ತಿಳಿರುತೋರಣ
srivathsajoshi@yahoo.com
ಅ.ರಾ.ಮಿತ್ರರ ಮಾತುಗಳನ್ನೇ ಉಲ್ಲೇಖಿಸುವುದಾದರೆ- ‘ನಿಮಗೆ ಹೊಸ ಹೊಸ ವಿಚಾರಗಳು ಬೇಕೆ? ಗಂಭೀರ ವಿಶ್ಲೇಷಣೆ ಬೇಕೆ? ಸರಳವಾದ ಆಕರ್ಷಕ ನಿರೂಪಣೆ ಬೇಕೆ? ವಿನೋದವನ್ನು ಇಣುಕಿಸಿ ಕೊಟ್ಟಿರುವ ವಸ್ತುವಿನ ಇನ್ನೊಂದು ಲಘುರೇಖೆಯ ಚಿತ್ರಣ ಬೇಕೆ? ಸಮಸಾಮಯಿಕ ವಿಷಯಗಳ ಆಲೋಚನೆ ಬೇಕೆ? ನಿತ್ಯ ಪರಿಚಿತವೆನ್ನಿಸಿದ್ದರೂ ಅದರ ಮೂಲ ಏನೆಂದು ಅರ್ಥವಾಗದ ವಸ್ತು-ಶಬ್ದ- ಪಡೆನುಡಿಗಳ ಸಮರ್ಪಕ ವಿವರಣೆ ಬೇಕೆ? – ಎಲ್ಲಕ್ಕೂ ಇಲ್ಲಿ ಉತ್ತರಗಳಿವೆ. ಇದು ಎಲ್ಲದರ ಸಂಕೀರ್ಣ ಮಿಶ್ರಣವಾಗಿ ಶೀರ್ಷಿಕೆಯನ್ನು ಧ್ವನಿಪೂರ್ಣವಾಗಿಸಿದೆ.
ಓದುಗರನ್ನೂ ಸಂವಾದ ಸದಸ್ಯರನ್ನಾಗಿ ನೋಂದಾಯಿಸುವ ಸಹಕಾರೀ ರಚನಾ ನೇಯ್ಗೆ ಈ ಬರಹಗಳ ವಿಶಿಷ್ಟತೆ. ಸಾಮಾಜಿಕ, ಪೌರಾಣಿಕ, ಭಾವ ಮಾನಸಿಕ, ವೈದ್ಯಕೀಯ, ವನ್ಯ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಭಾಷಿಕ ಸೂಕ್ಷ್ಮಗಳನ್ನು ಎತ್ತಿಕೊಂಡು ಸಂವಾದ. ಅದಕ್ಕೆ ಅಚ್ಚುಕಟ್ಟಾಗಿ, ಸಂಕ್ಷೇಪವಾಗಿ, ಪ್ರಮಾಣಪೂರಕವಾಗಿ, ಸೂಕ್ತ ಸಾಕ್ಷ್ಯಾಧಾರಸಮೇತ ನಿರೂಪಣೆ. ಮೂಲ ಉತ್ತರದ ಜೊತೆಜೊತೆಗೇ ಓದುಗರ ವಿಭಿನ್ನ ಪ್ರತಿಕ್ರಿಯೆಗಳಾಗಿ ವಿನೋದ, ವಕ್ರೋಕ್ತಿ, ಚಮತ್ಕಾರ, ಬೊಗಳೆ, ಶ್ಲೇಷೆ, ಸ್ಪಷ್ಟೀಕರಣಗಳ ಸಿಂಗಾರ. ಕೇವಲ ವಿಷಯಸೂಚನೆ ಹಾಸ್ಯವಷ್ಟೇ ಅಲ್ಲದೆ ಓದುಗರ ಕಣ್ಣುತೆರೆಸಿ ವಿಚಾರಪರರನ್ನಾಗಿ ಮಾಡುವ ಪ್ರಯತ್ನ.
ಆದ್ದರಿಂದಲೇ ಇದೊಂದು ಮಾಹಿತಿ ಲೋಕದ ಎಲ್ಲಂಗಡಿ(ಡಿಪಾರ್ಟ್‌ಮೆಂಟಲ್ ಸ್ಟೋರ್) ಎನ್ನಬಹುದು.’ ಇದನ್ನವರು ಹೇಳಿದ್ದು ‘ಚೌಚೌ ಚೌಕಿ’ ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ. ಮೂರು ದಶಕಗಳ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅದೇ ಹೆಸರಿನ ಅಂಕಣದ ಸಂಕಲನ
ರೂಪದ ಪುಸ್ತಕವದು. ಅಂಕಿತ ಪ್ರಕಾಶನದಿಂದ ೧೯೯೯ರಲ್ಲಿ ಪ್ರಕಟವಾಗಿ ಆಮೇಲೆ ಮೂರ್ನಾಲ್ಕು ಮುದ್ರಣಗಳನ್ನು ಕಂಡ ಜನಪ್ರಿಯ ಕೃತಿ. ಅಂಕಣದ ಮತ್ತೊಂದಿಷ್ಟು ಕಂತುಗಳ ಎರಡನೆಯ ಸಂಕಲನ ‘ನಗ್‌ನಗ್ತಾ ವಿಜ್ಞಾನ’ ಎಂಬ ಹೆಸರಿನದು ಭೂಮಿ ಬುಕ್ಸ್ ಪ್ರಕಾಶನದ ಮೂಲಕ ೨೦೧೩ರಲ್ಲಿ
ಹೊರ ಬಂದಿದೆ.
ಸುಧಾದಲ್ಲಿ ಬರುತ್ತಿದ್ದ ಚೌಚೌ ಚೌಕಿ ಅಂಕಣ ಪುಸ್ತಕರೂಪದಲ್ಲಿ ಪ್ರಕಟವಾಗಿದೆ ಎಂದು ಈ ಹಿಂದೆ ಅವರಿವರಿಂದ ಕೇಳಿ ತಿಳಿದುಕೊಂಡಿದ್ದೆನಷ್ಟೇ ಹೊರತು ಪುಸ್ತಕ ಓದಲಿಕ್ಕೆ ಸಿಕ್ಕಿರಲಿಲ್ಲ. ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಮಿತ್ರರೊಬ್ಬರು ಈ ಎರಡೂ ಪುಸ್ತಕಗಳು ಈಗ ಉಚಿತ ಪಿಡಿಎಫ್ ರೂಪದಲ್ಲಿ ಲಭ್ಯವಿವೆಯೆಂದು ಜಾಲಕೊಂಡಿ ಪೋಸ್ಟ್ ಮಾಡಿದ್ದರು. ಒಂದು ಕ್ಷಣವೂ ತಡಮಾಡದೆ ಲಿಂಕ್ ಕ್ಲಿಕ್ಕಿಸಿ ಎರಡೂ ಪಿಡಿಎಫ್ ಗಳನ್ನು ಇಳಿಸಿಕೊಂಡೆ. ನಿಧಿ ಸಿಕ್ಕಿದಷ್ಟು ಸಂತೋಷವಾಯ್ತು. ಎರಡೂ ಸಂಕಲನಗಳಲ್ಲಿ ಕನಿಷ್ಠ ಐದಾರು ಪ್ರಶ್ನೆಗಳ ತರ್ಲೆ ಉತ್ತರಗಳಲ್ಲಿ ನನ್ನವೂ ದಾಖಲಾಗಿವೆ ಎಂದು ಗೊತ್ತಾದಾಗ ಮತ್ತೂ ಸಂತೋಷ. ಮೊದಲ ಸಂಕಲನದಲ್ಲಿ ತರ್ಲೆ ಉತ್ತರ ನೀಡಿದ ಓದುಗರ ಹೆಸರುಗಳನ್ನೂ ಸೇರಿಸಿಕೊಂಡಿರುವುದರಿಂದ ಪಟ್ಟಿಯಲ್ಲಿ ನನ್ನ ಹೆಸರನ್ನು ಗಮನಿಸಿದ್ದೂ ಆಯಿತು. ಒಟ್ಟಿನಲ್ಲಿ ಖುಷಿಯೋ ಖುಷಿ.
ಚೌಚೌ ಚೌಕಿ ಅಂಕಣ ಸುಧಾದಲ್ಲಿ ಪ್ರಕಟವಾಗುತ್ತಿದ್ದಾಗ ನಾನದರ ಡೈಹಾರ್ಡ್ ಫ್ಯಾನ್ ಆಗಿದ್ದೆ. ನಿಜವಾಗಿಯಾದರೆ ಬರೀ ಆ ಒಂದು ಅಂಕಣವಷ್ಟೇ ಅಲ್ಲ, ಇಡೀ ಸುಧಾ ಪತ್ರಿಕೆಯೇ ನಮಗೆಲ್ಲ ಅಚ್ಚುಮೆಚ್ಚಿನದಾಗಿತ್ತು. ಪ್ರತಿವಾರ ಹೊಸ ಸಂಚಿಕೆ ಬಂದಾಗ ಮನೆಯಲ್ಲಿ ಅದನ್ನೆತ್ತಿಕೊಂಡು ಪುಟ ತಿರುವಲು ನಾ ಮೊದಲು ತಾ ಮೊದಲು ಎಂದು ಪೈಪೋಟಿ! ಆಮೇಲೆ ಅದಕ್ಕೊಂದು ಉಪಾಯವನ್ನೂ ಕಂಡುಕೊಂಡಿದ್ದೆವು. ಮುಖಪುಟದ ಮೇಲೆ ‘ಸುಧಾ’ ಎಂದು ದೊಡ್ಡ ಅಕ್ಷರಗಳಲ್ಲಿ ಯಾವ ಬಣ್ಣದಲ್ಲಿಅಚ್ಚಾಗಿದೆಯೆಂದು (ವಾರವಾರವೂ ಯಾದೃಚ್ಛಿಕವಾಗಿ ಅಥವಾ ಮುಖಪುಟ ಚಿತ್ರದ ಬಣ್ಣ-ವಿನ್ಯಾಸಕ್ಕೆ ಹೊಂದಿಕೊಂಡು ಮಾಸ್ಟ್ ಹೆಡ್ ಬಣ್ಣ ಬದಲಾಗುತ್ತಿತ್ತು) ಮೊದಲೇ ಸರಿಯಾಗಿ ಊಹಿಸಿ ದವರಿಗೆ ಬಹುಮಾನ: ಸುಧಾ ಓದಲಿಕ್ಕೆ ಅವರಿಗೆ ಮೊದಲ ಚಾನ್ಸ್. ಆದರೆ ಅವರೂ ಜಾಸ್ತಿ ಹೊತ್ತು ಇಟ್ಟುಕೊಂಡು ಬೇರೆಯವರನ್ನು ಸತಾಯಿಸುವಂತಿಲ್ಲ.
ಪದಬಂಧ ತುಂಬುತ್ತಕೂರುವಂತಿಲ್ಲ. ವಾರೆನೋಟ, ಸುದ್ದಿಸ್ವಾರಸ್ಯ, ನೀವು ಕೇಳಿದಿರಿ, ಚೌಚೌ ಚೌಕಿ ಮುಂತಾದ ಸ್ಥಿರಶೀರ್ಷಿಕೆಗಳನ್ನಷ್ಟೇ ಬೇಗ ಓದಿ
ಹಸ್ತಾಂತರಿಸಬೇಕು. ಧಾರಾವಾಹಿಗಳನ್ನೆಲ್ಲ ಆಮೇಲೆ ಬಿಡುವಿನಲ್ಲಿ ಓದಬೇಕು- ಎಂದು ಷರತ್ತು. ನಾನು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಸುಧಾ ಪತ್ರಿಕೆ ಬೆಳ್ಳಿಹಬ್ಬ ಆಚರಿಸಿಕೊಂಡಿತ್ತು. ‘ಸುಧಾ ನಿಮಗೇಕೆ ಇಷ್ಟವಾಗುತ್ತದೆ ಅಥವಾ ಆಗುವುದಿಲ್ಲ?’ ಎಂದು ಓದುಗರಿಂದ
ವಿಶೇಷವಾಗಿ ಪತ್ರಗಳನ್ನು ಆಹ್ವಾನಿಸಿದ್ದರು. ‘ಸುಧಾ ಬಗ್ಗೆ ಪರ-ವಿರೋಧ ನಿಲುವುಗಳನ್ನು ತಕ್ಕಡಿಯ ಎರಡುತಟ್ಟೆಗಳಲ್ಲಿಟ್ಟರೆ…’ ಎಂಬ ನನ್ನ ಪತ್ರವೂ ಆಯ್ಕೆಯಾಗಿ ಪ್ರಕಟವಾಗಿತ್ತು. ಆ ವಾರ ಸುಧಾದಲ್ಲಿ ನನ್ನ ಪತ್ರ/ಹೆಸರು ಪ್ರಕಟವಾಗಿದೆಯೆಂದು ನನಗಿಂತ ಹೆಚ್ಚಿನ ಪುಳಕ ನನ್ನ ಸಹಪಾಠಿಗಳಿಗೆ!
ಗೌರವಧನವೆಂದು ೫೦ ರುಪಾಯಿಗಳ ಚೆಕ್ ಮತ್ತು ಆ ವಾರದ ಸುಧಾ ಸಂಚಿಕೆ ಅಂಚೆಯಲ್ಲಿ ಬಂದಾಗಿನ ಸಂಭ್ರಮವಂತೂ ಸಾಟಿಯಿಲ್ಲದ್ದು. ಮುಂದೆ ಉದ್ಯೋಗಕ್ಕಾಗಿ ದಿಲ್ಲಿ ಮತ್ತು ಹೈದರಾಬಾದ್‌ನಲ್ಲಿ ಇದ್ದಾಗಲೂ ತಪ್ಪದೇ ಸುಧಾತರಿಸುತ್ತಿದ್ದೆ. ಸಮುದ್ರಮಥನ ವಿಭಾಗಕ್ಕೆ ಪತ್ರ ಬರೆಯುತ್ತಿದ್ದೆ. ಚೌಚೌ ಚೌಕಿ ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ತಮಾಷೆಯ ಉತ್ತ ರಗಳನ್ನು ಬರೆದುಕಳಿಸುತ್ತಿದ್ದೆ. ಒಮ್ಮೆ ‘ತತ್ತ್ವಮಸಿ ಎಂದರೇನು?’ ಎಂಬ ಪ್ರಶ್ನೆಗೆ ನಾನು ಬರೆದುಕಳಿಸಿದ್ದ ತರ್ಲೆ ಉತ್ತರ: ‘ಜಿಡ್ಡು ಕೃಷ್ಣಮೂರ್ತಿಯವರಂಥ ತತ್ತ್ವಜ್ಞಾನಿಗಳು ತಮ್ಮ ತತ್ತ್ವಗಳನ್ನು ಬರೆಯಲು ಬಳಸುವ ಮಸಿ(ಇಂಕ್ ಅಥವಾ ಶಾಯಿ).’
ಇನ್ನೊಂದು ಸಲ ‘ಸಿದ್ಧಪುರುಷ ಎಂದರೆ ಯಾರು?’ ಎಂಬ ಪ್ರಶ್ನೆಗೆ ‘ಯಾವುದಾದರೂ ಸಮಾರಂಭಕ್ಕೆ ಸಿನೆಮಾ ವೀಕ್ಷಣೆಗೆ ಅಥವಾ ಹೀಗೇ ಅಡ್ಡಾಡಿ ಬರುವುದಕ್ಕೆ ಹೆಂಡತಿಯೊಡನೆ ಹೊರಗೆ ಹೋಗುವುದಿದ್ದರೆ ತಾನು ಮೊದಲೇ ಸಿದ್ಧನಾಗಿ ಹೆಂಡತಿಯ ಮೇಕಪ್ ಮುಗಿಯುವುದಕ್ಕೆ ಗಂಟೆಗಟ್ಟಲೆ ಕಾದು ನಿಲ್ಲುವ ಗಂಡನೆಂಬ ಅಶಕ್ತಪುರುಷ!’ ಎಂದು ಉತ್ತರಿಸಿದ್ದೆ. ಆಗಿನ್ನೂ ನಾನು ಬ್ರಹ್ಮಚಾರಿ ಆಗಿದ್ದೆನಾದ್ದರಿಂದ ಅದು ಅನುಭವದ ಮಾತಾಗಿರಲಿಲ್ಲವೆಂದು ಗೊತ್ತಿರಲಿ. ಆಮೇಲೆ ಅಲ್ಪಸ್ವಲ್ಪ ಅನುಭವ ಆಯ್ತೆಂದೂ ಗೊತ್ತಿರಲಿ. ಮತ್ತೊಮ್ಮೆ ‘ಲಲಿತಕಲೆ ಎಂದರೇನು?’ ಎಂಬ ಪ್ರಶ್ನೆಗೆ ‘ಸರ್ಫ್ ಜಾಹಿರಾತಿನ
ರೂಪದರ್ಶಿ ಶುಭ್ರ-ಶ್ವೇತ ಸೀರೆಯುಟ್ಟ ಲಲಿತಾ ಪವಾರ್ ಜೀಯ ಶಿಫಾರಸಿನಿಂದಾಗಿ ಗಾಯಬ್ ಆಗುವ ಕಲೆಯೇ ಲಲಿತಕಲೆ!’ ಎಂದು ನನ್ನ ತರ್ಲೆ ಉತ್ತರವಾಗಿತ್ತು. ಇವೆಲ್ಲ ಸುಧಾದಲ್ಲಿ ಪ್ರಕಟವಾದಾಗ ಹಿಗ್ಗೋಹಿಗ್ಗು.
ಹಾಗೆ ಚೌಚೌ ಚೌಕಿ ಅಂಕಣ ಅಚ್ಚುಮೆಚ್ಚಿನದಾಗಿತ್ತು ಹೌದು, ಆದರೆ ಅದನ್ನು ನಿರ್ವಹಿಸುವವರು ಯಾರು ಎಂದು ನನಗಾಗ ಗೊತ್ತಿರಲಿಲ್ಲ. ಅಂಕಣದ ಕೊನೆಯಲ್ಲಿ ‘ಆಪಸ್ತಂಭ’ ಎಂದು ನಮೂದಿಸಿದ್ದಿರುತ್ತಿತ್ತು. ಅದೇನೂ ವ್ಯಕ್ತಿಯ ಹೆಸರಲ್ಲ, ಗುಪ್ತ ನಾಮ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು. ಆದರೆ ಆಪಸ್ತಂಭ ಯಾರೆಂದು ಮಾತ್ರ ಗೊತ್ತಿಲ್ಲ. ಅಂಕಣದ ಹೂರಣವನ್ನಷ್ಟೇ ವಸ್ತುನಿಷ್ಠವಾಗಿ ಮೆಚ್ಚಿಕೊಂಡಿದ್ದರಿಂದ ಅಂಕಣಕಾರರು ಯಾರೆಂಬುದು ಗೌಣವಾಗಿತ್ತೇನೋ. ನನಗೆ ನೆನಪಿರುವಂತೆ ಆರೇಳು ವರ್ಷ ಕಾಲ ಯಶಸ್ವಿಯಾಗಿ ವಿಜೃಂಭಿಸಿದ ಚೌಚೌ ಚೌಕಿ ಆಮೇಲೆ ನಿಂತುಹೋಯಿತು. ಇಸವಿ ೨೦೦೦ದಲ್ಲಿ ನಾನು ಅಮೆರಿಕಕ್ಕೆ ಬಂದಮೇಲೆ ಇಲ್ಲಿ ಸುಧಾ ಮುದ್ರಿತ ಪ್ರತಿಸಿಗುತ್ತಿರಲಿಲ್ಲವಾಗಿ, ಆಗಿನ್ನೂ ಇ-ಆವೃತ್ತಿ ಶುರುವಾಗಿರಲಿಲ್ಲವಾಗಿ ಸುಧಾ ಓದುವ ಅಭ್ಯಾಸ ನಿಂತೇಹೋಯಿತು. ಚೌಚೌ ಚೌಕಿ ಆದಿಯಾಗಿ ಎಲ್ಲವೂ ಸವಿಸವಿ ನೆನಪು ಸಾವಿರ ನೆನಪು… ಆಗಿಯಷ್ಟೇ ಉಳಿಯಿತು.
ಹೀಗಿರಲು ಒಮ್ಮೆ ಅದ್ಯಾವುದೋ ಅಂತರಜಾಲದ ಪುಟದಲ್ಲಿ ನಾಗೇಶ ಹೆಗಡೆಯವರ ಇಮೇಲ್ ವಿಳಾಸ ಇದ್ದದ್ದು ನನ್ನ ಗಮನಕ್ಕೆ ಬಂತು. ಪ್ರಜಾವಾಣಿ ಯಲ್ಲಿ ವಿಜ್ಞಾನ ವಿಶೇಷ ಅಂಕಣ ಬರೆಯುತ್ತಿದ್ದ ನಾಗೇಶ ಹೆಗಡೆಯವರು ಪ್ರಜಾವಾಣಿಯಲ್ಲೇ ಉದ್ಯೋಗಿಯಾಗಿದ್ದವರು, ಸುಧಾ ಸಂಪಾದಕೀಯ ತಂಡವನ್ನು ಅವರೇ ನಿರ್ವಹಿಸುತ್ತಿದ್ದವರು ಎಂದು ನಾನು ಬಲ್ಲವನಾಗಿದ್ದೆ. ಚೌಚೌ ಚೌಕಿಯ ಹಿಂದೆಯೂ ಅವರ ಕೈವಾಡ ಇದ್ದಿರಬಹುದು ಎಂದು ಚಿಕ್ಕದೊಂದು ಗುಮಾನಿಯೂ ನನ್ನಲ್ಲಿತ್ತು.
ಉತ್ತರಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಒಂದು ಪ್ರಯತ್ನ ಮಾಡೋಣ ಎಂದುಕೊಂಡು ನಾಗೇಶ ಹೆಗಡೆಯವರಿಗೊಂದು ಇಮೇಲ್ ಬರೆದೆ. ಅವರು ಕ್ಲಪ್ತವಾಗಿ ಉತ್ತರಿಸಿ ನನಗೊಂದು ಹರ್ಷಾಘಾತವನ್ನೇ ನೀಡಿದರು. ಅದರಿಂದ ಸಾವರಿಸಿಕೊಂಡು ಸುಧಾ ಬಗೆಗಿನ ನನ್ನ ಒಲವನ್ನು, ಅದರಲ್ಲೂ ಚೌಚೌ ಚೌಕಿ ಅಂಕಣದ ಮೇಲಿನ ವ್ಯಾಮೋಹವನ್ನು ಅವರಲ್ಲಿ ನಿವೇದಿಸಿದೆ. ಆಗ ಅವರಿಂದ ತಿಳಿದುಬಂದ ವಿಚಾರವೆಂದರೆ ಚೌಚೌ ಚೌಕಿ ಅಂಕಣವನ್ನು
ಜೊತೆಯಾಗಿ ನಿರ್ವಹಿಸುತ್ತಿದ್ದವರು ಕನ್ನಡದ ಖ್ಯಾತ ವಿಜ್ಞಾನ ಲೇಖಕರಾದ ಡಾ.ಟಿ.ಆರ್.ಅನಂತರಾಮು ಮತ್ತು ಡಾ. ಶರಣಬಸವೇಶ್ವರ ಅಂಗಡಿ. ಇದರಲ್ಲಿ ಅನಂತರಾಮು ಅವರ ಲೇಖನಗಳನ್ನು, ಪುಸ್ತಕಗಳನ್ನು ಅಲ್ಲಿಇಲ್ಲಿ ಓದಿದ್ದರಿಂದ ಅಷ್ಟರಮಟ್ಟಿಗೆ ಅವರ ಪರಿಚಯವಿತ್ತು.
ಮುಂದೆ ಫೇಸ್‌ಬುಕ್‌ನಲ್ಲಿಸ್ನೇಹವೂ ಆಯ್ತು. ಕರ್ನಾಟಕದ ಸ್ಮಾರ್ತ ಬ್ರಾಹ್ಮಣರು ಎಂಬೊಂದು ಸಂಪಾದಿತ ಗ್ರಂಥರಚನೆಯ ಹೊಣೆಹೊತ್ತ ಅವರು ಆ ವಿಚಾರವಾಗಿಯೇ ನನ್ನನ್ನು ಸಂಪರ್ಕಿಸಿದ್ದು, ಚಿತ್ಪಾವನ ಸಮುದಾಯದ ಬಗ್ಗೆ ಲೇಖನ ಬರೆಯವಂತೆ ಹೇಳಿದ್ದು, ನಾನು ನನ್ನ ಅಪಕ್ವತೆಯನ್ನು ತೋಡಿ ಕೊಂಡು ನನ್ನ ಬದಲಿಗೆ ಸರಿಯಾದ ಸಂಪನ್ಮೂಲ ವ್ಯಕ್ತಿಗಳನ್ನು ಅವರಿಗೆ ಪರಿಚಯಿಸಿದ್ದು, ಆ ಲೇಖನಗಳು ಗ್ರಂಥದಲ್ಲಿ ಸೇರ್ಪಡೆಯಾದದ್ದು… ಎಲ್ಲವೂ ನಡೆಯಿತು. ಆದರೆ ಶರಣಬಸವೇಶ್ವರ ಅಂಗಡಿಯವರ ಹೆಸರನ್ನು ನಾನು ಕೇಳಿದ್ದು ಅದೇ ಮೊದಲು. ಆಮೇಲೆ ನಾಗೇಶ ಹೆಗಡೆಯವರೇ ಅವರ ಕಿರು ಪರಿಚಯ- ಸಸ್ಯಶಾಸ್ತ್ರ/ ಕೃಷಿಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಲಸ ಮಾಡಿ ನಿವೃತ್ತರಾಗಿರುವ ಡಾ.ಅಂಗಡಿ ಈಗಲೂ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ; ಶಿಕ್ಷಣಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ಕೊಡುತ್ತಿರುತ್ತಾರೆ; ಭಾವಗೀತೆ, ಹಳೆಯ ಚಿತ್ರಗೀತೆ ಗಳನ್ನು ಮಧುರವಾಗಿ ಹಾಡುವ ಖಯಾಲಿಯೂ ಇದೆ- ಎಂಬುದನ್ನೆಲ್ಲ ತಿಳಿಸಿದರು. ಸಂಪರ್ಕಿಸುತ್ತೀರಾದರೆ ಇಟ್ಟುಕೊಳ್ಳಿ ಎಂದು ಇಮೇಲ್ ವಿಳಾಸ ವನ್ನೂ ಕೊಟ್ಟರು.
ಫಾಸ್ಟ್ ಫಾರ್ವರ್ಡ್ ಟು ೨೦೧೬ ಜನವರಿ ೩೧. ವಿಶ್ವವಾಣಿಯಲ್ಲಿ ತಿಳಿರುತೋರಣ ಅಂಕಣ ಆರಂಭವಾಗಿ ಮೂರನೆಯ ವಾರ ‘ಎಚ್ಚರಿಕೆ! ಈ ಲೇಖನ ತುಂಬ ಖಾರ ಇದೆ!’ ಎಂಬ ತಲೆಬರಹವಿದ್ದ ಲೇಖನ ಬರೆದಿದ್ದೆ. ಅದು ಮೆಣಸಿನಕಾಯಿಯ ಖಾರ ಸೂಚ್ಯಂಕ ‘ಎಸ್‌ಎಚ್‌ಯು’ ಕುರಿತಾಗಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಡಾ. ಶರಣಬಸವೇಶ್ವರ ಅಂಗಡಿಯವರದೂ ಒಂದು! ನನಗದು ಮತ್ತೊಂದು ಹರ್ಷಾಘಾತ. ತತ್‌ಕ್ಷಣವೇ ಉತ್ತರಿಸಿದೆ: ನಾಗೇಶ
ಹೆಗಡೆಯವರು ನಿಮ್ಮ ಇಮೇಲ್ ವಿಳಾಸ ನನಗೆ ಕೊಟ್ಟಿದ್ದಾರೆ, ನಿಮ್ಮ ಬಗ್ಗೆ ಅಭಿಮಾನದ ಮಾತಾಡಿದ್ದಾರೆ. ನಾನೇ ನಿಮ್ಮನ್ನು ಸಂಪರ್ಕಿಸೋಣವೆಂದಿದ್ದೆ, ಆದರೆ ಸ್ವಲ್ಪ ಹಿಂಜರಿದೆ. ಈಗ ನೀವೇ ನನಗೆ ಬರೆದದ್ದು ಮೊಹಮ್ಮದನ ಬಳಿಗೆ ಮೌಂಟೇನ್ ಬಂದಂತಾಯ್ತು- ಎಂದು ಅಲಂಕಾರ ಸೇರಿಸಿಯೇ ಬರೆದೆ.
ಅವರು ಹಾಸ್ಯಪ್ರವೃತ್ತಿಯುಳ್ಳ ಸರಳಸಜ್ಜನರು ಎಂದು ಒಂದೆರಡು ಇಮೇಲ್ ವಿನಿಮಯದಲ್ಲೇ ಗೊತ್ತಾಯಿತು. ಮುಂದೆ ಅದೇವರ್ಷ ಅಮೆರಿಕದಲ್ಲಿ ಡಲ್ಲಾಸ್‌ನಲ್ಲಿ ಮಗಳ ಮನೆಗೆ ಬಂದಿದ್ದಾಗ ದೂರವಾಣಿಯಲ್ಲಿ ನನ್ನೊಡನೆ ಮಾತನಾಡಿದರು.
ಆಗಲೂ ಚೌಚೌ ಚೌಕಿ ಅಂಕಣವನ್ನೊಂದಿಷ್ಟು ಮೆಲುಕು ಹಾಕಿದೆವು. ೨೦೧೭ರಲ್ಲಿ ಮತ್ತೊಮ್ಮೆ ಡಲ್ಲಾಸ್ ನಗರಕ್ಕೆ ಬರುತ್ತಿದ್ದೇನೆ, ಆಗ ಅಲ್ಲಿ ನಾವಿಕ ಸಮ್ಮೇಳನದಲ್ಲಿ ಭೇಟಿಯಾಗೋಣ ಎಂದರು. ಅದರಂತೆ ಮೊದಲಬಾರಿಗೆ ನಮ್ಮ ಮುಖಾಮುಖಿ ಆಯ್ತು. ಸಮ್ಮೇಳನದಲ್ಲಿ ನಾವಿಬ್ಬರೂ ಪ್ರೇಕ್ಷಕರಾಗಿ ಯಷ್ಟೇ ನೋಂದಾಯಿಸಿದ್ದೆವು, ಆದರೆ ಅಲ್ಲಿ ಕೊನೆಗಳಿಗೆಯಲ್ಲಿ ‘ಹಿರೇಮಗಳೂರು ಕಣ್ಣನ್ ಮಾಮ ಮತ್ತು ಪ್ರೊ.ಕೃಷ್ಣೇಗೌಡರುಬಾರದಿರುವುದರಿಂದ ಹರಟೆ ಕಾರ್ಯಕ್ರಮ ರದ್ದಾಗುತ್ತಿದೆ’ ಎಂದು ಘೋಷಣೆಯಾದಾಗ ಅವರ ಬದಲಿಗೆ ನಾವಿಬ್ಬರು ಇನ್ನೂ ಕೆಲವು ಹವ್ಯಾಸಿ ಹಾಸ್ಯಪ್ರತಿಭೆಗಳನ್ನು ಸೇರಿಸಿ ಕೊಂಡು ಹರಟೆ ಕಾರ್ಯಕ್ರಮ ನಡೆಸುವುದೆಂದಾಯ್ತು!
ಡಾ. ಅಂಗಡಿಯವರ ಉಪಸ್ಥಿತಿಯಿಂದ ಕಾರ್ಯಕ್ರಮದ ಗುಣಮಟ್ಟ ಹೆಚ್ಚಿತು. ತುಂಬಿದ ಸಭಾಂಗಣದಲ್ಲಿ ಭರ್ಜರಿ ಯಶಸ್ವಿಯೂ ಆಯಿತು. ದಶಕಗಳ ಹಿಂದೆ ಸುಧಾದಲ್ಲಿ ಚೌಚೌ ಚೌಕಿಯ ಪ್ರಶ್ನಕಾರ ಮತ್ತು ತರ್ಲೆಉತ್ತರಭೂಪ ಆಗಿದ್ದವರು ಇದೀಗ ಒಂದೇ ವೇದಿಕೆಯೇರಿದ್ದು ಇಬ್ಬರಿಗೂ ಖುಷಿ ತಂದಿತು.
ಇಂತಿರುವ ಡಾ. ಶರಣಬಸವೇಶ್ವರ ಅಂಗಡಿಯವರು ಕಳೆದ ವರ್ಷ ಒಂದು ದಿನ ವಾಟ್ಸ್ಯಾಪ್ ಮೆಸೇಜಿನಲ್ಲಿ ಒಬ್ಬರು ಹಿರಿಯ ಕನ್ನಡಿಗರನ್ನು ನನಗೆ ಪರಿಚಯಿಸಿದರು. ಅವರ ಸಂಪರ್ಕಸಂಖ್ಯೆಯನ್ನೂ ಕೊಟ್ಟರು. ಅವರ ಹೆಸರು ರಾಮಶೇಷ ಶರ್ಮ. ಮೂಲತಃ ಮೈಸೂರಿನವರು. ಡಲ್ಲಾಸ್‌ನಲ್ಲಿಯೇ
ಅವರ ಮಗಳೂ ಇರುವುದರಿಂದ ಅಲ್ಲಿಗೆ ಬಂದಿದ್ದವರು ಡಾ. ಅಂಗಡಿಯವರಿಗೆ ವಾಯುವಿಹಾರದ ವೇಳೆ ಪರಿಚಯವಾಗಿ ಆತ್ಮೀಯರಾದರಂತೆ. ಅವರ ಜ್ಞಾನಸಂಚಯ ಮತ್ತು ಜ್ಞಾನದಾಹಗಳನ್ನು ನೋಡಿ ನಿಬ್ಬೆರಗಾಗಿ ನನಗೂ ಅವರನ್ನು ಪರಿಚಯಿಸಿದರೆ ಒಳ್ಳೆಯದಾಗಬಹುದು ಎಂದುಕೊಂಡು ಡಾ.
ಅಂಗಡಿಯವರು ಹಾಗೆ ಮಾಡಿದ್ದರು.
ರಾಮಶೇಷ ಶರ್ಮರ ವಾಟ್ಸ್ಯಾಪ್ ಡಿಪಿ ನೋಡಿದರೇನೇ ಗೊತ್ತಾಗುತ್ತಿತ್ತು ಅವರ ಮುಖದಲ್ಲಿನ ತೇಜಸ್ಸು, ಸಜ್ಜನಿಕೆ, ಜೀವನದಲ್ಲಿ ಗಳಿಸಿದ ಜ್ಞಾನಾನುಭವ ಗಳ ಹೊಳಪು. ಗೌರವಭಾವ ತಾನೇತಾನಾಗಿ ಬರುವಂಥ ನಿಲುವು. ಹಾಗೆ ಆದರಪೂರ್ವಕವಾಗಿಯೇ ಅವರಿಗೆ ವಾಟ್ಸ್ಯಾಪ್ ಮೆಸೇಜು ಬರೆದು ನನ್ನ ಪರಿಚಯ ತಿಳಿಸಿದೆ. ಡಾ.ಅಂಗಡಿಯವರೊಂದಿಗಿನ ಆತ್ಮೀಯತೆಯನ್ನೂ ಉಲ್ಲೇಖಿಸಿದೆ. ಅದನ್ನೋದಿದ ರಾಮಶೇಷ ಅವರು ವಾಟ್ಸ್ಯಾಪ್ ಕರೆಮಾಡಿ ನನ್ನೊಡನೆ ತುಂಬ ಆಪ್ತತೆಯಿಂದ ಮಾತನಾಡಿದರು. ಮತ್ತೆ ನೋಡುತ್ತೇನಾದರೆ ಅವರ ಇನ್ನೊಬ್ಬ ಮಗಳು ಇಲ್ಲಿ ನಾನಿರುವ ವರ್ಜೀನಿಯಾ ಸಂಸ್ಥಾನ ದಲ್ಲಿ ನಮ್ಮನೆಗೆ ಹತ್ತಿರದಲ್ಲೇ ಇದ್ದಾರೆ ಮತ್ತು ಅಲ್ಲಿಗೆ ಬಂದಿದ್ದಾಗಲೇ ರಾಮಶೇಷರು ನನ್ನೊಡನೆ ಮಾತನಾಡಿದ್ದಾರೆ!
ಬಿಎಸ್‌ಸಿ ಓದಿನ ಬಳಿಕ ಸಿನೆಮಾಟೊಗ್ರಫಿ ಕ್ಷೇತ್ರದಲ್ಲಿ ಒಂದಿಷ್ಟು ಕಲಿಕೆ ಮತ್ತು ಕೆಲಸ ಮಾಡಿ ಆಮೇಲೆ ಮುದ್ರಣ ತಂತ್ರಜ್ಞಾನ ಕಲಿಯಲು ಲಂಡನ್‌ಗೆ ಹೋಗಿ ಅಲ್ಲೊಂದಿಷ್ಟು ವರ್ಷ ವಾಸ್ತವ್ಯದ ನಂತರ ಮೈಸೂರಿಗೆ ಹಿಂದಿರುಗಿ ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನ; ಕೆಲ ವರ್ಷಗಳ ಹಿಂದೆ ಪತ್ನೀವಿಯೋಗ; ಮುತ್ತಿನಂಥ ಮೂವರು ಹೆಣ್ಮಕ್ಕಳೇ ಇವರನ್ನು ಪ್ರೀತ್ಯಾದರಗಳಿಂದ ನೋಡಿಕೊಳ್ಳುತ್ತಿದ್ದಾರೆ;
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಝೂಮ್ ಮೂಲಕ ರಾಮಾಯಣ, ಮಹಾಭಾರತ, ದೇವುಡು ಕೃತಿಗಳಾದ ಮಹಾಬ್ರಾಹ್ಮಣ ಮಹಾಕ್ಷತ್ರಿಯ ಮುಂತಾದುವುಗಳ ನಿತ್ಯಪಾರಾಯಣ-ಪ್ರವಚನ ತಂದೆಯಿಂದ ಕೇಳುವ ನೆಪದಲ್ಲಿ ಆ ಹೆಣ್ಮಕ್ಕಳು ಪ್ರಪಂಚದ ಬೇರೆಬೇರೆ ಕಡೆಗಳಲ್ಲಿದ್ದವರು ದಿನವೂ
ಒಟ್ಟುಸೇರುತ್ತಾರೆ… ಅಂತೆಲ್ಲ ಇಂಟೆರೆಸ್ಟಿಂಗ್ ವಿಚಾರಗಳನ್ನು ಅಷ್ಟೇ ಆಸಕ್ತಿ ಉತ್ಸಾಹಭರಿತರಾಗಿ ನನಗೆ ತಿಳಿಸಿದರು.
ಒಂದುದಿನ ಸಂಜೆ ಅವರ ಮಗಳ ಮನೆಯಲ್ಲಿ ರಾಮಶೇಷ ಶರ್ಮರೊಡನೆ ನನ್ನ ಮುಖತಃ ಭೇಟಿಯೂ ಆಯ್ತು. ಉಭಯಕುಶಲೋಪರಿ ಹರಟೆಯೂ ನಡೆಯಿತು. ಕಳೆದ ತಿಂಗಳ ಒಂದು ಶನಿವಾರ ‘ಇಲ್ಲಿ ವರ್ಜೀನಿಯಾದಲ್ಲಿರುವ ಮಗಳ ಮನೆಯಲ್ಲಿ ರುದ್ರಾಭಿಷೇಕ ಇಟ್ಟುಕೊಂಡಿದ್ದೇವೆ, ನೀವೂ ಬನ್ನಿ’ ಎಂದು ರಾಮಶೇಷ ಶರ್ಮ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿದ್ದರು. ಅವರ ಹಿರಿಯ ಮಗಳು ಭಾರತಿ ಬೆಂಗಳೂರಿನಿಂದ ಬಂದಿದ್ದರು. ಎರಡನೆಯ
ಮಗಳು ವಂದನಾ ಮತ್ತವರ ಸಂಸಾರ ಡಲ್ಲಾಸ್‌ನಿಂದ ಬಂದಿದ್ದರು. ಮೂರನೆಯ ಮಗಳು ರೂಪಾರ ಮನೆಯಲ್ಲಿ ಕಾರ್ಯಕ್ರಮ. ಆವತ್ತೇ ರಾಮಶೇಷ ಶರ್ಮರ ೯೦ನೆಯ ವರ್ಷದ ಹುಟ್ಟುಹಬ್ಬ ಆಚರಣೆ ಕೂಡ. ಅವರ ಲವಲವಿಕೆ, ಜೀವನೋತ್ಸಾಹ, ದೃಢಕಾಯ, ಮುಖದಲ್ಲಿ ಮಿನುಗು ನೋಡಿದರೆ ಅವರಿಗೆ ತೊಂಬತ್ತಾಯಿತು ಎಂದು ಯಾರೂ ಹೇಳಲಿಕ್ಕಿಲ್ಲ.
ಪೂಜೆ, ಮಂಗಳಾರತಿ, ತೀರ್ಥಪ್ರಸಾದ, ಭೋಜನ ಇತ್ಯಾದಿಯೆಲ್ಲ ಆದಮೇಲೆ ಚಿಕ್ಕದೊಂದು ಅನೌಪಚಾರಿಕ ಸಭೆ. ಮೂವರು ಹೆಣ್ಮಕ್ಕಳು, ಅಳಿಯಂ ದಿರು, ಮೊಮ್ಮಕ್ಕಳು ಮನಬಿಚ್ಚಿ ಮಾತನಾಡಿದರು. ಅವರೆಲ್ಲರ ಬಾಳಿನಲ್ಲಿ ರಾಮಶೇಷರ ಮಾರ್ಗದರ್ಶನದ ಛಾಪು ಯಾವ ರೀತಿಯದೆಂದು
ಹೃದಯಂಗಮವಾಗಿ ಬಣ್ಣಿಸಿದರು. ಅಂತಹ ಹಿರಿಯರೊಬ್ಬರ ಸ್ನೇಹ-ಆಶೀರ್ವಾದ ಸಿಂಚನ ನಮಗೂ ಲಭಿಸಿತೆಂದು ಅಲ್ಲಿ ಸೇರಿದ್ದ ನಮಗೆಲ್ಲ ಒಂದು ವಿಶೇಷ ಹಿತಾನುಭವ. ಮನೆಗೆ ಬಂದವನೇ ಡಾ.ಅಂಗಡಿಯವರಿಗೆ ಮೆಸೇಜು ಬರೆದು ಸರಳ ಸುಂದರ ಸಮಾರಂಭವೊಂದರಲ್ಲಿ ಪಾಲ್ಗೊಂಡ ಸಂಭ್ರಮವನ್ನು ಹಂಚಿಕೊಂಡೆ. ಅವರೂ ತುಂಬ ಖುಷಿಪಟ್ಟರು.
ಮತ್ತೊಮ್ಮೆ ರಾಮಶೇಷರ ಆಕರ್ಷಕ ವ್ಯಕ್ತಿತ್ವದ ಗುಣಗಾನ ಮಾಡಿದರು. ಆ ಮಾತುಕತೆಯಲ್ಲೇ ಚೌಚೌ ಚೌಕಿ ಪುಸ್ತಕ ಪಿಡಿಎಫ್ ರೂಪದಲ್ಲಿ ನನಗೆ ಸಿಕ್ಕಿದೆಯೆಂಬ ಸಂತೋಷವನ್ನೂ ಡಾ.ಅಂಗಡಿಯವರಿಗೆ ತಿಳಿಸಿದೆ. ‘ನನ್ನ ಬಳಿಯೇ ಆ ಪುಸ್ತಕದ ಪ್ರತಿ ಇಲ್ಲವಾಗಿದೆ. ದಯವಿಟ್ಟು ಆ ಪಿಡಿಎಫ್ ನನಗೂ ಕಳುಹಿಸಿ’ ಎಂದರು. ಕೆರೆಯ ನೀರನು ಕೆರೆಗೆ ಚೆಲ್ಲಿದೆ. ಇದೇ ಅಲ್ಲವೇ ಅಕ್ಷರಗಳ ಅದ್ಭುತಜಾಲ!