Thursday, 19th September 2024

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಯುವರಾಜ್‌ ಮುಖ್ಯ ಕೋಚ್‌

IPL 2025

ಮುಂಬಯಿ: ರಾಹುಲ್‌ ದ್ರಾವಿಡ್‌, 2025ರ(IPL 2025) ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌(rajasthan royals) ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಮತೋರ್ವ ಮಾಜಿ ಆಟಗಾರ ಯುವರಾಜ್‌ ಸಿಂಗ್‌(Yuvraj Singh) ಅವರು ಐಪಿಎಲ್‌ ಕೋಚಿಂಗ್‌ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಯುವರಾಜ್‌ ರಿಕಿ ಪಾಂಟಿಂಗ್‌ ನಿರ್ಗಮನದಿಂದ ತೆರವಾಗಿರುವ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡದ ಕೋಚ್‌ ಹುದ್ದೆಗೆ ನೇಮಕಗೊಳ್ಳುವ ಸಾಧ್ಯತೆಯಿದೆ ಫ್ರಾಂಚೈಸಿ ಮೂಲಗಳು ತಿಳಿಸಿವೆ. ಅಧಿಕೃತ ಪ್ರಕಟನೆ ಇನ್ನಷ್ಟೇ ಹೊರಬೀಳಬೇಕಿದೆ.

2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಯುವರಾಜ್​ ಸಿಂಗ್​ ಅವರನ್ನು ಹರಾಜಿನಲ್ಲಿ 16 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ತಾವು ಆಡಿದ್ದ ತಂಡಕ್ಕೇ ಕೋಚ್​ ಆಗಲು ಯುವಿ ಸಿದ್ಧವಾದಂತಿದೆ. ಮೂಲಗಳ ಪ್ರಕಾರ ಯುವರಾಜ್​ ಜತೆ ಫ್ರಾಂಚೈಸಿ ಈಗಾಗಲೇ ಮಾತುಕತೆ ನಡೆಸಿದ್ದು ಕೋಚಿಂಗ್​ ನಡೆಸಲು ಯುವಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಯುವರಾಜ್​ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡಕ್ಕೆ ಕೋಚ್‌ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಆದರೆ ಯುವಿ ಡೆಲ್ಲಿ ತಂಡದ ಕೋಚ್​ ಆಗುವ ಸಾಧ್ಯತೆ ಕಂಡುಬಂದಿದೆ. ಯುವರಾಜ್​ ಸಿಂಗ್​ 132 ಐಪಿಎಲ್​ ಪಂದ್ಯವನ್ನಾಡಿ 2750 ರನ್ ಬಾರಿಸಿದ್ದಾರೆ. 83 ರನ್​ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 36 ವಿಕೆಟ್​ ಕಬಳಿಸಿದ ಸಾಧನೆ ಇವರದ್ದಾಗಿದೆ. ಭಾರತ ತಂಡ 2007ರ ಟಿ20 ವಿಶ್ವಕಪ್​ ಮತ್ತು 2011ರ ಏಕದಿನ ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಅವರ ಆಲ್​ರೌಂಡರ್​ ಪ್ರದರ್ಶನ ಪ್ರಮುಖ ಪಾತ್ರವಹಿಸಿತ್ತು.

ಇದನ್ನೂ ಓದಿ IPL 2025: ರೋಹಿತ್‌ ಲಕ್ನೋ ತಂಡ ಸೇರುವ ಬಗ್ಗೆ ಮಾಲಿಕ ಗೋಯೆಂಕಾ ಹೇಳಿದ್ದೇನು?

ಯುವರಾಜ್‌ ಈ ವರೆಗೂ ಯಾವುದೇ ತಂಡಕ್ಕೂ ಕೋಚ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿಲ್ಲದಿದ್ದರೂ, ಭಾರತ ತಂಡದ ಯುವ ಆಟಗಾರರಾದ ಶುಭ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ ಸೇರಿ ಕೆಲ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಭಾರತ ಪರ ಒಟ್ಟು 402 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್, 11,178 ರನ್ ಗಳನ್ನು ಗಳಿಸಿದ್ದಾರೆ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಒಟ್ಟು 17 ಶತಕ ಹಾಗೂ 71 ಅರ್ಧಶತಕ ಬಾರಿಸಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

ಆರ್‌ಆರ್‌ಗೆ ದ್ರಾವಿಡ್‌ ಕೋಚ್‌

ರಾಹುಲ್‌ ದ್ರಾವಿಡ್‌, 2025ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಫ್ರಾಂಚೈಸಿಯೊಂದಿಗೆ ಈಗಾಗಲೇ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ದ್ರಾವಿಡ್‌ 2012, 2013ರಲ್ಲಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಬಳಿಕ 2 ವರ್ಷ ಕಾಲ ತಂಡದ ಮೆಂಟರ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ 2019ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ನೇಮಕಗೊಂಡಿದ್ದ ದ್ರಾವಿಡ್‌, 2021ರಲ್ಲಿ ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೇರಿದ್ದರು. ಹೀಗಾಗಿ ಐಪಿಎಲ್‌ನಿಂದ ದೂರ ಉಳಿದಿದ್ದರು.