Wednesday, 11th December 2024

ಲಸಿಕೆ ಖಾಸಗಿ ಮಾರಾಟ ಸೃಷ್ಟಿಸದಿರಲಿ ಅವಾಂತರ

ಕಳೆದ ಒಂದು ವರ್ಷದಿಂದ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಕರೋನಾ ಸೋಂಕಿನ ನಿವಾರಣೆಗೀಗ ಲಸಿಕೆ ಲಭ್ಯವಾಗಿದೆ.

ಸಂಕ್ರಾಂತಿ ಆಗಮನದ ಈ ಸಂದರ್ಭದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ ಸುದ್ದಿ. ಸರಕಾರ ಮೊದಲೇ ಚಿಂತನೆ ನಡೆಸಿ ಲಸಿಕೆ ವಿತರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಂಡಿರುವುದರಿಂದ ಯಾವುದೇ ರೀತಿ ಗೊಂದಲಗಳಿಗೆ ಆಸ್ಪದವಿಲ್ಲ. ಮುಂದಿನ ದಿನಗಳಲ್ಲಿ ಈ ಲಸಿಕೆ ಲಾಭದಾಯಕ ಮಾರ್ಗವಾಗಿಯೂ ಹಳಿ ತಪ್ಪುವ ಸಾಧ್ಯತೆಗಳು ಕಂಡುಬರುತ್ತಿದ್ದು, ಇಂಥ ಬೆಳವಣಿಗೆ ಸಂಭವಿಸದಂತೆ ತಡೆಯುವಲ್ಲಿ ಜಾಗ್ರತೆ ವಹಿಸಬೇಕಿರುವುದು ಅಗತ್ಯ.

ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಹೆಸರಿನ ಲಸಿಕೆ ಈಗಾಗಲೇ ರಾಜ್ಯವನ್ನು ತಲುಪಿದೆ. ವಿತರಣೆಗಾಗಿ ರಾಜ್ಯದಲ್ಲಿ ಸಿದ್ಧತೆಗಳು ಆರಂಭಗೊಂಡಿವೆ. ಕೇಂದ್ರ ಸರಕಾರದ ಕೋರಿಗೆ ಮೇರೆಗೆ 100 ಮಿಲಿಯನ್ ಡೋಸ್‌ಗಳನ್ನು ಮಾತ್ರವೇ 200ರು.ಗಳ ವಿಶೇಷ ಬೆಲೆಯಲ್ಲಿ ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಜತೆಗೆ ಖಾಸಗಿ ಮಾರುಕಟ್ಟೆ ಯಲ್ಲಿ ಖರೀದಿಸುವವರಿಗಾಗಿ ಲಸಿಕಾ ತಯಾರಿಕಾ ಸಂಸ್ಥೆ 1000ರು. ನಿಗದಿಪಡಿಸಲು ಚಿಂತನೆ ನಡೆಸಿದೆ.

ಖಾಸಗಿ ಮಾರುಕಟ್ಟೆಯಲ್ಲಿ ಲಸಿಕೆ ಮಾರಾಟಕ್ಕೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಅನುಮತಿ ದೊರೆತರೆ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗಿ ಜನಸಾಮಾನ್ಯರಿಗೆ ಹೊರೆಯಾಗುವ ಹಾಗೂ ವ್ಯವಹಾರಿಕ ಮನೋಭಾವವೇ ಮುಖ್ಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ಕೇಂದ್ರ ಸರಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳಂತೆಯೇ ಮುಂದೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ.

2020ರ ಜನವರಿಯಲ್ಲಿ ವುಹಾನ್ ಪ್ರಾಂತ್ಯದಿಂದ ಹರಡಿದ ಸೋಂಕು ಹಲವು ರಾಷ್ಟ್ರಗಳು ಮಾತ್ರವಲ್ಲದೆ, ನಮ್ಮ ರಾಜ್ಯದ
ಜನಜೀವನವನ್ನೇ ಅಸ್ತವ್ಯಸ್ಥಗೊಳಿಸಿತ್ತು. ಇದೀಗ ಸಂಕ್ರಾಂತಿ ಸಮಯದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ ಸುದ್ದಿ.