Sunday, 5th January 2025

‌Roopa Gururaj Column: ರಾವಣನಿಲ್ಲದ ಮಂಡೋದರಿಯ ಬದುಕು !

ಒಂದೊಳ್ಳೆ ಮಾತು

ರೂಪಾ ಗುರುರಾಜ್

ರಾಮ ರಾವಣರ ಯುದ್ಧದಲ್ಲಿ ರಾವಣ ಮಡಿಯುತ್ತಾನೆ. ರಾವಣನಿಲ್ಲದೆ ಮಂಡೋದರಿಯ ಬದುಕು ಏನಾಗುತ್ತದೆ? ಮಂಡೋದರಿ ಪ್ರಾತಃಸ್ಮರಣೀಯರಾದ ಪಂಚಕನ್ಯೆಯರಲ್ಲಿ ಒಬ್ಬಳು. ನಮ್ಮ ಬದುಕಿನ ಪ್ರತಿಯೊಂದು ಘಟನಾವಳಿ ಗಳು ಎರಡು ಮಗ್ಗುಲಿನಿಂದ ಕೂಡಿರುತ್ತವೆ. ಮೊದಲನೆಯದಲ್ಲಿ ಸಂಕಷ್ಟವಿದ್ದರೆ ಮತ್ತೊಂದರಲ್ಲಿ ಸಂತೋಷ ವಿರುತ್ತದೆ. ರಾವಣನ ಪತ್ನಿಯಾಗಿ ಮಂಡೋದರಿ ಸ್ವರ್ಣ ಲಂಕೆಯ ಮಹಾರಾಣಿಯಾಗಿದ್ದಳು.

ಕಥೆಯೊಂದರಂತೆ ಮಧುರ ಎಂಬ ಅಪ್ಸರೆ ಪಾರ್ವತಿ ಇಲ್ಲದ ಸಮಯದಲ್ಲಿ ಕೈಲಾಸ ಪರ್ವತಕ್ಕೆ ಭೇಟಿ ಕೊಡುತ್ತಾಳೆ.
ಶಿವನನ್ನೇ ನೋಡುತ್ತಾ ಕೂಡುತ್ತಾಳೆ. ಅದೇ ಸಮಯಕ್ಕೆ ಬಂದ ಪಾರ್ವತಿ ಈ ದೃಶ್ಯವನ್ನು ಕಂಡು ಕೋಪಗೊಂಡು ಮಧುರ ಅಪ್ಸರೆಯನ್ನು ಶಪಿಸುತ್ತಾಳೆ. ಪಾರ್ವತಿಯ ಶಾಪದ ಕಾರಣ ಮಧುರ ಕಪ್ಪೆಯಾಗಿ ಬದಲಾಗುತ್ತಾಳೆ. ಶಿವನ ಅನುeಯಂತೆ ಪಾರ್ವತಿ ಮಧುರಳ ಶಾಪದ ಅವಧಿಯನ್ನ 12 ವರ್ಷಕ್ಕೆ ಸೀಮಿತಗೊಳಿಸುತ್ತಾಳೆ. 12 ವರ್ಷಗಳ ಸುದೀರ್ಘ ತಪಸ್ಸಿನ ನಂತರ ನಿನ್ನ ಶಾಪ ವಿಮೋಚನೆಯಾಗುತ್ತದೆ ಎನ್ನುತ್ತಾಳೆ. ಶಾಪ ವಿಮೋಚನೆಯ ನಂತರ ಅಪ್ಸರೆ ಮಧುರಾಳೇ ಮಂಡೋದರಿಯಾಗಿ ಬದಲಾಗುತ್ತಾಳೆ. ಮಾಯಾಸುರ ಮತ್ತು ಹೇಮಾಳ ದತ್ತು ಪುತ್ರಿಯಾಗು ತ್ತಾಳೆ. ಒಮ್ಮೆ ರಾವಣಾಸುರ ಮಾಯಾಸುರನ ಅರಮನೆಗೆ ಬರುತ್ತಾನೆ. ಮಂಡೋದರಿಯನ್ನು ಕಂಡು ಆಕೆಯಲ್ಲಿ ಅನುರಕ್ತನಾಗಿ ಮದುವೆಯಾಗುತ್ತಾನೆ.

ಮಂಡೋದರಿಗೆ ಮೂವರು ಮಕ್ಕಳಾಗುತ್ತಾರೆ. ಅವರೇ ಮೇಘನಾದ, ಅತಿಕಾಯ ಮತ್ತು ಅಕ್ಷಯಕುಮಾರ.
ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆತಂದಾಗ ಮಂಡೋದರಿ ಬುದ್ಧಿ ಹೇಳುತ್ತಾಳೆ. ಪರಸೀ ವ್ಯಾಮೋಹ ಸಲ್ಲದು ಎಂದು ತಿಳಿಹೇಳುತ್ತಾಳೆ. ದುರುಳ ರಾವಣ ಮಂಡೋದರಿಯ ಮಾತು ಕೇಳದೆ ತನ್ನ ಅಪಾಯವನ್ನು ತಾನೇ ತಂದುಕೊಳ್ಳುತ್ತಾನೆ. ಯುದ್ಧಾನಂತರ ಮಂಡೋದರಿ ರಣಭೂಮಿಗೆ ಭೇಟಿ ಕೊಡುತ್ತಾಳೆ. ಯುದ್ಧಭೂಮಿಯಲ್ಲಿ ಮೃತ ಗಂಡ, ಮಕ್ಕಳ ಶವವನ್ನು ನೋಡಿ ಆಕ್ರಂದನಗೈಯುತ್ತಾಳೆ. ಆದರೆ ಆಕೆಗೆ ರಾಮ ಸಾಮಾನ್ಯ ಮನುಷ್ಯ
ನಲ್ಲ ಸಾಕ್ಷಾತ್ ಮಹಾವಿಷ್ಣುವಿನ ಅವತಾರ ಎಂಬುದು ತಿಳಿಯುತ್ತದೆ.

ಬಹಳಷ್ಟು ಮಂದಿ ವಿಭೀಷಣನ ಕಾರಣ ರಾವಣ ಮೃತಪಟ್ಟ ಎನ್ನುತ್ತಾರೆ. ಆದರೆ ರಾವಣನ ಸಾವಿಗೆ ಮಂಡೋದರಿ ಕೂಡ ಕಾರಣ ಎಂದು ಪುರಾಣದಲ್ಲಿ ಕೆಲವು ಉಪ ಕಥೆಗಳು ಲಭ್ಯವಿದೆ! ರಾಮ ರಾವಣರ ಯುದ್ಧದಲ್ಲಿ ರಾವಣನ ವಕ್ಷಸ್ಥಳದಲ್ಲಿರುವ ಅಮೃತಕುಂಭದ ಸೂಚನೆ ಕೊಟ್ಟವನೇ ವಿಭೀಷಣ. ಆ ಕುಂಭವಿರುವ ತನಕ ರಾವಣನನ್ನು ಜಯಿಸಲು ಯಾರಿಂದಲೂ ಸಾಧ್ಯವಾಗಬಾರದು ಎಂಬ ವರವಿರುತ್ತದೆ. ರಾವಣನ ಮೇಲೆ ಅಮೋಘವಾದ ಅಸಗಳನ್ನು ರಾಮ ಪ್ರಯೋಗಿಸುತ್ತಾನೆ. ಆಗ ವಿಭೀಷಣ ಬಂದು ಹೇಳುತ್ತಾನೆ. ‘ಹೇ ರಾಮ, ನೀನು ಎಷ್ಟೇ ಶಕ್ತಿಯುತ ವಾದ ಅಸ್ತ್ರವನ್ನು ರಾವಣನ ಮೇಲೆ ಪ್ರಯೋಗಿಸಿದರೂ ಪ್ರಯೋಜನವಿಲ್ಲ. ಅವನನ್ನು ನಾಶ ಮಾಡಬಲ್ಲ ಅಸ್ತ್ರವು ಮಂಡೋದರಿಯ ಬಳಿಯಿದೆ’ ಎನ್ನುತ್ತಾನೆ. ರಾಮನ ಸೂಚನೆಯಂತೆ ಹನುಮಂತ ರಾವಣನ ಅರಮನೆಗೆ ತೆರಳುತ್ತಾನೆ. ರಾಮ, ರಾವಣರ ಯುದ್ಧದ ನಡುವೆ ಬ್ರಾಹ್ಮಣನಂತೆ ವೇಷ ಧರಿಸುತ್ತಾನೆ. ರಹಸ್ಯವಾಗಿ ಮಂಡೋ ದರಿಯ ಅಂತಃಪುರವನ್ನು ಹನುಮಂತ ಪ್ರವೇಶಿಸುತ್ತಾನೆ. ಮಂಡೋದರಿಯನ್ನು ಕೆಣಕುತ್ತಾನೆ. ಉಪಾಯವಾಗಿ ಆಕೆಯ ಬಳಿ ಇರುವ ಅಸ್ತ್ರವನ್ನು ತನ್ನ ವಶಪಡಿಸಿಕೊಳ್ಳುತ್ತಾನೆ. ಇನ್ನೇನು ಹನುಮಂತ ಅಂತಃಪುರದಿಂದ ಹಾರಬೇಕು ಎನ್ನುವಷ್ಟರಲ್ಲಿ ಮಂಡೋದರಿಗೆ ವಿಷಯ ತಿಳಿಯುತ್ತದೆ. ಅಷ್ಟು ಹೊತ್ತಿಗಾಗಲೇ ಹನುಮಂತ ರಣಭೂಮಿಯತ್ತ ತೆರಳಿರುತ್ತಾನೆ.

ಹನುಮನಿತ್ತ ಅಸ್ತ್ರದ ಸಹಾಯದಿಂದ ರಾಮ ರಾವಣನನ್ನು ಸಂಹರಿಸುತ್ತಾನೆ. ತನ್ನ ಪತಿಯ ಮೃತದೇಹವನ್ನು ಕಂಡ ಮಂಡೋದರಿ ಕೋಪಾವೇಶದಿಂದ ಶಾಪವನ್ನು ನೀಡುತ್ತಾಳೆ ‘ಯಾರು ನನ್ನಿಂದ ಉಪಾಯವಾಗಿ ಅಸ್ತ್ರವನ್ನು ಸಂಪಾದಿಸಿದರೋ, ಅವರು ನಿನ್ನಿಂದ ದೂರವಾಗಲಿ. ನನ್ನ ಈ ದಿನದ ಪರಿಸ್ಥಿತಿಯಂತೆಯೇ, ಈಗ ನಾನು ದುಃಖದ
ಮಡುವಿನಲ್ಲಿದ್ದೇನೆಯೋ ಹಾಗೆಯೇ ಅವರು ಸಹ ದುಃಖದಲ್ಲಿ ಮುಳುಗುವಂತಾಗಲಿ’. ಮಂಡೋದರಿಯ ಶಾಪದಂತೆ ಮುಂದೆ ರಾಮನಿಂದ ಆಂಜನೇಯ ಬೇರ್ಪಡುತ್ತಾನೆ.

ಮಂಡೋದರಿ ರಾಕ್ಷಸ ರಾವಣನ ಹೆಂಡತಿಯಾದರೂ, ಅವಳು ತನ್ನ ಸತ್ಕರ್ಮಗಳಿಂದ ಗಳಿಸಿದ ಪುಣ್ಯದಿಂದ ಅವಳ ಶಾಪವೂ ಫಲಿಸುವಂತಾಯಿತು. ಯಾರನ್ನಾದರೂ ನೋಯಿಸುವ ಮುಂಚೆ ನೂರು ಬಾರಿ ಯೋಚಿಸಿ. ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಎಲ್ಲರಿಂದ ಶುಭ ಹಾರೈಕೆಗಳನ್ನ ಪಡೆದು ಉತ್ತಮ ಜೀವನ ಸಾಗಿಸೋಣ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: #RoopaGururaj