Thursday, 24th October 2024

Vishwavani Editorial: ನಕಲಿ ಔಷಧ ಮಾಫಿಯಾ ತಡೆ ಅಗತ್ಯ

ಹರ ಕೊಲ್ಲಲ್, ಪರ ಕಾಯ್ವನೇ” ಎಂಬ ಮಾತಿದೆ. ಅನಾರೋಗ್ಯಕ್ಕೀಡಾದಾಗ ನಾವು ವೈದ್ಯರು ಕೊಟ್ಟ ಚೀಟಿ ಹಿಡಿದು ಫಾರ್ಮೆಸಿ ಮಳಿಗೆಗಳಿಗೆ ಹೋಗುತ್ತೇವೆ. ಅಲ್ಲಿ ಕೊಟ್ಟ ಔಷಧಿಯನ್ನು ನಿಷ್ಕಲ್ಮಶ ಮನಸ್ಸಿನಿಂದ ನುಂಗುತ್ತೇವೆ. ಆದರೆ ನಾವು ಸೇವಿಸುವ ಅದೆಷ್ಟೋ ಔಷಧಿಗಳು ಚಾಕ್ ಪೀಸ್ ಪೌಡರ್ ಅಥವಾ ಪ್ರಸಾಧನಕ್ಕೆ ಬಳಸುವ ಪೌಡರ್ ಆಗಿರ ಬಹುದು.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ’ಯು (ಸಿಡಿಎಸ್‌ಸಿಒ) ತನ್ನ ಮಾಸಿಕ ವರದಿಯಲ್ಲಿ 53 ಕಳಪೆ ಅಥವಾ ಗುಣಮಟ್ಟರಹಿತ ಔಷಧ (ಎನ್‌ಎಸ್‌ಕ್ಯೂ) ಗಳ ಪಟ್ಟಿ ಬಿಡುಗಡೆ ಮಾಡಿದೆ. ನಾವು ಅತಿ ಹೆಚ್ಚು ಬಳಸುವ ಪ್ಯಾರಾ ಸಿಟಮಾಲ್ ಮಾತ್ರೆಗಳು, ವಿಟಮಿನ್ ಮಾತ್ರೆಗಳು, ಬಿಪಿ, ಮಧುಮೇಹ, ಆಸಿಡಿಟಿಗೆ ಬಳಸುವ ಮಾತ್ರೆಗಳು ಕೂಡ ನಕಲಿ ಔಷಧಿಗಳ ಪಟ್ಟಿಯಲ್ಲಿರುವುದು ಆತಂಕದ ವಿಷಯ.

ಆದರೆ ಫಾರ್ಮಾ ಕಂಪನಿಗಳು, ಇವು ನಮ್ಮ ಕಂಪನಿಗಳ ಹೆಸರಿನಲ್ಲಿ ಬಂದ ನಕಲಿ ಔಷಧಿಗಳು ಎಂದು ಹೇಳಿವೆ. ಇದನ್ನು ಪತ್ತೆ ಮಾಡುವವರಾರು? ಈ ಔಷಧಿಗಳ ಕಾರಣಕ್ಕೆ ಜೀವಕ್ಕೆ ಅಪಾ ಯವಾಗಿದ್ದರೆ ಅದಕ್ಕೆ ಯಾರು ಹೊಣೆ ? ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ವಿಟಮಿನ್ ಸಿ ಮತ್ತು ಡಿ3 ಮಾತ್ರೆಗಳಾದ ’ಶೆಲ್ ಕಾಲ್’, ‘ಬಿ ಕಾಂಪ್ಲೆಕ್ಸ್’ ಮತ್ತು
ವಿಟಮಿನ್ ಸಿ ಮಾತ್ರೆಗಳು, ಆಸಿಡಿಟಿಗೆ ಬಳಸುವ ’ಪ್ಯಾನ್-ಡಿ’, ’ಪ್ಯಾರಾಸಿಟಮಲ್ ಐಪಿ 500 ಎಂಜಿ’ ಮಾತ್ರೆಗಳು, ಮಧುಮೇಹ ನಿಯಂತ್ರಕ ಮಾತ್ರೆ ’ಗ್ಲಿಮ್‌ಪಿರೈಡ್’, ಬಿ.ಪಿ ನಿಯಂತ್ರಕ ಮಾತ್ರೆ ’ಟೆಲ್ಮಿಸಾರ್ಟನ್’, ಆಂಟಿಬಯೋಟಿಕ್ ಔಷಧಗಳಾದ ’ಮೆಟ್ರೊನಿಡಜೋಲ್’ ಮತ್ತು ಕ್ಲಾವಮ್’, ಪಿತ್ತಜನಕಾಂಗದ ಕಲ್ಲು ಕರಗಿಸಲು ನೀಡುವ ಮಾತ್ರೆ ’ಉರ್ಸೊಕಲ್’, ಮಕ್ಕಳಲ್ಲಿ ಬ್ಯಾಕ್ಟಿರಿಯಾ ಸೋಂಕಿಗೆ ನೀಡಲಾಗುವ ’ಸೆಪೋಡೆಮ್ ಎಕ್ಸ್‌ಪಿ’ ಸಿರಪ್ ಮುಂತಾದ ಔಷಧಗಳು ಈ ಪಟ್ಟಿಯಲ್ಲಿವೆ.

ಇವೆಲ್ಲವೂ ನಿತ್ಯವೂ ಸಾವಿರಾರು ರೋಗಿಗಳು ಬಳಸುವ ಚಿರಪರಿಚಿತ ಔಷಧಿಗಳು. ’ಅಲ್ಕೆಮ್ ಲ್ಯಾಬೊರೇಟರೀಸ್’, ’ಸನ್ ಫಾರ್ಮಾ’, ’ಮೆಗ್ ಲೈಫ್ ಸೈನ್ಸಸ್’, ’ಹೆಟೆರೊ ಡ್ರಗ್ಸ್’, ’ಕರ್ನಾಟಕ ಆಂಟಿ ಬಯೋಟಿಕ್ಸ್ ಮತ್ತು ಫಾರ್ಮಾ ಸ್ಯುಟಿಕಲ್ಸ್ ಲಿಮಿಟೆಡ್’, ಸೇರಿದಂತೆ ಪ್ರಮುಖ ಕಂಪನಿಗಳ ಔಷಧಗಳು ಈ ಪಟ್ಟಿಯಲ್ಲಿರುವುದು ಕಳವಳದ ವಿಚಾರ. ಇದರ ಬೆನ್ನಿಗೇ ಮಹಾರಾಷ್ಟ್ರ ಪೊಲೀಸರು ಸರಕಾರಿ ಆಸ್ಪತ್ರೆಗಳಿಗೆ ನಕಲಿ ಔಷಧ ಪೂರೈಕೆ ಮಾಡುತ್ತಿದ್ದ ಜಾಲ ವೊಂದನ್ನು ಭೇದಿಸಿದ್ದಾರೆ. ಆಂಟಿ ಬಯೋಟಿಕ್ ಮಾತ್ರೆಗಳ ಹೆಸರಿನಲ್ಲಿ ಮುಖಕ್ಕೆ ಹಚ್ಚುವ ಪೌಡರ್‌ಗೆ ಗಂಜಿ ಬೆರೆಸಿ ಮಾರಾಟ ಮಾಡುತ್ತಿದ್ದ ಈ ತಂಡ ದೇಶಾದ್ಯಂತ ತನ್ನ ನೆಟ್‌ವರ್ಕ್ ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಕಲಿ ಔಷಧ ಮಾಫಿಯಾಗಳನ್ನು ಮಟ್ಟ ವಿಶೇಷ ಗುಪ್ತಚರ ಪಡೆ ರಚಿಸಿ ಕಾರ‍್ಯಾಚರಣೆ ನಡೆಸಬೇಕು.

ಇದನ್ನೂ ಓದಿ: Vishwavani Editorial: ರಕ್ತದ ದಾಹ ಇನ್ನೂ ತೀರಿಲ್ಲವೇ ?