Thursday, 19th September 2024

ಮನ್ ‌ಕಿ ಬಾತ್ ಕಾರ್ಯಕ್ರಮಕ್ಕೆ ರೈತರು ‘ತಾಲಿ ಬಜಾವೊ’ ಪ್ರತಿಭಟನೆ ಬಿಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮನ್ ‌ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ವೇಳೆ ರೈತರು ‘ತಾಲಿ ಬಜಾವೊ’ ಪ್ರತಿಭಟನೆ ನಡೆಸಿದ್ದಾರೆ.

ರೈತರು ಪಾತ್ರೆಗಳನ್ನು ಬಡಿದು ತಾಲಿ ಬಜಾವೊ(ಚಪ್ಪಾಳೆ ತಟ್ಟಿ) ಪ್ರತಿಭಟನೆ ನಡೆಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಭಾಗದ ಹಲವು ರೈತರು ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಬೀಡುಬಿಟ್ಟಿದ್ದು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಮತ್ತು ರೈತ ಗುಂಪು ಗಳೊಂದಿಗೆ ನಡೆದ ಮಾತುಕತೆ ಇದುವರೆಗೆ ಫಲಪ್ರದವಾಗಿಲ್ಲ.

ತಾಲಿ ಬಜಾವೊ ಪರಿಕಲ್ಪನೆ ಆರಂಭಿಸಿದ್ದೇ ಪ್ರಧಾನ ಮಂತ್ರಿ ಮೋದಿಯವರು. ಕೊರೊನಾ ವಾರಿಯರ್ಸ್ ಗೆ ಪ್ರೋತ್ಸಾಹ ನೀಡುವ ಸಲುವಾಗಿ ದೇಶದ ನಾಗರಿಕರೆಲ್ಲರೂ ಒಟ್ಟು ಸೇರಿ ಚಪ್ಪಾಳೆ ತಟ್ಟಿ ಎಂದು ಲಾಕ್ ಡೌನ್ ನ ಮೊದಲ ಹಂತ ದಲ್ಲಿ ಕರೆ ಕೊಟ್ಟಿ ದ್ದರು.

ತಮ್ಮ ಬೇಡಿಕೆಗಳಿಗೆ ಪ್ರಧಾನಿ ಸ್ಪಂದಿಸುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಕಳೆದ ಭಾನುವಾರ, ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರು ಮನ್ ಕಿ ಬಾತ್ ಕಾರ್ಯಕ್ರಮದ ವೇಳೆ ತಾಲಿ ಬಜಾವೊ ಪ್ರತಿಭಟನೆ ನಡೆಸಲು ಕರೆ ಕೊಟ್ಟರು.

ಗಾಜಿಪುರ್ ಮತ್ತು ಸಿಂಘು ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಪ್ರಸಾರವಾಗುತ್ತಿದ್ದ ವೇಳೆ ಪಾತ್ರೆಗಳನ್ನು ಬಡಿದು ವಿರೋಧ ವ್ಯಕ್ತಪಡಿಸಿದರು.