Wednesday, 27th November 2024

ಶರಾವತಿ ತೀರದ ಕಥೆ ಹೇಳಿದ ಅಪರ್ಣಾ

‘ಒಂದು ಶಿಕಾರಿಯ ಕಥೆ’ಯಲ್ಲಿ ಮಲೆನಾಡ ಹುಡುಗಿ ಅಕ್ಕುವಾಗಿ ಗಮನಸೆಳೆದಿದ್ದ ನಟಿ ಅಪರ್ಣಾ ಪ್ರಭು, ಮತ್ತೆ ತೆರೆಗೆ ಬರಲು ಸಿದ್ಧವಾಗಿದ್ದಾರೆ. ಅಲ್ಲಿ ‘ಶಿಕಾರಿಯ ಕಥೆ’ ಹೇಳಿದ್ದ ಅಪರ್ಣಾ, ಈಗ ‘ಎಂಥಾ ಕಥೆ ಮಾರಾಯ’ ಚಿತ್ರದಲ್ಲಿ ಶರಾವತಿ ತೀರದ ಕಣ್ಣೀರ
ಕಥೆ ಹೇಳಲಿದ್ದಾರೆ. ‘ಎಂಥಾ ಕಥೆ ಮಾರಾಯ’ ನೈಜ ಕಥೆ ಆಧಾರಿತ ಸಿನಿಮಾವಾಗಿದೆ.

ಮಲೆನಾಡ ಮಡಿಲಿನಲ್ಲಿ ಹರಿಯುವ ಶರಾವತಿ ಹಿನ್ನೀರಿನ, ನದಿ ತೀರದ ಜನರ ಬದುಕು ಬವಣೆ, ಅವರ ಅಸ್ತಿತ್ವಕ್ಕಾಗಿ ನಡೆದ ಹೋರಾಟದ ಕಥೆಯೇ ಈಗ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ. ಅಪರ್ಣಾ ಈ ಚಿತ್ರದಲ್ಲಿ ಶರಾವತಿ ಪಾತ್ರದಲ್ಲಿಯೇ ಬಣ್ಣ ಹಚ್ಚಿದ್ದಾರೆ. ಮಲೆನಾಡಿನಲ್ಲಿ ಬೆಳೆದ ಹುಡುಗಿಯಾಗಿ ದೂರದ ಬೆಂಗಳೂರಿನಲ್ಲಿ ನೌಕರಿ ಹಿಡಿದಿರುತ್ತಾರೆ. ಆದರೂ, ಸದಾ ತನ್ನ ಸುಂದರ ಮಲೆನಾಡಿನ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಅವರ ಮನದಲ್ಲಿರುತ್ತದೆ. ಹೀಗಿರುವಾಗಲೇ ಸರಕಾರ ಶರಾವತಿ ನದಿಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿರುತ್ತದೆ. ಆದರೆ ಈ ಯೋಜನೆಯಿಂದ ಅನೇಕ ಅನ್ನದಾತರು ತಮ್ಮ ಜಮೀನನ್ನು ಕಳೆದುಕೊಳ್ಳುವ, ಆ ಮೂಲಕ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಒದಗುವ ಅಪಾಯದಲ್ಲಿರುತ್ತಾರೆ.

ಹಾಗಾಗಿ ಸರ್ಕಾರದ ಯೋನೆಯನ್ನು ವಿರೋಧಿಸುವ, ಅದರ ವಿರುದ್ದ ಹೋರಾಟ ಮಾಡುವ ಅಗತ್ಯವಿರುತ್ತದೆ. ಇದನ್ನು ಅರಿತ ಶರಾವತಿ ತನ್ನೂರಿಗೆ ಹಿಂದಿರುಗುತ್ತಾಳೆ. ತನ್ನೂರಿನ, ತನ್ನ ಜನರ ರಕ್ಷಣೆಗೆ ಶರಾವತಿಯ ಹೋರಾಟ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡ ಬೇಕಂತೆ. ಬೆಂಗಳೂರಿನ ಹುಡುಗಿಯಾದ ಅಪರ್ಣಾ, ಮಲೆನಾಡಿನ ಸೊಬಗನ್ನು ಸದಾ ಆರಾಧಿಸುತ್ತಿರು ತ್ತಾರೆ. ಹೀಗಿರುವಾಗಲೇ ಬಯಸದೇ ಬಂದ ಭಾಗ್ಯ ಎಂಬಂತೆ, ಮಲೆನಾಡಿನ ಕುರಿತ ಚಿತ್ರದಲ್ಲಿಯೇ ನಟಿಸುವ ಅವಕಾಶ ಅರಸಿ ಬಂದಿದೆ. ಆದರೆ ಮಲೆನಾಡ ಕನ್ನಡ ಅಪರ್ಣಾರಿಗೆ ಅಷ್ಟು ಸ್ಪಷ್ಟವಾಗಿ ತಿಳಿದಿರಲಿಲ್ಲ.

ಆದರೂ ಕಲಿಯುವ ಹುಮ್ಮಸ್ಸಿನಿಂದ ಮಲೆನಾಡಿನಲ್ಲಿ ನೆಲೆಸಿದ್ದ ತಮ್ಮ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಯೇ ಕೆಲವೊಂದಿಷ್ಟು ದಿನ ತಂಗಿದ್ದು, ಭಾಷೆ ಕಲಿತಿದ್ದಾರೆ. ಬಳಿಕ ಹೋರಾಟದ ಪೂರ್ವಪರವನ್ನು ಅರಿತು, ಅದಕ್ಕೆೆ ಸಂಬಂಧಿಸಿದ ಒಂದಷ್ಟು ಲೇಖನ ಗಳನ್ನು ಓದಿ ತಿಳಿದುಕೊಂಡ ಅಪರ್ಣಾ, ಚಿತ್ರದ ಕಥೆಗೆ ತಕ್ಕಂತೆ ಸಿದ್ಧವಾಗಿದ್ದಾರೆ. ಅಂತು ಅಂದುಕೊಂಡಂತೆ ಚಿತ್ರದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದ್ದೇನೆ ಎನ್ನುತ್ತಾರೆ. ಈ ಹಿಂದೆ ‘ಹೊಂಬಣ್ಣ’ ಚಿತ್ರವನ್ನು ನಿರ್ದೇಶನ ಮಾಡಿದ್ದ ರಕ್ಷಿತ್ ತೀರ್ಥಹಳ್ಳಿ ಎಂಥಾ ಕಥೆ ಮಾರಾಯ’ ಚಿತ್ರಕ್ಕೆ ಆ್ಯಕ್ಷನ್‌ಕಟ್ ಹೇಳಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದೆಯಾದ ಅಪರ್ಣಾ, ಮಾಡೆಲ್ ಆಗಿಯೂ ಗುರುತಿಸಿ ಕೊಂಡಿದ್ದಾರೆ. ಅಷ್ಟೇ ಅಲ್ಲ, ಉತ್ತಮ ಭರತನಾಟ್ಯ ಪಟುವೂ ಹೌದು. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂತಹದ್ದೇ ಪಾತ್ರಬೇಕು ಎಂದು ಕೇಳದ ಅಪರ್ಣಾ, ತನಗೆ ಚಾಲೆಂಜಿಂಗ್ ಪಾತ್ರ ಇಷ್ಟ. ಅಂತಹ ಪಾತ್ರಗಳಿಂದ ನಟನೆಯ ಬಗ್ಗೆ
ಮತ್ತಷ್ಟು ಕಲಿಯಲು ಸಾಧ್ಯ ಎನ್ನುತ್ತಾರೆ. ‘ಎಂಥಾ ಕಥೆ ಮಾರಾಯ’ ನೈಜಕಥೆ ಆಧಾರಿತ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.