Thursday, 19th September 2024

Eid Milad: ಕೋಲಾರ: ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಗುಂಪು ಘರ್ಷಣೆ, 4 ಮಂದಿಗೆ ಗಾಯ

kolar Eid milad

ಕೋಲಾರ: ನಗರದಲ್ಲಿ ಈದ್‌ ಮಿಲಾದ್ (Eid Milad) ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಚಕಮಕಿ (Assault case) ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ನಗರದಲ್ಲಿ (Kolar News) ಮೆರವಣಿಗೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ಆರಂಭವಾಯಿತು ಎನ್ನಲಾಗಿದೆ.

ಕೋಲಾರ ನಗರದ ಕ್ಲಾಕ್‌ ಟವರ್‌ ಬಳಿ ಮೆರವಣಿಗೆ ಸಾಗುವಾಗ ಮಾತಿಗೆ ಮಾತು ಬೆಳೆದು ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಒಂದು ಗುಂಪಿನವರು ಇನ್ನೊಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ.

ಸೈಯದ್ ಸಲ್ಮಾನ್, ಸೈಫ್, ಹುಸೇನ್ ಕಾಷಿಪ್, ಕಲೀಲ್ ಅಹಮದ್ ಎಂಬುವರಿಗೆ ಗಾಯವಾಗಿದ್ದು, ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಯ್ಯದ್ ವಸೀಂ ಪಾಷಾ, ಥಾಹೀರ್ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಹಲ್ಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಸ್ಥಳಕ್ಕೆ ಧಾವಿಸಿದ್ದಾರೆ.

ಗುಂಪುಗೂಡಿದ್ದ ಜನರನ್ನು ಪೊಲೀಸರು ಚದುರಿಸಿದ ಬಳಿಕ ಮೆರವಣಿಗೆ ಮುಂದೆ ಸಾಗಿತು. ಗಾಯಾಳುಗಳು ದಾಖಲಾಗಿದ್ದ ಕೋಲಾರ ಜಿಲ್ಲಾಸ್ಪತ್ರೆಯ ಬಳಿ 300ಕ್ಕೂ ಹೆಚ್ಚು ಜನರು ಜಮಾವಣೆ ಆಗುತ್ತಿದ್ದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ಗುಂಪನ್ನು ಚದುರಿಸಿ ಕಳುಹಿಸಿದರು. ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು,ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದೆ.

ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಜಿಂದಾಬಾದ್‌ ಘೋಷಣೆ

ಚಿತ್ರದುರ್ಗ: ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ಪ್ಯಾಲೆಸ್ತೀನ್​ ಪರ ಘೋಷಣೆ ಕೂಗಿದ ಘಟನೆ ನಗರದ ಗಾಂಧಿ ವೃತ್ತದ ಬಳಿ ನಡೆದಿದೆ. ಮೆರವಣಿಗೆಯಲ್ಲಿ ಕೆಲವರು ಪ್ಯಾಲೆಸ್ತೀನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಈ ವೇಳೆ ಎಚ್ಚರಿಕೆ ನೀಡಿದ ಪೊಲೀಸರು ಎರಡು ಧ್ವಜ ವಶಕ್ಕೆ ಪಡೆದುಕೊಂಡಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಮುಂಜಾಗೃತೆ ಕ್ರಮವಾಗಿ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಇದನ್ನೂ ಓದಿ: Eid Milad Celebration: ಮೆರವಣಿಗೆ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಕೆ