ಮಾಲಿನಿ ಹೆಗಡೆ
ವಿದ್ಯೆ ವ್ಯವಹಾರವಾಗಿ, ಶಾಲೆಗಳು ವ್ಯವಹಾರದ ಕೇಂದ್ರಗಳಾಗುತ್ತಿವೆ. ಈ ಕಾಲಮಾನದಲ್ಲಿ, ಸರಸ್ವತಿಯ ಜಾಗವನ್ನು ಲಕ್ಷ್ಮಿ ಆಕ್ರಮಿಸುತ್ತಿರುವ ಈ ಕಾಲಘಟ್ಟದಲ್ಲಿ, ಹುಟ್ಟಿದ ಪರಿಕಲ್ಪನೆಯೇ ಕನ್ನಡತಿ ಧಾರಾವಾಹಿ.
ಹಸಿರು ಪೇಟೆಯಂತ ಪುಟ್ಟ ಊರಿನಿಂದ ಹೋದ ರತ್ನಮಾಲಾ ಬ್ಯುಸಿನೆಸ್ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸುತ್ತಾರೆ. ಕನ್ನಡ ಶಾಲೆ ಎಂದೆಂದೂ ಚೆನ್ನಾಗಿರ ಬೇಕು, ಅದೊಂದು ವ್ಯಾಪಾರ ಅಲ್ಲ, ಎನ್ನುವ ಭಾವನೆಯೊಂದಿಗೆ ಕಾಫಿ ಉದ್ಯಮದ ಜತೆ ಕನ್ನಡ ಶಾಲೆಯ ಉದ್ದಾರಕ್ಕಾಗಿ ಹೋರಾಡುತ್ತಿರುವ ಅಮ್ಮಮ್ಮ. ಆದರೆ ಅವರದೇ ಆದ ಮನೆಯಲ್ಲಿ ಎಲ್ಲರೂ ಕೂಡ ಶಾಲೆ ಅಂದರೆ ವ್ಯವಹಾರ ಅಂತಾನೆ ನೋಡುವ ಜನರ ನಡುವೆ, ಅನೀರಿಕ್ಷಿತವಾಗಿ ಹಸಿರುಪೇಟೆಯಲ್ಲಿ ಸಿಕ್ಕಿದ ಭುವನೇಶ್ವರಿ, ಅಮ್ಮಮ್ಮನಿಗೆ ತುಂಬಾ ಇಷ್ಟವಾಗಿ, ತಾನು ಹುಡುಕುತ್ತಿರುವ, ತನ್ನ ನಂತರ ತನ್ನ ವ್ಯವಹಾರವನ್ನು ಮೌಲ್ಯದ ಆಧಾರದ ಮೇಲೆ ನಡೆಸಿಕೊಂಡು ಹೋಗುವ ಹುಡುಗಿ ಇವಳೇ ಅಂತ ಅನಿಸಿಬಿಡುತ್ತದೆ.
ಇದರ ನಡುವೆ, ಹಸಿರು ಪೇಟೆ ಬಿಟ್ಟು ಜೀವನಕ್ಕಾಗಿ ಬೆಂಗಳೂರಿಗೆ ಬಂದ ಭುವಿ ಪುನಃ ಅದೇ ಅಮ್ಮಮ್ಮನ ಮಾಲಾ ಸಂಸ್ಥೆಯನ್ನು ಸೇರಿಕೊಳ್ಳುತ್ತಾಳೆ. ಆದರೆ ಭುವಿಗೆ ಅದು ರತ್ನಮಾಲಾ ಅವರ ಶಾಲೆ ಅಂತಾನೂ ಗೊತ್ತಿರುವುದಿಲ್ಲ. ಇದರ ನಡುವೆ ಆಕಸ್ಮಿಕವಾಗಿ ಸಿಗುವ ಅಮ್ಮಮ್ಮನ ಮಗ ಹರ್ಷ, ಅವರಿಬ್ಬರ ನಡುವಿನ ಪವಿತ್ರ ಸ್ನೇಹ, ಅಮ್ಮಮ್ಮನ ಮನೆಯಲ್ಲೇ ಆಸ್ತಿಗಾಗಿ ಕಾದು ಕುಳಿತಿರುವ ಇಬ್ಬರು ಸೊಸೆಯಂದಿರು, ..ಹೀಗೆ ಕಥೆ ಸಾಗುತ್ತೆ ದಿನಾಲೂ ಧಾರಾವಾಹಿಯ ಕೊನೆಯಲ್ಲಿ ಬರುವ ಸಿರಿಗನ್ನಡಂ ಗೆಲ್ಗೆ ಒಂದು ಹೊಸ ಪ್ರಯತ್ನ, ಕನ್ನಡದವರಿಗೆ ಗೊತ್ತಿರದ ಅದೆಷ್ಟೋ ಹೊಸ ನುಡಿಗಳು ಪ್ರತಿದಿನ ಈ ಧಾರಾವಾಹಿಯಲ್ಲಿ ಸಿಗುತ್ತದೆ. ಇಂಥ ಒಂದು ಹೊಸ ಪ್ರಯತ್ನ ಕನ್ನಡತಿ ಮಾಡುತ್ತಾ ಇದೆ.
ಮುಖ್ಯ ಭೂಮಿಕೆಯಲ್ಲಿ ಕಿರಣರಾಜ್, ರಂಜಿನಿ ರಾಘವನ್, ಚಿತ್ಕಲಾ ಬಿರಾದಾರ, ಸಮೀಕ್ಷಾ ಪ್ರಭು, ರಕ್ಷಿತ್, ದೀಪಾ, ಸಾರಾ ಅಣ್ಣಯ್ಯ, ಹಾಗೂ ಖಳನಟಿಯಾಗಿ ರಮೊಲಾ ಪಾತ್ರ ವಹಿಸಿದ್ದಾರೆ. ಹಾಗೆ ವಿಜಯಕೃಷ್ಣ, ಮಾಲತಿ ರಾವ್ ಇವರೆಲ್ಲರೂ ಕೂಡಾ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದಾರೆ. ಪ್ರತಿಭಾವಂತರ ದಂಡೆ ಇರುವ ಈ ಧಾರಾವಾಹಿ ಕನ್ನಡದ, ಕನ್ನಡಿ ಗರ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲಿ ಅನ್ನುವ ಹಾರೈಕೆ ನಮ್ಮದು….