Friday, 13th December 2024

ಡೆಂಘೀ ನಿಯಂತ್ರಣ ಅಗತ್ಯ

ಮಳೆ-ಬಿಸಿಲಿನಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದ್ದು, ಕಳೆದೊಂದು ತಿಂಗಳಲ್ಲಿ ೧,೯೫೫ ಪ್ರಕರಣಗಳು ದೃಢಪಟ್ಟಿವೆ. ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೆಂಘೀ ಪ್ರಕರಣಗಳು ದೃಢಪಟ್ಟಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ೪,೫೯೫ ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ೧,೩೮೫ ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಚಿಕ್ಕಮಗಳೂರು (೪೯೧), ಮೈಸೂರು (೪೩೧), ಹಾವೇರಿ (೪೦೨), ಚಿತ್ರದುರ್ಗ (೨೫೩), ಶಿವಮೊಗ್ಗ (೨೪೯) ಹಾಗೂ ದಕ್ಷಿಣ ಕನ್ನಡ
(೨೩೩) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ಖಚಿತಪಟ್ಟಿವೆ. ಡೆಂ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಕಳವಳಕಾರಿ.

ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಂಘೀ ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ.  ಅಗತ್ಯ ಪ್ರಮಾಣದ ಚುಚ್ಚುಮದ್ದು ಮತ್ತು ಪ್ಲೇಟ್‌ಗಳ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಇಷ್ಟೇ ಸಿದ್ಧತೆ ಸಾಲದು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ
ಸೌಲಭ್ಯ, ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸಬೇಕು. ಆಶಾ ಕಾರ್ಯ ಕರ್ತೆಯರು, ನರ್ಸಿಂಗ್ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಸ್ವಯಂ
ಸೇವಕರ ನೆರವಿನೊಂದಿಗೆ ಮನೆ ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಬೇಕು.

ನಿರಂತರವಾಗಿ ನಿಗಾ ವಹಿಸಿ, ಅಽಕಾರಿಗಳು ಮೈಮರೆಯದಂತೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಬೇಕು. ಸೊಳ್ಳೆಗಳ ನಿಯಂತ್ರಣ ಸೇರಿದಂತೆ
ಪರಿಸರವನ್ನು ಚೊಕ್ಕಟವಾಗಿಡುವ ಅಗತ್ಯದ ಕುರಿತು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಆಂದೋಲನದ ರೂಪದಲ್ಲಿ ನಡೆಸಬೇಕು. ಜನರೂ ಅಷ್ಟೆ; ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹಾಗೂ ನೀರು
ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ಆಡಳಿತದ ಜತೆ ಕೈಜೋಡಿಸಬೇಕು.

ಡೆಂಘೀಯಿಂದ ಬಾಧೆಗೊಳಗಾದವರ ಚಿಕಿತ್ಸೆಗೆ ಕೆಲವು ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿವೆ ಎಂದೂ ವರದಿಯಾಗಿದೆ. ಮಾನವೀಯತೆ ಮರೆತು ಹಣ ಮಾಡುವ ದಂಧೆಯಲ್ಲಿ ಮುಳುಗಿದ ಅಂತಹ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.