Saturday, 23rd November 2024

IND vs AUS: ಸರ್ಫರಾಝ್‌ ಖಾನ್‌ ಬದಲು ದೃವ್‌ ಜುರೆಲ್‌ ಸ್ಥಾನ ನೀಡಿ ಎಂದ ಆಕಾಶ್‌ ಚೋಪ್ರಾ!

Aakash Chopra Wants Dhruv Jurel To Replace Sarfaraz Khan In Border-Gavaskar Trophy

ನವದೆಹಲಿ: ಆಸ್ಟ್ರೇಲಿಯಾ ವಿರುದ್ದ ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಸರ್ಫರಾಝ್‌ ಖಾನ್‌ ಬದಲು ಯುವ ಆಟಗಾರ ಧ್ರುವ್‌ ಜುರೆಲ್‌ಗೆ ಸ್ಥಾನ ನೀಡಬೇಕೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಸಲಹೆ ನೀಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯ ನವೆಂಬರ್‌ 22 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಭಾರತ ತಂಡದ ಪ್ಲೇಯಿಂಗ್‌ XI ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಅದರಂತೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ಭಾರತ ತಂಡದ ಪ್ಲೇಯಿಂಗ್‌ XI ನಲ್ಲಿ ಸೂಕ್ತ ಬದಲಾವಣೆಯನ್ನು ಸೂಚಿಸಿದ್ದಾರೆ.

ಆಕಾಶ್‌ ಚೋಪ್ರಾ ಹೇಳಿದಂತೆ ಭಾರತ ʼಎʼ ಹಾಗೂ ಆಸ್ಟ್ರೇಲಿಯಾ ʼಎʼ ನಡುವಣ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಯುವ ಆಟಗಾರ ಧ್ರುವ್‌ ಜುರೆಲ್‌ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಕೆಎಲ್‌ ರಾಹುಲ್‌ ಸೇರಿದಂತೆ ಪ್ರಮುಖ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಧುವ್‌ ಜುರೆಲ್‌, ಆಸೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು ಹಾಗೂ ಅವರು ಎದುರಿಸಿದ 186 ಎಸೆತಗಳಲ್ಲಿ 80 ರನ್‌ಗಳನ್ನು ಕಲೆ ಹಾಕಿ ಭಾರತ ʼಎʼ ತಂಡದ ಮಾನವನ್ನು ಕಾಪಾಡಿದ್ದರು. ಆ ಮೂಲಕ ಭಾರತ ʼಎʼ ಪ್ರಥಮ ಇನಿಂಗ್ಸ್‌ನಲ್ಲಿ 57.1 ಓವರ್‌ಗಳಿಗೆ 161 ರನ್‌ಗಳನ್ನು ಕಲೆ ಹಾಕಿತ್ತು.

ಧ್ರುವ್‌ ಜುರೆಲ್‌ಗೆ ಆಕಾಶ್‌ ಚೋಪ್ರಾ ಬೆಂಬಲ

“ಭಾರತ ʼಎʼ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ ಒಬ್ಬ ಹುಡುಗ ಉಳಿಸಿದ್ದಾರೆ. ಅವರ ಹೆಸರೇ ಧ್ರುವ್‌ ಜುರೆಲ್‌. ಅವರು 186 ಎಸೆತಗಳಲ್ಲಿ ಎರಡು ಸಿಕ್ಸರ್‌ ಸೇರಿದಂತೆ 80 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಕಾರಣದಿಂದ ಭಾರತ ತಂಡ 161 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಯಿತು. ಇಲ್ಲವಾದಲ್ಲಿ ಭಾರತ ತಂಡ 80 ರಿಂದ 85 ರನ್‌ಗಳ ಒಳಗೆ ಆಲ್‌ಔಟ್‌ ಆಗುತ್ತಿತ್ತು,” ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಆಕಾಶ್‌ ಚೋಪ್ರಾ ಹೇಳಿದ್ದಾರೆ.

“ಭಾರತ ಟೆಸ್ಟ್‌ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ಆಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ಇದನ್ನು ಬದಲಾವಣೆ ಮಾಡಬಾರದು. ಹಾಗಾಗಿ ನವೆಂಬರ್‌ 22 ರಂದು ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಧ್ರುವ್‌ ಜುರೆಲ್‌ ಅವರನ್ನು ಕೇವಲ ಬ್ಯಾಟ್ಸ್‌ಮನ್‌ ಆಗಿ ಆಡಿಸಬೇಕು,” ಎಂದು ಕ್ರಿಕೆಟ್‌ ಕಾಮೆಂಟೇಟರ್‌ ಸಲಹೆ ನೀಡಿದ್ದಾರೆ.

ಕೆಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಬೇಕೆಂದ ಚೋಪ್ರಾ

ವೈಯಕ್ತಿಕ ಕಾರಣದಿಂದಾಗಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಆರಂಭಿಕ ಎರಡು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆಂದು ವರದಿಯಾಗಿದೆ. ಹಾಗಾಗಿ ಭಾರತ ತಂಡದ ಆರಂಭಿಕ ಸ್ಥಾನಕ್ಕೆ ಕೆಎಲ್‌ ರಾಹುಲ್‌ ಅಥವಾ ಅಭಿಮನ್ಯು ಈಶ್ವರನ್‌ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಆದರೆ, ಆಕಾಶ್‌ ಚೋಪ್ರಾ, ಇನಿಂಗ್ಸ್‌ ಆರಂಭಿಸಲು ಕೆಎಲ್‌ ರಾಹುಲ್‌ ಸೂಕ್ತ ಆಯ್ಕೆ ಎಂದು ಹೇಳಿದ್ದಾರೆ.

“ರೋಹಿತ್‌ ಶರ್ಮಾ ಅಲಭ್ಯತೆಯಲ್ಲಿ ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಅನ್ನು ನೋಡುವುದಾದರೆ, ನೀವು ನೇರವಾಗಿ ಕೆಎಲ್‌ ರಾಹುಲ್‌ಗೆ ಸ್ಥಾನ ನೀಡಬಹುದು. ಏಕೆಂದರೆ, ಭಾರತ ತಂಡದ ಪರ ಈಗಾಗಲೇ ಇನಿಂಗ್ಸ್‌ ಆರಂಭಿಸಿದ ಅನುಭವವನ್ನು ಅವರು ಹೊಂದಿದ್ದಾರೆ ಹಾಗೂ ಅವರು ನೇರವಾಗಿ ಹೋಗಿ ರನ್‌ ಗಳಿಸಬಲ್ಲ ಆಟಗಾರರಾಗಿದ್ದಾರೆ. ಒಂದು ವೇಳೆ ರೋಹಿತ್‌ ಶರ್ಮಾ ಅಲಭ್ಯರಾದರೆ, ಅವರ ಸ್ಥಾನಕ್ಕೆ ಕೆಎಲ್‌ ರಾಹುಲ್‌ ಆಡುವುದು ಸೂಕ್ತ,” ಎಂದು ಆಕಾಶ್‌ ಚೋಪ್ರಾ ಕನ್ನಡಿಗನ ಪರ ಬ್ಯಾಟ್‌ ಬೀಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಜಸ್‌ಪ್ರೀತ್‌ ಬುಮ್ರಾ, ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ಗೆ ಆಡುವುದು ಕಷ್ಟ ಎಂದ ಜೇಸನ್‌ ಗಿಲೆಸ್ಪಿ!