Thursday, 19th September 2024

ಬರೆಯಬೇಕೆನ್ನುವವನು, ಇನ್ನೊಬ್ಬರದನ್ನು ಓದಬೇಕು

ಪ್ರಾಣೇಶ್‌ ಪ್ರಪಂಚ 

ಗಂಗಾವತಿ ಪ್ರಾಣೇಶ್

ಕರೋನಾ ಗೃಹಬಂಧನದಲ್ಲಿ ಇಡೀ ಜಗತ್ತಿನ ಜನತೆ ಕಂಗಾಲಾಗಿರುವುದು ನಿಜವಾದರೂ, ಅನೇಕ ಪಾಠಗಳನ್ನು ಕಲಿಸಿದ್ದು, ಅನೇಕ ಗಂಡಸರು ಮನೆಯ ನಾಲ್ಕು ಗೋಡೆ ಮಧ್ಯೆ ಸೈಕಿಕ್ ಆಗಿದ್ದು ನಿಜ. ಆದರೆ ನಟರು, ನಾಟ್ಯಗಾರರು, ಲೇಖಕರು, ಸಂಗೀತ ಗಾರರು ತಮ್ಮ ಇಂತಹ ವೃತ್ತಿಗಳನ್ನು ಚಾಲೆಂಚ್ ಆಗಿ ತೆಗೆದುಕೊಂಡು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿರಲಿಕ್ಕೂ ಸಾಕು, ಅಂಥವರಿಗೆ ನನ್ನ ವಂದನೆಗಳು.

ನಾನು ಮಾತ್ರ ನನಗಿಷ್ಟವಾದ ಓದಿನಲ್ಲಿಯೇ ಈ ಎಂಟು ತಿಂಗಳು ಕಳೆದೆ. ಶ್ರೀವತ್ಸ ಜೋಶಿಯವರ ಐದು ಪುಸ್ತಕಗಳನ್ನು
ತರಿಸಿಕೊಂಡು ಓದಲಾರಂಭಿಸಿದೆ. ಈಗ್ಗೆ ಕೆಲವು ವಾರದ ಹಿಂದೆ ಹಿರಿಯರಾದ ಗ.ನಾ ಭಟ್ಟರ ಕೃತಿಗಳನ್ನು ಓದಿ, ಅವರ ಲೇಖನ
ಶೈಲಿಯನ್ನು ಮೆಚ್ಚಿ ನನ್ನ ವಾರದ ಅಂಕಣಕ್ಕೆ ಲೇಖನವನ್ನು ಬರೆದೆ. ಈ ಶ್ರೀವತ್ಸ ಜೋಶಿಯವರ ಪುಸ್ತಕಗಳ ಆಕರ್ಷಣಾ ಅಂಶ ಗಳನ್ನು ಹೇಳಬೇಕೆನಿಸಿತು.

ಪ್ರತಿವಾರ ನಾಲ್ಕು ಕಾಲಂ ಬರೆಯಲು ತಿಣುಕಾಡುವ ನನಗೆ ಶ್ರೀವತ್ಸ ಜೋಶಿಯವರ ಆಯ್ಕೆಯ ವಿಷಯಗಳನ್ನು ನೋಡಿ, ಓದಿ ದಂಗಾಗಿ ಕೂರುತ್ತೇನೆ. ಊಹೆಗೂ ನಿಲುಕದ ಸಣ್ಣ ಸಣ್ಣ ವಿಷಯಗಳೆಂದು ನಾನು ಬಿಟ್ಟಿದ್ದನ್ನು ಅದರಲ್ಲಿರುವ ಮಹತ್ ತತ್ತ್ವಗಳನ್ನು ತೋರುವ ಮೂಲಕ ಶ್ರೀವತ್ಸ ಜೋಶಿ ನನ್ನನ್ನು ದಿಗ್ಭ್ರಮೆಗೊಳಿಸಿದ್ದಾರೆ. ಅವರ ತಿಳಿರು ತೋರಣ ವರ್ಣಮಾಲೆಯ ಐದು ಪುಸ್ತಕಗಳೂ, ಅದರಲ್ಲಿನ ಹೊಸ ಹೊಸ ವಿಷಯಗಳೇ ನನ್ನನ್ನು ‘ಬರೆಯಬೇಕೆನ್ನುವವನು ಹೀಗೆ ಹುಡುಕಿ, ಕೆದಕಿ, ಬೆದಕಿ
ಬರೆಯಬೇಕು’ ಎನಿಸುವಂತಾಗಿದೆ.

ಶ್ರೀವತ್ಸರ ಬರಹಗಳ ಓದುವಿಕೆ, ಅದೊಂದು ಕುಳಿತಲ್ಲೇ ಪ್ರಪಂಚ ಸುತ್ತುವವರ ಸಾಲಿಗೆ ಸೇರುವಂತಹದು. ತರಕಾರಿ ಹೇಗೆ ಹೆಚ್ಚಿದರೆ ರುಚಿಕಾರಿ? ಎಂಬ ಲೇಖನದಿಂದ ಹಿಡಿದು ‘ಪುರಾಣನಾಮ ಚೂಡಾಮಣಿ’ ವರೆಗೆ ಇವರು ಬರೆದಿರುವ ಲೇಖನಗಳನ್ನೆಲ್ಲ ಅಕ್ಷರಗಳನ್ನು ಕಲಿತ ಕೂಡಲೇ ಓದಲಾರಂಭಿಸಿದರೆ, ಒಬ್ಬ ವ್ಯಕ್ತಿ ಮುಂದೆ ಶಾಲೆ, ಕಾಲೇಜು, ಡಿಗ್ರಿ, ಪಿಎಚ್.ಡಿ ಯಾವುದನ್ನೂ ಒಲ್ಲೆ ಇಷ್ಟೆಲ್ಲಾ ಓದಿದ ಮೇಲೆ ಅಲ್ಲೆಲ್ಲಾ ಹೊಸದು ಕಲಿಸಲು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬರುತ್ತಾನೆ ಮತ್ತು ಇದನ್ನೆಲ್ಲಾ ಅಲ್ಲಿ ಕಲಿಸುವುದೂ ಇಲ್ಲ ಎಂದು ನನ್ನಂತೆ ನಿರ್ಣಯಕ್ಕೆ ಬಂದರೂ ಆಶ್ಚರ್ಯವಿಲ್ಲ.

ಓದು, ಅನುಭವ, ಮಾಹಿತಿ, ಪ್ರಯೋಗ, ಕುತೂಹಲ, ಅಚ್ಚರಿ ಹುಟ್ಟಿಸುವ ಈ ಐದು ವರ್ಣಮಾಲೆಗಳಲ್ಲಿ ನೂರಾರು ಲೇಖನಗಳ
ಸಮೃದ್ಧ ಮಾಹಿತಿ ಇದೆ. ಓದಿದ ಮೇಲೆ ಓದಿನಿಂದ ಎಚ್ಚರಗೊಂಡು, ಮೈ ಮುರಿದು ಸುತ್ತಲೂ ನೋಡಿದರೆ, ಲೇಖನಗಳ ಪಾತ್ರ ಗಳೇ ಅಲ್ಲಿನ ಪರಿಸರವೇ ನಮ್ಮ ಸುತ್ತಲೂ ಎನ್ನುವಂತೆ ಭಾಸವಾಗುವಂಥ ವಿಶಿಷ್ಟ ರಂಜನೀಯ ಶೈಲಿ, ಇಂತಹವುಗಳನ್ನು ಶಾಲಾ, ಕಾಲೇಜು, ಯೂನಿವರ್ಸಿಟಿಗಳಿಗೆ ಪಠ್ಯ ಪುಸ್ತಕಗಳನ್ನಾಗಿ ಮಾಡಿದರೆ, ವಿದ್ಯಾರ್ಥಿಗಳು ಹಿಡಿದ ಪುಸ್ತಕವನ್ನು ಕೆಳಗಿಡಲಾರರು.

ಪರೀಕ್ಷೆಯಲ್ಲಿ ಉತ್ತರಗಳನ್ನು ಕುಣಿಯುತ್ತಾ ಬರೆದಾರು,  ಓದಿದ್ದನ್ನು ಇನ್ನೊಬ್ಬರಿಗೆ ಹೇಳುತ್ತಾ, ಹಂಚಿಕೊಳ್ಳುತ್ತಾ, ಉಪಾಧ್ಯಾಯ ರೋ, ಭಾಷಣಕಾರರೋ ಆದಾರು ಎನಿಸಿತು. ಶ್ರೀವತ್ಸ ಜೋಶಿ ಎಂದರೆ ನನ್ನ ಕಣ್ಣು ಕೂಡಲೇ ಮೊದಲ ಬಾರಿಗೆ ಆ ಹೆಸರಿನತ್ತ ಕಣ್ಣರಳಿಸಿ ನೋಡಿಬಿಟ್ಟಿತು. ಕಾರಣ ನಾನು ಶ್ರೀವತ್ಸ ಗೋತ್ರದವನು. ನಮ್ಮ ಮನೆಗೆ ಅಳಿಯಂದಿರಾಗಿ ಬಂದಿರುವವರಲ್ಲಿ ಇಬ್ಬರು ಜೋಶಿಗಳಿದ್ದಾರೆ. ನಮ್ಮ ಚಿಕ್ಕಮ್ಮನ ಗಂಡ ದಿ|| ಮಧುಸೂಧನಾಚಾರ್ ಜೋಶಿ, (ಇವರು ನಿವೃತ್ತ ಸೇನಾ ಯೋಧರಾ ಗಿದ್ದು, ಈಗ ನಮ್ಮೊಂದಿಗಿಲ್ಲ) ಇನ್ನು ಇನ್ನೊಬ್ಬರು ನಮ್ಮ ಚಿಕ್ಕಪ್ಪನ ಮಗಳು, ಅಂದರೆ ನನ್ನ ತಂಗಿಯ ಪತಿಯವರಾದ ಶ್ರೀ ಉದಯ ಜೋಶಿ, ಇವರು ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಗಳು.

ಹೀಗಾಗಿ ಗೋತ್ರ ಮತ್ತು ಅಳಿಯತನದ ಬೀಗಸ್ತನ ಎರಡೂ ನೆನಪಾಗುವುದರಿಂದ ಶ್ರೀವತ್ಸ ಜೋಶಿ ನನಗೆ ಬೇರೆಯವರಲ್ಲಾ, ನನ್ನನ್ನೂ ನನ್ನ ಬೀಗರನ್ನೂ ಒಳಗೊಂಡವರು ಎಂಬ ಅಭಿಮಾನ ಉಕ್ಕೇರುತ್ತದೆ. ನಮ್ಮ ಮನೆಗಳಲ್ಲಿ ಎಲ್ಲರೂ ಕನ್ನಡ ಹಳೇ ಸಿನಿಮಾಗಳ, ರಾಜಕುಮಾರ್ ಸಿನಿಮಾಗಳ, ಪಿ.ಬಿ. ಶ್ರೀನಿವಾಸರ ಹಾಡುಗಳ ಅಭಿಮಾನಿಗಳು ಎನ್ನುವುದು ಮಾಮೂಲು ಶಬ್ದವಾಗಿದೆ. ಅಕ್ಷರಶಃ ಹಳೇ ಹಾಡುಗಳ ಹುಚ್ಚರು ಎನ್ನಲು ಅಡ್ಡಿಯಿಲ್ಲ.

ಹೀಗಾಗಿ ಶ್ರೀವತ್ಸರ ‘ವರ್ಣಮಾಲೆ ಭಾಗ ಎರಡರ ಪುಸ್ತಕದಲ್ಲಿರುವ ‘ಓಬವ್ವ’ ವೀರ ರಮಣಿಯೋ? ‘ವೀರರ ಮಣಿಯೋ ಲೇಖನವನ್ನು ಮನೆ ಮಂದಿಯೆಲ್ಲಾ ಓದಿ, ಅವರು ಬರೆದ ಎಲ್ಲಾ ಹಳೆ ಹಾಡುಗಳನ್ನು ಮತ್ತೆ ಮತ್ತೆ ಕೇಳಿ ನಮ್ಮ ಮೆದುಳೂ ಆ ಹಳೇ ಹಾಡುಗಳ ಶಬ್ದಗಳನ್ನ ತಪ್ಪಾಗಿ ರಿಜಿಸ್ಟರ್ ಮಾಡಿಕೊಂಡಿದ್ದನ್ನು ಗಮನಿಸಿ, ಮನಸಾರೆ ಶ್ರೀವತ್ಸರ ಸೂಕ್ಷ್ಮ ಗ್ರಾಹಿತ್ವವನ್ನೂ, ಅವರ ಕಿವಿಗಳ ಚುರುಕುತನವನ್ನೂ ಶ್ಲಾಘಿಸಿದೆವು.

ಹಾಗೆಯೇ ಹಳೆಯ ಕನ್ನಡ ಚಿತ್ರಗೀತೆ ಸಂತ ತುಕಾರಂ ಚಿತ್ರದ ಚಿ.ಸದಾಶಿವ ಬರೆದ, ಪಿ.ಬಿ. ಶ್ರೀನಿವಾಸ ಹಾಡಿದ ‘ಜಯತು ಜಯ ವಿಠ್ಠಲ’ ಹಾಡಿನಲ್ಲಿ ಬರುವ ಸಾಲುಗಳಾದ ‘ನಿನ್ನ ನಾಮವು, ಶಾಂತಿಧಾಮವು, ಸೌಖ್ಯದಾರಾಮ’ ಎಂಬ ಹಾಡು ಇಂದು
ವೈಜ್ಞಾನಿಕವಾಗಿ, ವೈದ್ಯಕೀಯ ರಂಗದಲ್ಲಿ ಹೃದಯರೋಗವನ್ನು ಕಳೆಯುವ ಔಷಽಯಾಗಿರುವ ‘ವಿಠ್ಠಲ’ ಎಂಬ ನಾಮದ
ಪರಿಣಾಮವನ್ನು ಒಂದು ಲೇಖನದಲ್ಲಿ ಒಪ್ಪುವಂತೆ ಬರೆದಿದ್ದಾರೆ.

ಇದನ್ನೆ ‘ಯದ್ಬಾವಂ ತದ್ಬವತಿ’ ಎಂದಿವೆ. ವೇದ ಉಪನಿಷತ್ತು, ಗೀತೆಗಳು. ಹಾಗೆಯೇ, ವರ್ಣಮಾಲೆ ಭಾಗ ಮೂರರಲ್ಲಿ ಬರುವ
‘ಅಂದಕಾಲತ್ತಿಲ್ ಏಪ್ರಿಲ್ ಫೂಲ್ ಇಂತಿರಲ್ಲ್? ಎಂಬ ಲೇಖನವಂತೂ ‘ಕಂತಿ – ಹಂಪ ಸಮಸ್ಯಾ ಪೂರಣ ಪದ್ಯಗಳು ಎಂಬ ಲೇಖನವು ಕನ್ನಡ ಸಾಹಿತ್ಯದ ಹಿರಿಮೆ ಸಾರುವ ಆಹ್ಲಾದಕರ ನಿಲ್ದಾಣವೆಂದಿದ್ದಾರೆ. ಬರೀ ಕ್ವಿಜ್, ಅಂತ್ಯಾಕ್ಷರಿ, ಕೌನ್ ಬನೇಗಾ
ಕರೋಡಪತಿ’ ಕಾರ್ಯಕ್ರಮಗಳೇ ಬುದ್ಧಿವಂತಿಕೆ ವರ್ಧಿಸುತ್ತವೆ ಎಂದು ನಂಬಿದ್ದಾರೆ ನಮ್ಮ ಜನ.

ಎಲ್ಲೆಲ್ಲಿ ಏನಿದೆ? ಎಂದು ಹೇಳಿದರೆ ಅವರನ್ನು ಜೀನಿಯಸ್ ಎಂದು ಉಬ್ಬಿಸುವ ನಮ್ಮ ಪತ್ರಿಕೆ, ವಾಹಿನಿಗಳಿಗೆ ಕನ್ನಡದಲ್ಲಿರುವ ಇಂಥದೊಂದು ‘ಸವಾಲ್- ಜವಾಬ್’ ಆಟವು ನಿಜವಾದ ಬುದ್ಧಿವಂತಿಕೆ, ಭಾಷಾಜ್ಞಾನ,  ಸಮಗ್ರ ಅಧ್ಯಯನಕ್ಕೆ ಸವಾಲ್ ಹಾಕುವಂತಹ ವುಗಳು ಎಂಬ ವಿಷಯ ಗೊತ್ತೇ ಇಲ್ಲ. ಇದಕ್ಕೆ ‘ಯತಿ ಲಂಘನ’ ಎಂಬ ಹೆಸರಿದೆ ಎಂದು ತಿಳಿದವರು ನನಗೆ ಹೇಳಿ ಒಂದು ಉದಾಹರಣೆ ಕೊಟ್ಟಿದ್ದರು. ನಾನು ಇಂದಿಗೂ ಅದನ್ನು ನನ್ನ ಹಾಸ್ಯ ಸಂಜೆಗಳ ಸೂಕ್ಷ್ಮಗ್ರಾಹಿ, ರಸಿಕ ಸಭಿಕರಿರುವ ಸಭಾಂಗಣ ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತೇನೆ. (ಅಣ್ಣಮ್ಮ, ಪಿಳೇಕಮ್ಮ ಉತ್ಸವ, ಜಾತ್ರಾ ಕಾರ್ಯಕ್ರಮಗಳಲ್ಲಿ ಅಲ್ಲ!) ಅದು ಹೀಗಿದೆ.

ಬೆಟ್ಟದ ಸುತ್ತಲೂ ಶಿಲೆ ಪಾಲ್ಕರೆಯಲ್ |
ಪಶು ಶಿಶುವ ನೆತ್ತಲ್, ನಾರಿ ವೇದವನೋದಲ್ ||
ಬ್ರಾಹ್ಮಣ ಕಾಗೆ ಮಾಂಸ ತಿನ್ನುವುದೇನು ಆಶ್ಚರ್ಯ?

ಎಂಬುದು ಮೇಲ್ನೋಟಕ್ಕೆ ಇಲ್ಲಿ ಎಲ್ಲವೂ ಅಸಹಜ, ಅಭಾಸಗಳಂತೆ ಕಾಣುತ್ತದೆ. ಆದರೆ ಇಲ್ಲಿ ಪದಗಳನ್ನು ಬರೆಯುವ, ಹೇಳುವ ರೀತಿಯಿಂದ ಇಲ್ಲಿ ನಡೆಯುವ ಕ್ರಿಯೆಗಳು ಯಾವುವೂ ಅಸಹಜವಲ್ಲ. ಎಲ್ಲಿ ನಿಲ್ಲಬೇಕೋ, ಎಲ್ಲಿ ಶಬ್ದಗಳನ್ನು ತುಂಡರಿಸ ಬೇಕೆಂಬುದು ತಿಳಿದಿದ್ದರೆ ಇದೊಂದು ಚಮತ್ಕಾರಿ ಪದ್ಯ,  ಇದನ್ನು ಹೇಳುವ, ಬರೆಯುವ ರೀತಿ ಇದು.

ಬೆಟ್ಟದ ಸುತ್ತಲೂ ಶಿಲೆ, ಪಾಲ್ಕರೆಯಲ್ ಪಶು, ಶಿಶುವನೆತ್ತಲ್ ನಾರಿ, ವೇದವನೋದಲ್ ಬ್ರಾಹ್ಮಣ, ಕಾಗೆಯು ತಾಂ ಮಾಂಸ ತಿನ್ನುವುದೇನು ಆಶ್ಚರ್ಯ? ಹೀಗೆ ಓದಿದಾಗ ಗಾಬರಿ ಹೋಗಿ, ಗಹಗಹಿಸಿ ನಗುವ ಸರದಿ ವಾಚಕರದು, ಶ್ರೋತೃಗಳದೂ ಆಗುತ್ತದೆ. ನೋಡಿ ಇಲ್ಲಿ ಎಲ್ಲವೂ ಅವರವರ ಕೆಲಸಗಳನ್ನು ಮಾಡುತ್ತಿದ್ದಾರೆ ಅಲ್ಲವೆ? ಇಂಥವುಗಳು ಸಾವಿರ ಸವಾಲ್ ಜವಾಬ್‌ಗಳಿವೆ ಯಂತೆ, ಆದರೆ ಉಪಲಬ್ದವಿರುವ ಕೆಲಸವನ್ನು ಮಾತ್ರ ಶ್ರೀವತ್ಸರು ಇಲ್ಲಿ ಬರೆದು, ಉಳಿದವುಗಳನ್ನು ಹುಡುಕಿ, ಓದುವ, ಉಮೇದನ್ನು ಹೆಚ್ಚಿಸುತ್ತಾರೆ ಇದು ಲೇಖಕನ ಕರ್ತವ್ಯವೂ ಹೌದು, ಜವಾಬ್ದಾರಿಯೂ ಹೌದು.

ಶ್ರೀವತ್ಸ ಜೋಶಿಯವರು ಎಲ್ಲ ಲೇಖನಗಳಲ್ಲೂ ಇದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಭೂಮಿ, ಅರ್ಥ್ ಎಂದಷ್ಟೆ ನಾವು ತಿಳಿದುಕೊಂಡಿರುವ ಅಥವಾ ನಮಗೆ ಹೇಳಿರುವ ನಮ್ಮ ಶಾಲಾ ಶಿಕ್ಷಣವು, ಭೂಮಿಗೆ ಒಟ್ಟು ಇಪ್ಪತ್ತೇಳು ಹೆಸರುಗಳಿವೆ ಎಂದೂ ಹೇಳಿಲ್ಲ. ಅಲ್ಲದೇ ಅವುಗಳಲ್ಲಿ ಪ್ರತಿಯೊಂದಕ್ಕೂ ಏಕೆ ಆ ಹೆಸರು ಬಂತೆಂಬುದಕ್ಕೂ ರೋಚಕ ಹಿನ್ನೆಲೆಯಿದೆ ಎಂಬುದನ್ನು ಈ ಲೇಖನದಲ್ಲಿ ಅವರು ಸಾರುತ್ತಾರೆ.

ಅದರ ಹೆಸರೇ ‘ಸಮುದ್ರ ವಸನೇ ದೇ ಪವರ್ತಸ್ತನ ಮಂಡಲೆ’ ಎಂಬ ಲೇಖನ. ಕಸಬರಿಗೆ ಎಂದರೆ ನಮಗೆ ಕೀಳಾದ ವಸ್ತು. ಆದರೆ
ಅದಕ್ಕೂ ಹಿರಿಮೆ ಇರುವ ಲೇಖನವೊಂದು ಜಿ.ಎಸ್.ಶಿವರುದ್ರಪ್ಪನವರ ಹಳೆಯ ಕವನದೊಂದಿಗೆ ‘ಕಸಪೊರಕೆ ಎನಗೆ
ಗುರು, ಮತ್ತೆನ್ನ ಬಾಳಗುರಿ’ ಎಂಬ ಲೇಖನದಲ್ಲಿ ಮನಸೆಳೆಯುತ್ತದೆ. ಅನೇಕರಿಗೆ ಊಟದ ಸುಖ, ನಿದ್ದೆಯ ಸುಖ, ಕೆರೆ, ಹಳ್ಳ,
ಬಾವಿಗಳಲ್ಲಿ ಈಜುವುದು ಸುಖ, ಪ್ರಯಾಣ ಸುಖ, ಇಂತಹ ಸುಖಗಳೇ ಸುಖವೆನಿಸಬಹುದು. ಆದರೆ ಓದುವ ಸುಖದ ಮುಂದೆ ಇವೆಲ್ಲಾ ಏನೂ ಅಲ್ಲ ಎನಿಸಿದೆ. ಶ್ರೀ ವಿಶ್ವೇಶ್ವರ ಭಟ್ಟರದೂ ಅಸಾಧ್ಯ ಓದಿನ ಹವ್ಯಾಸ, ಅದ್ಭುತ ಬರವಣಿಗೆ.

ಅವರಿಗೆ ಪ್ರಯಾಣದ ದೇಶ ದೇಶ ಸುತ್ತುವ ಹವ್ಯಾಸವಿದೆ, ಅವರಿಗೆ ಅವರಂತೆಯೇ ಹವ್ಯಾಸವಿರುವ ಶ್ರೀವತ್ಸ ಜೋಶಿಯವರು
ಸಿಕ್ಕಿರುವುದು, ಕಾಸಿದ ಹಾಲಿಗೆ ಕೇಸರಿ ಹಾಕಿದಂತೆ ಆಗಿದೆ. ಹೀಗಾಗಿ ಕನ್ನಡ ವಾಚಕ ರಸಿಕ ವೃಂದಕ್ಕೆ ನಿತ್ಯವೂ ಬಗೆಬಗೆಯ ಲೇಖನಗಳ ಮಧುಚಂದ್ರವೇ. ಇಂದಿನ ಯುವ ಪೀಳಿಗೆ ಈ ಓದುವ ಹವ್ಯಾಸದಿಂದ ವಂಚಿತವಾಗಿದೆ. ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ಇವೆಲ್ಲ ಗಲ್ ಫ್ರೆಂಡ್‌ ಇದ್ದಂತೆ, ಕ್ಷಣ ಮಿಂಚಿ, ಕಣ್ ಮಿಟುಕಿಸಿ ಮರೆಯಾಗುವಂಥವು.

ಆದರೆ, ಪುಸ್ತಕದ ಓದು ಮಡದಿಯಂತೆ, ಬಾಲ್ಯದಿಂದಲೆ ಜತೆಯಾಗಿ ಮಧ್ಯ ವಯಸ್ಸಿಗೆ ಮುದ ನೀಡಿ ಮುಪ್ಪಿಗೆ ಆಸರೆಯಾಗುತ್ತವೆ. ಬಾಲ್ಯಕ್ಕೆ ಬಾಲಮಿತ್ರ, ಚಂದಮಾಮದಿಂದ ಆರಂಭಿಸಿ, ಹರೆಯಕ್ಕೆ ಡುಂಡಿರಾಜರ ಚುಟುಕ ಓದಿ, ಮಧ್ಯವಯಸ್ಸಿಗೆ ಭೈರಪ್ಪ, ಕಾರಂತರಿಗೆ ಬಂದು, ಮುಪ್ಪಿಗೆ ಭಗವದ್ಗೀತೆ, ಭಾಗವತ, ಗರುಡ ಪುರಾಣಕ್ಕೆ ಬಂದಿರೆಂದರೆ ಜೀವನ ಸಾರ್ಥಕವಾಯಿತೆಂಬ ಅನಿಸಿಕೆ ನಮಗೆ ಬರಲಾರಂಭಿಸುತ್ತದೆ.

ಸಾವನ್ನು ಶಾಂತವಾಗಿ ಎದುರಿಸುವ ಶಕ್ತಿ ನೀಡುವುದೇ ಗ್ರಂಥಗಳು. ಅದಕ್ಕೆ ಗೆಳೆಯರನ್ನು ಆರಿಸುವಂತೆಯೇ ಪುಸ್ತಕಗಳನ್ನೂ ಆರಿಸಿ ಆರಿಸಿ ಆಯ್ಕೆ ಮಾಡಬೇಕು. ‘ಗತಿರ್ ಗೋವಿಂದಾ’ ಎನ್ನುವಂತೆ ‘ಗತಿರ್ ಗ್ರಂಥಹ’ ಎಂಬುದು ಗೋವಿಂದನಷ್ಟೆ ಎಲ್ಲ ಕಷ್ಟ ಗಳಿಗೆ ಮುಕ್ತಿ ನೀಡುವ ಸಾಧನವೂ ಹೌದು ಎನ್ನುವುದು ನನ್ನ ಅಭಿಪ್ರಾಯ.