ಒಂದೊಳ್ಳೆ ಮಾತು
ರೂಪಾ ಗುರುರಾಜ್
ಒಂದು ಊರಿನಲ್ಲಿ ಶ್ರೀಮಂತ ಜಮೀನ್ದಾರನಿದ್ದ. ಆಗಿನ ಕಾಲಕ್ಕೆ ಕೋಟ್ಯಾಧಿಪತಿ. ಆದರೆ ದುರಹಂಕಾರಿ, ಊರಿಗೆ ಊರೇ ಅವನಿಗೆ ಹೆದರುತಿತ್ತು. ಅವನ ಮಾತೆ ಶಾಸನ. ಇಂತಿಪ್ಪ ಮನುಷ್ಯಗೆ ಒಮ್ಮೆ ‘ಕಣ್ಣು’ ಬೇನೆ ಬಂತು. ದೊಡ್ಡ
ದೊಡ್ಡ ವೈದ್ಯರುಗಳಿಂದ ಔಷದೋಪಚಾರ ಮಾಡಿಸಿದ. ಆದರೆ ಫಲಕಾರಿ ಯಾಗದೆ ಕಣ್ಣಿನ ಉರಿ ಹೆಚ್ಚಾಗಿ ಪೂರ್ತಿ ಕಣ್ಣು ಬಿಡಲಾಗದೆ ರೆಪ್ಪೆ ಮುಚ್ಚಿ ನೋಡಬೇಕಾಯಿತು.
ಕೊನೆಗೆ ಪಟ್ಟಣದ ಪ್ರಸಿದ್ಧ ಹಿರಿಯ ವೈದ್ಯರ ಹತ್ತಿರ ಹೋದನು, ಕಣ್ಣು ಪರೀಕ್ಷಿಸಿದ ಅವರು, ‘ನಿಮ್ಮ ಕಣ್ಣಿಗೆ ಸೋಂಕು ಆಗಿದೆ. ಕಣ್ಣಿನ ಉರಿ ಕಡಿಮೆಯಾಗಲು ಸೂರ್ಯ ಕಿರಣ ಬೀಳಬಾರದು ಹಾಗೆ ಕೇವಲ ಹಸಿರು ಬಣ್ಣ ಮಾತ್ರ ನೋಡಬೇಕು ಬೇರೆ ಬಣ್ಣಗಳನ್ನು ನೋಡಿದರೆ ಕಣ್ಣಿನ ದೃಷ್ಟಿ ಹೋಗುತ್ತದೆ’ ಎಂದರು. ಶ್ರೀಮಂತ, ವೈದ್ಯರ ಮಾತಿಗೆ ಒಪ್ಪಿ ಔಷಽ ಪತ್ಯ ಮಾಡಿದ. ಕೇವಲ ಹಸಿರು ಬಣ್ಣ ಮಾತ್ರ ನೋಡಬೇಕೆಂದು, ಗೋಡೆಗಳಿಗೆ ಬಣ್ಣ ಹಚ್ಚುವ ಬಣ್ಣಗಾರರನ್ನು ಕರೆಸಿದ. ತನ್ನ ಮನೆಯ ಗೋಡೆ, ಮಾಳಿಗೆ, ಗೃಹೋಪಕರಣಗಳು ಎಲ್ಲವನ್ನು ಹಸಿರುಮಯ ಮಾಡಿಸಿದ. ಆದರೆ ಹೊರಗೆ ಹೋದಾಗ ಯೋಚಿಸಿದ, ತಾನು ನಿತ್ಯ ಓಡಾಡುವ ಜಾಗವನ್ನು ಹಸಿರು ಮಾಡಿಸಲು, ಮತ್ತಷ್ಟು ಬಣ್ಣ ಬಣ್ಣಗಾರರನ್ನು ಕರೆಸಿದ, ‘ನಾನು ಎಲ್ಲಿ ನಡೆದಾ ಡುತ್ತೇನೋ ಅಲ್ಲ ಹಸಿರು ಬಣ್ಣ ಇರಬೇಕು ಬೇರೆ ಯಾವುದೇ ಬಣ್ಣವಿದ್ದರೂ ಅದನ್ನೆಲ್ಲ ತೆಗೆದು ಹಸಿರು ಬಣ್ಣ ಹಚ್ಚಿರಿ.
ಗಮನದಲ್ಲಿರಲಿ ನಾನು ಓಡಾಡುವ ಜಾಗದಲ್ಲಿ ಹಸಿರು ಬಿಟ್ಟು ಬೇರೆ ಯಾವ ಬಣ್ಣಗಳು ಕಣ್ಣಿಗೆ ಬೀಳಬಾರದು’ ಎಂದನು. ಒಂದು ದಿನ ದೂರದ ಊರಿನಿಂದ ಒಬ್ಬ ಬುದ್ಧಿವಂತ ವ್ಯಕ್ತಿ ಬಂದ. ಊರನ್ನು ನೋಡಿದ ಎಲ್ಲಿ ನೋಡಿ ದರೂ ಹಸಿರು. ಅಲ್ಲಿದ್ದ ಜನಗಳನ್ನು ‘ಇದೇನು ನಿಮ್ಮ ಊರಿನಲ್ಲಿ ಎಲ್ಲವೂ ಹಸಿರು ಬಣ್ಣ ಏಕೆ’ ಎಂದು ಕೇಳಿದ. ಊರಿನ ಜನರು ಶ್ರೀಮಂತನ ಕಥೆ ಹೇಳಿ ಎಲ್ಲರಿಗೂ ತೊಂದರೆಯಾಗಿದೆ ಆದರೆ ಮಾತಾಡುವಂತಿಲ್ಲ ಎಂದು ದುಃಖ ವನ್ನು ಹೇಳಿಕೊಂಡರು. ಹೊಸ ವ್ಯಕ್ತಿ ಯೋಚನೆ ಮಾಡಿದ ಮತ್ತು ಜನಗಳಿಗೆ ಹೇಳಿದ ‘ಇದಕ್ಕೊಂದು ಸುಲಭ ಉಪಾಯವಿದೆ ಅದನ್ನು ನಿಮ್ಮ ಶ್ರೀಮಂತನಿಗೆ ಹೇಳುತ್ತೇನೆ ನನಗೆ ಅವರ ಪರಿಚಯ ಮಾಡಿಸಿ’ ಎಂದನು.
ಜನರು ಶ್ರೀಮಂತನ ಮನೆ ತೋರಿಸಿದರು. ಆ ಬುದ್ಧಿವಂತ ಒಳಗೆ ಬಂದು ಶ್ರೀಮಂತನಲ್ಲಿ ತನ್ನ ಪರಿಚಯ ಮಾಡಿ ಕೊಂಡು, ‘ನಿಮ್ಮ ಕಣ್ಣ ಬೇನೆಯ ಪರಿಹಾರಕ್ಕೆ ನನ್ನ ಹತ್ತಿರ ಒಂದು ಉಪಾಯ ಇದೆ. ಅದಕ್ಕೆ ನೀವು ಇಷ್ಟೊಂದು ಹಣ ಖರ್ಚು ಮಾಡಬೇಕಾಗಿಲ್ಲ, ಇಷ್ಟೊಂದು ಕೆಲಸಗಾರರು ಬೇಡ’ ಎಂದನು. ಶ್ರೀಮಂತನಿಗೆ ಆ ಮಾತು ಕೇಳಿ ಬಹಳ ಸಂತೋಷವಾಯಿತು ಏಕೆಂದರೆ ಈಗಾಗಲೇ ಅವನು ನೀರಿನಂತೆ ಹಣ ಚೆಲ್ಲಿದ್ದಾನೆ.
ಇನ್ನು ಎಷ್ಟು ಆಗುವುದು ಗೊತ್ತಿಲ್ಲ. ಅವನಿಗೆ ಯೋಚನೆ ಶುರುವಾಗಿದೆ. ಬೇಗ ಹೇಳಿ ಅದು ಎಂಥ ಉಪಾಯ ಎಂದು
ಕಾತುರದಿಂದ ಕೇಳಿದ. ಬುದ್ಧಿವಂತ ಹೇಳಿದ, ‘ನೀವು ನಿಮ್ಮ ಕಣ್ಣಿಗೆ ಹಸಿರು ಬಣ್ಣದ ಕನ್ನಡಕವನ್ನು ಹಾಕಿರಿ ಅದರ ಬೆಲೆ ಕೇವಲ ಕೆಲವೇ ರುಪಾಯಿಗಳು. ಆಗ ನೀವು ನೋಡುವ ಎಲ್ಲ ವಸ್ತುಗಳು, ಪ್ರಕೃತಿ ಮತ್ತು ವ್ಯಕ್ತಿಗಳು ಪ್ರಾಣಿ, ಪಶು, ಪಕ್ಷಿ, ಎಲ್ಲವೂ ಹಸಿರಾಗಿಯೇ ಕಾಣುತ್ತದೆ’ ಎಂದನು.
ಶ್ರೀಮಂತನಿಗೆ ಈ ಮಾತು ಕೇಳಿ ತುಂಬಾ ಆಶ್ಚರ್ಯ ವಾಯಿತು ‘ನಾನ್ಯಾಕೆ ಇಷ್ಟು ಸುಲಭದ ಉಪಾಯವನ್ನು
ಯೋಚಿಸಲಿಲ್ಲ’ ಎಂದು ಅವನಿಗೆ ಉಡುಗೊರೆಗಳನ್ನು ಕೊಟ್ಟು ಕಳಿಸಿದನು. ಕೆಲವೊಮ್ಮೆ ನಮಗೆ ಸಮಸ್ಯೆಗಳು ಬೆಟ್ಟದಂತೆ ಕಾಡುತ್ತಿರುತ್ತವೆ. ಆದರೆ ಅದನ್ನು ಮೂರನೆಯವರ ದೃಷ್ಟಿಕೋನದಿಂದ ನೋಡಿದಾಗ ಸುಲಭವಾದ ಉಪಾಯಗಳು ಸಿಕ್ಕಿ ಬಿಡಬಹುದು. ಆದ್ದರಿಂದಲೇ ಸ್ನೇಹಿತರನ್ನು ಸಂಪಾದಿಸಿ ಅವರೊಡನೆ ಕಷ್ಟ ಸುಖಗಳನ್ನ ಹಂಚಿಕೊಳ್ಳಿ. ನಮ್ಮ ಕಷ್ಟಕ್ಕೆ ಆತ್ಮೀ ಯರಿಂದ ಕೆಲವೊಮ್ಮೆ ಸಮಂಜಸವಾದ ಪರಿಹಾರ ಸಿಕ್ಕಿಬಿಡುತ್ತದೆ. ಅದನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕಷ್ಟೆ.
ಇದನ್ನೂ ಓದಿ: #RoopaGururaj