Thursday, 19th September 2024

ಎಲ್ಲರೂ ಮೀಸಲಿನ ಒಳಗಿದ್ದರೆ, ಹೊರಗುಳಿಯುವವರು ಯಾರು ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಬ್ರಿಟಿಷರ ಆಳ್ವಿಕೆಯಿಂದ ಭಾರತ ಸರ್ವ ಸ್ವಾತಂತ್ರ್ಯಗೊಳ್ಳಲು ಸಜ್ಜಾಗಿದ್ದ ಸಮಯದಲ್ಲಿ ದೇಶಕ್ಕೊಂದು ಸಂವಿಧಾನ ಸಿದ್ಧಪಡಿ ಸಲು ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಮಿತಿ ರಚಿಸಲಾಯಿತು. ವಿಶ್ವದ ಅತಿದೊಡ್ಡ ಸಂವಿಧಾನವನ್ನು ರಚಿಸುವ ಈ ಮಹತ್ವದ ಕೆಲಸಕ್ಕೆ ಕೈಹಾಕಿದ ಅಂಬೇಡ್ಕರ್ ಅವರು ಸಮಾನತೆಯನ್ನು ಪ್ರತಿಪಾದಿಸಿದರು.

ದೇಶದಲ್ಲಿರುವ ಎಲ್ಲರೂ ಸಮಾನವಾಗಿ ಜೀವಿಸಬೇಕು ಎಂದರೆ ದೇಶದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳ ಅಭಿವೃದ್ಧಿಗೆ
‘ಬೂಸ್ಟ್’ ಮಾಡಬೇಕು ಎನ್ನುವ ವಾದವನ್ನು ಮಂಡಿಸಿದರು. ಇದರ ಫಲವಾಗಿಯೇ ಇಂದು ದೇಶದಲ್ಲಿ ಮೀಸಲು ಜಾರಿಯಾಗಿ ರುವುದು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದಾಗಲೇ ಅವರೆಲ್ಲರೂ, ದೇಶದ ಇತರ ಮೇಲ್ವರ್ಗದವರ ರೀತಿ ಬದುಕಲು ಸಾಧ್ಯವೆಂದು ಯೋಚಿಸಿ ಮೀಸಲಾತಿಯನ್ನು ಕಲ್ಪಿಸಿದರು.

ಆದರೆ ಅಂದು ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ಪಡೆಯುವ ಸಮುದಾಯದ ಪಟ್ಟಿಗೂ ಈಗಿರುವ ಪಟ್ಟಿಯನ್ನು ಒಮ್ಮೆ ಗಮನಿಸಿದರೆ ಅಜಗಜಾಂತರ ವ್ಯತ್ಯಾಸವಿರುವುದು ನಾವು ನೋಡಬಹುದು. ಪರಿಸ್ಥಿತಿಗೆ ಅನುಗುಣವಾಗಿ ಆಡಳಿತ ನಡೆಸುವ ಸರಕಾರಗಳು ಕೈಗೊಂಡ ನಿರ್ಧಾರಗಳು ಈ ರೀತಿಯಾಗಲು ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ರೀತಿ ಒತ್ತಡ ಹೆಚ್ಚಾದಗಲೆಲ್ಲ ಮೀಸಲು ಪಟ್ಟಿಗೆ ಹೊಸ ಹೊಸ ಸಮುದಾಯಗಳನ್ನು ಸೇರಿಸುತ್ತಾ ಹೋದರೆ, ಭವಿಷ್ಯದಲ್ಲಿ ಮೀಸಲಾತಿ ಎನ್ನುವ ಕವಚದಿಂದ ಹೊರಗುಳಿಯುವವರು ಯಾರು ಎನ್ನುವ ಪ್ರಶ್ನೆ ಉದ್ಭವಿಸದೇ ಇರುವುದಿಲ್ಲ.

ಹಾಗೇ ನೋಡಿದರೆ ಅಂಬೇಡ್ಕರ್ ಅವರು ಮೀಸಲಾತಿ ಎನ್ನುವುದನ್ನು ಪರಿಚಯಿಸಿದ್ದೂ ಸಹ ಕೆಲ ದಶಕಗಳಿಗೆ ಸೀಮಿತಗೊಳಿಸಿ. ಆ ನಂತರ ಬಂದ ಸರಕಾರಗಳು ಮೀಸಲಾತಿಯನ್ನು ಸಡಿಲಗೊಳಿಸುವ ಅವಕಾಶವನ್ನು ನೀಡಲಾಗಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಮೀಸಲಾತಿಯನ್ನು ತಗೆಯುವ ಸಾಹಸಕ್ಕೆ ಕೈಹಾಕಲು ಯಾವ ಪಕ್ಷಗಳೂ ಸಿದ್ಧವಿಲ್ಲ. ಆದ್ದರಿಂದಲೇ ಪ್ರತಿ 20 ವರ್ಷಕ್ಕೊಮ್ಮೆ ಮೀಸಲಾತಿಯನ್ನು ವಿಸ್ತರಣೆ ಮಾಡಿಕೊಂಡು ಹೋಗುವ ಪದ್ಧತಿ ದೇಶದಲ್ಲಿದೆ.

ಇನ್ನು 1979ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದು ಮಂಡಲ ಆಯೋಗವನ್ನು ರಚಿಸುವ ತನಕ ದೇಶದಲ್ಲಿ ಮೀಸಲಾತಿ ಇದ್ದದ್ದು ಕೇವಲ ಪರಿಶಿಷ್ಟ ಜಾತಿ ಹಾಗೂ ಪಂಗಡವರಿಗೆ ಮಾತ್ರ. ಆದರೆ ಮಂಡಲ ಆಯೋಗದ ಶಿಫಾರಸಿನಂತೆ 1967ರಲ್ಲಿ ಹಿಂದುಳಿದ ವರ್ಗ ಎನ್ನುವ ನೂತನ ಮೀಸಲನ್ನು ಆರಂಭಿಸಲಾಯಿತು. ಈ ನಡುವೆ ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯ ಗಳೆಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ನವರಿಗೂ ಮೀಸಲಾತಿ ನೀಡಲಾಗಿದೆ.

ಆದರೆ ಮೀಸಲಾತಿ ನೀಡಬೇಕು, ನೀಡಬಾರದು, ನೀಡಿದರೂ ಎಷ್ಟು ನೀಡಬೇಕು ಎನ್ನುವ ಬಗ್ಗೆ ಈಗಲೂ ಆಗ್ಗಿದ್ದಾಂಗೆ, ಚರ್ಚೆ, ವಾದ, ಪ್ರತಿಭಟನೆ, ನಿಯೋಗಗಳಿಂದ ಆಗ್ರಹ, ಹೋರಾಟಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಕೊನೆಯೂ ಇಲ್ಲ.
ಕರ್ನಾಟಕದ ವಿಷಯದಲ್ಲಿ ನೋಡಿದರೆ, ಅನೇಕ ಸಮುದಾಯಗಳು ತಮಗೆ ಹಿಂದುಳಿದ ವರ್ಗದ ಸ್ಥಾನ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸಿ ಮೀಸಲು ಜಾರಿಗೊಳಿಸುವಂತೆ ಕೇಳುತ್ತಲೇ ಇರುತ್ತವೆ. ಕೇವಲ ಆ ಸಮಯದಲ್ಲಿ ಮಾತ್ರವೇ ಒಂದು ಸಮು ದಾಯಕ್ಕೆ ಮೀಸಲು ಕೊಡಿಸುವುದು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಮುಖ್ಯ ಭಾಗವಾಗಿರುತ್ತದೆ ಎಂದರೆ
ನಂಬಲೇಬೇಕು.

ಇದೀಗ ರಾಜ್ಯದಲ್ಲಿ ಪುನಃ ಮೀಸಲಾತಿಯ ಕೂಗು ಕೇಳಿಬರುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದಿದ್ದ ಜಾತಿ ಸಮೀಕ್ಷೆಯ ವರದಿಯನ್ನು ಒಪ್ಪಿಕೊಂಡು, ಅದನ್ನು ಜಾರಿಗೊಳಿಸಬೇಕು ಎನ್ನುವ ಕೂಗನ್ನು ಹಿಂದುಳಿದ ವರ್ಗದಲ್ಲಿರುವ ಹಲವು ಮುದಾಯಗಳು ಆಗ್ರಹಿಸುತ್ತಿವೆ. ಜಾತಿ ಸಮೀಕ್ಷೆ ಒಪ್ಪಿಕೊಳ್ಳುವುದಷ್ಟೇ ಅಲ್ಲ, ಹಿಂದುಳಿದ ಸಮುದಾಯದಲ್ಲಿರುವ ಕುರುಬ, ಗೊಲ್ಲ ಸೇರಿದಂತೆ ಹಲವು ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕು ಎನ್ನುವ ಆಗ್ರಹವನ್ನು ಸರಕಾರದ ಮುಂದಿಡುತ್ತಿದ್ದಾರೆ.

ಇದೀಗ ಕುರುಬ ಸಮುದಾಯದವರೆಲ್ಲ ಒಂದಾಗಿ ರಾಜಕೀಯ ಶಕ್ತಿ ಪ್ರದರ್ಶನಕ್ಕೂ ಮುಂದಾಗಿದ್ದಾರೆ. ಈಗಾಗಲೇ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಆದರೀಗ ಕೇವಲ ಶೇ.3.5ರಷ್ಟು ಮೀಸಲು ಇರುವ ಪರಿಶಿಷ್ಟ
ಪಂಗಡದೊಳಗೆ ಸೇರಿಸಬೇಕೆಂಬ ಹೋರಾಟವನ್ನು ಮಾಡಲು ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ಪರಿಶಿಷ್ಟ ಪಂಗಡದೊಳಗೆ ತಳವಾರ ಸಮುದಾಯ ಸೇರಿದೆ. ಪರಿಶಿಷ್ಟ ಪಂಗಡ ಎನ್ನುವುದನ್ನು ಅಂಬೇಡ್ಕರ್ ಅವರು ಜಾರಿಗೆ ತಂದಿದ್ದು, ಬುಡಕಟ್ಟು ಅಥವಾ ನಾಗರಿಕ ಸಮುದಾಯದ ಸಂಪರ್ಕವನ್ನು ಹೊಂದಿರದ ಸಮುದಾಯದಲ್ಲಿರುವವರನ್ನು ಮುನ್ನೆಲೆಗೆ ತರಬೇಕು ಎನ್ನುವ ಉದ್ದೇಶದಿಂದ. ಎಸ್‌ಟಿಗೆ ಸೇರಿಸಬೇಕು ಎಂದರೆ, ಬುಡಕಟ್ಟು  ಸಮುದಾಯದಲ್ಲಿರುವ ಕೆಲವು ಅಂಶಗಳಿ ರಬೇಕು.

ಕರ್ನಾಟಕದಲ್ಲಿ ನೋಡುವುದಾದರೆ, ಅರಣ್ಯದಲ್ಲಿ ವಾಸಿಸುವ ಸೋಲಗ, ಕೋಟ, ಕೊರಗ, ಇರುಲಿಗ, ಜೇನು ಕುರುಬ ಸೇರಿದಂತೆ 50 ಸಮುದಾಯವನ್ನು ಮಾತ್ರ ಸೇರಿಸಲಾಗಿತ್ತು. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೀಮಿತಗೊಂಡ ಸಿದ್ದಿ ಸಮುದಾಯವನ್ನು ಸೇರಿಸಲಾಗಿತ್ತು. ಆದರೆ ದೇವರಾಜ ಅರಸು ಅವರ ಕಾಲದಲ್ಲಿ ಹಿಂದುಳಿದ ವರ್ಗದ ಆಯೋಗವನ್ನು ರಚಿಸಲಾಯಿತು. ಈ ವರದಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಸೀಮಿತಗೊಂಡಂತೆ ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಶಿಫಾರಸು ಮಾಡಲಾಗಿತ್ತು. ಇಲ್ಲಿಯವರೆಗೆ ನಾಯಕ, ತಳವಾರ, ವಾಲ್ಮೀಕಿ ಸಮುದಾಯಗಳೆಲ್ಲ ಹಿಂದುಳಿದ ಪಂಗಡ ಎನ್ನುವ ಪಟ್ಟಿಯಲ್ಲಿದ್ದವು. ಆದರೆ ನಾಯಕ ಸಮುದಾಯದವರು ಬುಡಕಟ್ಟು ಸಮುದಾಯದ ರೀತಿಯಲ್ಲಿಯೇ ಇರುವುದನ್ನು ಗಮನಿಸಿ, ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಲಾಯಿತು.

ಆದರೆ ನಂತರ ಇದನ್ನಿಟ್ಟುಕೊಂಡು ವಾಲ್ಮೀಕಿ ಸಮುದಾಯ ಸೇರಿದಂತೆ ಹಲವು ಸಮುದಾಯಗಳನ್ನು ಸೇರಿಸುತ್ತಾ ಬರಲಾಗಿದೆ. ಈ ರೀತಿ ರಾಜಕೀಯ ಒತ್ತಡಕ್ಕೆ ಮಣಿದು, ಸೇರ್ಪಡೆಗೊಂಡಿರುವ ಹಲವು ಸಮುದಾಯದವರು ಎಸ್‌ಟಿ ಕೋಟದಲ್ಲಿ ಬೆಳಕಿಗೆ
ಬಂದು ‘ಅಭಿವೃದ್ಧಿ’ ಹೊಂದಿದ್ದಾರೆ. ಆದರೆ ಅಂಬೇಡ್ಕರ್ ಅವರು ಯಾವ ಅರಣ್ಯ ವಾಸಿಗಳು ಮುನ್ನೆಲೆಗೆ ಬರಬೇಕು ಎಂದು ಕೊಂಡಿದ್ದರೋ, ಅವರು ಮಾತ್ರ ಅಲ್ಲಿಯೇ ಉಳಿದುಕೊಂಡಿದ್ದಾರೆ. ಶಕ್ತಿಯಿರುವ, ಬಲಾಢ್ಯರಾಗಿರುವ ವ್ಯಕ್ತಿಗಳು ಮುಂದುವರಿದಿ ದ್ದಾರೆ. ಆದರೆ ಸಂವಿಧಾನದ ಆಶಯಕ್ಕೆ ತಕ್ಕಂತೆ ಈ ಮೀಸಲು ಅಗತ್ಯವಿರುವವರಿಗೆ ಸಿಕ್ಕಿದೆಯೇ ಎನ್ನುವ ಪರಾಮರ್ಶೆ ನಡೆಸ ಬೇಕಿದೆ.

ಅಂಬೇಡ್ಕರ್ ಅವರು ಜಾರಿಗೆ ತಂದ ಮೀಸಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿದ್ದವು ಎಂದು ಈ ಮೊದಲೇ ಹೇಳಿದ್ದೆ. ಪಂಗಡ ವಿಷಯ ಇದಾದರೇ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಯೂ ನೂರಾರು ಪಂಗಡಗಳಿವೆ. ಮಾದಿಗ ಸಮುದಾಯದಂಥ ತೀರಾ ಹಿಂದುಳಿದ, ಈಗಲೂ ಅಸ್ಪೃಶ್ಯರಂತೆ ಕಾಣುವ ಹಲವು ಸಮುದಾಯಗಳಿವೆ. ಆದರೆ ಈ ಸಮುದಾಯದಲ್ಲಿರುವವರು ಈಗಲೂ, ಸಮಾನತೆಗಾಗಿ ಹೋರಾಡುತ್ತಲೇ ಇದ್ದಾರೆ. ಅದಕ್ಕಾಗಿಯೇ ಮಾದಿಗ ಸಮುದಾಯದವರು ಒಳ ಮೀಸಲಾತಿಯನ್ನು
ನೀಡುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ.

ಅಂದರೆ ಪರಿಶಿಷ್ಟ ಜಾತಿಯಲ್ಲಿರುವ ಮೀಸಲಿನಲ್ಲಿ ಮಾದಿಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎನ್ನುವುದು ಅವರ ಆಗ್ರಹ. ಇನ್ನು ಈ ಸಮುದಾಯಗಳನ್ನು ಮೀಸಲಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿಸುವುದು
ಮತ್ತೊಂದು ರಾಜಕೀಯ ಅಸವೆಂದರೆ ತಪ್ಪಾಗುವುದಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವೂ, ತಮ್ಮದೇಯಾದ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಆಗ್ಗಿದ್ದಾಂಗೆ ಮೀಸಲಾತಿ ಹೋರಾಟವನ್ನು ಮುನ್ನೆಲೆಗೆ ತರುತ್ತಿರುತ್ತಾರೆ. ಆದರೆ ಈಗಾಗಲೇ ಶೇ.49ರಷ್ಟು ಮೀಸಲನ್ನು ರಾಜ್ಯ ಸರಕಾರ ನೀಡಿರುವಾಗ, ಪುನಃ ಇನ್ನಷ್ಟು ಸಮುದಾಯಗಳನ್ನು ಈ ಮೀಸಲು ಪಟ್ಟಿಯಲ್ಲಿ ತರುವುದರಿಂದ, ಮೀಸಲು ನೀಡುವಂತೆ ಒತ್ತಡ ಹೇರುವುದರಿಂದ, ಈಗಾಗಲೇ ಮೀಸಲು ಪಟ್ಟಿಯಲ್ಲಿ ತುಂಬಿ ತುಳುಕುತ್ತಿರುವ ಪಟ್ಟಿ ಇನ್ನಷ್ಟು
ದೊಡ್ಡದಾಗಲಿದೆ. ಇದರಿಂದ ಹಾಲಿಯಿರುವ ಸಮುದಾಯ ದವರಿಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ ಎನ್ನುವುದನ್ನು
ಒಪ್ಪಲೇಬೇಕು.

ಹೊಸ ಸಮುದಾಯಗಳಿಗೆ ಮೀಸಲು ಸಿಗಬೇಕು ಎನ್ನುವ ಮಾತು ಕೇಳಿಬಂದಾಗಲೆಲ್ಲ, ಮೀಸಲನ್ನು ಹೆಚ್ಚಿಸಬೇಕು ಎನ್ನುವ ಒತ್ತಡವೂ ಸರಕಾರದ ಮೇಲೆ ಬರುತ್ತದೆ. ಆಡಳಿತ ನಡೆಸುವ ಪಕ್ಷಗಳು, ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿ, ಜಾರಿಕೊಂಡರೆ, ಪ್ರತಿಪಕ್ಷಗಳು ‘ನಮ್ಮ ಸರಕಾರ ಅಕಾರಕ್ಕೆ ಬಂದರೆ, ಮೀಸಲನ್ನು ಶೇ.50ಕ್ಕಿಂತ ಹೆಚ್ಚು ಮಾಡುವುದಾಗಿ ಹೇಳುತ್ತವೆ’. ಆದರೆ ರಾಜಕೀಯದಲ್ಲಿರುವ ಎಲ್ಲರಿಗೂ ಗೊತ್ತಿದೆ, ಈ ಮೀಸಲನ್ನು ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲವೆಂದು. ಹೌ

ದು, ಸಂವಿಧಾನ ರಚಿಸುವಾಗಲೇ ಮೀಸಲು ನೀಡುವ ಬಗ್ಗೆ ಮುಂದಾಲೋಚನೆ ಮಾಡಿದ್ದ ಅಂಬೇಡ್ಕರ್ ಅವರು ಶೇ.50ರಷ್ಟು ಮಾತ್ರ ಮೀಸಲು ನೀಡಬೇಕು. ಇನ್ನುಳಿದ 50ನ್ನು ಸಾಮಾನ್ಯ ಕ್ಯಾಟಗರಿಯಲ್ಲಿರುವ ಸಮುದಾಯಗಳಿಗೆ ನೀಡಬೇಕು ಎಂದು ಹೇಳಿದ್ದರು. ದೇಶದಲ್ಲಿ ಇದೇ ಮಾದರಿಯಲ್ಲಿ ನಡೆಯುತ್ತಿದೆ. ತಮಿಳುನಾಡು ಹೊರತು ಪಡಿಸಿ, ಇನ್ನುಳಿದ ಎಲ್ಲ ರಾಜ್ಯಗಳಲ್ಲಿ ಶೇ.50ರಷ್ಟು ಅನುಪಾತವನ್ನು ಮೀರಿಲ್ಲ. ಜಯಲಲಿತಾ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ಮೀಸಲು ಹಾಗೂ ಆರ್ಥಿಕವಾಗಿ
ಶಕ್ತರಲ್ಲದವರಿಗೆ ಮೀಸಲು ನೀಡುವ ಲೆಕ್ಕಾಚಾರದಲ್ಲಿ ಮೀಸಲನ್ನು ಶೇ.69ಕ್ಕೆ ಹೆಚ್ಚಿಸಿದ್ದರು.

ಇದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವಾಗ, ತಮಿಳುನಾಡಿನಲ್ಲಿ ವಿಶೇಷ ಪ್ರಕರಣವೆಂದು ಹೇಳಿ ಕೇಂದ್ರದಲ್ಲಿ ಸಾಂವಿಧಾ ನಿಕ ತಿದ್ದುಪಡಿಯನ್ನು ತರಲಾಗಿದೆ. ಆದರೆ ತಮಿಳುನಾಡು ಬಳಿಕ ಮೀಸಲು ಹೆಚ್ಚಿಸಲು ಮುಂದಾದ ಎಲ್ಲ ರಾಜ್ಯಗಳಿಗೂ
ಕೇಂದ್ರ ಸರಕಾರ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ತಮಿಳುನಾಡು ಮಾದರಿಯಲ್ಲಿ ಮಹಾರಾಷ್ಟ್ರ ಸರಕಾರ
ಮರಾಠರಿಗೆ ಮೀಸಲು ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಮುಂದೆ ತಂದು, ಅದನ್ನು ಜಾರಿಗೊಳಿಸಿತ್ತು.

ಆದರೆ ಇದರ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ನಿಲ್ಲಲಿಲ್ಲ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಒಟ್ಟು ಜನಸಂಖ್ಯೆ ಶೇ.50ರಷ್ಟು ಮಾತ್ರ ಮೀಸಲಿಗೆ ಮೀಸಲಿಡಬೇಕು. ಬಾಕಿ 50 ಸಾಮಾನ್ಯ ವರ್ಗಕ್ಕೆ ಇರಬೇಕು. ಆದರೆ ಈಗಾಗಲೇ ಇರುವ ಶೇ.50ರಷ್ಟು ಮೀಸಲಿನಲ್ಲಿ ಯಾವ ಸಮುದಾಯಕ್ಕೆ ಎಷ್ಟು ಮೀಸಲು ನೀಡಬೇಕು, ಹೆಚ್ಚಿಸಬೇಕೇ? ಕಡಿಮೆ ಮಾಡಬೇಕೇ ಎನ್ನುವುದನ್ನು ರಾಜ್ಯ ಸರಕಾರಗಳು ನಿರ್ಧರಿಸಬಹುದು ಎಂದು ಹೇಳಿದೆ. ಮಹಾರಾಷ್ಟ್ರ ಸರಕಾರಕ್ಕೆ ಹಿನ್ನಡೆ ಯಾದ ಬಳಿಕ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮೀಸಲು ವಿಷಯದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

ಈ ರೀತಿ ಮೀಸಲಾತಿಗೆ ಶೇ.50 ಮೀರಬಾರದು ಎಂದು ನಿರ್ಬಂಧ ಹೇರಿರುವುದರ ಹಿಂದೆ ಹಲವು ವಿಚಾರಗಳಿವೆ. ಪ್ರಮುಖವಾಗಿ ಒತ್ತಡ ಬಂದಂತೆ, ಸರಕಾರಗಳು ಮೀಸಲಾತಿಯನ್ನು ಹೆಚ್ಚಿಸುತ್ತಾ ಹೋದರೆ, ಮುಂದೊಂದು ದಿನ ಸಾಮಾನ್ಯ ವರ್ಗದಲ್ಲಿರುವ ಸಮುದಾಯಗಳಿಗೆ ಕೋಟ ಇಲ್ಲವಾಗುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ 50ರಷ್ಟು ಮೀಸಲಿಟ್ಟು, ಬಾಕಿಯಿರುವ 50ರಲ್ಲಿ ಇತರ ಸಮುದಾಯ ಗಳು ಹಂಚಿಕೊಳ್ಳಿ ಎನ್ನುವ ಅಂಶವಿದೆ. ಆದ್ದರಿಂದಲೇ ಸುಪ್ರೀಂ ಕೋರ್ಟ್ ಸಹ ಶೇ.50 ಮೀಸಲು ಕ್ರಾಸ್ ಆಗದ ರೀತಿ ಎಚ್ಚರವಹಿಸಬೇಕು ಎನ್ನುವ ಮಾತನ್ನು ಪದೇ ಪದೆ ಹೇಳುತ್ತಿವೆ.

ಇನ್ನು ಇದೀಗ ಕುರುಬ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸುತ್ತಿರುವ ವಿಚಾರವನ್ನು ಗಮನಿಸಬೇಕಿದೆ. ಪರಿಶಿಷ್ಟ ಪಂಗಡದವರು ತಮಗಿರುವ ಮೀಸಲನ್ನು 3.5ರಿಂದ 7.5ಕ್ಕೆ ಹೆಚ್ಚಿಸುವಂತೆ ಕೇಳುತ್ತಿರುವುದರಿಂದ, ಹೆಚ್ಚಾಗುವ ಮೀಸಲಿನಲ್ಲಿ ನಮ್ಮನ್ನು ಎಸ್‌ಟಿಗೆ ಸೇರಿಸಬೇಕು ಎನ್ನುವುದು ಹೋರಾಟ ಗಾರರ ವಾದ. ಇದಕ್ಕೆ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇತೃತ್ವ ವಹಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದಾಗ ಸಿದ್ದರಾಮಯ್ಯ ಅವರು ಜಾತಿ ಸಮೀಕ್ಷೆ ನಡೆಸಿ, ಅದಕ್ಕೆ ಅನುಗುಣವಾಗಿ ಮೀಸಲನ್ನು ಶೇ.50ಕ್ಕಿಂತ ಹೆಚ್ಚಿಸಬೇಕು.
ಈ ಶೇ.50ರ ಮೀಸಲು ಕ್ಯಾಪಿನಿಂದ ಅನೇಕರಿಗೆ ಸಮಸ್ಯೆಯಾಗಲಿದೆ ಎನ್ನುವ ವಾದವನ್ನು ಮಂಡಿಸಿ, ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸಿದ್ದರು.

ಆದರೆ ಮೀಸಲನ್ನು ಹೆಚ್ಚಿಸುವುದಕ್ಕೆ ಕೇಂದ್ರ ಸರಕಾರ ಒಪ್ಪದೇ ಇರುವುದು ಬೇರೆ ಮಾತು. ಇದೀಗ ಪುನಃ ಇದೇ ವಿಷಯವಾಗಿ ಹೋರಾಟಕ್ಕೆ ಕುರುಬ ಸಮುದಾಯದೊಂದಿಗೆ, ಇನ್ನು ಕೆಲವು ಸಮುದಾಯಗಳು ಒಂದಾಗಿವೆ. ಆದರೆ ಇಲ್ಲಿ ನಾವು ಗಮಿಸಬೇಕಾ ಗಿರುವ ಸಂಗತಿ ಏನೆಂದರೆ, ಸುಪ್ರೀಂ ಕೋರ್ಟ್ ಈಗಾಗಲೇ ಮೀಸಲು ಎಷ್ಟಿರಬೇಕು ಎನ್ನುವ ಸ್ಪಷ್ಟ ಸೂಚನೆಯನ್ನು ನೀಡಿದ ಬಳಿಕ ಹೆಚ್ಚಿಸಲು ಸಾಧ್ಯವಿಲ್ಲ. ಒಂದು ವೇಳೆ ಎಸ್ ಟಿಗೆ ಮೀಸಲನ್ನು ಹೆಚ್ಚಿಸಬೇಕೆಂದರೆ, ಒಬಿಸಿ, ಎಸ್ ‌ಸಿ ಹಾಗೂ ಇತರ ಕೋಟ ದಲ್ಲಿರುವ ಮೀಸಲನ್ನು ಹಿಂಪಡೆದು ಇವರಿಗೆ ನೀಡಬೇಕು. ಇದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ನಡುವೆ ಮೀಸಲು ಪಟ್ಟಿಗೆ ಸೇರಬೇಕು ಎನ್ನುವ ಅತ್ಯುತ್ಸಾಹ ತೋರುತ್ತಿರುವ ಹಲವು ಸಮುದಾಯಗಳು ಒಂದು ವಿಷಯ ವನ್ನು ಗಮನಿಸಬೇಕು. ಈಗಾಗಲೇ  ಸುಪ್ರೀಂ ಕೋರ್ಟ್ ಶೇ.50ರಷ್ಟು ಮೀಸಲನ್ನು ಕ್ರಾಸ್ ಮಾಡುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆ ನೀಡಿರುವುದರಿಂದ, ಸರಕಾರಗಳು ಇದನ್ನು ಮೀರುವಂತಿಲ್ಲ. ಆದ್ದರಿಂದ ಯಾರಿಗೆ ಮೀಸಲು ಸ್ಥಾನಮಾನ ನೀಡಿದರೂ, 49 ರಷ್ಟಿರುವ ಸೀಟುಗಳಲ್ಲಿಯೇ ನೀಡಬೇಕು. ಆದ್ದರಿಂದ ಹೊಸ ಸಮುದಾಯಗಳಿಗೆ ಮೀಸಲು ನೀಡುತ್ತಾ ಹೋದಂತೆ,
ಸಾಮಾನ್ಯ ವರ್ಗದಲ್ಲಿರುವ ಸ್ಪರ್ಧೆ ಕುಸಿಯುತ್ತಾ ಸಾಗುತ್ತದೆ.

ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲು ಬಳಿಕ ಉಳಿಯುವ 50ರಷ್ಟು ಸೀಟುಗಳನ್ನು ಹಂಚಿಕೊಳ್ಳುವುದಕ್ಕೆ ಸಾಮಾನ್ಯ ವರ್ಗ ದಲ್ಲಿ ಜನರ ಇಲ್ಲದ ಪರಿಸ್ಥಿತಿ ಭವಿಷ್ಯದಲ್ಲಿ ಎದುರಾದರೂ ಅಚ್ಚರಿಯಿಲ್ಲ. ಆದರೆ ಮೀಸಲಾತಿಯಲ್ಲಿ ಸೀಟು ಅಥವಾ ಕೆಲಸ ಸಿಗದಿದ್ದರೆ ಪುನಃ ಸಾಮಾನ್ಯ ವರ್ಗದಿಂದಲೂ ಕೆಲವರು ಸರ್ಧೆ ನೀಡುವುದನ್ನು ನಾವು ನೋಡಿದ್ದೇವೆ. ಒಂದು ವೇಳೆ ಈಗಿರುವಷ್ಟೇ ಮೀಸಲಿಗೆ ಇನ್ನಷ್ಟು ಮಂದಿ ಸೇರ್ಪಡೆಗೊಂಡರೆ, ಸಾಮಾನ್ಯ ವರ್ಗದಲ್ಲಿ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ ಎನ್ನುವು ದನ್ನು ಮರೆಯಬಾರದು.

ಒಂದು ಸಮುದಾಯಕ್ಕೆ ಮೀಸಲು ಕೊಡಿಸುವುದಕ್ಕೆ ಹೋರಾಡುತ್ತಿರುವವರು ರಾಜಕೀಯಕ್ಕಾಗಿ ಹೋರಾಟಗಳನ್ನು ಮುಂದು ವರಿಸಿದರೆ ಈ ಹೋರಾಟಗಳು ನಿರಂತರ ವಾಗಿರಲಿವೆ. ಆದರೆ ಪ್ರಾಯೋಗಿಕವಾಗಿ ಈ ಹೋರಾಟಗಳು ನಿಜವಾಗಿಯೂ ಆ ಹಿಂದುಳಿದ ಸಮುದಾಯಗಳಿಗೆ ಸಹಾಯವಾಗಲಿದೆಯೇ ಎನ್ನುವುದನ್ನು ಗಮನಿಸಬೇಕು.

ಸಾಮಾನ್ಯ ವರ್ಗದ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದರಿಂದ, ಒಬಿಸಿಯಿಂದ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಸುವುದರಿಂದ, ಪಂಗಡದ ಮತಬ್ಯಾಂಕ್ ಗಟ್ಟಿಯಾಗ ಬಹುದೇ ಹೊರತು, ಈಗಾಗಲೇ ಆ ಕೋಟದಲ್ಲಿರುವ ಸಮುದಾಯಗಳಿಗೆ ಲಾಭಕ್ಕಿಂತ ನಷ್ಟ ಹೆಚ್ಚಾಗಲಿದೆ. ಇದರೊಂದಿಗೆ ಸೇರ್ಪಡೆಗೊಳ್ಳುವ ಸಮುದಾಯಗಳಿಗೂ ಇದರಿಂದ ಹೇಳಿಕೊಳ್ಳುವ ಲಾಭವಾಗುವುದಿಲ್ಲ ಎನ್ನುವುದನ್ನು ಮರೆಯಬಾರದು.

ಆದರೆ ರಾಜಕೀಯ ಕಾರಣಕ್ಕಾಗಿ ಈ ರೀತಿ ಸೇರ್ಪಡೆ ಮಾಡಿಕೊಳ್ಳುವ ಹೋಗುವುದರಿಂದ ಮುಂದೊಂದು ದಿನ ‘ಮೀಸಲಾತಿ ಪಟ್ಟಿಯಿಂದ ನಮ್ಮನ್ನು ಹೊರಗಿಟ್ಟು ಸಾಮಾನ್ಯ ವರ್ಗಕ್ಕೆ ಪರಿಗಣಿಸಿ’ ಎನ್ನುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.