Thursday, 19th September 2024

ಆಸೀಸ್‌ನ ಅಗ್ರ ಐದು ವಿಕೆಟ್ ಪತನ

ಕ್ಯಾನ್‌ಬೆರ್ರಾ: ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡ ಅಗ್ರ ಐವರು ಆಟಗಾರರನ್ನು ಕಳೆದುಕೊಂಡು ಇತ್ತೀಚಿನ ವರದಿ ಪ್ರಕಾರ, 179 ರನ್‌ ಗಳಿಸಿದೆ.

ನಾಯಕ ಆರನ್‌ ಫಿಂಚ್‌ (75)ಅವರ ಅರ್ಧಶತಕ ಹೊರತುಪಡಿಸಿ, ಇತರ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಹೊಮ್ಮಲಿಲ್ಲ. ಮೊಯ್ಸಸ್‌ ಹೆನ್ರಿಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ 20 ಆಸುಪಾಸು ರನ್ ಗಳಿಸಿ, ಔಟಾದರು. ಕಳೆದ ಎರಡು ಪಂದ್ಯಗಳ ಶತಕವೀರ ಸ್ಟೀವನ್‌ ಸ್ಮಿತ್‌ರನ್ನು ಈ ಬಾರಿ ಅಬ್ಬರಿಸಲು ಭಾರತ ಬಿಡಲಿಲ್ಲ. 7 ರನ್‌ ಗಳಿಸುವಷ್ಟರಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಲ್ರೌಂಡರುಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿತು.

ಅಗ್ರ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ(63, 78 ಎಸೆತ, 5 ಬೌಂಡರಿ)ಗಳಿಸಿ ಉತ್ತಮ ಆರಂಭ ಒದಗಿಸಿದರೆ, ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ(ಔಟಾಗದೆ 92, 76 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ರವೀಂದ್ರ ಜಡೇಜ (ಔಟಾಗದೆ 66, 50 ಎಸೆತ, 5 ಬೌಂಡರಿ, 3 ಸಿಕ್ಸರ್)ಆರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 108 ಎಸೆತಗಳಲ್ಲಿ 150 ರನ್ ಸೇರಿಸಿದರು.

ಈ ಇಬ್ಬರು ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ 21 ವರ್ಷಗಳ ಹಿಂದೆ ಭಾರತ ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿದರು. 1999ರಲ್ಲಿ ಕೊಲಂಬೊದಲ್ಲಿ ಆಸೀಸ್ ವಿರುದ್ಧ ರಾಬಿನ್ ಸಿಂಗ್ ಹಾಗೂ ಸಡಗೋಪನ್ ರಮೇಶ್ ಗಳಿಸಿದ್ದ 123 ರನ್ ದಾಖಲೆ ಯನ್ನು ಪಾಂಡ್ಯ-ಜಡೇಜ ಮುರಿದು ಮುನ್ನುಗ್ಗಿದರು. ಭಾರತದ ಮೊತ್ತವನ್ನು 300ರ ಗಡಿ ದಾಟಿಸಿದರು. ಆರನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಮಿಂಚಿದ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಇನಿಂಗ್ಸ್(92) ಆಡಿದರು.