Saturday, 23rd November 2024

Gauri Ganesh: ಜಿಲ್ಲೆಯಾದ್ಯಂತ ಗೌರಿಗಣೇಶ ಹಬ್ಬದ ಸಡಗರ, ಮೂರ್ತಿಗಳನ್ನು ಕೊಳ್ಳಲು ಜನಜಾತ್ರೆ

ಚಿಕ್ಕಬಳ್ಳಾಪುರ: ಈ ಬಾರಿ ಉತ್ತಮ ಮಳೆಯಾಗಿ ಕೆರೆಕುಂಟೆಗಳಲ್ಲಿ ನೀರಿರುವ ಕಾರಣ ಜಿಲ್ಲೆಯಾದ್ಯಂತ ನಡೆಯು ತ್ತಿರುವ ಗೌರಿ ಗಣಪತಿ ಪ್ರತಿಷ್ಟಾಪನೆ ಪೂಜೆ ಪುನಸ್ಕಾರ ಸಹಿತ ಹಬ್ಬದ ಆಚರಣೆಗೆ ವಿಶೇಷ ಕಳೆ ಸೃಷ್ಟಿಯಾಗಿದೆ.

ಜಿಲ್ಲೆಯ ೮ ತಾಲೂಕು ಕೇಂದ್ರವೂ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಸಂಘಸಂಸ್ಥೆಗಳು ಇದಕ್ಕೆ ಬೇಕಾದ ಪೂರ್ವಸಿದ್ಧತೆಯಲ್ಲಿ ತೊಡಗಿರುವ ದೃಶ್ಯಗಳು ಸಹಜ ವೆಂಬಂತೆ ಕಂಡುಬಂದವು.

ಚಿಕ್ಕಬಳ್ಳಾಪುರ ನಗರದ ಬಿಬಿರಸ್ತೆ, ಬಜಾರ್ ರಸ್ತೆ, ಎಂಜಿ ರಸ್ತೆಯ ಇಕ್ಕೆಲಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಮಾರಾಟ, ಪೂಜಾ ಸಾಮಗ್ರಿಗಳ ಕೊಳ್ಳುವಿಕೆ ಜೋರಾಗಿಯೇ ಸಾಗಿತ್ತು.

ಬಾಗೇಪಲ್ಲಿ ಪಟ್ಟಣದ ವಿವಿಧ ವಾರ್ಡುಗಳ ೨೦ಕ್ಕೂ ಹೆಚ್ಚಿನ ಕಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರಗಳು ನಡೆದವು.

ಗಣೇಶ ಹಬ್ಬದ ಪ್ರಯುಕ್ತ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿನ ವಿಘ್ನಗಳ ನಿವಾರಕ ವಿನಾಯಕನನ್ನು ವಿವಿಧ ಭಂಗಿಯಲ್ಲಿ ಪ್ರತಿಷ್ಟಾಪಿಸಲಾಗಿದೆ ಹಲವು ನಾಮಗಳಿಂದ ಕರೆಯುವ ಮೋದಕ ಪ್ರಿಯ, ವಿಘ್ನಗಳ ನಿವಾರಕ, ಏಕದಂತ, ಕರಿಮುಖ ಗಣಪ, ಮೂಷಿಕ ವಾಹನ, ವಕ್ರತುಂಡ ಹೀಗೆ ಬಗೆ ಬಗೆಯ ಹೆಸರುಗಳಿಂದ ಪೂಜಿಸುವ ವಿನಾಯಕನಿಗೆ ಕಡುಬು, ಉಂಡೆ, ಗರಿಕೆ, ನಾನಾ ರೀತಿಯ ಹಣ್ಣು ಹಂಪಲು, ಗುಗ್ಗರಿ, ಹೀಗೆ ತರಹೆವಾರಿ ತಿಂಡಿ ತಿನಿಸು ಗಳನ್ನಿಟ್ಟು ಸಕಾಲಕ್ಕೆ ಮಳೆ ಬೆಳೆ ಕರುಣಿಸಿ ಸಕಲ ಜೀವರಾಶಿಗಳನ್ನು ಸಲಹುವಂತೆ ಪ್ರಾರ್ಥಿಸಲಾಯಿತು.

ಶುಕ್ರವಾರ ಗೌರಿ ಆರಾಧನೆ ನಡೆದರೆ ಶನಿವಾರ ಗಣಪತಿ ಪ್ರತಿಷ್ಟಾಪನೆ ಆರಾಧನೆ ನಡೆದು ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆಯಲ್ಲಿ ಭಕ್ತರು ವಿಘ್ನನಿವಾರಕನಿಗೆ ವಿಶೇಷ ಪೂಜೆ ನೆರವೇರಿಸಿದರು. ಗಂಗಾಸ್ನಾನ, ವಸ್ತ್ರಧಾರಣೆ, ದೀಪರಾಧನೆ, ಅಭಿಷೇಕ, ಪಂಚಾಮೃತ, ಪ್ರಸಾದ, ಐದು ತರದ ಹಣ್ಣು ಇಟ್ಟು ಪೂಜೆಯ ನಂತರ ಮಹಾ ಮಂಗಳಾ ರತಿ ಮಾಡಲಾಯಿತು.

ಗಣಪನನ್ನು ದೊಡ್ಡ ವೇದಿಕೆಯಲ್ಲಿ ವೀರಾಜಮಾನನ್ನಾಗಿಸಿ ಬಗೆಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಗಣಪನ ಪ್ರತಿಷ್ಟಾಪನೆ ಮಾಡಿರುವ ವಾರ್ಡಿನ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದು, ಸಾರ್ವ ಜನಿಕರನ್ನು ಸೆಳೆಯುವಂತಿತ್ತು.

ಪಟ್ಟಣದ ೨೩ ವಾರ್ಡುಗಳಲ್ಲಿ ಅಯೋಧ್ಯೆ ರಾಮ ಗಣಪತಿ, ನವಿಲು ಗಣಪತಿ, ಶ್ರೀರಾಮ ಗಣಪತಿ, ಸುಖಾಸಿನ ಗಣಪತಿ, ಕೃಷ್ಣಾ ಗಣಪತಿ, ಪಾರ್ವತಿ ಪರಮೇಶ್ವರ ಗಣಪತಿ, ಮಹಾರಾಜ ಗಣಪತಿ, ಗೋವು ಗಣಪತಿ ಹೀಗೆ ವಿವಿಧ ರೀತಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇನ್ನು, ಮನೆಗಳಲ್ಲು ಗೌರಿ ಮತ್ತು ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾ ಪಿಸಿ ಪೂಜೆ ನೆರವೇರಿಸಲಾಯಿತು.

ಬಾಗಿನ ಸಾಮಗ್ರಿಗೆ ಡಿಮ್ಯಾಂಡ್: ಜಿಲ್ಲೆಯಲ್ಲಿ ಸಾಮಾನ್ಯವಾಗಿ ಗೌರಿ ಹಬ್ಬಕ್ಕೆ ತವರಿನಿಂದ ಹೆಣ್ಣುಮಕ್ಕಳಿಗೆ ಹರಿಶಿಣ ಕುಂಕುಮದ ಬಾಗಿನ ಕೊಡುವುದು ಸಂಪ್ರದಾಯ.ಈ ಹಿನ್ನೆಲೆಯಲ್ಲಿ ಬಾಗೀನ ಸಾಮಗ್ರಿಗೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಗರಿಕೆ, ಬಿಲ್ವಪತ್ರೆ, ಬಾಳೆಕಂದು, ಬಾಗಿನ ನೀಡಲು ಬೇಕಾದ ಮೊರ, ಬಾಗಿನದ ಸಾಮಗ್ರಿ ಗಳು, ಬಳೆ, ಸೀರೆ ಕುಬುಸ ಸೇರಿದಂತೆ ಗೌರಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯೂ ಜೋರಾಗಿ ನಡೆಯಿತು.