Thursday, 24th October 2024

Harish Kera Column: ತೋಳಗಳ ನರಬಲಿ ಮತ್ತು ಹರಿವಂಶದ ಒಂದು ಕತೆ

ಕಾಡುದಾರಿ

ಹರೀಶ್‌ ಕೇರ

ಮಾರ್ಚ್ ತಿಂಗಳ ಧಗೆಯ ದಿನಗಳು. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಿಶ್ರಮ್ ಪೂರ್ವ ಗ್ರಾಮದಲ್ಲಿ ಸೆಕೆಯಿಂದ ಪಾರಾಗಲು ತಾಯಿ ಮತ್ತು ಮಗು ಮನೆಯ ಹೊರಗೆ ಮಲಗಿದ್ದರು. ರಾತ್ರಿ ಯಾವುದೋ ಹೊತ್ತಿನಲ್ಲಿ ಎದ್ದು ನೋಡಿದಾಗ ಮಗು ಪಕ್ಕದಲ್ಲಿರಲಿಲ್ಲ. ಗಾಬರಿಯಿಂದ ತಾಯಿ ಕೂಗಿದಾಗ ಅಕ್ಕಪಕ್ಕದವರು ಬಂದು ಸೇರಿದರು. ಮೂರು ವರ್ಷದ ಮಗು ತಾನಾಗಿಯೇ ಎದ್ದು ಕತ್ತಲಲ್ಲಿ ಎಲ್ಲೂ ಹೋಗುವ ಸಾಧ್ಯತೆ ಇರಲಿಲ್ಲ. ಎಷ್ಟು ಹುಡುಕಿದರೂ ಮಗು ಸಿಗಲಿಲ್ಲ. ಹುಡುಕುತ್ತಾ ಬೆಳಗು ಮಾಡಿದವರಿಗೆ, ಮನೆಯ ಸುತ್ತಮುತ್ತ ತೋಳದ ಹೆಜ್ಜೆ ಗುರುತುಗಳು ಕಾಣಿಸಿದವು. ಮಗುವನ್ನು ಅದು ಹೊತ್ತೊಯ್ದದ್ದು ಖಚಿತವಾಯಿತು. ‘ಬಹ್ರೈಚ್ ತೋಳಗಳ ನರಬಲಿ’ ಎಂಬ ದುಃಸ್ವಪ್ನಮಯ ಎಪಿಸೋಡ್ ಹೀಗೆ ಆರಂಭವಾಯಿತು.

ಮಾರ್ಚ್ 10ರಂದು ಮೊದಲ ಮಗುವಿನ ಬಲಿ. ಆ ಮಗುವಿನ ದೇಹ ಸಿಗಲೇ ಇಲ್ಲ. 28ರಂದು ಪಕ್ಕದ ಗ್ರಾಮದಿಂದ ಒಂದು ವರ್ಷದ ಮತ್ತೊಂದು ಮಗು. ಏಪ್ರಿಲ್-ಮೇನಲ್ಲಿ ತೋಳಗಳು ಸುಮ್ಮನಿದ್ದವು. ಜುಲೈ-ಆಗಸ್ಟ್‌ನಲ್ಲಿ ಮತ್ತೆ ಸಾಲುಸಾಲಾಗಿ ಮಕ್ಕಳನ್ನು‌ ಕಚ್ಚಿಕೊಂಡು ಹೋದವು. ಇಲ್ಲವೇ ಸಾಯಿಸಿದವು. ಕತ್ತಲಲ್ಲಿ ಗೊತ್ತೇ ಆಗದಂತೆ ಹೊತ್ತುಕೊಂಡು ಹೋದ ದೇಹಗಳನ್ನು ತಿಂದವು. ಇನ್ನು ಕೆಲವು ಮಕ್ಕಳನ್ನು ಸಾಯಿಸಿ, ಜನರ ಹುಯ್ಲಿನಿಂದ ಅ ಬಿಟ್ಟು ಓಡಿದವು. 24 ತೋಳಗಳ ಹಿಂಡೇ ಜನರನ್ನು ಸಾಯಿಸುತ್ತಿದೆ ಎಂದು ಜನ ಹುಯಿಲೆಬ್ಬಿಸಿದರು. ಅರಣ್ಯ ಇಲಾಖೆ ಗಡಿಬಿಡಿಯಿಂದ ರಂಗಕ್ಕಿಳಿಯಿತು.

ನರಬಲಿ ನಡೆದ ಜಾಗದ ಸುತ್ತಮುತ್ತ ಕೂಂಬಿಂಗ್, ಪಂಜರ ಇರಿಸುವಿಕೆ ಎಲ್ಲಾ ನಡೆದವು. ಆಗ 29ರಂದು ಮೊದಲ ತೋಳವನ್ನು ಹಿಡಿದರು. ಇದುವರೆಗಿನ ಲೆಕ್ಕಾಚಾರದ ಪ್ರಕಾರ ಈ ತೋಳಗಳು ಕೊಂದ ಮನುಷ್ಯರ ಸಂಖ್ಯೆ 10.
ಇವರಲ್ಲಿ ಒಬ್ಬರು ವೃದ್ಧೆ. ಉಳಿದವರೆ 8 ವರ್ಷದೊಳಗಿನ ಮಕ್ಕಳು. ಅರಣ್ಯ ಇಲಾಖೆಯ ಪ್ರಕಾರ ಈ ದಾಳಿಗಳನ್ನು ನಡೆಸುತ್ತಾ ಇದ್ದುದು 6 ತೋಳಗಳ ಒಂದು ಪ್ಯಾಕ್. ಅದರಲ್ಲಿ ಐದನ್ನು ಹಿಡಿದು ಗೋರಖ್‌ಪುರ ಮೃಗಾಲಯಕ್ಕೆ
ಒಯ್ಯಲಾಗಿದೆ. ಇನ್ನೊಂದು ಕಣ್ಮರೆಯಾಗಿದೆ. ಬಹುಶಃ ಅದನ್ನು ಸ್ಥಳೀಯರೇ ಕೊಂದಿರಬಹುದು ಅಥವಾ ತಾನೇ ಸತ್ತಿರಬಹುದು. ಅಥವಾ ಅದು ಅಭ್ಯಾಸ ಬದಲಾಯಿಸಿರಬಹುದು.

ಯಾಕೆಂದರೆ ಸದ್ಯ ಅದು ಯಾವುದೇ ದಾಳಿ ನಡೆಸಿಲ್ಲ. ಆದರೆ ಜನರ ಭಯ ಹೋಗಿಲ್ಲ. ಹೊಸ ಸುದ್ದಿಯ ಪ್ರಕಾರ
ತೋಳಗಳ ಇನ್ನೊಂದು ಗುಂಪು ಈ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಇವು ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಆದರೆ ಜನ ಯಾವ ಪರಿ ಗಾಬರಿ ಬಿದ್ದಿದ್ದಾರೆ ಎಂದರೆ, ಇವುಗಳನ್ನೂ ಕೊಲ್ಲಲು ಮುಂದಾಗಿದ್ದಾರೆ.

ಮನುಷ್ಯರನ್ನು ಕಂಡರೆ ದೂರದಿಂದಲೇ ನಾಚಿಕೆಯಿಂದ ಪರಾರಿಯಾಗುವ ಈ ತೋಳಗಳು ಯಾಕೆ ನರರ ಮೇಲೆ ದಾಳಿ ಮಾಡಲು ಆರಂಭಿಸಿದವು? ಇದು ಕುತೂಹಲಕಾರಿ. ವನ್ಯಜೀವಿ ತಜ್ಞರ ಪ್ರಕಾರ ಇದಕ್ಕೆ ಹಲವು ಕಾರಣ ಗಳಿರಬಹುದು. ಮುಖ್ಯವಾಗಿ, ಇವು ತಮ್ಮ ಮೂಲ ನೆಲೆಯನ್ನೂ ಬಲಿಪ್ರಾಣಿಗಳನ್ನೂ ಕಳೆದುಕೊಂಡಿವೆ. ಇರುವ ಆಹಾರವನ್ನೆಲ್ಲ ಕಳೆದುಕೊಂಡ ಬಳಿಕ ಮಕ್ಕಳನ್ನು ಕಬಳಿಸಲು ಶುರು ಮಾಡಿವೆ. ಇನ್ನೊಂದು ಅಂಶವೆಂದರೆ ಈ ತೋಳಗಳು ಬಹುಶಃ ಕಾಡಿನ ತೋಳ ಹಾಗೂ ಬೀದಿ ನಾಯಿಗಳ ಕ್ರಾಸ್ ಬ್ರೀಡ್ ಇರಬಹುದು. ಇವುಗಳಿಗೆ ಮನುಷ್ಯನ ಕುರಿತ ಭಯ-ಅಂಜಿಕೆ ಕಡಿಮೆ ಇರುತ್ತದೆ.

ತೋಳಗಳಾಗಲೀ ಚಿರತೆಗಳಾಗಲೀ ಹುಲಿಯಾಗಲೀ, ನರಭಕ್ಷಕಗಳಾದರೆ ಆ ಪರಿಸರ ಬೀಭತ್ಸವಾಗಿಬಿಡುತ್ತದೆ. ಒಟ್ಟಾರೆ ಮನುಷ್ಯನ ಬದುಕು ಅಂಜಿಕೆ-ಆತಂಕಗಳ ಗೂಡಾಗುತ್ತದೆ. ಜನ ಹೊರಗೆ ಹೋಗಲು ಅಂಜುತ್ತಾರೆ. ಬ್ರಿಟಿಷ್ ಕಾಲದ ಭಾರತದಲ್ಲಿ ಇಂಥ ನರಭಕ್ಷಕಗಳನ್ನು ನೂರಾರು ಸಂಖ್ಯೆಯಲ್ಲಿ ಹೊಡೆದುಹಾಕಿದ ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್ ಮುಂತಾದವರು ದಾಖಲಿಸಿರುವ ಅನುಭವ ಕಥನಗಳು ಇಂಥ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ. ಮೇಲಾಗಿ ಈಗ ದಾಳಿಗಳು ನಡೆದಿರುವ ಬಹ್ರೈಚ್ ಪ್ರಾಂತ್ಯ ತುಂಬಾ ಬಡ ಪ್ರದೇಶ. ಇಲ್ಲಿನ ಬಡವರ ಮನೆಗಳಿಗೆ ಬಾಗಿಲುಗಳೇ ಇಲ್ಲ. ಗರ್ಭಿಣಿ- ಬಾಣಂತಿ ಕೂಡ ಹೊಲಗೆಲಸಕ್ಕೆ ಹೋಗದಿದ್ದರೆ ಬದುಕು ಸಾಗದು. ಬಡತನದ ಜತೆಗೆ ಅನಕ್ಷರತೆ, ಅಜ್ಞಾನ ಮತ್ತು ಮೂಢನಂಬಿಕೆಗಳು ತುಂಬಿ ತುಳುಕಲು ಇದು ಹುಲುಸಾದ ನೆಲ ಹಾಗೂ ಸನ್ನಿವೇಶ.

ಹೀಗಾಗಿಯೇ ತೋಳಗಳ ದಾಳಿ ಯಾವುದೋ ಅತಿಮಾನುಷ ಶಕ್ತಿಗಳ ಕಾಟದಂತೆ ಸ್ಥಳೀಯರಿಗೆ ಕಾಣಿಸುತ್ತದೆ. ಇದೊಂದು ಪರಿಸರ-ಮನುಷ್ಯ ಸಂಬಂಧದ ಸಂಕೀರ್ಣ ಸಂಗತಿ ಎಂಬುದನ್ನು ಅವರು ತಿಳಿಯುವುದೇ ಇಲ್ಲ. ಇದಕ್ಕೆ ಉದಾಹರಣೆ, ಈ ನರಹತ್ಯೆಯ ಸುದ್ದಿಗಳ ಜತೆಗೇ ಕಾಣಿಸಿಕೊಂಡ ಇನ್ನೊಂದು ಸುದ್ದಿ. “ಈ ದಾಳಿಗಳು ಶುರುವಾಗುವ
ಕೆಲವು ದಿನಗಳ ಮೊದಲು ತೋಳದ ಮರಿಗಳನ್ನು ಮನುಷ್ಯರು ಕೊಂದಿದ್ದರು. ಅದಕ್ಕೆ ಸೇಡು ತೀರಿಸಿಕೊಳ್ಳಲು ತೋಳಗಳು ಮುಂದಾಗಿವೆ” ಎಂದು ಯಾರೋ ಹೇಳಿದರು. ಹೇಳಿದವನು ಅರಣ್ಯಾಧಿಕಾರಿಯೇ.

ಮೀಡಿಯಾಗಳು ಇದನ್ನು ದೊಡ್ಡದಾಗಿ ಬಿತ್ತರಿಸಿದವು. ಪರಿಸರದ ಸೂಕ್ಷ್ಮ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳದವರು ಈ ಸುದ್ದಿಗೆ ಮಾತ್ರ ಬೆಚ್ಚಿದಂತೆ ಸ್ಪಂದಿಸಿದರು. ಸತ್ಯ ಹತ್ತು ಹೆಜ್ಜೆ ಹಾಕುವಷ್ಟರಲ್ಲಿ ಅರ್ಧಸತ್ಯ ಅಥವಾ ಸುಳ್ಳು ಬಹುವೇಗವಾಗಿ ಜಗತ್ತನ್ನೆಲ್ಲ ಸುತ್ತಿ ಬಂದಿರುತ್ತದೆ. ತೋಳಗಳಿಗೆ ಸೇಡು ತೀರಿಸಿಕೊಳ್ಳುವ ಸ್ವಭಾವ ಉಂಟೇ ಎಂದು ಯಾರೂ ಯೋಚಿಸಲು ಹೋಗಲಿಲ್ಲ. ನೆನಪಿನ ವಿಷಯದಲ್ಲಿ ನಾಯಿಗಳು ಹಾಗೂ ಆನೆಗಳು ಹೆಸರುವಾಸಿ. ಆನೆ ತಾನು ಒಮ್ಮೆ ನಡೆದ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ. ನಾಯಿ ಒಮ್ಮೆ ತುತ್ತು ತಿನ್ನಿಸಿದವರನ್ನು ನೆನಪಿನಿಂದ ಆಚೆಗಿಡುವುದಿಲ್ಲ. ಡಾಲ್ಫಿನ್‌ಗಳಿಗೆ ಸಾಕಷ್ಟು ನೆನಪಿನ ಶಕ್ತಿ ಇದೆ. ಆದರೆ ತೋಳಗಳಲ್ಲಿ ಸೇಡು ಇರಬಹುದು ಎಂದು ವಿಜ್ಞಾನ ಸಮರ್ಥಿಸುವುದಿಲ್ಲ.

ತೋಳಗಳ ಬಗ್ಗೆ ನಮ್ಮಲ್ಲಿ ವಿನಾಕಾರಣ ಭೀತಿ ಇದೆ. ಆದರೆ ಇದು ‘ವಿದ್ಯಾವಂತ’ರಲ್ಲಿ ಮಾತ್ರ. ಇದಕ್ಕೆ ಕಾರಣ ಪಾಶ್ಚಾತ್ಯರು ಸಾಹಿತ್ಯ, ಸಿನಿಮಾಗಳಲ್ಲಿ ಚಿತ್ರಿಸಿದ ತೋಳಗಳ ಚಿತ್ರಣ. ಇಂಗ್ಲೆಂಡ್‌ನ ಜನಪದ ಸಾಹಿತ್ಯದಲ್ಲಿ ವೇರ್‌ ವೂಲ್ಫ್‌ ಎಂಬ ಅರ್ಧ ತೋಳ, ಅರ್ಧ ಮನುಷ್ಯನಿದ್ದಾನೆ. ಇದು ಹಗಲು ಮನುಷ್ಯನಾಗಿ ಎಲ್ಲರಂತಿದ್ದರೆ, ರಾತ್ರಿ ತೋಳವಾಗಿ ಮನುಷ್ಯರನ್ನು ಮುರಿದು ತಿನ್ನುತ್ತದೆ.

ಯುರೋಪಿಯನ್ನರಿಗೂ ಅಮೆರಿಕನ್ನರಿಗೂ ತೋಳಗಳೆಂದರೆ ವಿನಾಕಾರಣ ಭಯ. ಅದು ಮೆತ್ತಗೆ ಎಲ್ಲ ಕಡೆಗೆ ಹರಿದಿದೆ. ಈ ದೃಷ್ಟಿಯಿಂದ ಕರ್ನಾಟಕದ ಪಾವಗಡದಲ್ಲಿ ಒಂದು ಕಾಲದಲ್ಲಿ ಸೃಷ್ಟಿಯಾಗಿದ್ದ ಟೆರರ್ ಅನ್ನು
ನೆನಪಿಸಿಕೊಳ್ಳಲೇಬೇಕು. ಪಾವಗಡದಲ್ಲಿ 1983ರಲ್ಲಿ ಒಂದಾದ ಮೇಲೊಂದರಂತೆ 7 ಮಕ್ಕಳು ಕಾಣೆಯಾದವು. ಕೆಲವು ಮಕ್ಕಳ ಯಾವ ಕುರುಹೂ ಸಿಗಲಿಲ್ಲ. ಕೆಲವು ಮಕ್ಕಳ ಬಟ್ಟೆ, ಕೈ ತುಣುಕುಗಳು ಸಿಕ್ಕವು. ಮೊದಲಿಗೆ ಗುಮಾನಿ ಮೂಡಿದ್ದು ತೋಳಗಳ ಮೇಲೆ. ನಾಯಿಗಳ ಜತೆಗೆ ಹಿಂಬಾಲಿಸಿ ಹೋದವರ ಹುಡುಕಾಟ ಗುಹೆಯೊಂದರ ಬಾಗಿಲಲ್ಲಿ ಕೊನೆಯಾಯಿತು. ಆದರೆ ಅಲ್ಲೇನೂ ಸಿಗಲಿಲ್ಲ. ಅಷ್ಟರಲ್ಲಿ ಇದು ನಿಧಿಗಾಗಿ ಮಂತ್ರವಾದಿಗಳು ನೀಡುತ್ತಿರುವ ನರಬಲಿ
ಎಂಬ ಸುದ್ದಿ ಹಬ್ಬಿತು. ಪಾವಗಡ ಕೂಡ ಹಿಂದುಳಿದ ಪ್ರಾಂತ್ಯ ಎಂಬುದು ನಿಮಗೆ ಗೊತ್ತು. ಇನ್ನೊಂದು ವಿಚಿತ್ರ ಎಂದರೆ ಸತ್ತವರೆಲ್ಲ ಹೆಣ್ಣುಮಕ್ಕಳು! ಬಡತನ, ಮೌಢ್ಯ ಮತ್ತು ಹೆಣ್ಣುಮಗು ಜನನ ಇಂಥ ವಿಷಯಗಳಲ್ಲಿ ಡೆಡ್ಲಿ ಕಾಂಬಿನೇಶನ್.

ಈ ನಡುವೆ ಬಂಡೀಪುರ-ನಾಗರಹೊಳೆಯ ಕೆನ್ನಾಯಿಗಳ ಬಗ್ಗೆ ದಶಕಗಳ ಕಾಲ ಅಧ್ಯಯನ ನಡೆಸಿ ʼವಾಕಿಂಗ್‌ ವಿದ್‌ ದಿ ವೂಲ್ವ್ಸ್’ ಎಂಬ ಸಾಕ್ಷ್ಯಚಿತ್ರ ರೂಪಿಸಿದ ಕೃಪಾಕರ- ಸೇನಾನಿ ಹೇಳಿದ ಒಂದು ಸಂಗತಿ ನೆನಪಾಗುತ್ತದೆ. ಅವರು ಉತ್ತರ ಕರ್ನಾಟಕದಲ್ಲಿ ತೋಳಗಳನ್ನು ಹುಡುಕುತ್ತಾ ಅವುಗಳ ಸುತ್ತಲಿನ ಜನಜೀವನವನ್ನು ಅಧ್ಯಯನ ಮಾಡುತ್ತಿದ್ದಾಗ ಒಬ್ಬ ಕುರುಬ ಹಿರಿಯರು ಸಿಕ್ಕಿದರು. ಕುರಿಗಳನ್ನು ಹೊತ್ತೊಯ್ಯುವ ಈ ತೋಳಗಳ ಬಗ್ಗೆ ಇವರಿಗೆ ಸಿಟ್ಟಿರಬಹುದು ಎಂದು ಮಾತಾಡಿಸಿದಾಗ, ಅವರ ವರ್ಷನ್ನೇ ಬೇರೆ ಇತ್ತಂತೆ. ತೋಳಗಳನ್ನು ಅವರೆ ‘ಸಹೋದರ’ನಂತೆಯೇ ಪರಿಗಣಿಸುತ್ತಾರಂತೆ. ಯಾಕೆಂದರೆ ಹಿಂದಿನ ಜನ್ಮದಲ್ಲಿ ತೋಳ ಕುರುಬರ ಸಹೋದರನಾಗಿತ್ತಂತೆ. ಆಸ್ತಿ ಪಾಲು ವಿಷಯದಲ್ಲಿ ತಗಾದೆ ಬಂತು, ಈ ಕಿರಿಯ ಸಹೋದರನಿಗೆ ಎಲ್ಲರೂ ಸೇರಿ ಅನ್ಯಾಯ ಮಾಡಿದರು. ಅದನ್ನು ತೀರಿಸಿಕೊಳ್ಳಲು ಆತ ತೋಳನ ಜನ್ಮದಲ್ಲಿ ಬಂದು ಹಟ್ಟಿಯಿಂದ ಕುರಿಗಳನ್ನು ಹೊತ್ತೊಯ್ಯುತ್ತಾನೆ. ಅದು ಆತನ ಪಾಲಿನ ಭಾಗವೇ ಆಗಿದೆ. ಹೀಗಾಗಿ ಕುರುಬರು ತೋಳಗಳ ಮೇಲೆ ಕೋಪಿಸಿಕೊಳ್ಳುವುದಿಲ್ಲ.

ಕುರಿಗಳ ಪಾಲಿಗೆ ಇದು ಸರಿ. ಆದರೆ ಮಕ್ಕಳನ್ನು ಕೊಂಡೊಯ್ದರೆ ಮನುಷ್ಯ ಕ್ಷಮಿಸುವುದಾದರೂ ಹೇಗೆ? ಅದೇ ಈಗಿನ ಸಂಘರ್ಷದ ತಿರುಳು. ಆದರೆ ತೋಳಗಳನ್ನು ಈ ಸ್ಥಿತಿಗೆ ಒಯ್ದದ್ದಾದರೂ ಏನು ಎಂದು ಚಿಂತಿಸುವವರು ಕಡಿಮೆ. ಮನುಷ್ಯ ಮತ್ತು ಕಾಡಿನ, ಕಾಡಿನ ಜೀವಿಗಳ ಸಂಬಂಧದ ಬಗ್ಗೆ ಚಿಂತಿಸಿದವರಲ್ಲಿ ನಾವೇ ಮೊದಲಿಗರೇನೂ ಅಲ್ಲ. ಇದಕ್ಕೆ ವೇದವ್ಯಾಸರು ಬರೆದಿರುವ ‘ಹರಿವಂಶ’ದಲ್ಲಿರುವ ಒಂದು ಭಾಗವೇ ಉದಾಹರಣೆ. ಹರಿವಂಶ ಎಂದರೆ ಕೃಷ್ಣನ ಕಥೆ. ಇದರ ವಿಷ್ಣುಪರ್ವದಲ್ಲಿ ಒಂದು ಕುತೂಹಲಭರಿತ ಭಾಗವಿದೆ.

ವ್ರಜಭೂಮಿಯಲ್ಲಿ ಕೃಷ್ಣ-ಬಲರಾಮರು ಬೆಳೆಯುತ್ತಿದ್ದಾರೆ. ಆದರೆ ಅಲ್ಲಿನ ಗೋಪಾಲಕರು ಮತ್ತಿತರರು ವ್ರಜಭೂಮಿಯ ಸುತ್ತಮುತ್ತಲಿನ ಕಾಡನ್ನು ಈಗಾಗಲೇ ಸಾಕಷ್ಟು ಹಾನಿಯೆಬ್ಬಿಸಿದ್ದಾರೆ. ಕೃಷ್ಣ ಅಣ್ಣನಿಗೆ ಹೀಗೆ ಹೇಳುತ್ತಾನೆ: “ಈ ಪ್ರದೇಶದ ಕುರಿತು ನಾವು ಎಲ್ಲವನ್ನೂ ತಿಳಿದು ಕೊಂಡಿದ್ದಾಗಿದೆ ಮತ್ತು ಈ ಕಾನನವನ್ನು ಸಂಪೂರ್ಣವಾಗಿ ಭೋಗಿಸಿಯಾಗಿದೆ. ಗೋಪರು ಮರಗಳನ್ನು ಕಡಿದುದರಿಂದ ಇಲ್ಲಿ ಹುಲ್ಲು-ಕಟ್ಟಿಗೆಗಳೂ ಕಡಿಮೆಯಾಗುತ್ತಿವೆ. ಹಸುವಿನ ಕೊಟ್ಟಿಗೆಯ ಸುತ್ತಮುತ್ತಲೂ ಅಕ್ಷಯವೋ ಎಂಬಂತಿದ್ದ ಮರಗಳೆಲ್ಲವನ್ನೂ ಗೋಪರು ಕಟ್ಟಿಗೆಯಾಗಿ ಸುಟ್ಟುಹಾಕಿರುವುದರಿಂದ ಅವೂ ಕ್ಷಯವಾಗಿಬಿಟ್ಟಿವೆ. ಈ ಅರಣ್ಯದಲ್ಲಿ ಸ್ವಲ್ಪವೇ ನೀರು ಮತ್ತು ಕಟ್ಟಿಗೆ ಉಳಿದುಕೊಂಡಿವೆ. ಇದರ ಮೂಲವೇ ನಾಶವಾದಂತಿದೆ. ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ಬಿಟ್ಟು ಹೊರಟುಹೋಗಿವೆ. ಈ ವಿಶಾಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಮರಗಳನ್ನು ಕಡಿದುಹಾಕಿ
ಬಿಟ್ಟಿದ್ದಾರೆ. ಇಲ್ಲಿ ಆನಂದವಿಲ್ಲ. ಸ್ವಾದವಿಲ್ಲ. ಇಲ್ಲಿಯ ಗಾಳಿಯೂ ನಿಷ್ಪ್ರಯೋಜಕವಾಗಿದೆ. ಪಕ್ಷಿಗಳೇ ಇಲ್ಲದ
ಈ ವನವು ವ್ಯಂಜನಪದಾರ್ಥಗಳಿಲ್ಲದ ಊಟದಂತೆ ಶೂನ್ಯವೆನಿಸುತ್ತಿದೆ. ಸುಂದರ ವನರಾಜಿಗಳು ಈಗ
ಬಯಲಾಗಿಬಿಟ್ಟಿವೆ. ಬೇಗನೇ ಗೋವುಗಳ ಸಹಿತ ಹೋಗಿ ಇನ್ನೊಂದು ಕಡೆ ವ್ರಜದಲ್ಲಿ ನೆಲೆಸೋಣ”.

ಸರಿ. ಆದರೆ ಇಲ್ಲಿಂದ ಹೊರಡುವಂತೆ ವ್ರಜವಾಸಿಗಳನ್ನು ಪ್ರೇರೇಪಿಸುವುದು ಹೇಗೆ? ಈಗ ಕೃಷ್ಣ ಒಂದು
ಮಾಯಕ ಮಾಡುತ್ತಾನೆ. “ಯಾವುದಾದರೂ ಕಾರಣವನ್ನು ಹುಟ್ಟಿಸಿ ಈ ವ್ರಜವಾಸಿಗಳನ್ನು ಹೆದರಿಸೋಣ” ಎಂದು ಆತ ಚಿಂತಿಸುತ್ತಿರುವಾಗಲೇ “ರಕ್ತ-ಮಾಂಸ-ಮಜ್ಜೆಗಳನ್ನು ತಿನ್ನುವ ನೂರಾರು ತೋಳಗಳು ಕಾಣಿಸಿಕೊಂಡವು. ಅವುಗಳ ಕುರಿತು ಯೋಚಿಸುತ್ತಿದ್ದಂತೆಯೇ ಅವನದೇ ಶರೀರದ ರೋಮರೋಮಗಳಿಂದ ನೂರಾರು ಘೋರ,
ಭಯಂಕರ ತೋಳಗಳು ಹೊರಬಿದ್ದು ಎಲ್ಲ ಕಡೆ ಕಾಣಿಸಿಕೊಂಡವು. ಆ ತೋಳಗಳನ್ನು ನೋಡಿ ವ್ರಜದಲ್ಲಿ
ಸುಖವಾಗಿದ್ದ ಗೋವುಗಳು, ಕರುಗಳು, ಗಂಡಸರು ಮತ್ತು ಗೋಪಿಯರಲ್ಲಿ ಮಹಾ ಭಯ ಹುಟ್ಟಿಕೊಂಡಿತು. ಕೃಷ್ಣನಿಂದ ಪ್ರಕಟಗೊಂಡ ಆ ಕಪ್ಪುಮುಖದ ತೋಳಗಳು ಗೋಪರ ಭಯವನ್ನು ಹೆಚ್ಚಿಸಿದವು. ಅವು ಕರುಗಳನ್ನು ತಿನ್ನುತ್ತಿದ್ದವು. ಗೋವ್ರ ಜರನ್ನು ಬೆದರಿಸುತ್ತಿದ್ದವು. ರಾತ್ರಿಯಲ್ಲಿ ಬಾಲಕರನ್ನು ಅಪಹರಿಸುತ್ತಿದ್ದವು. ಹೀಗೆ ತೋಳಗಳು ಅವರು ವ್ರಜವನ್ನು ಬಿಟ್ಟುಹೋಗುವಂತೆ ಮಾಡಿದವು”.

ಬಹುಶಃ ಆ ತೋಳಗಳೇ ಈಗ “ನಮ್ಮ ಜಾಗ ನಮಗೆ ಬಿಟ್ಟುಕೊಡಿ” ಎಂಬ ಸಂದೇಶ ನೀಡಲು ಮರಳಿ ಸೃಷ್ಟಿಯಾಗಿರಬಹುದೆ?

ಇದನ್ನೂ ಓದಿ: ಕೆಜಿಎಫ್ ‘ಚಾಚಾ’ ಖ್ಯಾತಿಯ ಹರೀಶ್ ರೈಗೆ ಕ್ಯಾನ್ಸರ್