ಅಡಿಲೇಡ್: ಹ್ಯಾರಿಸ್ ರವೂಫ್(29 ಕ್ಕೆ 5) ಅವರ ಘಾತಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ(PAK vs AUS) ವಿರುದ್ಧದ ದ್ವಿತೀಯ ಏಕದಿನ(Australia vs Pakistan 2nd ODI) ಪಂದ್ಯದಲ್ಲಿ ಪಾಕಿಸ್ತಾನ(PAK vs AUS) ತಂಡ ಭರ್ಜರಿ 9 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಜತೆಗೆ ಮೂರು ಪಂದ್ಯಗಳ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಮೂರನೇ ಹಾಗೂ ಅಂತಿಮ ಪಂದ್ಯ ನ.10 ರಂದು ನಡೆಯಲಿದೆ. ಇತ್ತಂಡಗಳಿಗೂ ಇದು ಸರಣಿ ನಿರ್ಣಾಯಕ ಪಂದ್ಯವಾಗಿದೆ.
ʼಅಡಿಲೇಡ್ ಓವಲ್ʼ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕನ ಆಯ್ಕೆಯನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ವೇಗಿಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರವೂಫ್ ಊತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಆತಿಥೇಯ ತಂಡವನ್ನು ಕೇವಲ 163 ರನ್‌ಗಳಿಗೆ ಕಟ್ಟಿ ಹಾಕಿದರು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 26.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 169 ರನ್ ಬಾರಿಸಿ ಗೆಲುವಿನ ಬಾವುಟ ಹಾರಿಸಿತು. ಇದು ಅಡಿಲೇಡ್ನಲ್ಲಿ 28 ವರ್ಷಗಳ ನಂತರ ಪಾಕಿಸ್ತಾನಕ್ಕೆ ಒಲಿದ ಮೊದಲ ಗೆಲುವಾಗಿದೆ.
ಪಾಕಿಸ್ತಾನ ಪರ ಆರಂಭಿಕ ಆಟಗಾರರಾದ ಸೈಮ್ ಅಯೂಬ್ ಸೊಗಸಾದ 6 ಸಿಕ್ಸರ್ ಮತ್ತು 5 ಬೌಂಡರಿ ನೆರವಿನಿಂದ 82 ರನ್ ಬಾರಿಸಿದರು. ಅಬ್ದುಲ್ಲಾ ಶಫೀಕ್ ಅಜೇಯ 64 (4 ಬೌಂಡರಿ, 3 ಸಿಕ್ಸರ್) ರನ್ ಗಳಿಸಿದರು. ಮಾಜಿ ನಾಯಕ ಬಾಬರ್ ಅಜಂ 15 ರನ್ ಗಳಿಸಿ ಅಜೇಯರಾಗಿ ಉಳಿದರು. ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ ಒಂದು ಮೇಡನ್ ಸಹಿತ 26 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರೆ, ಹ್ಯಾರಿಸ್ ರವೂಫ್ 29 ರನ್‌ಗೆ 5 ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ IND vs AUS: ಸರ್ಫರಾಝ್ ಖಾನ್ ಬದಲು ದೃವ್ ಜುರೆಲ್ ಸ್ಥಾನ ನೀಡಿ ಎಂದ ಆಕಾಶ್ ಚೋಪ್ರಾ!
ಆಸ್ಟ್ರೇಲಿಯಾ ಪರ ಅನುಭವಿ ಆಟಗಾರ ಸ್ಟೀವನ್ ಸ್ಮಿತ್ 35 ರನ್ ಬಾರಿಸಿದರು. ಇವರದ್ದೇ ತಂಡದ ಪರ ಗರಿಷ್ಠ ಗಳಿಕೆ. ಉಳಿದಂತೆ ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲಿಲ್ಲ. ಲಬುಶೇನ್(6), ಮ್ಯಾಕ್ಸ್‌ವೆಲ್(16), ಮ್ಯಾಥ್ಯೂ ಶಾರ್ಟ್(19) ಅಗ್ಗಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆಸೀಸ್ ಪರ ಆಡಂ ಜಾಂಪಾ ಒಂದು ವಿಕೆಟ್ ಕಿತ್ತರೂ 44 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿಕೊಂಡರು. ಅನುಭವಿಗಳಾದ ಮಿಚೆಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಸರಿಯಾಗಿ ದಂಡಿಸಿಕೊಂಡರು.