Saturday, 11th January 2025

Roopa Gururaj Column: ವೈಕುಂಠ ಏಕಾದಶಿಯ ಮಹತ್ವ

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಮಹಾಪ್ರಳಯದ ನಂತರ ಭಗವಂತನು ಚಿಕ್ಕ ಶಿಶುವಿನ ರೂಪದಲ್ಲಿ ಒಂದು ಆಲದ ಎಲೆಯ ಮೇಲೆ ಪ್ರಳಯ ಕಾಲದ ಜಲದಲ್ಲಿ ತೇಲಾಡುತ್ತಿದ್ದನು. ಅವನು ಚತುರ್ಮುಖ ಬ್ರಹ್ಮನನ್ನು ಸೃಷ್ಠಿಸಿ, ಸೃಷ್ಠಿಕಾರ್ಯವನ್ನು ಪ್ರಾರಂಭಿ ಸಲು ಆದೇಶಿಸಿದನು. ಆದರೆ ಸ್ವಲ್ಪ ಸಮಯದ ಬ್ರಹ್ಮದೇವರು ತಮ್ಮ ಶಕ್ತಿಗಳ ಮೂಲನಾದ ಭಗವಂತನ ಮರೆತು, ಅಹಂಕಾರದಿಂದ ಸೃಷ್ಠಿಕಾರ್ಯವನ್ನು ಮಾಡಲಾರಂಭಿಸಿದರು. ಆ ಸಮಯದಲ್ಲಿ ಲೋಕ ಮತ್ತು ಕಂಠ ಎಂಬ ಇಬ್ಬರು ರಾಕ್ಷಸರು ಭಗವಂತನ ಕಿವಿಗಳಿಂದ ಉದ್ಭವಿಸಿದರು.

ಆ ರಾಕ್ಷಸರು ಅಹಂಕಾರ ಮತ್ತು ಅಪರಾಧ ಭಾವಗಳಿಂದ ತುಂಬಿದ್ದ ಬ್ರಹ್ಮದೇವರನ್ನು ಸಂಹರಿಸಲು ಹೊರಟರು. ಆಗ ಬ್ರಹ್ಮದೇವರು ಕೂಡಲೇ ತಮ್ಮ ಅಪರಾಧವನ್ನು ಅರಿತು ರಕ್ಷಣೆಗಾಗಿ ತಮ್ಮ ತಂದೆಯಾದ ಭಗವಂತನನ್ನು ಕುರಿತು ಪ್ರಾರ್ಥಿಸಿದರು. ಆಗ ಭಗವಂತನು ಬ್ರಹ್ಮದೇವರನ್ನು ‘ಕ್ಷಮಿಸಿ, ಆ ಇಬ್ಬರು ರಾಕ್ಷಸರಿಗೆ ವರಗಳನ್ನು ನೀಡ ಬಯಸಿದನು. ಆಗ ರಾಕ್ಷಸರು ಒಂದು ಮಾಸದವರೆಗೆ ನಿನ್ನೊಂದಿಗೆ ಯುದ್ದ ಮಾಡಿ, ಮರಣಾನಂತರ ನಿನ್ನ ಪವಿತ್ರವಾದ ಪಾದಪದ್ಮಗಳ ಆಶ್ರಯವನ್ನು ಪಡೆಯುವಂತೆ ವರವನ್ನು ಅನುಗ್ರಹಿಸು ಸ್ವಾಮಿ’ ಎಂದು ಭಗವಂತ ನಲ್ಲಿ ಪ್ರಾರ್ಥಿಸಿದರು.

ಅವರ ಕೋರಿಕೆಯಂತೆಯೇ ಭಗವಂತನು ಆಶೀರ್ವದಿಸಿದನು. ಹಾಗೂ ಅವರಿಬ್ಬರನ್ನೂ ಶಂಖ ಮತ್ತು ಚಕ್ರಗಳಾಗಿ ಬದಲಾಯಿಸಿ, ವೈಕಂಠದಲ್ಲಿ ತನ್ನ ಶಾಶ್ವತ ಸೇವಕರಾಗುವಂತೆ ಅವಕಾಶ ನೀಡಿದನು. ಆ ಸಮಯದಲ್ಲಿ ಲೋಕ ಮತ್ತು ಕಂಠರಿಬ್ಬರೂ ಭಗವಂತನಿಗೆ ಈ ರೀತಿಯಲ್ಲಿ ಹೇಳಿದರು, ‘ಓ ಶ್ರೀಮನ್ನಾರಯಣನೇ! ಸ್ವತಃ ನಿನ್ನ ಕೈಗಳಿಂದ
ನಮ್ಮನ್ನು ಸಂಹರಿಸುವ ಮೂಲಕ ನಮಗೆ ಮುಕ್ತಿಯನ್ನು ನೀಡಿರುವೆ. ನಮಗೆ ವೈಕುಂಠದಲ್ಲಿ ನಿವಾಸವನ್ನು ನೀಡಿ, ನಿನ್ನ ಶಾಶ್ವತ ಸೇವೆಯನ್ನು ಮಾಡುವಂತಹ ಭಾಗ್ಯವನ್ನು ಕರುಣಿಸಿರುವೆ. ಈ ಧನುರ್ಮಾಸದಲ್ಲಿ ಬರುವ ಶುಕ್ಲ ಪಕ್ಷದ ದಿವಸದಂದು ವೈಕುಂಠಧಾಮದ ಉತ್ತರದ್ವಾರವನ್ನು ತೆರೆದಿಡುವ ಮೂಲಕ ನಮ್ಮನ್ನು ವೈಕುಂಠಕ್ಕೆ ಆಹ್ವಾನಿಸಿರುವೆ. ಆದರೆ ನೀನು ನಮಗೆ ಮತ್ತೊಂದು ವರವನ್ನು ಅನುಗ್ರಹಿಸಬೇಕು. ಎಲ್ಲ ಪ್ರಜೆಗಳು ನಮ್ಮನ್ನು ಮತ್ತು ಈ ದಿನವನ್ನು ವೈಕುಂಠ ಏಕಾದಶಿಯೆಂದು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಭೂಲೋಕದಲ್ಲಿ ಯಾವ ಮನುಷ್ಯರು ವೈಕುಂಠ ಏಕಾದಶಿಯಂದು ಉತ್ತರದ್ವಾರದಿಂದ ಅತಿ ಪವಿತ್ರವಾದ ನಿನ್ನ ಆಲಯವನ್ನು ಪ್ರವೇಶಿಸುತ್ತಾರೋ, ಅವರಿಗೆ ಮರಣಾನಂತರ ವೈಕುಂಠ ಪ್ರಾಪ್ತಿಯು ಲಭಿಸಲಿ ಮತ್ತು ವೈಕುಂಠದಲ್ಲಿ
ಎಲ್ಲ ಶಾಶ್ವತ ಸೇವಕರಂತೆ, ಅವರಿಗೂ ನಿನ್ನ ಶಾಶ್ವತ ಸೇವೆ ದೊರಕಲಿ’ ಎಂದನು. ಆಗ ನಾರಾಯಣನು ಲೋಕ ಮತ್ತು ಕಂಠರು ಕೋರಿದ ವರವನ್ನು ಅನುಗ್ರಹಿಸಿದನು.

ಆ ದಿನದಂದು ನಾರಾಯಣನು ಅತಿಪವಿತ್ರವಾದ ವೈಕುಂಠ ಏಕಾದಶಿಯಂದು ಉತ್ತರದ್ವಾರದಿಂದ ತನ್ನ ಆಲಯ ವನ್ನು ಪ್ರವೇಶಿಸುವ ಮನುಷ್ಯರಿಗೆ, ಅವರ ಮರಣದ ನಂತರ ಮೋಕ್ಷವನ್ನು ನೀಡಿ ವೈಕುಂಠ ಪ್ರಾಪ್ತಿಯನ್ನು ಪ್ರಸಾ ದಿಸುತ್ತಾನೆ ಈ ರೀತಿಯಲ್ಲಿ ಏಕಾದಶಿಯು ಮೋಕ್ಷಕ್ಕೆ ಸಂಬಂಧಿಸಿರುವುದರಿಂದ, ಈ ಏಕಾದಶಿಯನ್ನು ಮೋಕ್ಷೋತ್ಸವ ಎಂದೂ ಕರೆಯುತ್ತಾರೆ. ವೈಕುಂಠ ಏಕಾದಶಿಯು, ಮಾರ್ಗಶಿರ ಮಾಸದಲ್ಲಿ ಅಮಾವಾಸ್ಯದ ನಂತರ ಬರುವ ಹನ್ನೊಂದನೆಯ ದಿನ.

ಹುಣ್ಣಿಮೆ ಮತ್ತು ಅಮಾವಾಸ್ಯೆಯ ನಂತರ ಬರುವ ಹನ್ನೊಂದನೆಯ ದಿನವೇ ಏಕಾದಶಿ. ಈ ದಿನವು ಶ್ರೀಹರಿಗೆ ಅತ್ಯಂತ ಪ್ರಿಯವಾದದ್ದು. ಮೂರು ಲೋಕಗಳಲ್ಲಿಯೂ ಏಕಾದಶಿ ವ್ರತಕ್ಕಿಂತ ಮಿಗಿಲಾದ ವ್ರತವು ಮತ್ತೊಂದಿಲ್ಲ ಎನ್ನುತ್ತಾರೆ. ಏಕಾದಶಿಯಂದು ನಾವು ಎಲ್ಲ ಪಾಪಕಾರ್ಯಗಳಿಂದ ದೂರವಿದ್ದು, ಇಂದ್ರಿಯ ತೃಪ್ತಿಯ ಕೆಲಸಗಳನ್ನು ತ್ಯಜಿಸಿ, ಭಗವಂತನ ಸಮೀಪದಲ್ಲಿ ಇರಬೇಕು.ಏಕಾದಶಿಯ ದಿನದಂದು ಉಪವಾಸವನ್ನು ಆಚರಿಸುವವರು ತಮ್ಮೆಲ್ಲ
ಪಾಪಕರ್ಮಗಳ ಫಲವನ್ನು ಕಳೆದುಕೊಂಡವನಾಗಿ, ಭಕ್ತಿಸೇವೆಯಲ್ಲಿ ಮುಂದುವರೆಯುತ್ತಾರೆ ಎಂದು ಬ್ರಹ್ಮ ವೈವರ್ತ ಪುರಾಣವು ತಿಳಿಸುತ್ತದೆ.

ಉಪವಾಸ ಮಾಡುವ ಮುಖ್ಯ ಉದ್ದೇಶವು, ದೈಹಿಕ ಅವಶ್ಯಕತೆಯನ್ನು ಕಡಿಮೆ ಮಾಡಿಕೊಂಡು,ನಮ್ಮ ಹೆಚ್ಚಿನ ಸಮಯವನ್ನು ಶ್ರೀಕೃಷ್ಣನ ಸೇವೆಯಲ್ಲಿ ತೊಡಗಿಸುವುದೆ ಆಗಿದೆ. ಇಂತಹ ನಮ್ಮ ಸನಾತನ ಆಚರಣೆಗಳ ಮಹತ್ವ ವನ್ನು ತಿಳಿದುಕೊಂಡು, ಕೈಲಾದಷ್ಟು ಆಚರಿಸುತ್ತಾ ದೇಹ ಶುದ್ದಿ, ಮನಃಶುದ್ಧಿಯನ್ನು ಸಾಧಿಸಿ, ಬದುಕನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿಕೊಳ್ಳೋಣ.

ಇದನ್ನೂ ಓದಿ: #RoopaGururaj

Leave a Reply

Your email address will not be published. Required fields are marked *