Thursday, 24th October 2024

ಸ್ವಾಮಿ ವೀರೇಶಾನಂದ ಸರಸ್ವತಿಯವರ ವಿನೂತನ ಕೃತಿ

ವಿವೇಕಧಾರಾ: ಸ್ವಾಮಿ ವಿವೇಕಾನಂದರ ಚಿಂತನೆಗಳ ಸಾರ

ತುಮಕೂರು: ಸ್ವಾಮಿ ವಿವೇಕಾನಂದ ಎಂಬ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ತನ್ನ ಉಪನ್ಯಾಸ ಹಾಗೂ ಪತ್ರಗಳ ಮೂಲಕ ಕಟ್ಟಿಕೊಟ್ಟ ಚಿಂತನಾಸಾಮ್ರಾಜ್ಯ ಬಲು ವಿಸ್ತಾರವಾದದ್ದು. ಅಗಾಧ ಜಲರಾಶಿಯಂತಿರುವ ಅವರ ಬೋಧನೆ- ಶೋಧನೆಗಳನ್ನು ಸಣ್ಣ ಬೊಗಸೆಯೊಂದರಲ್ಲಿ ಎತ್ತಿಕೊಳ್ಳುವುದಂತೂ ದುಸ್ಸಾಹಸವೇ. ಆದರೆ ಅಂತಹ ದೊಂದು ಸಾಹಸವನ್ನು ಅಚ್ಚರಿಪಡುವಂತೆ ಸಮರ್ಥವಾಗಿ ಮಾಡಿ ತೋರಿಸಿದ್ದಾರೆ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರು- ತಮ್ಮ ‘ವಿವೇಕಧಾರಾ’ ಎಂಬ ವಿನೂನತ ಕೃತಿಯ ಮೂಲಕ.

ವಿವೇಕಾನಂದರ ಚಿಂತನೆಯ ಹಲವು ಆಯಾಮಗಳನ್ನು ಪರಿಚಯಿಸುವ ಉದ್ದೇಶದಿಂದ ನಾಡಿನ ಪ್ರಸಿದ್ಧ ಪತ್ರಿಕೆ ಗಳಲ್ಲಿ ಸ್ವಾಮೀಜಿಯವರು ಪ್ರಕಟಿಸಿದ ಅಂಕಣಗಳ ಪೈಕಿ 37 ಲೇಖನಗಳನ್ನು ಆಯ್ದು ಈ ಕೃತಿಯಲ್ಲಿ ಸಂಕಲಿಸ ಲಾಗಿದೆ. ಅವುಗಳ ಸ್ವರೂಪ ಹಾಗೂ ಹೂರಣದ ಆಧಾರದಲ್ಲಿ ವಿವೇಕ ಅಂಕುರ, ವಿವೇಕ ದಿಕ್ಸೂಚಿ, ವಿವೇಕ ಯಾನ, ವಿವೇಕ ಪಾಂಚಜನ್ಯ ಹಾಗೂ ವಿವೇಕ ಪ್ರವಹನ ಎಂಬ ಐದು ಅಧ್ಯಾಯಗಳಾಗಿ ವಿಂಗಡಿಸಿಕೊಳ್ಳಲಾಗಿದೆ.

ಜಗತ್ತಿನ ಉಳಿದೆಲ್ಲ ದೇಶಗಳಿಗೆ ಉತ್ಥಾನದ ದಾರಿ ತೋರಿಸುವ ಶಕ್ತಿ ಭಾರತಕ್ಕಷ್ಟೇ ಇರುವುದೆಂದು ಸ್ವಾಮಿ ವಿವೇಕಾ ನಂದರು ಭಾವಿಸಿದ್ದೇಕೆ, ವಿಶ್ವವು ಭಾರತದತ್ತ ತಿರುಗಿ ನೋಡಬೇಕಾದ ಅನಿವಾರ್ಯತೆ ಏನು, ಸಮಾಜದ ಅಭ್ಯುದಯ ಯುವಕರನ್ನೇ ಅವಲಂಬಿಸಿದೆ ಎಂದು ಸ್ವಾಮೀಜಿಯವರು ಪ್ರತಿಪಾದಿಸಿದ್ದೇಕೆ, ಇದಕ್ಕಾಗಿ ಯುವಕರು ಮಾಡ ಬೇಕಾದ್ದೇನು, ಧರ್ಮದ ನಿಜವಾದ ವ್ಯಾಖ್ಯಾನವೇನು, ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣ, ಧೈರ್ಯ ಹಾಗೂ ಚಾರಿತ್ರö್ಯಗಳ ಪಾತ್ರವೇನು, ವಿವೇಕಾನಂದರು ಹೊಂದಿದ್ದ ಸಮಷ್ಟಿಪ್ರಜ್ಞೆ, ವಿಶ್ವಾತ್ಮಕತೆ, ರಾಷ್ಟ್ರಭಕ್ತಿ, ಸರ್ವಸಮಾನತೆಯ ಭಾವದ ಆಳ-ಅಗಲ ಎಷ್ಟು, ಜಗತ್ತಿನ ಉನ್ನತ ದಾರ್ಶನಿಕರು ವಿವೇಕಾನಂದರನ್ನು ವಿಶ್ವಮಾನವ ಎಂದು ಕೊಂಡಾಡಿದ್ದೇಕೆ… ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಅಚ್ಚುಕಟ್ಟಾದ ಉತ್ತರದಂತಿದೆ ‘ವಿವೇಕಾಧಾರಾ’ ಕೃತಿ.

ವಿವೇಕಾನಂದರ ಕುರಿತಾದ ಹತ್ತಾರು ಕೃತಿಗಳ ಸಾರವನ್ನು ಒಂದೇ ಪುಸ್ತಕದಲ್ಲಿ ನೋಡಬಯಸುವವರಿಗಂತೂ ಇದೊಂದು ವಿಶಿಷ್ಟ ಉಡುಗೊರೆಯೇ ಹೌದು. ವಿವೇಕಾನಂದರ ಚಿಂತನೆಗಳ ಹಲವು ಆಯಾಮಗಳನ್ನು ಪರಿಚಯಿಸುವ ಜತೆಜತೆಗೆ, ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಭಾರತದ ಅನನ್ಯತೆಯ ಕುರಿತು ಜಗತ್ತಿನ ವಿವಿಧ ದಾರ್ಶನಿಕರು ಎಂತಹ ಅಸದೃಶ ಗೌರವಭಾವ ಹೊಂದಿದ್ದರು ಎಂಬುದನ್ನೂ ಕೃತಿಕಾರರು ಎಳೆಯೆಳೆಯಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ.

“ಜೀವನವೆಂಬ ಹೋರಾಟಕ್ಕೆ ಧರ್ಮವೇ ರಕ್ಷಾಕವಚ” ಎಂಬ ವಿವೇಕಾನಂದರ ಪ್ರಬಲ ನಂಬಿಕೆಯ ತಿರುಳನ್ನು ಕೃತಿಯ ಉದ್ದಕ್ಕೂ ಸ್ವಾಮೀಜಿ ವಿಶ್ಲೇಷಿಸುತ್ತಾ ಹೋಗಿದ್ದಾರೆ. ಭಾರತದ ಶಕ್ತಿಯಿರುವುದೇ ಅದರ ಧರ್ಮ ಹಾಗೂ ಆಧ್ಯಾತ್ಮಿಕತೆಯಲ್ಲಿ. ಆದರೆ ಧರ್ಮವೆಂದರೆ ಕೇವಲ ಪೂಜೆ-ಪುರಸ್ಕಾರಗಳಲ್ಲ, ಸಂಕುಚಿತ ಮನೋಭಾವವಲ್ಲ, ಮೂಢನಂಬಿಕೆ-ಕಂದಾಚಾರವಲ್ಲ; ಅದೊಂದು ಉನ್ನತ ಬದುಕಿನ ಹೆದ್ದಾರಿ ಎಂಬ ವಿವೇಕಾನಂದರ ಮೂಲ ಚಿಂತನೆ ಕೃತಿಯ ಪುಟಗಳಲ್ಲಿ ಹರಳುಗಟ್ಟಿದೆ. “ಧರ್ಮ ಬಯಸುವುದು ಧೀರತೆಯನ್ನೇ ಹೊರತು ಹೇಡಿತನವನ್ನಲ್ಲ” ಎಂಬ ವಿವೇಕವಾಣ ಯನ್ನು ಅಲ್ಲಲ್ಲಿ ಉಲ್ಲೇಖಿಸುವ ಕೃತಿಕಾರರು ಅದರ ಜತೆಜತೆಗೆ “ಧರ್ಮದ ತಿರುಳಿರುವುದು ಕೇವಲ ಸಿದ್ಧಾಂತಗಳಲ್ಲಲ್ಲ, ಆಚರಣೆಯಲ್ಲಿ” ಎಂಬ ವಿವೇಕಾನಂದರ ಆತ್ಯಂತಿಕ ನಿಲುವನ್ನೂ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.

“ಚಾರಿತ್ರö್ಯವಂತ ಮನುಷ್ಯ ಮಾತ್ರ ಚರಿತ್ರೆ ನಿರ್ಮಿಸಬಲ್ಲ” ಎಂಬ ವಿವೇಕಾನಂದರ ಅಭಿಪ್ರಾಯವನ್ನೂ ಸ್ವಾಮೀಜಿ ಕೃತಿಯುದ್ದಕ್ಕೂ ವಿಶ್ಲೇಷಿಸಿದ್ದಾರೆ. ಜಗತ್ತಿನ ಭವಿಷ್ಯವಿರುವುದು ಯುವಕರ ಕೈಯಲ್ಲಿ ಎಂಬುದನ್ನು ಹೇಳುತ್ತಲೇ, ಯುವಕರು ಅಂತಹ ಸಾಮರ್ಥ್ಯ ಗಳಿಸಿಕೊಳ್ಳುವುದಕ್ಕೆ ಶ್ರೇಷ್ಠ ಚಾರಿತ್ರ್ಯವೇ ತಳಹದಿ ಎಂಬುದನ್ನೂ ವಿವೇಕಾನಂದರು ಸಾರಿದ್ದರು. ಚಾರಿತ್ರ್ಯದಿಂದ ಒದಗುವ ನೈತಿಕ ಸ್ಥೈರ್ಯವಷ್ಟೇ ರಾಷ್ಟ್ರ ನಿರ್ಮಾಣ ಮಾಡುವತ್ತ ಯುವಕರನ್ನು ಮುನ್ನಡೆಸಬಲ್ಲುದು. ಅಂತಹ ಸಚ್ಚಾರಿತ್ರ್ಯ ನಿರ್ಮಿಸಿಕೊಡುವ ಹೊಣೆಗಾರಿಕೆ ಶಿಕ್ಷಣಕ್ಷೇತ್ರದ್ದು ಎಂಬುದು ಅವರ ದೃಢನಂಬಿಕೆಯಾಗಿತ್ತು. ಇದನ್ನು ಕೃತಿಕಾರರು ಹಲವು ಲೇಖನಗಳಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ಇದಕ್ಕೆ ಆಧಾರವಾಗಿ ವಿವೇಕಾನಂದರಿಗೆ ಒದಗಿದ ತಾಯಿ ಹಾಗೂ ಗುರುಗಳ ಮಾರ್ಗದರ್ಶನವನ್ನು ಅವರು ಎತ್ತಿತೋರಿಸಿದ್ದಾರೆ.

“ಲೋಕಶಿಕ್ಷಣ ಕಾರ್ಯಗೈಯ್ಯಲು ನರೇಂದ್ರನಿಗೆ ಜಗನ್ಮಾತೆ ಲೈಸೆನ್ಸ್ ನೀಡಿದ್ದಾಳೆ. ಆತನ ಬಗ್ಗೆ ಯಾರಾದರೂ ಲಘುವಾಗಿ ಮಾತನಾಡಿದರೆ ಶಿವನಿಂದೆ ಮಾಡಿದಂತೆ” ಎಂಬ ಗುರುದೇವ ಶ್ರೀರಾಮಕೃಷ್ಣರ ಉಕ್ತಿಯನ್ನು ಮತ್ತೆಮತ್ತೆ ಉಲ್ಲೇಖಿಸುವ ಕೃತಿಕಾರರು, ವಿವೇಕಾನಂದರಂತಹ ವಿಶ್ವವಿಜೇತರ ಹಿಂದೆ ಎಂತಹ ಗುರುಕೃಪೆಯಿತ್ತು ಎಂಬುದನ್ನೂ ಒತ್ತಿಹೇಳಿದ್ದಾರೆ.

ವಿವೇಕಾನಂದರ ಚಿಂತನೆಗಳನ್ನು ಬಿಚ್ಚಿಡುತ್ತಲೇ ಕೃತಿಕಾರರು ಅವುಗಳ ಬೆಳಕಿನಲ್ಲಿ ತಮ್ಮ ಯೋಚನೆಗಳನ್ನೂ ಅಲ್ಲಲ್ಲಿ ಜೋಡಿಸುತ್ತಾ ಹೋಗಿರುವುದು ಈ ಕೃತಿಯ ವಿಶೇಷ. ‘ವಿವೇಕವಾಣ : ಯುವಮನಸ್ಸುಗಳಿಗೆ ಶಕ್ತಿ ಸಂಜೀ ವಿನಿ’ ಎಂಬ ಲೇಖನದಲ್ಲಿ ಸ್ವಾಮೀಜಿಯವರು, “ಯಾವುದೇ ಕಾಲದಲ್ಲೂ ಸಮಾಜದ ಪ್ರಗತಿಯಲ್ಲಿ ಯುವಕರ ಪಾತ್ರ ಹಿರಿದಾದರೂ ಭವಿಷ್ಯದ ಬಗ್ಗೆ ಕಣ್ಣುತುಂಬ ಕನಸುಗಳನ್ನೇ ತುಂಬಿಕೊಂಡಿರುವ ಅವರಲ್ಲಿ ಹೊಸತನದ ಬಯಕೆ ಅಧಿಕವಾಗಿ ಕಂಡುಬರುವುದು ಸಹಜವೂ ಹೌದು, ಶ್ಲಾಘನೀಯವೂ ಸಹ. ಆದರೆ ಅವರ ಹೊಸತನದ ಬಯಕೆಯು ಹಳೆಯದನ್ನು ತಿರಸ್ಕರಿಸುವ, ಲೇವಡಿ ಮಾಡುವ, ಕೆಲವೊಮ್ಮೆ ದ್ವೇಷಿಸುವ ವಿಚಿತ್ರ, ವಿಕೃತ ನಡವಳಿಕೆಗೆ ಎಡೆ ಮಾಡಿಕೊಟ್ಟಲ್ಲಿ ಅದಕ್ಕೆ ಸರಿಯಾದ, ಸಕಾಲಿಕವಾದ ಮಾರ್ಗದರ್ಶನದ ಕೊರತೆಯೇ ಕಾರಣ ಎನಿಸುತ್ತದೆ.

ಯುವಶಕ್ತಿಯಿಂದ ರಚನಾತ್ಮಕ ಕಾರ್ಯಗಳು ನಡೆಯದಿದ್ದರೆ ಅದಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಹಿರಿಯರೇ ಹೊಣೆಗಾರರಾಗುತ್ತಾರೆ” ಎಂಬ ಪ್ರಮುಖ ವಿಚಾರವೊಂದನ್ನು ಪ್ರಸ್ತಾವಿಸಿದ್ದಾರೆ. ಇಲ್ಲಿ ಎರಡು ಮೌಲಿಕ ವಾದ ಅಂಶಗಳಿವೆ. ಒಂದು, ಹೊಸತನವನ್ನು ಹುಡುಕುವ ಅವಸರದಲ್ಲಿ ನಮ್ಮ ಯುವಕರು ಹಳೆಯದೆಲ್ಲವನ್ನೂ ತಿರಸ್ಕಾರಯೋಗ್ಯವೆಂದು ಭಾವಿಸಬಾರದು ಎಂಬ ತಿಳಿವಳಿಕೆ; ಎರಡನೆಯದು, ಯುವಕರೇನಾದರೂ ಸರಿಯಾದ ದಾರಿಯಲ್ಲಿ ನಡೆಯದಿದ್ದರೆ ಅದಕ್ಕೆ ಸಮಾಜದ ಹಿರಿಯರೇ ನೇರ ಹೊಣೆಗಾರರು ಎಂಬ ಎಚ್ಚರಿಕೆ. ಸಮಾಜದ ಹಿರಿಯರಾಗಿ, ಅನೇಕ ಸಾಮಾಜಿಕ ಕಾರ್ಯಗಳು ಹಾಗೂ ಜನಪರ ಚಿಂತನೆಗಳ ಮುಖಾಂತರ ಸಮಾಜದ ವಿವಿಧ ಸ್ತರಗಳಲ್ಲಿ ಪ್ರೇರಣೆಯನ್ನು ತುಂಬುತ್ತಿರುವ ಸ್ವಾಮಿ ವೀರೇಶಾನಂದ ಸರಸ್ವತಿಯವರು ಈ ಕೃತಿಯನ್ನು ರಚಿಸಿರು ವುದೂ ಅವರೇ ಹೇಳಿರುವ ಈ ಹೊಣೆಗಾರಿಕೆಯ ಒಂದು ಭಾಗವೆಂದು ನಾವು ಭಾವಿಸಬಹುದು.

“ಮಾನವ ನಿರ್ಮಾಣ ಶಿಕ್ಷಣ ಮತ್ತು ಮಾನವನಿರ್ಮಾಣ ಧರ್ಮ- ಇವು ಸ್ವಾಮಿ ವಿವೇಕಾನಂದರು ಜಗತ್ತಿಗಿತ್ತ ಅತ್ಯಮೂಲ್ಯ ಕೊಡುಗೆಗಳು” ಎಂಬುದನ್ನು ಕೃತಿಕಾರರು ಯೋಗ್ಯವಾಗಿಯೇ ಗುರುತಿಸಿದ್ದಾರೆ. ಅದರೊಂದಿಗೆ, “ದುಷ್ಟರ ಸಂಘಟನೆಯಿAದ ಉಂಟಾದ ಅನಾಹುತಕ್ಕಿಂತ ಸಜ್ಜನರ ಅಸಂಘಟನೆ ಹಾಗೂ ನಿಷ್ಕ್ರಿಯತೆಗಳು ದೇಶಕ್ಕೆ ಮಾರಕವಾಗುತ್ತಿವೆ” ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

“ಯುವಜನತೆ ರಾಷ್ಟ್ರದ ಅಭ್ಯುದಯದಲ್ಲಿ ನಿರ್ಲಕ್ಷ್ಯು ತಾಳುತ್ತಿರುವುದು ನೋವಿನ ಸಂಗತಿ” ಎಂಬುದನ್ನೂ ನೇರವಾಗಿ ಹೇಳಿಕೊಂಡಿದ್ದಾರೆ. ‘ವಿವೇಕಾಧಾರಾ’ದಂತಹ ಕೃತಿಗಳು ಯುವಕರಲ್ಲಿ ಮನೆಮಾಡಿರುವ ವಿಸ್ಮೃತಿ ಮತ್ತು ಅವಜ್ಞೆಗಳನ್ನು ಹೋಗಲಾಡಿಸಿ ವಿವೇಕಪ್ರಜ್ಞೆಯನ್ನು ಧಾರೆಯೆರೆಯುವ ಮೂಲಕ ರಾಷ್ಟ್ರನಿರ್ಮಾಣದತ್ತ ಅವರಿಗಿರುವ ಕರ್ತವ್ಯಗಳನ್ನು ಎಚ್ಚರಿಸಬಲ್ಲವು. ಸಮಾಜದ ಎಲ್ಲ ವರ್ಗ ಹಾಗೂ ವಯೋಮಾನದ ಓದುಗರಿಗೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣತಜ್ಞರು, ಸಾಹಿತಿಗಳು, ವೃತ್ತಿಪರರು- ರಾಷ್ಟ್ರಹಿತ ಬಯಸುವ ಪ್ರತಿಯೊಬ್ಬರಿಗೂ ಈ ಕೃತಿ ದಾರಿದೀಪವಾಗಬಲ್ಲುದು