ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದು ಸಣ್ಣ ಪಟ್ಟಣದಲ್ಲಿ ಸುಧಾಸ ಎಂಬ ಬಡವನಿದ್ದ. ಅವನ ಗುಡಿಸಲಿನ ಹಿಂಭಾಗದಲ್ಲಿ, ಒಂದು ಸಣ್ಣ ಕೊಳವಿತ್ತು. ಕೊಳದಲ್ಲಿ ಕಮಲದ ಹೂವೊಂದು ಅರಳಿರುವುದನ್ನು ನೋಡಿದ. ಅದು ಕಮಲದ ಹೂ ಬಿಡುವ ಕಾಲವಾಗಿರಲಿಲ್ಲ, ಆದರೂ ಅಪರೂಪವಾಗಿ ಕಮಲದ ಹೂ ಅರಳಿರುವುದನ್ನು ನೋಡಿ ಅವನಿಗೆ ಬಹಳ
ಸಂತೋಷವಾಯಿತು. ಏಕೆಂದರೆ ಈಗ ಈ ಹೂವನ್ನು ಮಾರುಕಟ್ಟೆಯಲ್ಲಿ ಮಾರಿದರೆ, ಯಾರಾದರೂ ಕೂಡ ಇದಕ್ಕೆ ಎರಡು ನಾಣ್ಯಗಳನ್ನಾದರೂ ಕೊಟ್ಟೇ ಕೊಡುತ್ತಾರೆ, ಆಗ ನಾನು ಅಂದುಕೊಂಡ ಹಾಗೆ ನನಗೆ ಅಷ್ಟು ಹಣ ಸಿಕ್ಕರೆ ನನಗಿಂತ ಅದೃಷ್ಟವಂತರು ಬೇರಾರು ಇಲ್ಲ, ಎಂದುಕೊಂಡು ಅದನ್ನು ತೆಗೆದುಕೊಂಡು ಮಾರುಕಟ್ಟೆಯತ್ತ ನಡೆದ.
ದಾರಿಯಲ್ಲಿ ಇವನು ಹೋಗುತ್ತಿದ್ದಾಗ, ಆ ಪಟ್ಟಣದ ಶ್ರೀಮಂತನೊಬ್ಬ, ‘ಆಗ ಹೂವನ್ನು ನನಗೆ ಕೊಡು, ನಿನಗೆ ನಾನು ಐನೂರು ಚಿನ್ನದ ವರಹಗಳನ್ನು ಕೊಡುತ್ತೇನೆ’ ಎಂದು ಹೇಳಿದ. ಇವನು ಈ ಮಾತನ್ನು ಇವನ ಬಳಿ ಹೇಳುತ್ತಿzಗಲೇ, ಅಲ್ಲಿಗೆ, ರಾಜ್ಯದ ಮಹಾದಂಡನಾಯಕನೊಬ್ಬ ಅಲ್ಲಿಗೆ ಬಂದ. ಆತ ತನ್ನ ಕುದುರೆಯಿಂದ ಇಳಿದು, ‘ಈ ಕಮಲಕ್ಕೆ ನಾನು, ಈ ಶ್ರೀಮಂತ, ಎಷ್ಟು ಬೆಲೆ ಕೊಡಲು ತಯಾರಿದ್ದನೋ ಅದಕ್ಕಿಂತ ಹತ್ತರಷ್ಟು ಹೆಚ್ಚಿನ ಬೆಲೆಯನ್ನು ಕೊಡುತ್ತೇನೆ, ನನಗೇ ಈ ಕಮಲವನ್ನು ಕೊಡು’ ಎಂದು ಕೇಳಿದ.
ಸುಧಾಸನಿಗೆ ಅನುಮಾನ ಬಂದು ‘ನಿಮಗಿಬ್ಬರಿಗೂ ಹುಚ್ಚು ಹಿಡಿದಿದೆಯೇನು?’ ಎಂದು ಕೇಳುತ್ತಿದ್ದ. ಅಷ್ಟರಲ್ಲಿ, ಆ ರಾಜ್ಯದ ರಾಜನ ರಥ ಅಲ್ಲಿಗೆ ಬಂದಿತು. ರಾಜ ಹೇಳಿದ, ‘ಮಹಾದಂಡ ನಾಯಕ ಕೊಡುವ ಹತ್ತರಷ್ಟು ಹೆಚ್ಚಿನ ಬೆಲೆಯನ್ನು ಕೊಡಲು ನಾನು ತಯಾರಿದ್ದೇನೆ. ನನಗೇ ನೀನು ಈ ಕಮಲದ ಹೂವನ್ನು ಕೊಟ್ಟು ಬಿಡು’ ಎಂದು ಕೇಳಿದ. ಸುಧಾಸನಿಗೆ ಅತ್ಯಂತ ಆಶ್ಚರ್ಯವಾಯಿತು, ‘ನಿಜವಾಗಿಯೂ ಇವರುಗಳಿಗೆ ಏನಾಗಿದೆ? ನಾನು ಈ ಕಮಲಕ್ಕೆ ಎರಡು ನಾಣ್ಯ ಸಿಕ್ಕರೆ ಹೆಚ್ಚೆಂದುಕೊಂಡಿದ್ದೆ, ಇವರುಗಳು ನೋಡಿದರೆ ಇಷ್ಟೊಂದು ಬೆಲೆಯನ್ನು ಕೊಡಲು ತಯಾರಾಗಿದ್ದಾರಲ್ಲ, ಏನು ವಿಷಯವಿರಬಹುದು?’ ಎಂದು ಅವರನ್ನು ಕೇಳಿದ.
ಆಗ ರಾಜ, ‘ಭಗವಾನ್ ಬುದ್ಧರು ಪಟ್ಟಣಕ್ಕೆ ಬಂದಿದ್ದಾರೆ, ಅವರನ್ನು ಎದುರುಗೊಳ್ಳಲು ನಾವೆಲ್ಲರೂ ಹೋಗು ತ್ತಿದ್ದೇವೆ. ಸಾಮಾನ್ಯವಾಗಿ ಈ ಕಾಲದಲ್ಲಿ ಅರಳದ ಕಮಲದ ಹೂವನ್ನು ಅವರಿಗೆ ಅರ್ಪಿಸಲು ನಾನು ಇಚ್ಛಿಸುತ್ತೇನೆ, ಇದರಿಂದ ಅವರಿಗೆ ಬಹಳ ಸಂತೋಷವಾಗುತ್ತದೆ. ಏಕೆಂದರೆ ಈ ಋತುವಿನಲ್ಲಿ ತಮ್ಮ ಚರಣಗಳಲ್ಲಿ ಯಾರಾದರೂ ಕಮಲವನ್ನು ಅರ್ಪಿಸಬಹುದೆಂದು ಅವರು ಯೋಚಿಸಿಯೂ ಇರುವುದಿಲ್ಲ. ಇಂತಹ ಸದವಕಾಶವನ್ನು ಯಾರು ತಾನೆ ಬಳಸಿಕೊಳ್ಳಲು ಇಚ್ಛಿಸುವುದಿಲ್ಲ?’ ಎಂದು ಹೇಳಿದ.
ಆಗ ಸುಧಾಸ, ‘ಹಾಗಿದ್ದರೆ ಈ ಹೂವನ್ನು ನಾನು ಮಾರುವುದಿಲ್ಲ, ನಾನೇ ಬುದ್ಧರಲ್ಲಿಗೆ ಹೋಗಿ ಅವರ ಚರಣಕ್ಕೆ ಈ ಕಮಲವನ್ನು ಅರ್ಪಿಸುತ್ತೇನೆ’ ಎಂದು ಹೇಳಿದ. ಎಲ್ಲರೂ ಬುದ್ಧನ ಬಳಿಗೆ ತಲುಪಿದರು. ಆ ಬಡವ ಬುದ್ಧನಿಗೆ ಆ ಹೂವನ್ನು ಅವರಿಗೆ ಸಮರ್ಪಿಸುತ್ತಾ ‘ಭಗವಾನ್ ಶ್ರೀಮಂತಿಕೆ, ಪ್ರೇಮಕ್ಕಿಂತ ಮಿಗಿಲಾದುದ್ದೇನಲ್ಲ.
ಆತ್ಮ ಸುಖವನ್ನು ಹಣಕ್ಕಾಗಿ ಮಾರಲು ನನ್ನಿಂದ ಸಾಧ್ಯವಾಗದು, ಅದು ಬರೀ ಹೂವಾಗಿದ್ದರೆ ಅದನ್ನು ಮಾರಲು ನಾನು ತಯಾರಿದ್ದೆ, ಆದರೆ ನಿಮ್ಮ ಚರಣಗಳಿಗೆ ಅದನ್ನು ಅರ್ಪಿಸುವ ವಿಷಯ ಬಂದಾಗ, ಮಾರುವ ಪ್ರಶ್ನೆಯೇ
ಬರುವುದಿಲ್ಲ. ಬಡವರಿಗೂ ಕೂಡಾ ಪ್ರೇಮಿಸಲು ಆಗುವುದು, ಬಡವರು ಸಹ ಗೌರವ ಸೂಚಿಸಲು ಅರ್ಹರು, ಅವರಲ್ಲೂ ಶ್ರದ್ಧೆ ಇರುತ್ತದೆ, ಅವರಿಗೂ ಒಂದು ಆತ್ಮವಿರುತ್ತದೆ, ದಯವಿಟ್ಟು ಈ ಹೂವನ್ನು ಸ್ವೀಕರಿಸಿ ನನ್ನನ್ನು ಧನ್ಯನ್ನನ್ನಾಗಿಸಿ ದೇವಾ’ ಎಂದು ಹೇಳಿದ.
ಬುದ್ಧ ಆ ಹೂವನ್ನು ಸ್ವೀಕರಿಸಿ ಬಹಳ ಆನಂದದಿಂದ ಅವನಿಗೆ ಆಶೀರ್ವದಿಸಿದರು. ಬದುಕಿನಲ್ಲಿ ಸದಾ ಕಾಲಕ್ಕೂ ಹಣ ಮುಖ್ಯವಾಗುವುದಿಲ್ಲ. ಹಣಕ್ಕಿಂತ ಮೌಲ್ಯಗಳು, ಆತ್ಮ ಸಂತೃಪ್ತಿ ಸಂತೋಷ ಬಹಳ ಕೆಲವೊಮ್ಮೆ ಹಣ
ಕೊಡಲಾಗದ ಸಮಾಧಾನವನ್ನು ಬೇರೆ ವಿಷಯಗಳು ನಮಗೆ ನೀಡುತ್ತವೆ. ಅದನ್ನು ಗುರುತಿಸಿ ಬದುಕುವ ರೀತಿಯನ್ನು ನಾವು ಕಲಿಯಬೇಕಷ್ಟೇ.
ಇದನ್ನೂ ಓದಿ: Roopa Gururaj Column: ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಬೇಡ