Saturday, 23rd November 2024

ಇಂದು ಎರಡನೇ ಚುಟುಕು ಪಂದ್ಯ: ಸರಣಿ ಗೆಲ್ಲಲು ಟೀಂ ಇಂಡಿಯಾ ಪಣ

ಸಿಡ್ನಿ: ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಭಾನುವಾರ ನಡೆಯಲಿರುವ 2ನೇ ಟಿ20 ಪಂದ್ಯ ದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಕ್ಯಾನ್‌ಬೆರಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕನ್‌ಕಷನ್ ಲಾಭ ಪಡೆದಿದ್ದ ಭಾರತ ತಂಡ 11 ರನ್‌ಗಳಿಂದ ಜಯ ದಾಖಲಿ ಸಿತ್ತು. ಆದರೆ, ಮೊದಲ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ತಂಡವನ್ನು ಕಾಡಲಿದೆ.

ಏಕದಿನ ಕ್ರಿಕೆಟ್ ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದ ಸಿಡ್ನಿ ಮೈದಾನದಲ್ಲೇ ಕಡೇ ಎರಡು ಟಿ20 ಪಂದ್ಯಗಳು ನಡೆಯಲಿವೆ. ಇದರಿಂದ ಆತಿಥೇಯ ತಂಡಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಫೇವರಿಟ್ ಕೂಡ ಆಗಿದ್ದು ಭಾರತದ ಪಾಲಿಗೆ ಸವಾಲು ಕೂಡ ಎದುರಾಗಿದೆ. ಮುಂದಿನ ವಾರ ಆರಂಭಗೊಳ್ಳಲಿರುವ 4 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಮಹತ್ವ ಪಡೆದಿದೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿದ್ದ ರವೀಂದ್ರ ಜಡೇಜಾ ಅಲಭ್ಯತೆಯಿಂದ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಜಡೇಜಾ, ಮೊದಲ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 44 ರನ್ ಸಿಡಿಸಿದ್ದರು. ಇದ ರಿಂದಾಗಿ ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಇತರ ಆಟಗಾರರಿಂದ ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ. ಪ್ರವಾಸದಲ್ಲಿ ಸಿಕ್ಕ ಮೊದಲ ಅವಕಾಶವನ್ನು ಕೈಚೆಲ್ಲಿರುವ ಕರ್ನಾಟಕದ ಮನೀಷ್ ಪಾಂಡೆ, ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮೊಹಮದ್ ಶಮಿ ಬದಲಿಗೆ ಜಸ್‌ಪ್ರೀತ್ ಬುಮ್ರಾ ಕಣಕ್ಕಿಳಿಯಬಹುದು.

ಸಿಡ್ನಿ ಮೈದಾನದಲ್ಲಿ ಏಕದಿನ ಸರಣಿಯಲ್ಲಿ ನಿರಾಸೆ ಕಂಡಿರುವ ಭಾರತ, ಅದೇ ನೆಲದಲ್ಲಿ ಪುಟಿದೇಳಬೇಕಿದೆ. ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಟಿ.ನಟರಾಜನ್, ದೀಪಕ್ ಚಹರ್ ಜೋಡಿ ಮತ್ತೊಮ್ಮೆ ಚೆಂಡು ಹಂಚಿಕೊಳ್ಳಲಿದೆ.

ಸರಣಿಯಲ್ಲಿ 0-1 ರಿಂದ ಹಿನ್ನಡೆ ಕಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ತನ್ನ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಆರಂಭಿಕ ಹಂತದಲ್ಲಿ ಡೇವಿಡ್ ವಾರ್ನರ್ ಅಲಭ್ಯತೆ ಕೂಡ ತಂಡವನ್ನು ಇನ್ನಿಲ್ಲ ದಂತೆ ಕಾಡುತ್ತಿದೆ. ಇದೀಗ ನಾಯಕ ಆರನ್ ಫಿಂಚ್ ಕೂಡ ಕಣಕ್ಕಿಳಿಯುವುದು ಅನುಮಾನವಾಗಿದೆ. ನಥಾನ್ ಲ್ಯಾನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಮಿಚೆಲ್ ಸ್ವಿಪ್‌ಮನ್ ಬದಲಿಗೆ ಕಣಕ್ಕಿಳಿಯಲಿದ್ದಾರೆ.