Thursday, 19th September 2024

ಡಾ.ಕೆ.ಎಸ್.ನಾರಾಯಣಾಚಾರ್ಯರ ಕಣ್ಣು ತೆರೆಸುವ ಕೃತಿಗಳು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್‌

ನನ್ನ ಹರೆಯದ ವಯಸ್ಸಿಗೆ ನಾನು ಸತ್ಸಂಗದಲ್ಲಿಯೇ ಇದ್ದೆ. ಕಾರಣ, ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ರಾಷ್ಟ್ರೋತ್ಥಾನ ಬಳಗ ಮುಂತಾದ ಸಂಸ್ಥೆಗಳಲ್ಲಿ ಸದಸ್ಯನಾಗಿ ಓಡಾಡುತ್ತಾ, ಆಗಾಗ ಭಾಷಣ (ಆ ಸಂಸ್ಥೆಗಳಲ್ಲಿ ಇದಕ್ಕೆ ಬೌದ್ಧಿಕ್ ಎನ್ನುತ್ತಾರೆ) ಕೊಡುತ್ತಾ ಕ್ರಿಯಾಶೀಲನಾಗಿದ್ದೆ.

ಭಾಷಣ ಮಾಡಲು ವಿಷಯ ಸಂಗ್ರಹಣೆಗಾಗಿ ರಾಮಾಯಣ, ಮಹಾಭಾರತ, ಭಗವದ್ಗೀತೆ, ಋಷಿಮುನಿಗಳ ಕಥೆಗಳು, ರಾಮಾ ಯಣ, ಮಹಾಭಾರತದ ಆದರ್ಶಗಳು ಮುಂತಾದ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಬಳಗದ, ಭಾರತ ಭಾರತಿ ಪುಸ್ತಕ ಸಂಪದದ ಚಿಕ್ಕ ಚಿಕ್ಕ ಪುಸ್ತಕಗಳನ್ನೆ ಓದಿ ಅಲ್ಲಲ್ಲಿ ಭಾಷಣ ಮಾಡುತ್ತಿದ್ದೆ. ಬೌದ್ಧಿಕ್ ಪ್ರಮುಖ್ ಎಂಬ ಹೆಸರಿತ್ತು ನನಗೆ. ಮಾತು, ಬಾಯಿ ಬಿಟ್ಟು ಬೇರೇನೂ ಬಂಡವಾಳವಿಲ್ಲದ ನನಗೆ ಬರುತ್ತಿದ್ದ ವಿದ್ಯೆ, ಕಲೆ, ಉದ್ಯೋಗವೆಂದರೆ ಮಾತು, ಭಾಷಣ ಅಷ್ಟೆ.

ಅದನ್ನೇ ಆ ದೇವರು ಉದ್ಯೋಗವನ್ನೂ ಮಾಡಿ, ಹಣ, ಗೌರವ, ಹೆಸರು ಅನುಗ್ರಹಿಸಿರುವುದು ನನ್ನ ಪುಣ್ಯ. ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳು ಎಲ್ಲ ಮೂಲಗ್ರಂಥಗಳಲ್ಲಿನ ಕನ್ನಡ ಅನುವಾದವನ್ನು ಓದಿದ ಮೇಲೆ ಇತ್ತೀಚೆಗೆ ಸಾಹಿತ್ಯ ಭಂಡಾರದ ಹುಬ್ಬಳ್ಳಿಯ – ಬೆಂಗಳೂರಿನ ಮಾಲೀಕರಾದ ಸ್ನೇಹಿತ ಶ್ರೀಯುತ ಸುಬ್ರಹ್ಮಣ್ಯ ಮತ್ತು ಅವರ ಮಗ ಋತ್ವಿಕ್ ನನಗೆ ಹಿರಿಯ ಲೇಖಕರಾದ ಶ್ರೀಮಾನ್ ಡಾ.ಕೆ.ಎಸ್. ನಾರಾಯಣಾಚಾರ್ಯರು ಬರೆದ ಮಹಾಭಾರತ, ರಾಮಾಯಣಗಳ ಭಾಗವತದ ಪುಸ್ತಕಗಳನ್ನು ಕೊಟ್ಟರು.

ಸುಮಾರು ಹನ್ನೆೆರೆಡು ಪುಸ್ತಕಗಳವು. ಪುರಾಣ ಹಾಗೂ ಇತರ ಧಾರ್ಮಿಕ ಗ್ರಂಥಗಳನ್ನು ಕಣ್ಣಿಗೊತ್ತಿಕೊಂಡು ಓದಿದ್ದ ನನಗೆ
ಶ್ರೀಯುತ ನಾರಾಯಣಾಚಾರ್ಯರ ಪುಸ್ತಕಗಳ ಕಥೆ, ಕಾದಂಬರಿ ಶೈಲಿಯಲ್ಲಿ ಇರುವುದು ಕಂಡು ಆಶ್ಚರ್ಯವಾದರೂ, ಓದಿಸಿ ಕೊಂಡು ಹೋದವು. ಕೃಷ್ಣ, ಬಲರಾಮ, ದೇವಕಿ, ದ್ರೌಪದಿ, ಕುಂತಿ, ಅಗಸ್ತ್ಯ ಮುಂತಾದವರು ನಮಗೆ ಈಗ ಸಾವಿರಾರು ವರ್ಷಗಳ ನಂತರ ದೇವರಾಗಿರುವವರು. ಬದುಕಿದ್ದಾಗ ಅವರೂ ನಮ್ಮಂತೆ ಕಷ್ಟ, ನಿಷ್ಠುರ, ನಿಂದನೆ, ಅಪವಾದ, ಅವಮಾನ, ಹಿಗ್ಗುವುದು, ಕುಗ್ಗುವುದು ಕಂಡವರೇ ಅನಿಸಿತು.

ಹಾಗೆಂದು ಅವರ ಮೇಲಿನ ಗೌರವ, ಭಕ್ತಿ ಕಡಿಮೆಯಾಗದೇ, ನಾವು ಕಷ್ಟ ಬಂದಾಗ ಇವರಿಗೆ ಕಾಯಿ, ಕರ್ಪೂರ, ಪ್ರದಕ್ಷಿಣೆ ಮಾಡುವುದಕ್ಕಿಂತ ಇವರಂತೆ ಎದುರಿಸಬೇಕೆನ್ನುವುದು, ಇವರಿಗೇ ಬಿಟ್ಟಿಲ್ಲ, ಇನ್ನು ನಾವು ಯಾವ ಪುಟಗೋಸಿ ಎಂದು ಸಮಾಧಾನ ತಂದುಕೊಳ್ಳುವುದನ್ನು ಈ ಕೃತಿಗಳು ಮನವರಿಕೆ ಮಾಡಿಕೊಟ್ಟವು. ಈಗಿನ ನಮ್ಮ ದೇವರುಗಳನ್ನು, ಅವರೂ ಆ ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳಾಗಿ ಚಿಂತಿಸಿದ, ಬೇಸರಗೊಂಡ, ಸಿಟ್ಟಾದ, ಹತಾಶೆಗೊಂಡದ್ದನ್ನು ಆಸೆಪಟ್ಟದ್ದನ್ನು ಓದಿದಾಗ, ಇವರೆಲ್ಲ ದೇವರಾಗಲು, ವ್ಯಕ್ತಿಯಾಗಿ, ಮನುಷ್ಯರಾಗಿ, ಮಗನಾಗಿ, ಹೆಂಡತಿಯಾಗಿ, ಗಂಡನಾಗಿ ಅನುಭವಿಸಿದ ತೊಳಲಾಟಗಳೇ, ಕಷ್ಟಗಳೇ ಅವರನ್ನಿಂದು ದೇವರನ್ನಾಗಿ ಮಾಡಿದೆ ಎನಿಸದಿರದು.

ಹಾಗೆಯೇ ನಾವೂ ದೇವರಾಗುವ ಉಪಾಯಗಳನ್ನು ಶ್ರೀ ನಾರಾಯಣಾಚಾರ್ಯರು ಈ ಕೃತಿಗಳನ್ನು ನಮ್ಮ ಈ ಸಮಾಜಕ್ಕೆ,
ಪೀಳಿಗೆಗೆ ಬರೆದಿದ್ದಾರೆ ಎನಿಸಿತು. ಬೆಳೆದು ನಿಂತ ಮಕ್ಕಳ ಕೈಯಲ್ಲೇ ನನ್ನ ತಂದೆ, ಸ್ತ್ರೀಲಂಪಟ, ಕಾಮುಕ ಎನಿಸಿಕೊಳ್ಳುವ ಶ್ರೀಕೃಷ್ಣನ ಅವ್ಯಕ್ತ ದುಃಖ, ಜಗದೋದ್ಧಾರನನ್ನೇ ಹೆತ್ತ ದೇವಕಿ ಕಡೆಯವರೆಗೂ ಕಂಸನ ಸೆರೆಯಲ್ಲಿ ಅನುಭವಿಸುವ ನೋವು, ತಲ್ಲಣಗಳು, ಆಡುವ ಮಾತುಗಳು, ಹೋಗುವ ಮೂರ್ಛೆಗಳು ಅತ್ಯಂತ ಹೃದಯಂಗಮ, ಮನೋಭೇದಕಗಳಾಗಿವೆ.

ರಾವ್ ಬಹದ್ದೂರರ ಗ್ರಾಮಾಯಣ, ಭೈರಪ್ಪನವರ ಗೃಹಭಂಗ, ನಾಯಿ ನೆರಳು, ವಂಶವೃಕ್ಷ, ಶ್ರೀನಿವಾಸವೈದ್ಯರ ಹಳ್ಳ ಬಂತು ಹಳ್ಳ, ಯಂಡಮೂರಿಯವರ ಅಷ್ಟಾವಕ್ರ, ಕಾದಂಬರಿಯ ಪಾತ್ರಗಳಂತೆ ಪುರಾಣದ ಈ ದೇವ, ದೇವತೆಗಳೂ ಅನುಭವಿಸುವ
ಕಷ್ಟಗಳು, ಹಾಕುವ ಉಸಿರು, ತೋರುವ ಹತಾಶೆಗಳು ನಮ್ಮನ್ನು ದೇಹಧಾರಿಗಳಾರಿಗೂ ಕಷ್ಟ ತಪ್ಪಿದ್ದಲ್ಲ. ಅವರು ದೇವರಾದರೂ
ಸರಿಯೇ ಎಂಬ ತತ್ವವನ್ನು ಸಾರುತ್ತವೆ. ಆಧುನಿಕ ಇಂಟರ್‌ನೆಟ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಯುವಕರನ್ನು ಓದಿಸಿ ಕೊಂಡು ಹೋಗುವ ಸರಳ, ಮಾರ್ಮಿಕ, ಜೀವನ್ಮುಖಿ ಶೈಲಿಯಿಂದಾಗಿ ಶ್ರೀ ನಾರಾಯಣಚಾರ್ಯರು ರಾಕ್‌ಡ್ಯಾನ್ಸ್‌‌ಗಳ ಯುವಕರ ಮೈಮನಗಳಲ್ಲೂ ಪುರಾಣ, ಶಾಸ್ತ್ರಗಳನ್ನು ಇಂಜೆಕ್ಟ್‌ ಅಥವಾ ಸಲೈನ್ ಮೂಲಕ ಈ ಕೃತಿಗಳಿಂದ ಅವರ ಧಮನಿಗಳಲ್ಲಿ ಏರಿಸು ತ್ತಾರೆ ಅನಿಸಿತು. ಆ ಯುವಕರು ಕೂತು ಓದಬೇಕಷ್ಟೆ.

ಇವೆಲ್ಲ ಮಹಾಭಾರತ, ರಾಮಾಯಣ ಪುಸ್ತಕಗಳ ಹೂರಣವಾದರೆ, ಇನ್ನು ಚಾಣಕ್ಯ ಎಂಬ ಪುಸ್ತಕದ ಚಾಣಕ್ಯ – ಚಂದ್ರಗುಪ್ತರ ಪುಸ್ತಕವಂತೂ ಚಾಣಕ್ಯನ ಜನನ, ಬುದ್ಧಿಮತ್ತೆ, ಸಂಘಟನಾ ಕೌಶಲಗಳ ಮೇರು ಕೃತಿ. ನಮ್ಮ ಶಾಲೆಯ ಪಠ್ಯಗಳಲ್ಲಿದ್ದ ಚಾಣಕ್ಯನಿಗೂ ಇಲ್ಲಿ ಬರುವ ಚಾಣಕ್ಯನಿಗೂ ಭೂಮಿ ಆಕಾಶಗಳ ಅಂತರ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಎಲ್ಲೋ ಕೆಲ ಅಂಶ ಗಳನ್ನು ಓದಿದ್ದೇವೆ ಅಷ್ಟೆೆ. ಅವು ಕೇವಲ ಟಿ.ವಿ ಗಳಲ್ಲಿ ಬರುವ ಜಾಹಿರಾತಿನಷ್ಟೇ ವಿಷಯಗಳನ್ನೊಳಗೊಂಡವುಗಳು.

ಮೂಲ ಸಾಮಗ್ರಿ ಮುಖ್ಯ ಗೋಡೌನ್‌ನಲ್ಲಿರುವಷ್ಟು ವಿಷಯಗಳು ನಾರಾಯಣಾಚಾರ್ಯರ ಚಂದ್ರಗುಪ್ತ ಚಾಣಕ್ಯದಲ್ಲಿವೆ. ಕಾಮಸೂತ್ರ ಬರೆದ ವಾತ್ಸಾಯನ ಬೇರಾರೂ ಅಲ್ಲ ಅದು ಚಾಣಕ್ಯನೇ, ಅದರಲ್ಲಿರುವ ಮಾಹಿತಿ ಎಷ್ಟು? ಏನು ಕಥೆ? ಹಿಂದೂ ಸಾಮ್ರಾಜ್ಯದ ನಾಶಕ್ಕೆ ಎಲ್ಲ ರೀತಿಯ ಸಾಧನಗಳನ್ನು ಉಪಯೋಗಿಸುವಂತೆ, ಲಂಪಟ ರಾಜರುಗಳನ್ನು ಮಲಗಿದಲ್ಲೇ ಸಾಯಿಸಲು ವಿಷಕನ್ಯೆಯರನ್ನು ತಯಾರು ಮಾಡಲಾಗುತ್ತಿತ್ತು. ಅವರ ಅಂಗಾಂಗಳ ರಚನೆ ಮೇಲೆ ಆಕೆಯನ್ನು ವಿಷಕನ್ಯೆ ಎಂದು ಗುರುತಿಸಬಹುದಾದ ಸೂಕ್ಷ್ಮಗಳನ್ನೆಲ್ಲ ವಾತ್ಸಾಯನ ನಾಮದ ಕೌಟಿಲ್ಯ, ಚಾಣಕ್ಯ ಬರೆದಿದ್ದಾನಾಗಲಿ, ಅದು ಕೇವಲ ಕದ್ದುಮುಚ್ಚಿ ಓದಿ, ಜೊಲ್ಲು ಸುರಿಸುವ ಕಳಪೆ ರತಿವಿಜ್ಞಾನ, ರಮಣಿ ಪುಸ್ತಕಗಳಂತಲ್ಲ ಎಂಬ ಸತ್ಯ ನಮಗೆ ಚಾಣಕ್ಯನ ವಾತ್ಸಾಯನ ಕಾಮಸೂತ್ರದ ಕೃತಿಯಿಂದ ತಿಳಿಯುತ್ತದೆ.

ಎಂಥ ಪ್ರಚಂಡ ಬುದ್ಧಿವಂತ ಚಾಣಕ್ಯ ತಕ್ಷಶಿಲೆಯ ಮಹಾಪ್ರಧಾನ ಉಪನ್ಯಾಸಕ ಪದ ಬಿಟ್ಟು ದುಷ್ಟ, ಸುಖಲೋಲುಪ, ನಂದರನ್ನು ನಾಶ ಮಾಡಲು ಅವನು ಪಟ್ಟ ಶ್ರಮವೆಷ್ಟು, ಅದೆಂಥ ರಾಜನೀತಿ! ಅದ್ಭುತ ವಿಶ್ಲೇಷಣೆ. ಅರವತ್ನಾಲ್ಕು ವಿದ್ಯೆಗಳ ನ್ನೂ ಕಲಿತಿದ್ದ ತಾಮ್ರದಿಂದ ಬಂಗಾರವನ್ನು ಮಾಡುವ ಕಲೆ ಗೊತ್ತಿದ್ದ ಚಾಣಕ್ಯ ಆ ವಿದ್ಯೆೆಗಳನ್ನೆಲ್ಲ ಸ್ವಂತಕ್ಕೆಂದೂ
ಬಳಸಿಕೊಳ್ಳಲಿಲ್ಲ. ಕೇವಲ ಭಾರತೀಯ ಸಂಸ್ಕೃತಿ, ಜ್ಞಾನಗಳನ್ನು ಸಾರಲು ಬಳಸಿದ. ಮೌರ್ಯ ಸಾಮ್ರಾಜ್ಯ ಸ್ಥಾಪಿಸಲು ಕಟಿ
ಬದ್ಧನಾದ.

ಚಾಣಕ್ಯನಿಗೆ ಕೇವಲ ಮಾಟ – ಮಂತ್ರಗಳಿಂದಲೇ ವ್ಯಕ್ತಿಗಳನ್ನು ಕೊಲ್ಲುವ ಕಲೆ ಗೊತ್ತಿದ್ದರೂ ಅದು ಹೇಡಿತನವೆಂದು ಚಂದ್ರಗುಪ್ತ
ನನ್ನು ಹುಡುಕಿ ಅವನಿಗೆ ಶೌರ್ಯ, ಧೈರ್ಯ ತುಂಬಿ, ಹಿಂದೆ ನಿಂತು ವೈರಿಗಳನ್ನು ಯುದ್ಧದಲ್ಲಿ ಚಂದ್ರಗುಪ್ತನಿಂದಲೇ ಕೊಲ್ಲಿಸಿ
ಮೌರ್ಯ ಸಾಮ್ರಾಜ್ಯ ಕಟ್ಟಿದ ಇಂತಹ ಧೀಮಂತನ ಚರಿತ್ರೆಯನ್ನು ನಮ್ಮ ರಾಜಕಾರಣಿಗಳು ಎಂದು ಓದುತ್ತಾರೋ ತಿಳಿಯೆ?

ಸರ್ವಕಾಲಿಕವಾದ ಚಾಣಕ್ಯನ ಈ ಮಾತುಗಳನ್ನು ನೋಡಿ, ಇದು ಇಂದಿಗೂ ಎಷ್ಟು ಪ್ರಸ್ತುತ ಎಂಬುದನ್ನು ಗಮನಿಸಿ ಬಿಗಿ,
ಭದ್ರ ನ್ಯಾಯ ಸಮ್ಮತ ಧೈರ್ಯ ಆಡಳಿತವನ್ನು ಜನತೆ ಯಾವಾಗಲೂ ಮನಸಾರೆ ಒಪ್ಪಲಾರರು, ಅಲ್ಲವೆ? ಸ್ವಾತಂತ್ರ್ಯ
ಹೆಸರಿನ ಅನೀತಿ ವ್ಯವಹಾರಗಳು ಜನಪ್ರಿಯವಾಗುವಂತೆ, ಸುವ್ಯವಸ್ಥಿತ ನ್ಯಾಯ ರಾಜ್ಯ ಭಾರವು ಎಂದಿಗೂ ಆಗಲಾರದೆಂಬುದು ನಿತ್ಯ ಸತ್ಯ. ಮಹಾಭಾರತದ ಧರ್ಮರಾಜನಿಗಿಂತ ದುರ್ಯೋಧನನೇ ಹೆಚ್ಚು ಜನಪ್ರಿಯ ಎಂದಿದ್ದಾರೆ.

ಈಗ ಮೋದಿಗಿಂತಲೂ ಇಂದಿಗೂ ನೆಹರೂರನ್ನು ಹೊಗಳುವ ಮಂದಿ ಇಲ್ಲವೇ? ಹಾಗೆ. ಇನ್ನು ಮಳೆ ಇಲ್ಲದಾಗ ನಮ್ಮ ಸರಕಾರಗಳು ಮೋಡ ಬಿತ್ತನೆ ಇತ್ಯಾದಿ ಮಾಡಿ ನಗೆ ಪಾಟಲಿಗೆ ಈಡಾಗಲಿಲ್ಲವೇ? ಅದೇ ಘಟನೆ ಚಾಣಕ್ಯ – ಚಂದ್ರಗುಪ್ತರ ಕಾಲದಲ್ಲೂ ಬಂದಾಗ ಚಾಣಕ್ಯ ಪರ್ಜನ್ಯ ಜಪ ಮಾಡಿ ಮಳೆ ತರಿಸಿದ ಘಟನೆ ನಡೆಯುತ್ತದೆ. ಆಗ ಚಾಣಕ್ಯ ಹೇಳುವ ಮಾತು ಇಂದಿಗೂ ಪ್ರಸ್ತುತ, ದೊರೆಯೇ!

ಆರ್ಯ – ಅನಾರ್ಯ ಧರ್ಮಗಳ ವ್ಯತ್ಯಾಸ ಈಗಲಾದರೂ ತಿಳಿಯಿತೇ? ನಾನು ಮಾಡಿದ ಈ ಪರ್ಜನ್ಯ ಜಪದ ಪವಾಡ ಸದಾ
ಮಾಡುವಂಥದಲ್ಲ. ದೇವರನ್ನು ಒತ್ತಾಯಿಸಿ ಪಡೆಯುವ ಫಲ ಅಧಮ, ಅಧರ್ಮ. ನಮ್ಮ ಧರ್ಮ ನಾವು ನಡೆಸಿದರೆ, ಪ್ರಕೃತಿ
ತನ್ನ ಧರ್ಮ ತಾನು ಮಾಡುತ್ತದೆ. ಇದೇ ವೇದದ ಬೋಧೆ, ಗೀತೆಯ ಬೋಧೆ ಎನ್ನುತ್ತಾನೆ. ವಿಚಾರವಾದಿ ಎನಿಸಿಕೊಂಡವರು ಬುದ್ಧಿಜೀವಿಗಳೆಂದು ಎನಿಸಿಕೊಂಡು ಬಾಯಿ ಬಿಡದೆ ಇರುವವರು ಎಲ್ಲಾ ಕಾಲಕ್ಕೂ ಇದ್ದರು, ಇದ್ದಾರೆ, ಇರುತ್ತಾರೆ ಕೂಡ.

ಅಲ್ಲಿಯೂ, ಆಗಲೂ ಇದ್ದರು. ಅವರ ವಿರೋಧಕ್ಕೆ ಚಾಣಕ್ಯ ಕೊಟ್ಟ ಉತ್ತರವನ್ನು ಗಮನಿಸಿ, ನಂದರ ರಾಜಗುರು ಹೇಳುತ್ತಾನೆ ಆಚಾರ್ಯ ಚಾಣಕ್ಯರೇ, ನೀವು ಮಂತ್ರದಿಂದಲೂ, ಹೋಮದಿಂದಲೂ, ಮಳೆ ತರಿಸಿ ಬರುವಂತೆ ಮಾಡುವುದಕ್ಕೂ ಕಾಕತಾ ಳೀಯ ಸಂಬಂಧವೇ ಹೊರತು, ಇದೆಲ್ಲ ಯಜ್ಞ ಯಾಗದ ಮಹತ್ವವಲ್ಲ. ಹಾಗೆ, ನೀವು ಮಂತ್ರದಿಂದಲೇ ಮಳೆ ತರಿಸುವುದಾದರೆ ಭಾದ್ರಪದ ಮಾಸದಲ್ಲಿ ಮಳೆ ತರಿಸಿ ಆಗ ನಿಮ್ಮ ತಪಃ ಶಕ್ತಿ, ಮಂತ್ರ ಶಕ್ತಿಯನ್ನು ಒಪ್ಪೋಣ ಎನ್ನುತ್ತಾನೆ.

ಆಗ ಚಾಣಕ್ಯ ಕೊಡುವ ಉತ್ತರ ಸಂತಾನ ಶಕ್ತಿಯಿರುವವನು ಮುದಿ ವಯಸ್ಸಿನಲ್ಲಿ ಮಕ್ಕಳನ್ನು ಹುಟ್ಟಿಸಬೇಕೆಂದೂ,ಇಲ್ಲವಾದರೆ ಅವನು ನಿರ್ವೀರ್ಯನೆಂದೂ ವಾದಿಸಿದಂತಿದೆ ನಿಮ್ಮ ಸರಣಿ ಎನ್ನುತ್ತಾ, ಪ್ರಕೃತಿ ತನ್ನ ಧರ್ಮವನ್ನು ಬಿಟ್ಟಾಗ, ಅದನ್ನು ಮತ್ತೇ ಅದಕ್ಕೆೆ ಸಾಧಿಸಿಕೊಡು ವುದು ಮಂತ್ರ, ಜಪ, ಯಾಗಗಳ ನಿಯಮ, ಸಿಕ್ಕಸಿಕ್ಕಂತೆ ಮಾಡುವುದಲ್ಲ ಎನ್ನುತ್ತಾರೆ. ನಿತ್ಯ ನೂತನವಾದ ಈ ಮಾತು, ವಾದ ಇಂದು, ಮುಂದು, ಎಂದೆಂದೂ ನಡೆಯುವಂಥವು.

ಇನ್ನು ವೇಶ್ಯೆಯರಿಗಾಗಿ ನೀತಿ ನಿಯಮಗಳನ್ನು, ಕಾನೂನುಗಳನ್ನು ತಂದವರು ಚಾಣಕ್ಯ. ಅವರನ್ನು, ಅವರ ವೃತ್ತಿಯನ್ನೂ
ಗೌರವದಿಂದ ಕಂಡು ಅವರಿಗೆ ಭದ್ರತೆ ಒದಗಿಸಿದವನು ಚಾಣಕ್ಯ. ಅವನ ಮಾತುಗಳಲ್ಲೇ ಓದಿ ಕೇವಲ ರಾಜ ಶಾಸನದಿಂದ
ವೇಶ್ಯಾವಾಟಿಕೆ ನಿರ್ಮೂಲವಾಗದು, ಅದನ್ನು ಬಯಸುವ, ಪೋಷಿಸುವ ಜನ ಇದ್ದೇ ಇರುತ್ತಾರೆ. ರಾಮರಾಜ್ಯದಲ್ಲೂ ಇದ್ದರು. ಧರ್ಮರಾಜ್ಯದಲ್ಲೂ ಇದ್ದರು. ಅವರನ್ನು ರಾಜ ಶಾಸನಕ್ಕೊಳಪಡಿಸಿ, ನಿಯಮ, ದಂಡಗಳ ಮಿತಿಯಲ್ಲಿಟ್ಟರೆ ಹಾವಳಿ ಕಡಿಮೆ ಯಾಗುವುದು, ಅವರಿಗೂ ರಾಜ ಶುಲ್ಕ ವಿಧಿಸುವುದರಿಂದ ಅವರೂ ರಾಜನ ರಕ್ಷಣೆಗೆ ಒಳಪಟ್ಟವರೆಂದೂ, ಅವರ ಸಂಪಾದನೆ ಯನ್ನು ಕಿತ್ತು ತಿನ್ನುವ ಧೂರ್ತರಿರುವುದರಿಂದ ಹಾಗೆ ವ್ಯರ್ಥವಾಗುವ ಹಣ ರಾಜನ ಬೊಕ್ಕಸಕ್ಕೆ ಸೇರಬೇಕೆಂದೂ, ಆ ಹಣವನ್ನು ಮುಂದೆ ಅವಳ ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ಅವಳಿಗೆ ನೀಡಬೇಕೆಂಬ ನಿಯಮಗಳನ್ನು ಚಾಣಕ್ಯ ಆಗಲೇ ರೂಪಿಸಿದ್ದ.

ಅವರ ಯೋಗಕ್ಷೇಮಕ್ಕಾಗಿಯೇ ಒಬ್ಬ ಮಂತ್ರಿ, ಆತನಿಗೆ ಗಣಿಕಾಧ್ಯಕ್ಷನೆಂಬ ಪೋರ್ಟ್ ಫೊಲಿಯೋ. ಅವರ ವಯಸ್ಸು, ರೂಪ, ಯೌವ್ವನ, ಕಾರ್ಯಧಕ್ಷತೆಗಳ ಆಧಾರದ ಮೇಲೆ ಅವರಿಗೆ ಟ್ಯಾಕ್ಸ್‌ ವಿಧಿಸಬೇಕೆಂದೂ, ಅವಳಿಗೆ ವಯಸ್ಸಾಗಿ, ರೂಪಹೀನಳಾದ ಳೆಂದರೆ ಅರಮನೆಯಲ್ಲಿಯೇ ಮಾತೃಸ್ಥಾನದಲ್ಲಿ ಇರಿಸಬೇಕೆಂದೂ ನಿಯಮ ರೂಪಿಸಿದ್ದ. ಅಕಾಮಳಾದ ಕುಮಾರಿ
ಗಣಿಕೆಯರನ್ನು ಬಲಾತ್ಕರಿಸಿದರೆ, ಕೆಡಿಸಿದರೆ, ವಿಚಾರಣೆ ಇಲ್ಲದೇ ನೇರ ನೇಣುಗಂಬಕ್ಕೆ ಒಯ್ಯಬೇಕೆಂಬ ಕಾನೂನಿತ್ತು. ಒಳ್ಳೆಯ ಗಣಿಕೆಯರಿಗೆ ನಾಟ್ಯ, ಸಂಗೀತ, ವಾದ್ಯ ಕೌಶಲ, ಮಾಲಾಕರಣ, ಗಂಧ ತಯಾರಿ, ಇಂತಹ ವಿದ್ಯೆಗಳನ್ನು ಸರಕಾರಿ ಹಣದಲ್ಲಿಯೇ ಅವರಿಗೆ ಕಲಿಸಬೇಕು.

ಇದಕ್ಕೆ ಸೇರುವವರು ತಮ್ಮ ತಿಂಗಳ ಗಳಿಕೆಯ ಎರಡು ದಿನದ ಸಂಪಾದನೆಯನ್ನು ತೆರಿಗೆಯಾಗಿ ಸರಕಾರಕ್ಕೆ ಕೊಡಬೇಕು. ಈ ವೃತ್ತಿ ಆಗ ಹಿಡಿತಕ್ಕೆ ಬರುತ್ತದೆ. ಇಲ್ಲದಿದ್ದರೆ, ಇವರೂ ಕೊಬ್ಬಿ ಹಾವಳಿ ಮಾಡುತ್ತಾರೆ. ಕುಡಿತ, ಮಾಂಸ ಸೇವನೆ, ವೇಶ್ಯಾವಾಟಿಕೆ ಇವು ಯಾವುವೂ ನಿರ್ಮೂಲವಾಗುವಂಥಹವಲ್ಲ. ಹತೋಟಿಯಲ್ಲಿದ್ದು, ಇವು ಯಾವೂ ಇಲ್ಲದ ಸಜ್ಜನರಿಗೆ ಉಪದ್ರವ ವಾಗದಂತೆ ನೋಡಿಕೊಳ್ಳಬೇಕೆಂದು ಚಾಣಕ್ಯ ಕಾನೂನು ರೂಪಿಸಿದ್ದ.

ಅದಕ್ಕಲ್ಲವೇ ಇಂದಿಗೂ ಚಾಣಿಕ್ಯನ ಬುದ್ಧಿ ಎನ್ನುವುದು. ಹೀಗೆ ಇಂತಹ ರೋಚಕವಾದ ವಿಷಯಗಳನ್ನೊಳಗೊಂಡ ಚಾಣಕ್ಯನ ಕೃತಿಯನ್ನು ನಮ್ಮ ರಾಜಕಾರಣಿಗಳು, ಶಿಕ್ಷಕ, ಉಪನ್ಯಾಸಕ ವೃಂದದ ವರು ಓದಲೇ ಬೇಕಾದಂತಹ ಕೃತಿ. ಅದಕ್ಕೆ ನಾನು ಹೇಳು ವುದು, ಇವೆಲ್ಲ ಕಣ್ಣು ತೆರೆಸುವ ಕೃತಿಗಳು ಎಂದು ಕರೆದಿದ್ದೇನೆ.