹಿಂದೆ ಕಾಣೆಯಾಗಿದ್ದಳು. ಇದೇ  ಬಾಂಧವ ಗಢದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ.

ಹೀಗೆ ಬೇಟೆಪ್ರಾಣಿಗಳಿಂದ ಅಭಯಾರಣ್ಯಗಳ ಕೋರ್ ಝೋನ್‌ಗಳ ಹೊರಗೆ ಹಳ್ಳಿಯ ಜನ ಅನುಭವಿಸುವ ಜಾನುವಾರು ನಷ್ಟಕ್ಕೆ ಸರಕಾರದಿಂದ ಧನಸಹಾಯ ವ್ಯವಸ್ಥೆ ಇದ್ದರೂ, ಆ ಸಹಾಯ ದೊರಕುವುದರಲ್ಲಿ ಇರುವ ವಿಳಂಬದಿಂದ ನಷ್ಟ ಅನುಭವಿಸಿದ
ಜನ ತಾಳ್ಮೆ ಕಳೆದುಕೊಳ್ಳುವುದು ಸಹಜ.

ಹುಲಿಸಂರಕ್ಷಣೆಯ ಬಗ್ಗೆ ಕಾಳಜಿ ಇರುವ ನಾವು ಹಳ್ಳಿಗರ ಈ ಪ್ರತೀಕಾರಕ್ಕೆ ಅವರನ್ನು ಹಳಿಯುವುದು ಸುಲಭ, ಆದರೆ ಅದು ಪ್ರeವಂತ ಪರಿಹಾರವಲ್ಲ. ಅನೇಕ ಪೀಳಿಗೆಗಳಿಂದ ಹುಲಿ ಮತ್ತು ಇತರ ಕಾಡುಪ್ರಾಣಿಗಳ ಜತೆ ಸಹಬಾಳ್ವೆ ನಡೆಸಿಕೊಂಡು ಬರುತ್ತಿರುವ ಈ ಜನರಿಗೆ ಜೀವನೋಪಾಯಕ್ಕೆ ಕೃಷಿ ಅಥವಾ ಜಾನುವಾರು ಪಾಲನೆಯೇ ದಾರಿ. ಹೀಗಾಗಿ ನಾವು ವನ್ಯಜೀವಿಗಳು ಮತ್ತು ಜನ ಇಬ್ಬರಿಗೂ ಒಳಿತಾಗುವಂತೆ ಪರಿಣಾಮಕಾರಿಯಾಗಿರುವ ಪರಿಹಾರವನ್ನು ಜಾರಿಗೊಳಿಸುವುದು ಕೇವಲ ಮುಖ್ಯ ಮಾತ್ರವಲ್ಲ, ಅನಿವಾರ್ಯ.

ಇದು ಕೇವಲ ಸವಾಲೂ ಅಲ್ಲ, ನಮ್ಮ ಸಾಮಾಜಿಕ ಜವಾಬ್ದಾರಿ. ಅಂದರೆ, ಪರಿಹಾರ ಧನ ನಷ್ಟದಲ್ಲಿರುವವರಿಗೆ ಯಾವುದೇ ವಿಳಂಬವಿಲ್ಲದೇ ದೊರಕುವಂತೆ ಮಾಡುವುದು. ಸೋಲೋಳ ದೈವೀಕ ಬೆಳಕು ಆ ಗುಹೆಯಿಂದ ಹೊರಸೂಸುವುದಿಲ್ಲ. ಆದರೆ ಅವಳ ನೆನಪಿನ ಮತ್ತು ಆಕೆ ಕೊಟ್ಟ ಅನುಭವಗಳ ಬೆಳಕು ಅವಳ ಮುಂದಿನ ಪೀಳಿಗೆಗಳನ್ನು ಉಳಿಸಲು ದಾರಿಯಾಗಲಿ.