Friday, 20th September 2024

ಸಂವಿಧಾನದ ಮೂಲ ಆಶಯ ಏನು ?

ಅಭಿವ್ಯಕ್ತಿ

ರವಿ.ಎನ್.ಶಾಸ್ತ್ರಿ

ಸಂವಿಧಾನ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರರು ಜಾತಿ ಎಂಬ ವಿಷ ವರ್ತುಲ ನಿರ್ಮೂಲನೆ ಮಾಡಲು ಭಾರತ ಸಂವಿ ಧಾನದ ಮೂರನೇಯ ಖಂಡಿಕೆಯಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಸೇರಿಸಿ ಅನುಚ್ಛೇದ 15(4) ಮತ್ತು 16(4), ಅಭಿವೃದ್ಧಿಗೆ ಜಾತಿ ಮಾರಕವಾಗಬಾರದೆಂಬ ವಿಚಾರವನ್ನು ಹೊಂದಿದ್ದರು.

ಹಾಗೇಯೇ ಜಾತಿ – ಕುಲಗಳನ್ನು ಅಳೆದು ತೂಗಿ ಚುನಾವಣೆಯನ್ನು ನಡೆಸಬಾರದೆಂದು ಬಯಸಿದ್ದರು. ಆದ್ದರಿಂದ  ಮತದಾರ ನನ್ನು ಒಂದು ಜಾತಿ, ಮತ, ಭಾಷೆಗಳ ಗಡಿಯನ್ನು ಮೀರಿ ಕಾಣುವುದು ಮತ್ತು ಬೆಳೆಸುವುದು ಅಗತ್ಯವಿದೆ ಹಾಗೂ ಯಾವುದೇ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಇದುತೊಡಕಾಗಬಾರದೆಂದು ಅರಿತಿದ್ದರು.

ಹೀಗಾಗಿ ಮತ ಚಲಾವಣೆ ಅಮಿಷಕ್ಕೆ ಒಳಗಾಗಬಾರದೆಂದು ಆಶಿಸಿದ್ದರು. ಚುನಾವಣೆಗಳು ಬೇಕು, ಬೇಡಗಳ ಪರಿವರ್ತನೆ. ಬದಲಾವಣೆ ಗನುಗುಣವಾಗಿ ಮತದಾರ ತನ್ನ ಮತ ಚಲಾವಣೆ ಮಾಡುವ ಮುಖಾಂತರ ಸೂಕ್ತ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ತನ್ನ ಸಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂಬುದಾಗಿತ್ತು. ಆದರೆ, ಸ್ವತಂತ್ರ ಸಿಕ್ಕು ಇಷ್ಟು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೆ ಸರಕಾರವನ್ನೇ ನೆಚ್ಚಿ ಕೂಡುವ ಪರಿಸ್ಥಿತಿಯಿಂದಾಗಿ ಮತದಾರ ತನ್ನನ್ನೆ
ತಾನು ಆಮಿಷಗಳಿಗೆ ಬಲಿಪಶು ಆಗಿ ತನ್ನ ಮತವನ್ನು ಪೂರ್ವನಿಯೋಜಿತ/ಪೂರ್ವಾಗ್ರಹ ಪೀಡಿತ, ಸ್ವಯಂಘೋಷಿತ ರಕ್ಷಕರಿಗೆ ಅರ್ಪಣೆ ಮಾಡುವ ಸ್ಥಿತಿ ತಲುಪಲು ಬಲಿಪಶುವಾಗಿದ್ದಾನೆ ಎನ್ನಬಹುದಾಗಿದೆ.

ಹೀಗಾಗಿ ಈ ಸಮ್ಮೋಹನಗಳ ಸಂಕೋಲೆಗಳನ್ನು ತೊರೆದು ಸ್ವತಂತ್ರವಾಗಿ ಮತಚಲಾಯಿಸಲು ಅವನಿಗೆ ಈ ಸಮಯ ಅವಕಾಶ ನೀಡಲೊಲ್ಲದು ಎಂಬುದನ್ನು ಮನಗಾಣ ಬೇಕಾಗಿದೆ. ಹೌದು, ಈ ಬದಲಾದ ಪರಿಸ್ಥಿತಿಗತಿಗನುಗುಣವಾಗಿ ಒಂದಿಲ್ಲೊಂದು ಹೊಸ ಆಮಿಷಗಳನ್ನು ಮತದಾರನ ಮೇಲೆ ಹೊಸ ಆಮಿಷ, ವರಸೆಗಳ ವ್ಯಾಪಾರೀಕರಣ ನಿಲ್ಲುವುದೆಂತು. ಇಲ್ಲಿ ಯಾವುದೇ
ರಾಜಕೀಯ ಪಕ್ಷಗಳನ್ನು ದೂರುವುದಕ್ಕಿಂತ ಯಾವ ಪಕ್ಷ ಚೆನ್ನಾಗಿ ವ್ಯಾಪಾರೀಕರಣ ಮಾಡಬಲ್ಲದು ಎಂಬುದು ಆ ಪಕ್ಷಗಳ ಅಧಿಕಾರ ನಿರ್ಧರಿತಗೊಳ್ಳುತ್ತಿದೆ.

ಸ್ವತಂತ್ರದ ನಂತರ ಬಡತನ, ದಾರಿದ್ರ್ಯ, ಸ್ತ್ರೀ ಸಬಲೀಕರಣ, ಶಿಶು ಅಭಿವೃದ್ಧಿ, ಸೂಚಿತ ಜಾತಿ, ಬುಡಕಟ್ಟುಗಳ ಅಭಿವೃದ್ಧಿ, ಮುಂತಾದ ವಿಷಯಗಳು ಚುನಾವಣೆಗೆ ಪ್ರಣಾಳಿಕಾ ವಿಷಯಗಳಾಗಿದ್ದರೆ, ಜಾಗತೀಕರಣ ಪರಿಣಾಮದಿಂದಾಗಿ ಸಮಾನತೆಗಳ ಹಕ್ಕಿಗಾಗಿ, 70ರಿಂದ 2000ನೇ ಇಸವಿವರೆಗೆ ದೊಡ್ಡ ಆಂದೋಲನಗಳು ನಡೆದು, ಭೂ ಸುಧಾರಣೆಗಾಗಿ ಮಹತ್ವದ ಮತ್ತು ದಿಟ್ಟ
ವಿಷಯಗಳು ರಾಜಕೀಯ ಪಕ್ಷಗಳ ಚುನಾವಣೆಗಳ ಪ್ರಣಾಳಿಕೆಗಳಾಗಿದ್ದವು.

ಮಂಡಲ್ ಕಮೀಷನ್ ಜಾರಿಯ ಉದ್ದೇಶ ಹಿಂದುಳಿದ ಸಮುದಾಯಕ್ಕೆ ನ್ಯಾಯ ಕೊಡಿಸುವ ಉದ್ದೇಶದಿಂದಲೇ ಬದಲಾವಣೆಗೆ ತರಲಾಯಿತು. ಅದೇ 90ರ ದಶಕದಲ್ಲಿ ಜಾಗತೀಕರಣ ಉಲ್ಬಣಗೊಂಡು ಕೃಷಿಯಲ್ಲಿ ಹೈಬ್ರಿಡ್ ಬೀಜಗಳ ಪರಿಣಾಮದಿಂದಾಗಿ ಆರ್ಥಿಕ ಸ್ವಾವಲಂಬನೆಯ ವಿಷಯಗಳು ಚುನಾವಣೆಗಳ ಪ್ರಣಾಳಿಕೆಗಾಗಿ ಹೊರಬರಲಾರಂಭಿಸಿದ್ದವು. ಆದರೆ ಚಿಕ್ಕ – ಚಿಕ್ಕ
ಸಮುದಾಯಗಳ ಆಶೋತ್ತರಗಳಾದ, ಶಿಕ್ಷಣ, ಆರೋಗ್ಯ, ಭೂರಹಿತರಿಗೆ ಭೂಮಿ ಒದಗಿಸುವುದು ಚುನಾವಣೆ ಪ್ರಣಾಳಿಕೆಗಳಾಗಿರ ಲಿಲ್ಲ.

ಇದೇ ಸಂದರ್ಭದಲ್ಲಿ ಪರ್ಯಾಯವಾಗಿ ಜಾಗತೀಕರಣದ ಪರಿಣಾಮದಿಂದಾಗಿ ಕೃಷಿಕರು, ಕಾರ್ಮಿಕರು, ಮತದಾರರಾಗಿ ಕಂಡದ್ದು, ಹೀಗಾಗಿ ಯೇ 90ರ ದಶಕದ ಸಂದರ್ಭದಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಸ್ಥಿತಿಗತಿಗಳ ಸುಧಾರಣೆ
ಗಳಿಗಾಗಿ ಹುಟ್ಟಿಕೊಂಡಿದ್ದು, ಹಾಗೇ ಇದೇ ಸಂದರ್ಭದಲ್ಲಿ ಕಾರ್ಮಿಕ ನಾಯಕರಾದಂಥ ಜಾರ್ಜ್ ಫರ್ನಾಂಡೀಸ್, ಮಧು ದಂಡವತೆ, ಮುಂತಾದ ನಾಯಕರು ರಾಷ್ಟ್ರದ ರಾಜಕೀಯದಲ್ಲಿ ಮುಂಚೂಣೆಯಲ್ಲಿ ಕಂಡುಬಂದಿರುವುದು. ಇದೇ ವಿಷಯದಡಿ ಯಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಕಮ್ಯುನಿಸ್‌ಟ್‌ ಸರಕಾರ ಬೇರೂರಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳ ಬೇಕಾಗಿದೆ.

ಮಹಾತ್ಮ ವಿನೋಬಾ ಭಾವೆಯವರು ಭೂದಾನ ಚಳವಳಿಗಳು ಸಾಕಷ್ಟು ಸದ್ದು ಮಾಡಿದ್ದರು. ದಕ್ಷಿಣದ ಭೂರಹಿತ ಸಣ್ಣ ಸಮುದಾಯಗಳನ್ನು ಅವು ಮುಟ್ಟಲಿಲ್ಲ. ಕೃಷಿ ಪ್ರಧಾನ ದೇಶ ನಮ್ಮದಾಗಿದ್ದರೂ ಕೇವಲ ಕೃಷಿ ವಿಷಯಾಧಾರಿತ ರೈತ, ಕೃಷಿಕ ಮತ್ತು ಕೃಷಿಕೂಲಿ ಮತದಾರರನ್ನು ಗಂಭೀರವಾಗಿ ಕಾಣಲಿಲ್ಲವೆಂಬುದು, ಜಯಪ್ರಕಾಶ ನಾರಾಯಣ, ಉತ್ತರ ಪ್ರದೇಶದಿಂದ
ಟಿಕಾಯಿತ, ಹರಿಯಾಣದಿಂದ ದೇಲಾಲ್ ಚೌತಲಾ ಕುಟುಂಬ, ಕರ್ನಾಟಕದಲ್ಲಿ, ಎಂ.ಡಿ.ನಂಜುಂಡ ಸ್ವಾಮಿಯವರಂಥವರು ತಮ್ಮ ದಿಟ್ಟ ಹೋರಾಟಕ್ಕೆ ಜಾಗತಿಕ ಮನ್ನಣೆ ನೀಡುವಲ್ಲಿ ಸಫಲರಾಗಿದ್ದರೂ ಸಹಿತ ಈ ವಿಷಯವನ್ನು ಮತಗಳಾಗಿ ಉಳಿಸಿ ಕೊಳ್ಳಲಿಲ್ಲವೆಂಬುದು ಮತ್ತು ಸಣ್ಣ ಸಮುದಾಯಗಳ ಧ್ವನಿ ಆಗಲಿಲ್ಲವೆಂಬುದು ಹಾಗೂ ರಾಜ್ಯದಲ್ಲಿ ಶೇಕಡಾವಾರು ಕೃಷಿ ಜಮೀನು ಗಳಿರುವುದು ಯಾವ ಸಮುದಾಯಗಳಲ್ಲಿ, ಯಾವ ಸಮುದಾಯಕ್ಕೆ ಅಭದ್ರತೆ ಕಾಡುತ್ತಿದೆ ಎಂಬುದನ್ನು ಅರಿತು ಕೊಳ್ಳುವುದು ಅನಿವಾರ್ಯವಾಗಿದೆ.

ಇಲ್ಲಿ ಭೂ ಸುಧಾರಣಾ ಕಾನೂನನ್ನು ಜಾರಿ ಮಾಡುವ ಸಂದರ್ಭದಲ್ಲಿ ಈ ಚಿಕ್ಕ ಚಿಕ್ಕ ಸಮುದಾಯಗಳಿಗೆ ಅನ್ಯಾಯ ಮಾಡಲಾ ಗಿದೆ. ದೊಡ್ಡ ಮೀನನ್ನು ಸಣ್ಣ ಮೀನನ್ನು ಒಂದೇ ಹೊಂಡದಲ್ಲಿ ಬಿಟ್ಟು ಸಂರಕ್ಷಿಸಿದಂತೆ ಎಂಬುದನ್ನು ತಿಳಿಯ ಬೇಕಾಗಿದೆ. ಯಾಕೆಂದರೆ ಬಹುಸಂಖ್ಯಾತ ಸಮುದಾಯ, ಜಾತಿಗಳು ತಮ್ಮವರಿಂದ, ತಮ್ಮವರಿಗಾಗಿ ತಮ್ಮದೇ ಸರಕಾರಗಳನ್ನು ರಚಿಸಿಕೊಂಡು ಬಿಟ್ಟರೆ, ಬೇರೆ ಇನ್ನುಳಿದ ಇನ್ನೂ ಮೂಲ ಸೌಕರ್ಯಕ್ಕಾಗಿ ಸರಕಾರವನ್ನೇ ನೆಚ್ಚಿ ಕುಳಿತ ಸಣ್ಣ ಸಣ್ಣ ಜಾತಿ, ಸಮುದಾಯಗಳು ಅಭಿವೃದ್ಧಿ ಕಾಣುವುದೆಂತು?.

ಹಾಗಾದರೆ ! ಕಾಡಂಚಿನಲ್ಲೋ, ಗುಡ್ಡದ ಮೇಡು ಬಂಜರು ಭೂಮಿಯನ್ನು ನೆಚ್ಚಿಕ್ಕೊಂಡ ಅನೇಕ ಚಿಕ್ಕ ಚಿಕ್ಕ ಸಮುದಾಯಗಳು ರಾಜ್ಯಾದ್ಯಂತ ಕ್ಷೇತ್ರವಾರು ಚದುರಿಹೋಗಿ ಆಯಾಕ್ಷೇತ್ರಗಳಲ್ಲಿ ಓಲೈಕೆ ಮಾಡುವಷ್ಟು ಸಂಖ್ಯೆಯನ್ನು ಹೊಂದಿರದ
ಮತದಾರರ ಪಾಡೇನು? ಇನ್ನೂ ರಾಜ್ಯದ ಮೀಸಲಾತಿಯಲ್ಲಿ ಪ್ರಥಮ ಕೆಟಗೆರಿಯಲ್ಲಿ ಬರುವ ಯಾದವ, ಗೊಲ್ಲ, ಹಣಬರ,
ಹನಬರು, ಗೋಪಾಲ, ಗೋಪಾಲಿ, ಗೌಳಿ, ಗ್ಲಾ, ಗಾವಲಿ, ಅಲೆಮಾರಿಗೊಲ್ಲ, ಅನುಬರು, ಅಟಾನುಬ್ರು, ಕೃಷ್ಣ ಗೌಳಿ, ಕೃಷ್ಣಗೊಲ್ಲ, ಮುತಾದ ಉಪ – ಸಮುದಾಯಗಳು ಮತದಾರನಾಗಿ ಪರಿಗಣಿಸಲ್ಪಟ್ಟು ಅಭಿವೃದ್ಧಿ ಕಾಣುವುದೆಂತು?.

ಈಗಾಗಲೇ ಚಾಲ್ತಿಯಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಆಗಲೀ ದೇವರಾಜ ಅರಸು ಅಭಿವೃದ್ಧಿ ನಿಗಮ ತನ್ನ
ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿಲ್ಲ. ಮೈಸೂರು ಅರಸರ ಆಗ್ರಹ ಅಷ್ಟೇ ಅಲ್ಲದೆ ಎಲ್.ಜಿ.ಹಾವನೂರ್, ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳ ವರದಿಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಕರ್ನಾಟಕ ಸರಕಾರವು, ಈಗಾಗಲೇ ಮರಾಠ ಸಮುದಾಯ ಆಭಿವೃದ್ಧಿ ನಿಗಮಮಾಡಿ ಅನುದಾನ ಘೋಷಿಸಿದೆ. ಅದರಂತೆ ವೀರಶೈವ – ಲಿಂಗಾಯತ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 500 ಕೋಟಿಯಷ್ಟು ಅನುದಾನ ಮೀಸಲಿಟ್ಟಿದೆ.

ಸಾಮಾಜಿಕ – ಶೈಕ್ಷಣಿಕ, ಅತಿ ಹಿಂದುಳಿದ ಚಿಕ್ಕಸಮುದಾಯಗಳನ್ನು ಹೊರಗಿಟ್ಟಿರುವುದು ಮತ್ತು ಸಮಗ್ರ ಗೊಲ್ಲ ಅಭಿವೃದ್ಧಿ ಯನ್ನು ಸ್ಥಾಪನೆಗೆ ಮುಂದಾಗದಿರುವುದು ನೋವಿನ ಸಂಗತಿಯಾಗಿದೆ. ಈ ಸಮುದಾಯಗಳು ಅತ್ತ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಗಳಲ್ಲಿ ಸಾಂವಿಧಾನಿಕ ಸ್ಟೇಟಸ್ ಸೇರದೆ, ಇತ್ತ ರಾಜ್ಯಾದ್ಯಂತ ಚದುರಿ ಹೋಗಿರುವುದರಿಂದ ಕ್ಷೇತ್ರವಾರು ನಿರ್ಣಾಯಕ ಮತದಾರ ಸ್ಥಾನವನ್ನು ಪಡೆಯದೆ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ವಂಚಿತ ಸಮುದಾಯಗಳಾಗಿ ಹಾಗೆಯೇ ಉಳಿದಿವೆ. ಈ ಸಮುದಾಯಗಳಿಗೆ ನ್ಯಾಯ ಒದಗಿಸುವವರ್ಯಾರು?.

ಇಂತಹ ಸಮುದಾಯಗಳನ್ನು ಚುನಾವಣೆ ಸಂದರ್ಭದಲ್ಲಿ ಒಡೆಯುವುದು ಗಾಯದ ಮೇಲೆ ಬರೆ ಎಳೆದಂತೆಯೇ ಸರಿ. ಇಂತಹ ಸಣ್ಣ ಸಮುದಾಯಗಳಿಗೆ ಮೊದಲು ಅಗತ್ಯ ನೀಡಬೇಕಾದುದು ಮತ್ತು ತುರ್ತು ನಿಗಮ – ಮಂಡಳಿಗಳ ರಚನೆ ಮಾಡಿ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಒದಗಿಸಬೇಕಾಗಿರುವುದು ಇಲ್ಲಿ. ಬಲಿಷ್ಠನಿಗೆ ಮಾತ್ರ ಬದುಕು ಎಂಬುದಾಗಬಾರದು. ಮತಗಳಿಸುವ ಗಣಿತದಲ್ಲಿ ಬಡ ಮತ್ತು ಅಭದ್ರ ಸಮುದಾಯಗಳ ಅಲಕ್ಷ್ಯ ಧೋರಣೆ ಸಲ್ಲದು. ಕೆಲ ಸಮುದಾಯಗಳಿಗೆ ಸ್ವತಂತ್ರ ಸಿಕ್ಕು ಇಷ್ಟು ವರ್ಷಗಳು ಕಳೆದರೂ ಅಭದ್ರತೆ ಕಾಡುತ್ತಿದೆ.  ಹಾಗಾದರೆ ಸಂವಿಧಾನದ ಮೂಲ ಆಶಯ ಏನು?.