ಮುಂಬೈ: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಶುಭಮನ್ ಗಿಲ್ ಸೇರಿ ಕೆಲ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಲಿದೆ ಎಂದು ತಿಳಿದುಬಂದಿದೆ. ವಿಶ್ರಾಂತಿಗೆ ಕಾರಣ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ. ಹೌದು, ಮುಂದಿನ ವರ್ಷ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಬೇಕಿದ್ದರೆ ಕಿವೀಸ್ ವಿರುದ್ಧ ಭಾರತಕ್ಕೆ ಗೆಲುವು ಅತ್ಯಗತ್ಯ. ಈ ನಿಟ್ಟಿನಲ್ಲಿ ಟೆಸ್ಟ್ ತಂಡದ ಭಾಗವಾಗಿರುವ ಕೆಲ ಆಟಗಾರರಿಗೆ ಬಾಂಗ್ಲಾ ಟಿ20 ಸರಣಿಯಿಂದ ವಿಶ್ರಾಂತಿ ನೀಡಿ, ಕೆಲಸದ ಒತ್ತಡವನ್ನು ನಿವಾರಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.
ಪಿಟಿಐ ವರದಿ ಪ್ರಕಾರ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ಗೂ ವಿಶ್ರಾಂತಿ ನೀಡುವ ಸಾಧ್ಯತೆಯಿದೆ ಎಂದು ತಿಳಿಸಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಗಾಗಲೇ ಟಿ20ಗೆ ವಿದಾಯ ಹೇಳಿದ್ದಾರೆ. ಸದ್ಯ ಮೂರು ಮಾದರಿಯಲ್ಲಿ ಭಾರತ ಪರ ಆಡುತ್ತಿರುವ ಪ್ರಮುಖ ಆಟಗಾರರೆಂದರೆ ಅಮದು ಗಿಲ್, ಬುಮ್ರಾ ಮತ್ತು ಸಿರಾಜ್ ಮಾತ್ರ. ಸದ್ಯ ಭಾರತ ಟೆಸ್ಟ್ ವಿಶ್ವಕಪ್ ಕಡೆ ಹೆಚ್ಚಿನ ಗಮನ ಹರಿಸಿದೆ. ಈ ಕಾರಣಕ್ಕೆ ಈ ಮೂವರು ಆಟಗಾರರಿಗೆ ಕೆಲಸದ ಒತ್ತಡ ನಿವಾರಣೆ ಮಾಡಲು ವಿಶ್ರಾಂತಿ ನೀಡ ಬಯಸಿದೆ.
ಇದನ್ನೂ ಓದಿ IND vs BNG: ಬಾಂಗ್ಲಾ ಮಣಿಸಲು ರೆಡ್ ಪಿಚ್ ನಿರ್ಮಿಸಿದ ಭಾರತ
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಮುಂದಿನ ತಿಂಗಳು, ಅಕ್ಟೋಬರ್ 16ರಿಂದ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದೆ. ಈ ಸರಣಿ ಮುಕ್ತಾಯದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದು 4 ಪಂದ್ಯಗಳ ಟಿ20 ಸರಣಿಯಾಗಿದೆ. ಈ ಸರಣಿಗೂ ಗಿಲ್, ಬುಮ್ರಾ ಸಿರಾಜ್ ಜತೆಗೆ ಪಂತ್, ಜೈಸ್ವಾಲ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಏಕೆಂದರೆ ಈ ಸರಣಿ ಮುಕ್ತಾಯದ ಬಳಿಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾಗೆ ತೆರಳಲಿದೆ.
ಸದ್ಯ ಭಾರತ ತಂಡ ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಅಭ್ಯಾಸ ನಿರತವಾಗಿದೆ. ಗಿಲ್, ಸಿರಾಜ್ ಮತ್ತು ಬುಮ್ರಾ ಕೂಡ ತಂಡದಲ್ಲಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಬುಮ್ರಾ ಆಡುತ್ತಿರುವ ಮೊದಲ ಸರಣಿ ಇದಾಗಿದೆ.