ಸ್ಮರಣೆ
ಕೆ.ಶ್ರೀನಿವಾಸರಾವ್
ನಾಟಕ, ಸಿನಿಮಾಗಳಲ್ಲಿ ಎದುರಿನ ಪಾತ್ರಧಾರಿಯ ಸಂಭಾಷಣೆಗನುಸಾರವಾಗಿ ಉತ್ತರಿಸಿ ಅಭಿನಯಿಸಲು ಕಿವುಡರಾಗಿದ್ದರೆ ದೇವರೇ ಗತಿ!
ಅಂತಹುದರಲ್ಲಿ ಬಾಲ್ಯದಲ್ಲಿ ಪೆಟ್ಟು ತಿಂದು ಕಿವಿ ಕೇಳಿಸದೆ ಬೆಪ್ಪನಾದ ಒಬ್ಬ ನಟ, ಕೇವಲ ಎದುರಿನವರ ತುಟಿ ಚಲನೆ, ಹಾವ ಭಾವನೋಡಿ ಸಂಭಾಷಣೆ ಹೇಳಿ ಮುಂದೆ ಮುಕ್ಕೋೋಟಿ ಕನ್ನಡಿಗರ ಆರಾಧ್ಯ ಮನಸೆಳೆದದ್ದು ಅದ್ಭುತವೇ ಸರಿ. ಈ ನಟ ಬೇರಾರೂ ಅಲ್ಲ, ಕನ್ನಡ ಚಿತ್ರರಂಗದಲ್ಲಿ 561 ಚಿತ್ರಗಳಲ್ಲಿ ನಟಿಸಿ ಇಂದಿಗೂ ಮನೆಮಾತಾಗಿರುವ ಅಭಿಜಾತ ಕಲಾವಿದ ವಿ.ಎನ್.
ಬಾಲಕೃಷ್ಣ, ಇದೇ ನವೆಂಬರ್ 2ರಂದು ಅವರ 109ನೇ ಜಯಂತಿ.
ಅವರ ಕುರಿತು ಕೆಲ ಮಾಹಿತಿಗಳು. 1911ರ ನವೆಂಬರ್ 2ರಂದು ಹಾಸನ ಜಿಲ್ಲೆೆಯ ಅರಸೀಕೆರೆಯಲ್ಲಿ ಜನನ, ಮನೆಯಲ್ಲಿ ನಿತ್ಯ ಕೂಳಿಗೂ ತತ್ವಾರ. ಬಾಲ್ಯದಿಂದಲೇ ಓದಿನಲ್ಲಿ ಹಿಂದು, ಉಡಾಳತನದಲ್ಲಿ ಮುಂದು. ಯಾರದೋ ಬಳಿ ತಂಟೆ ಮಾಡಿ ಕಪಾಳ ಮೋಕ್ಷ ಉಂಡ ಪರಿಣಾಮ ಶಾಶ್ವತವಾಗಿ ಕೆಪ್ಪ ಬಿರುದು ಪ್ರಾಪ್ತಿ !
ಹಸಿವು ತಾಳದೇ ತಾಯಿ ತನ್ನ ಮಗನನ್ನು ಬೆಂಗಳೂರಿನ ಒಬ್ಬ ಶ್ರೀಮಂತರಿಗೆ ಕೇವಲ 8 ರು.ಗೆ ಮಾರಿದರು. ಸಾಕು ಪೋಷಕ ರೊಂದಿಗೂ ಬಾಲಕೃಷ್ಣ ಬಾಳಲಿಲ್ಲ, ಓದು ಒಕ್ಕಾಲು, ಬುದ್ಧಿ ಮುಕ್ಕಾಲು, ಮನೆಯಲ್ಲಿ ಹಣ ಕದ್ದು ಸಿಕ್ಕಿಬಿದ್ದು ಅವರೂ ಮನೆ ಯಿಂದ ಓಡಿಸಿದರು. ಆಗಲೇ ಬಾಲಣ್ಣನ ಕಡೆ ಕಲಾವಿದೇ ಕಣ್ಣಿಟ್ಟಿದ್ದಳು. ಹಾರ್ಮೋನಿಯಂ ಗಿರಿಗೌಡರ ಕಂಪನಿಗೆ ಸೇರ್ಪಡೆ, ಗೇಟ್ ಕೀಪರ್, ಪರದೆ ಎಳೆಯುವವ, ಟಿಕೆಟ್ ಬುಕಿಂಗ್, ಪೋಸ್ಟರ್ ಅಂಟಿಸುವುದು ಎಲ್ಲಾ ಅನುಭವಗಳ ನಂತರ ಗುಬ್ಬಿ ಕಂಪನಿ ಯಲ್ಲಿ ನಾಟಕ ಪಾತ್ರ ದಕ್ಕಿತು.
ಮೊದಲ ನಾಟಕ ಕೃಷ್ಣಲೀಲಾ. ಇವರ ಪ್ರತಿಭೆ ಕಂಡು ನಿರ್ದೇಶಕ ಜ್ಯೋತಿ ಸಿನ್ಹಾ ಚಲನಚಿತ್ರದಲ್ಲಿ ಅವಕಾಶ ನೀಡಿದರು.
ಆ ಚಿತ್ರ ಕನ್ನಡದ ಮೊದಲ ಮಹಿಳಾ ನಿರ್ಮಾಪಕಿ ಎಂ.ವಿ. ರಾಜಮ್ಮರವರ ರಾಧಾರಮಣ. (1943). ಚಿತ್ರಗಳಲ್ಲಿ ಅಭಿನಯಿ ಸುತ್ತಲೇ ಬಾಲಣ್ಣ ಭಾರತಲಕ್ಷ್ಮಿ, ಬೇಡರ ಕಣ್ಣಪ್ಪ, ರಾಮರಾವಣ, ಕಾಲಚಕ್ರ ಮೊದಲಾದ 50ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರು. ಪಂಚರತ್ನ, ರಣಧೀರ ಕಂಠೀರವ, ಭಕ್ತ ಮಲ್ಲಿಕಾರ್ಜುನ ಚಿತ್ರಗಳಿಗೆ ಹಾಡು ಸಂಭಾಷಣೆ ಬರೆದರು. ಕನ್ಯಾದಾನ, ಕಣ್ತೆೆರೆದು ನೋಡು, ಭೂದಾನ, ಒಂದೊಂದೇ ಉತ್ತಮ ಚಿತ್ರಗಳಿಂದ ಬಾಲಣ್ಣ ಜನಾದರ ಗಳಿಸಿದರು.
ಡಾ.ರಾಜ್, ನರಸಿಂಹರಾಜು, ಜಿ.ವಿ.ಅಯ್ಯರ್ ಮೊದಲಾದವರೊಂದಿಗೆ ಕಲಾವಿದರ ಸಂಘ ಸ್ಥಾಪಿಸಿ ರಣಧೀರ ಕಂಠೀರವ ಚಿತ್ರ ನಿರ್ಮಿಸಿ ಯಶಸ್ವಿಯಾದರು. ಸ್ವತಂತ್ರವಾಗಿ ಕಲಿತರೂ ಹೆಣ್ಣೇ ಚಿತ್ರ ನಿರ್ಮಿಸಿದರು. ಆಗ ಬಾಲಕೃಷ್ಣ, ನರಸಿಂಹರಾಜುರವರ ಜೋಡಿ ಲಾರೆಲ್ -ಹಾರ್ಡಿ ಜೋಡಿಯಷ್ಟೇ ಜನಪ್ರಿಯವಾಗಿತ್ತು. ಬಾಲಣ್ಣನದು ನಾಯಕನನ್ನೇ ನುಂಗುವ ಪ್ರಖಾಂಡ ಅಭಿನಯ ರಾಚೂಟಪ್ಪ. (ಬಂಗಾರದ ಮನುಷ್ಯ), ವೆಂಕಟಪ್ಪ ನಾಯಕ (ಗಂಧದ ಗುಡಿ), ಸೀತಾರಾಮ (ತ್ರಿಮೂರ್ತಿ) ಇನ್ನೂ ಅಸಂಖ್ಯ ಪಾತ್ರಗಳು. ಆಡು ಮುಟ್ಟದ ಗಿಡವಿಲ್ಲ ಎಂಬಂತೆ ಬಾಲಣ್ಣನ ಪಾತ್ರಗಳ ವೈವಿಧ್ಯತೆ!
ಈ ಹೃದಯವಂತನಿಗೆ ಸಂದ ಪ್ರಶಸ್ತಿಗಳು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ (1989-90), ಶ್ರೇಷ್ಠ ಪೋಷಕ ನಟ (ಬಂಗಾರದ ಮನುಷ್ಯ) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಶಂಕರೇಗೌಡರ ಸ್ಮಾರಕ ರಂಗಭೂಮಿ ಪ್ರಶಸ್ತಿ, ಎಲ್ಲಕ್ಕೂ ಮಿಗಿಲಾಗಿ ನಾಲ್ಕು ಕೋಟಿ ಕನ್ನಡಿ ಗರ ಜನ ಮಾನಸ ಪ್ರಶಸ್ತಿ.
1963ರಲ್ಲಿ ಸ್ವಂತ ಸ್ಟುಡಿಯೋ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಕಡಿಮೆ ದರದಲ್ಲಿ 20 ಎಕರೆ ಭೂಮಿ ಕೊಂಡು ಮುನ್ನುಗ್ಗಿದರು. ಹಣದ ಅಡಚಣೆ, ಚಿತ್ರೋದ್ಯಮದವರ ಅಸಡ್ಡೆ, ಕೊನೆಗೆ 100 ರು.ಗಳ ಬಡ್ಡಿ ಸಹಿತ ಬಾಂಡ್ ಮಾಡಿ ಕನ್ನಡಿಗರ ಬಳಿ ಹಣ ತೆಗೆದುಕೊಂಡು 1965ರಲ್ಲಿ ಅಡಿಗಲ್ಲು ಹಾಕಿದರು. ಆದರೆ ಇಂದಿಗೂ ಅಭಿಮಾನ್ ಕುಂಟುತ್ತಿದೆ. ಮೃದು ಹೃದಯಿ ಬಾಲಣ್ಣ, 561 ಚಿತ್ರಗಳ ನಟರತ್ನ, ಅಪಾರ ಚಿಂತೆಯಿಂದಲೇ ಕೊರಗಿ 19 ಜುಲೈ 1995ರಂದು ಸ್ವರ್ಗಸೇರಿದರು. ಇದೇ ನವೆಂಬರ್ 2ರಂದು ಈ ಶ್ರಮಜೀವಿಯ 109ನೇ ಜಯಂತಿ. ಸ್ವರ್ಗದಲ್ಲಾದರೂ ನೆಮ್ಮದಿ ಅವರ ಪಾಲಿಗಿರಲೆಂದು ಆಶಿಸೋಣ.