ಒಂದೊಳ್ಳೆ ಮಾತು
ರೂಪಾ ಗುರುರಾಜ್
ಯಾವುದೋ ಕಾರ್ಯ ನಿಮಿತ್ತ ದಂಪತಿಗಳು ತಮ್ಮ ಪುಟ್ಟ ಮಗುವೊಂದನ್ನು ಮನೆಯಲ್ಲಿಯೇ ಬಿಟ್ಟು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು
ಮುಳುಗುತ್ತಲಿದೆ. ಹಡಗಿನಲ್ಲಿರುವ ಎಲ್ಲರೂ ಲೈಫ್ ಬೋಟ್ಗೆ ಜಿಗಿದು ಹೋಗುತ್ತಿದ್ದಾರೆ. ಆ ಲೈಫ್ ಬೋಟ್‌ನಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ
ಸ್ಥಳಾವಕಾಶವಿದೆ. ಮುಳುಗುತ್ತಿರುವ ಹಡಗಿನಲ್ಲಿ ಈ ದಂಪತಿಗಳು ಮಾತ್ರ ಉಳಿದಿದ್ದರು, ಇಬ್ಬರಲ್ಲಿ ಒಬ್ಬರು ಮಾತ್ರ ಲೈಫ್ ಬೋಟ್‌ಗೆ
ಹೋಗಬಹುದು. ಇಬ್ಬರೂ ಯೋಚಿಸುತ್ತಿದ್ದಾರೆ, ಇದ್ದಕ್ಕಿದ್ದಂತೆ ಪತಿ ತನ್ನ ಹೆಂಡತಿಯನ್ನು ಮುಳುಗುವ ಆ ಹಡಗಿನಲ್ಲಿ ಬಿಟ್ಟು ಲೈಫ್ ಬೋಟ್ಗೆ
ಹಾರಿಯೇ ಬಿಟ್ಟ!
ಹೆಂಡತಿ ಹಿಂದಿನಿಂದ ಕೂಗುತ್ತಾ ಏನೋ ಹೇಳುತ್ತಿದ್ದಾಳೆ…, ತರಗತಿಯಲ್ಲಿ ಈ ಕಥೆ ಹೇಳುತ್ತಿದ್ದ ಶಿಕ್ಷಕರು ಇಲ್ಲಿಗೆ ಕಥೆ ಹೇಳುವುದನ್ನು ನಿಲ್ಲಿಸಿದರು. ‘ಆ ಪತ್ನಿ ತನ್ನ ಪತಿಯೊಂದಿಗೆ ಏನು ಹೇಳಿರಬಹುದೆಂದು ನಿಮ್ಮಲ್ಲಿ ಯಾರಾದರೂ ಹೇಳುವಿರಾ?’ ಎಂದು ಶಿಕ್ಷಕರು ವಿದ್ಯಾರ್ಥಿಗಳನ್ನು
ಕೇಳಿದರು. ಆಗ ಎಲ್ಲ ‘ಮಕ್ಕಳು ನೀನು ಎಂತಹ ಮೋಸ ಮಾಡಿದೆ, ನಾನು ನಿನ್ನನ್ನು ಕುರುಡಾಗಿ ನಂಬಿದ್ದೆ ಎಂದು ಹೇಳಿರಬಹುದು’ ಎಂದರು.
ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಮೌನವಾಗಿ ಕುಳಿತಿದ್ದ. ‘ನೀನು ಏನು ಹೇಳುತ್ತೀಯ?’ ಎಂದು ಗುರುಗಳು ಅವನನ್ನು ಕೇಳಿದರು.
‘ನಮ್ಮ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿರಬಹುದು’ ಎಂದ. ಟೀಚರ್ ಕಣ್ಣಲ್ಲಿ ಆಶ್ಚರ್ಯ, ‘ಈ ಕಥೆ ನಿನಗೆ ಮೊದಲೇ ಗೊತ್ತಿತ್ತಾ?’ ಅವನು ತಲೆ ಅಡಿಸಿದ, ‘ಇಲ್ಲ, ಈ ಕಥೆ ನನಗೇನು ಗೊತ್ತಿರಲಿಲ್ಲ, ನನ್ನ ತಾಯಿ ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದಾಗ ನನ್ನ ತಂದೆಗೆ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೆ, “ನಮ್ಮ ಮಗು ಹುಷಾರು, ಅವನನ್ನು ಚೆನ್ನಾಗಿ ಪೋಷಿಶಿ, ಬೆಳೆಸಿರಿ,..”’ ಈ ವೇಳೆ ಶಿಕ್ಷಕರ ಕಣ್ಣಲ್ಲಿ ನೀರು ತುಂಬಿತು. ಈ ಕಥೆಯಲ್ಲಿ ಹೆಂಡತಿ ಕೂಡ ಅದನ್ನೇ ಹೇಳಿದ್ದು, ನಿನ್ನ ಉತ್ತರ ಸರಿಯಾಗಿದೆ ಎಂದು ಶಿಕ್ಷಕರು ಹೇಳಿದರು.
ಈ ಕಥೆಯ ವಿಚಾರಕ್ಕೆ ಬಂದರೆ, ಆ ಗಂಡ ಮನೆ ತಲುಪಿ ತಮ್ಮ ಮಗಳನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಾನೆ, ಆಕೆಗೆ ಒಳ್ಳೆಯ ಶಿಕ್ಷಣ
ಕೊಡಿಸಿ, ಮದುವೆ ಮಾಡಿಸಿ ಒಳ್ಳೆಯ ಜೀವನ ನೀಡಿ ಒಂದು ದಿನ ಕಣ್ಣು ಮುಚ್ಚುತ್ತಾನೆ. ನಂತರ ಒಂದು ದಿನ ಮಗಳು ಅಪ್ಪನ ಸಾಮಾನುಗಳನ್ನು ಜೋಡಿಸಿ ಒಪ್ಪವಾಗಿ ಒಂದು ಪಕ್ಕದಲ್ಲಿ ಇಡುತ್ತಿರುವಾಗ ತಂದೆಯ ದಿನಚರಿ(bZಜ್ಟಿqs) ಕಂಡುಬಂದಿತು ಕುತೂಹಲ ತಾಳಲಾರದೆ ಅದನ್ನು ತೆಗೆದು ಓದತೊಡಗಿದಳು, ಅದರಲ್ಲಿ ಅವರು ತಮ್ಮ ಹೆಂಡತಿಗೆ ಅಂದರೆ ಇವಳ ಅಮ್ಮನಿಗೆ ಬರೆದಿದ್ದರು, ‘ನಿನ್ನ ಜೊತೆಯಲ್ಲಿ ಹಡಗಿನಲ್ಲಿ ನಿನ್ನೊಂದಿಗೆ ಮುಳುಗಿ ನಿನ್ನೊಡನೆ ಶಾಶ್ವತವಾಗಿ ಇರಬೇಕೆಂದು ನನಗೆ ಅನಿಸಿತು, ಆದರೆ ನಮ್ಮ ಈ ಪುಟ್ಟ ಕಂದನನ್ನು ಯಾರು ನೋಡಿಕೊಳ್ಳು ತ್ತಾರೆ!? ನಿನ್ನನ್ನು ಆ ಲೈಫ್ ಬೋಟಿಗೆ ಕಳುಹಿಸಿ ನಿನ್ನನ್ನು ಉಳಿಸೋಣವೆಂದರೆ ನಿನಗಿರುವ ಮಾರಣಾಂತಿಕ ಕಾಯಿಲೆ ಕೊನೆಯ ಹಂತದಲ್ಲಿದೆ, ನೀನು ಆಗಲೇ ಸಾವಿನ ಅಂಚಿನಲ್ಲಿದ್ದೆ, ಅದಕ್ಕಾಗಿಯೇ ನಾನು ಲೈಫ್ ಬೋಟ್‌ಗೆ ಹಾರಿದೆ, ಏಕೆಂದರೆ ನಾನು ಆ ಕ್ಷಣದಲ್ಲಿ ಇನ್ನೂ ಯೋಚಿಸಿದರೆ ನಾನು ದುರ್ಬಲನಾಗುತ್ತೇನೆ.
ನನ್ನ ಹೃದಯದಲ್ಲಿ ಅದೆಷ್ಟು ನೋವಿದೆಯೆಂದು ನಿನ್ನನ್ನು ಹೊರತುಪಡಿಸಿ ಯಾರಿಗೂ ಅರ್ಥವಾಗುವುದಿಲ್ಲ’ ಎಂದು ಅವನು ತನ್ನ ಡೈರಿಯಲ್ಲಿ ತನ್ನ ಹೆಂಡತಿಗೆ ಬರೆದಿದ್ದನು. ನಾವುಗಳು ಸಾಮಾನ್ಯವಾಗಿ ಮೇಲ್ನೋಟಕ್ಕೆ ಕಂಡ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಮತ್ತೊಬ್ಬರ ಜೀವನ ವನ್ನು ಅಳೆದುಬಿಡುತ್ತೇವೆ. ನಮ್ಮ ಕಣ್ಣಿಗೆ ಕಾಣುವ ವಿಚಾರಗಳು ನಮ್ಮ ದೃಷ್ಟಿಕೋನದಿಂದ ಸರಿಯಾಗಿರಬಹುದು. ಆದರೆ ಅವರ ಜೀವನದ ದೃಷ್ಟಿಕೋನದಿಂದ ನೋಡಿದಾಗ ಅದು ಬೇರೆಯಾಗಿ ಕಾಣುತ್ತದೆ. ಆದ್ದರಿಂದಲೇ ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ತಿಳಿದುಕೊಳ್ಳು ವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಅನಗತ್ಯವಾಗಿ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬೇಡಿ ತಾಳ್ಮೆ
ಇದ್ದಲ್ಲಿ ನೆಮ್ಮದಿ ಇರುತ್ತದೆ.
ಇದನ್ನೂ ಓದಿ: #RoopaGururaj