Thursday, 19th September 2024

ಕೊನೆಯ ಪಂದ್ಯ ಗೆದ್ದ ವಿರಾಟ್‌ ಪಡೆ

ಪಂದ್ಯಶ್ರೇಷ್ಠ: ಹಾರ್ದಿಕ್ ಪಾಂಡ್ಯ

ಸರಣಿಶ್ರೇಷ್ಠ: ಸ್ಟೀವನ್ ಸ್ಮಿತ್

ಕ್ಯಾನ್‌ಬೆರ್ರಾ: ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿ ವೈಟ್‌ ವಾಶ್‌ ಸೋಲಿನಿಂದ ಪಾರಾಯಿತು.

ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಟಿ.ನಟರಾಜನ್ ಎರಡು, ಶಾರ್ದೂಲ್‌ ಠಾಕೂರ್‌ ಮೂರು ಮತ್ತು ಬುಮ್ರಾ ಅವರ ಎರಡು ವಿಕೆಟ್ ನೆರವಿನಿಂದ ಟೀಂ ಇಂಡಿಯಾ ಆಸೀಸ್‌ ಅನ್ನು 13 ರನ್ನುಗಳಿಂದ ಪರಾಭವಗೊಳಿಸಿದೆ.

ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವವರೆಗೂ ನಿಶ್ಚಿಂತೆಯಿಂದಿತ್ತು. ಈ ವಿಕೆಟ್ ಪತನವಾದ ಕೂಡಲೇ ಪ್ರವಾಸಿಗರಿಗೆ ವೈಟ್‌ ವಾಶ್ ಸೋಲುಣಿಸುವ ಅವಕಾಶದಿಂದ ವಂಚಿತವಾಯಿತು.

ನಾಯಕ ಆರನ್‌ ಫಿಂಚ್‌ (75)ಅವರ ಅರ್ಧಶತಕ ಹೊರತುಪಡಿಸಿ, ಇತರ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಹೊಮ್ಮಲಿಲ್ಲ. ಮೊಯ್ಸಸ್‌ ಹೆನ್ರಿಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ 20 ಆಸುಪಾಸು ರನ್ ಗಳಿಸಿ, ಔಟಾದರು. ಕಳೆದ ಎರಡು ಪಂದ್ಯಗಳ ಶತಕವೀರ ಸ್ಟೀವನ್‌ ಸ್ಮಿತ್‌ರನ್ನು ಈ ಬಾರಿ ಅಬ್ಬರಿಸಲು ಭಾರತ ಬಿಡಲಿಲ್ಲ. 7 ರನ್‌ ಗಳಿಸುವಷ್ಟರಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮುನ್ನ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಲ್ರೌಂಡರುಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿತು.