ಹೊಸ ವರ್ಷಾರಂಭದ ಸಂಭ್ರಮಾಚರಣೆಗೆ ಸಜ್ಜುಗೊಳ್ಳುತ್ತಿದ್ದ ಅನೇಕರಲ್ಲಿ ಇದೀಗ ಬೇಸರ ಮೂಡಿದೆ.
ಸಂಭ್ರಮದ ಆಚರಣೆಗಳಿಗೆ ಕಡಿವಾಣ ಹಾಕಿರುವುದು ಸೋಂಕು ಹರಡುವಿಕೆ ತಡೆಗಟ್ಟುವ ಸೂಕ್ತ ಕ್ರಮ ಎಂಬುದನ್ನು ಇಡೀ ದೇಶದ ಜನತೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದೆ. ಪ್ರಸ್ತುತದ ಸಂದರ್ಭದಲ್ಲಿ ವರ್ಷಾರಂಭದ ಸಂಭ್ರಮ ಒಂದು ಸಂಭ್ರಮಾ ಚರಣೆಗೆ ಸೀಮಿತಗೊಂಡಿದೆಯೇ ಎಂಬ ಭಾವನೆ ಆವರಿಸಿರುವ ಪ್ರಸ್ತುತದ ದಿನಗಳಲ್ಲಿ ಸಾರ್ಥಕ ಕಾರ್ಯಗಳ ಮೂಲಕ ಸಂಭ್ರಮಾ ಚರಣೆಯ ಮಹತ್ವ ಹೆಚ್ಚಿಸಬೇಕಿರುವ ಅಗತ್ಯತೆ ಕಂಡುಬರುತ್ತಿದೆ.
ಈ ಕಾರಣದಿಂದ ಪ್ರಧಾನಿ ಮೋದಿಯವರು ‘ಮನ್ ಕೀ ಬಾತ್’ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹತ್ವವೆನಿಸುತ್ತವೆ. ಉತ್ತಮ ಆಶಯ ಹೊಂದಿರುವ ಇವುಗಳ ಅನುಷ್ಠಾನ ದೇಶದ ಹಿತದೃಷ್ಟಿಯಿಂದ ಪೂರಕವಾಗಿದ್ದು, ಸಾಕಾರಗೊಳಿಸಲು ಪಣ ತೊಡುವ ಮೂಲಕ ಹೊಸ ವರ್ಷಕ್ಕೆ ಹೊಸ ಸಂಕಲ್ಪ ತೊಡಬೇಕಾಗಿದೆ. ಜನರು ವಿದೇಶಿ ವಸ್ತುಗಳ ಬದಲು ದೇಶೀಯ ವಸ್ತು ಗಳನ್ನು ಬಳಸುತ್ತೇವೆ ಎಂದು ಸಂಕಲ್ಪತೊಟ್ಟು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಕಾರಣರಾಗುವಂತೆ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಜನರು ಯಾವುದೇ ವಸ್ತುಗಳನ್ನು ಬಳಸುವ ಮೊದಲು ಅವುಗಳನ್ನು ಪಟ್ಟಿ ತಯಾರಿಸಿಕೊಂಡು, ಅವುಗಳು ದೇಶೀಯವಾಗಿ
ತಯಾರಾಗಿವೆಯೇ ಎಂಬುದನ್ನು ಪರಿಶೀಲಿಸಿ ಉಪಯೋಗಿಸಿ. ಇದುವೇ ಈ ವರ್ಷದ ನೂತನ ಸಂಕಲ್ಪವಾಗಲಿ ಎಂದು ಕರೆ ನೀಡಿದ್ದಾರೆ. ಈ ಸಂಕಲ್ಪದ ಅನುಷ್ಠಾನ ಆಚರಣೆಗಿಂತಲೂ ಮಹತ್ವದಿಂದ ಕೂಡಿದ ಅಭಿಯಾನವಾಗಿದೆ.
ಜತೆಗೆ ಭಾರತದ ಔದ್ಯಮಿಕ ಕ್ಷೇತ್ರವು ವಿಶ್ವದರ್ಜೆಯ ಉತ್ಪನ್ನಗಳನ್ನು ದೇಶೀಯವಾಗಿಯೇ ತಯಾರಿಸಿ ‘ಆತ್ಮ ನಿರ್ಭರ್ ಭಾರತ್’ ಕನಸನ್ನು ಸಾಕಾರಗೊಳಿಸುವಂತೆ ಮನವಿ ಮಾಡಿದ್ದಾರೆ. ಇದು ಪ್ರಧಾನಿಯವರು ಜನತೆಗೆ ನೀಡಿದ ಕರೆ ಅಥವಾ ಮನವಿ ಎಂಬು ದಕ್ಕಿಂತಲೂ ಸದೃಢ ಭಾರತದ ನಿರ್ಮಾಣಕ್ಕಾಗಿ ಜಾರಿಗೊಳ್ಳಬೇಕಿರುವ ಮಹತ್ವದ ಆಶಯ.