Thursday, 19th September 2024

MGL vs SIN: ಸಿಂಗಾಪುರದ ಘಾತಕ ಬೌಲಿಂಗ್‌ ದಾಳಿ; ಕೇವಲ 10 ರನ್​ಗೆ ಆಲೌಟಾದ ಮಂಗೋಲಿಯಾ

MGL vs SIN

ಸಿಂಗಾಪುರ: ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತದೆ. ಇಂದು ಇದ್ದ ದಾಖಲೆ ನಾಳೆ ಇರುವುದಿಲ್ಲ. ಮಲೇಶಿಯಾದ ಬಾಂಗಿಯಲ್ಲಿ ನಡೆದ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್‌ ಪಂದ್ಯದಲ್ಲಿ ಮಂಗೋಲಿಯಾ(MGL vs SIN) ತಂಡ ಸಿಂಗಾಪುರ ವಿರುದ್ಧ ಕೇವಲ 10 ರನ್​ಗೆ ಆಲೌಟ್​ ಆಗುವ ಮೂಲಕ ಕಳಪೆ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಟಿ20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ರನ್‌ಗೆ ಆಲೌಟ್‌ ಆದ ತಂಡಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದೆ. ಐಲ್ ಆಫ್ ಮ್ಯಾನ್ ಕಳೆದ ವರ್ಷ(2023) ರಲ್ಲಿ ಸ್ಫೇನ್‌ ವಿರುದ್ಧ 10 ರನ್‌ಗೆ ಆಲೌಟ್‌ ಆಗಿತ್ತು. ಮಂಗೋಲಿಯಾ ಈ ಹಿಂದೆ 12 ರನ್‌ಗೆ ಆಲೌಟ್‌ ಆಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಮಂಗೋಲಿಯಾ ತಂಡ ನಾಟಕೀಯ ಕುಸಿತ ಕಂಡು 10 ಓವರ್‌ಗೆ 10 ರನ್‌ ಗಳಿಸಿ ಸರ್ವಪತನ ಕಂಡಿತು. ಇದರಲ್ಲಿ ಬ್ಯಾಟರ್‌ಗಳು ಗಳಿಸಿದ್ದು ಕೇವಲ 18 ರನ್‌ ಮಾತ್ರ. 2 ರನ್‌ ಇತರೆ ರೂಪದಲ್ಲಿ ಬಂತು. 5 ಮಂದಿ ಬ್ಯಾರ್‌ಗಳು ಶೂನ್ಯ ಸುತ್ತಿದರೆ, ಇಬ್ಬರು ಬ್ಯಾಟರ್‌ಗಳು 2 ರನ್‌ ಕಲೆ ಹಾಕಿದರು. ಈ ಮೊತ್ತವೇ ತಂಡದ ಪರ ದಾಖಲಾದ ಗರಿಷ್ಠ ಮೊತ್ತವಾಗಿದೆ. ಸಣ್ಣ ಮೊತ್ತದ ಗುರು ಪಡೆದ ಸಿಂಗಾಪುರ ಕೇವಲ 5 ಎಸೆತ ಎದುರಿಸಿ ಒಂದು ವಿಕೆಟ್‌ ನಷ್ಟಕ್ಕೆ 13 ರನ್‌ ಬಾರಿಸಿ 9 ವಿಕೆಟ್‌ಗಳ ಗೆಲುವು ದಾಖಲಿಸಿತು.

ಇದನ್ನೂ ಓದಿ SCO vs AUS: ಹೆಡ್‌ ಬ್ಯಾಟಿಂಗ್‌ ಆರ್ಭಟ; ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ

ಸಿಂಗಾಪುರ ಪರ ಸ್ಪಿನ್‌ ಜಾದು ಮಾಡಿದ ಹರ್ಷ ಭಾರದ್ವಾಜ್ 4 ಓವರ್‌ ಬೌಲಿಂಗ್‌ ನಡೆಸಿ 2 ಮೇಡನ್‌ ಸಹಿತ 3 ರನ್‌ಗೆ ಬರೋಬ್ಬರಿ 6 ವಿಕೆಟ್‌ ಉರುಳಿಸಿದರು. ಅಕ್ಷಯ್ ಪುರಿ 4 ರನ್‌ ನೀಡಿ 2 ವಿಕೆಟ್‌ ಕಿತ್ತರು. ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ನೇಪಾಳ ತಂಡದ ಹೆಸರಿನಲ್ಲಿದೆ. ಅಚ್ಚರಿ ಎಂದರೆ ಈ ಮೊತ್ತವನ್ನು ಮಂಗೋಲಿಯಾ ತಂಡದ ವಿರುದ್ಧವೇ ಬಾರಿಸಿದ್ದು. 2023ರಲ್ಲಿ ನೇಪಾಳ ತಂಡ ಕೇವಲ 3 ವಿಕೆಟ್‌ ಕಳೆದುಕೊಂಡು 314 ರನ್‌ ಬಾರಿಸಿತ್ತು.

ಟಿ20ಯಲ್ಲಿ ಅತಿ ಕಡಿಮೆ ರನ್‌ಗೆ ಆಲ್‌ಔಟ್‌ ಆದ 5 ತಂಡಗಳು

ಮಂಗೋಲಿಯಾ; 10 ರನ್‌

ಐಲ್ ಆಫ್ ಮ್ಯಾನ್; 10 ರನ್‌

ಟರ್ಕಿ; 21 ರನ್‌

ಚೀನಾ; 23 ರನ್‌

ರುವಾಂಡಾ; 24 ರನ್‌

ಟಿ20ಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ 5 ತಂಡಗಳು

ನೇಪಾಳ; 314/3

ಅಫಘಾನಿಸ್ತಾನ; 278/3

ಜೆಕ್ ಗಣರಾಜ್ಯ; 278/4

ಮಲೇಷ್ಯಾ; 268/4

ಇಂಗ್ಲೆಂಡ್‌; 267/3