Friday, 20th September 2024

ರಾಷ್ಟ್ರೀಯ ರೈತ ದಿನ: ರೈತಾಪಿ ವರ್ಗವನ್ನು ಸ್ಮರಿಸಿದ ಪ್ರಧಾನಿ, ಸಚಿವ ರಾಜನಾಥ್‌

ನವದೆಹಲಿ: ರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ರೈತಾಪಿ ವರ್ಗವನ್ನು ಸ್ಮರಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜಯಂತಿ ಸಂದರ್ಭದಲ್ಲಿ ಪ್ರಣಾಮ ಗಳು. ಗ್ರಾಮೀಣ ಭಾರತದ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಅವರನ್ನು ಸ್ಮರಿಸುವ ಸುದೈವ ಅವಕಾಶ ಸಿಕ್ಕಿರುವುದು ಪುಣ್ಯ ಎಂದಿದ್ದಾರೆ.

ರೈತರ ದಿನದ ಶುಭಾಶಯಗಳು, ರೈತರು ಈ ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸಿದ್ದಾರೆ. ಕೆಲವು ರೈತರು ನೂತನ ಕೃಷಿ ಮಸೂದೆ ವಿರುದ್ಧ ಹೋರಾಡು ತ್ತಿದ್ದಾರೆ. ಸರ್ಕಾರ ಅವರ ಜೊತೆ ಸೂಕ್ಷ್ಮವಾಗಿ ವಿನಯದಿಂದ ಸಂವೇದನಾಶೀಲ ವಾಗಿ ಮಾತುಕತೆ ನಡೆಸುತ್ತಿದೆ. ರೈತರು ಪರಿಸ್ಥಿತಿ, ನೂತನ ಕೃಷಿ ಮಸೂದೆ ಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಪ್ರತಿಭಟನೆ ಹಿಂಪಡೆಯುತ್ತಾರೆ ಎಂದು ಭಾವಿಸುತ್ತೇನೆ ಎಂದು ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್ ಮಾಡಿದ್ದಾರೆ.

ಈ ರೈತರ ದಿನ ರೈತರು ಮತ್ತು ರೈತ ವಿರೋಧಿಗಳ ಮಧ್ಯೆ ಹೋರಾಟವನ್ನು ಸಾರುತ್ತದೆ. ನಮ್ಮ ಅನ್ನದಾತರು ಹೋರಾಟ ಮಾಡುತ್ತಾ, ಜೀವವನ್ನು ತ್ಯಾಗ ಮಾಡಿದರೂ ಕೂಡ ಸರ್ಕಾರದ ಪ್ರತಿನಿಧಿಗಳ ಕಣ್ಣು ಕುರುಡಾದಂತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರೈತರು ನಿಜವಾದ ವೀರರು, ಅವರ ಸಮರ್ಪಣೆ, ಶ್ರಮದಿಂದ ನಾವೆಲ್ಲಾ ಸುಖದಿಂದ ಆಹಾರ ತಿನ್ನುತ್ತಿದ್ದೇವೆ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.