Wednesday, 27th November 2024

ಗೌಪ್ಯತೆಯ ಹುಡುಕಾಟ ಡಕ್‌ಡಕ್‌ಗೋ

ಬಡೆಕ್ಕಿಲ ಪ್ರದೀಪ್‌

ಟೆಕ್‌ ಟಾಕ್

ಅಂತರ್ಜಾಲವು ನಮ್ಮ ಜೀವನದ ಎಲ್ಲ ಸ್ತರಗಳಲ್ಲೂ ಸೇರಿಹೋಗಿರುವ ಈ ಕಾಲದಲ್ಲಿ, ಒಮ್ಮೆಗೇ ಬಳಕೆದಾರರ ಖಾಸಗಿತನದ ಪ್ರಾಮುಖ್ಯತೆಯ ಕುರಿತು ಚರ್ಚೆ ಹುಟ್ಟಿದೆ. ಇಂದು ಎಲ್ಲರ ಮಾಹಿತಿ ಸಂಗ್ರಹಿಸುತ್ತಿರುವ ಗೂಗಲ್‌ಗೆ ಪರ್ಯಾಯವಾದ ಸರ್ಚ್ ಎಂಜಿನ್ ಡಕ್‌ಡಕ್ ಗೋ ಬಳಸಿದರೆ ದೊರೆಯುವ ಲಾಭವೇನು? ಓದಿ ನೋಡಿ.

ಕಳೆದ ಕೆಲ ದಿನಗಳಿಂದ ವಿಶ್ವದಾದ್ಯಂತ ಚರ್ಚೆಗೆ ಬರುತ್ತಿರುವ ಗೌಪ್ಯತೆಯ ವಿಚಾರಕ್ಕೆ ಪೂರಕವಾಗಿ ಡಕ್‌ಡಕ್‌ಗೋ ಸರ್ಚ್ ಎಂಜಿನ್ ಕೂಡ ಇರುವುದು ಕುತೂಹಲಕಾರಿ. ಇದರ ಕಥೆ 12 ವರ್ಷ ಹಿಂದೆ ಶುರುವಾಗಿದ್ದರೂ, ಇದೀಗ ಬಳಕೆದಾರರ ಮಾಹಿತಿ ಗೌಪ್ಯತೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ವಿವಿಧ ಸ್ತರದ ಚರ್ಚೆಗಳ ನಡುವೆ ಇಂಟರ್ನೆಟ್ ಬಳಕೆದಾರರ ಹೊಸ
ಫೇವರೆಟ್ ಆಗುವತ್ತ ಈ ಸರ್ಚ್‌ಎಂಜಿನ್ ಧಾವಿಸುತ್ತಿದೆ.

ಡಕ್ ಅಂದರೆ ಬಾತುಕೋಳಿ ಅನ್ನುವ ಒಂದರ್ಥವಾದರೆ, ಯಾವುದೇ ದಾಳಿ ಯಿಂದ ತಪ್ಪಿಸಿಕೊಳ್ಳಲು ಬಗ್ಗುವ ಪ್ರಕ್ರಿಯೆಗೂ ಡಕ್ ಅನ್ನುವ ಪದವನ್ನು ಇಂಗ್ಲಿಷ್‌ನಲ್ಲಿ ಬಳಸುವುದರಿಂದ ಡಕ್‌ಡಕ್‌ಗೋ ಅನ್ನುವ ಹೆಸರಿನಲ್ಲಿ 2008ರಲ್ಲಿ ಆರಂಭವಾದ, ಬಳಕೆದಾರರ ಗೌಪ್ಯತೆಯನ್ನು ಕಾಪಾಡುವುದನ್ನೇ ಮೂಲ ಧ್ಯೇಯವಾಗಿಸಿರುವ ಈ ಸರ್ಚ್ ಎಂಜಿನ್‌ಗೂ ಅದೇ ಹೆಸರಿಡಲಾಗಿದೆ. ಗೂಗಲ್‌ನಂತಹ ದೈತ್ಯ ಸರ್ಚ್ ಎಂಜಿನ್‌ಗೆ ಹೋಲಿಸಿದರೆ ಗಾತ್ರದಲ್ಲೂ, ತಂತ್ರ ಜ್ಞಾನದಲ್ಲೂ ತುಂಬಾ ಹಿಂದಿ ರುವ ಡಕ್‌ಡಕ್ ‌ಗೋವನ್ನು ಜನ ಗೌಪ್ಯತೆಯ ದೃಷ್ಟಿಕೋನವನ್ನಿಟ್ಟುಕೊಂಡು ಬಳಸುತ್ತಿದ್ದಾರೆ.

ಆದರೂ ಗೂಗಲ್‌ನ ನಿತ್ಯದ 560 ಕೋಟಿ ಸರ್ಚ್‌ಗೆ ಹೋಲಿಸಿದರೆ, ಇದೀಗ ಮೊಟ್ಟಮೊದಲ ಬಾರಿಗೆ ಡಕ್‌ಡಕ್‌ಗೋ ದಿನನಿತ್ಯದ ಸರ್ಚ್‌ನ ಸಂಖ್ಯೆ 10 ಕೋಟಿಯನ್ನು ದಾಟಿದೆ. ಇದು ಗೂಗಲ್ ನ ಗಾತ್ರದ ಮುಂದೆ ಗೌಣವಾಗಿ ಕಾಣಿಸಿದರೂ, ಚಿಕ್ಕದಾಗಿ ಆರಂಭವಾದ ಡಕ್‌ಡಕ್‌ಗೋ ಇಷ್ಟು ದೊಡ್ಡದಾಗಿ ಬೆಳೆದಿರುವುದೂ ಸಣ್ಣ ವಿಷಯವಲ್ಲ ಬಿಡಿ.

ಸುರಕ್ಷಿತ ವೇದಿಕೆ
ಕ್ರೋಮ್, ಸಫಾರಿ, ಫಯರ್ ಫಾಕ್ಸ್‌, ಐಓಎಸ್, ಆಂಡ್ರಾಯ್ಡ್‌ ಹೀಗೆ ಎಲ್ಲಾ ಮುಖ್ಯ ಪ್ಲಾಟ್‌ಫಾರ್ಮ್‌ಗಳು ಹಾಗೂ ಬ್ರೌಸರ್‌ಗಳಲ್ಲಿ ಲಭ್ಯವಿರುವ ಡಕ್‌ಡಕ್‌ಗೋ, ಭಾರಿ ಸುರಕ್ಷಿತ ಚ್ಯಾಟ್ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಟಾರ್ ಬ್ರೌಸರ್‌ನ ಡೀಫಾಲ್ಟ್ ಸರ್ಚ್ ಇಂಜಿನ್ ಆಗಿದೆ. ಅದಲ್ಲದೇ, ಯಾವುದೇ ಬ್ರೌಸರ್‌ನ ಗೌಪ್ಯ ಬ್ರೌಸಿಂಗ್ ಮೋಡ್‌ನಲ್ಲಿ ಡಕ್ ಡಕ್‌ಗೋವನ್ನು ಡೀಫಾಲ್ಟ್ ಆಗಿ ನೀಡ ಲಾಗುತ್ತಿದೆ.

ಇಷ್ಟಕ್ಕೂ ಡಕ್‌ಡಕ್‌ಗೋ ಹೇಗೆ ಅಷ್ಟೊಂದು ಗೌಪ್ಯತೆಯನ್ನು ಕಾಪಾಡಲು ಸಾಧ್ಯ ಅಂದರೆ, ಅದು ತನ್ನ ಸರ್ಚ್ ಮಾಡುವವರ ಮಾಹಿತಿಯನ್ನು ಗೂಗಲ್ ಅಥವಾ ಇತರ ಸರ್ಚ್ ಎಂಜಿನ್‌ಗಳ ರೀತಿಯಲ್ಲಿ ಸಂಗ್ರಹಿಸಿ ಅದನ್ನು ಖರೀದಿದಾರರಿಗೆ (ಅಂದರೆ ಜಾಹೀರಾತುದಾರರು ಇತ್ಯಾದಿ) ಮಾರಾಟ ಮಾಡುವುದಿಲ್ಲ ಎನ್ನುತ್ತದೆ. ಒಂದೆಡೆ ವಾಟ್ಸಾಪ್ ಬದಲಿಗೆ ‘ಸಿಗ್ನಲ್’ ದಾಖಲೆ ಪ್ರಮಾಣದಲ್ಲಿ ಡೌನ್‌ಲೋಡ್ ಆಗುತ್ತಾ, ಇನ್ನೊಂದೆಡೆ 50 ಕೋಟಿ ಬಳಕೆದಾರರ ಗಡಿ ದಾಟಿದ ಟೆಲೆಗ್ರಾಮ್‌ನ ಸುದ್ದಿ ಬಂದಿರುವು ದರ ಬೆನ್ನಲ್ಲೇ ಡಕ್‌ಡಕ್ ಗೋ ಈ ಹೊಸ ಗೆಲುವನ್ನು ಕಂಡಿದ್ದು ಬಳಕೆದಾರರ ಖಾಸಗಿತನ ಮತ್ತು ಗೌಪ್ಯತೆಯ ಪರವಾಗಿ ಹೋರಾಡುತ್ತಿರುವವರು ಖುಷಿಯಲ್ಲಿ ಬೀಗುತ್ತಿದ್ದಾರೆ.

ಏನಿದು ಡಕ್‌ಡಕ್‌ಗೋ
ನೋಡುವುದಕ್ಕೆ ಥೇಟ್ ಗೂಗಲ್‌ನಂತೆಯೇ ಕಾಣುವ ಹೋಮ್‌ಪೇಜ್ ಹೊಂದಿರುವ ಸರಳ, ಸುಂದರ ಬಿಳಿ ಹಾಳೆಯ ನಡುವೆ ಬಾತುಕೋಳಿಯ ಮುಖದ ಲೋಗೋ ಹೊಂದಿರುವ ಡಕ್‌ಡಕ್‌ಗೋ ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ಮುಖ್ಯ ಕಛೇರಿ ಹೊಂದಿದೆ. ಸುಮಾರು 400 ಮೂಲಗಳನ್ನು ಬಳಸಿ ತನ್ನ ರಿಸಲ್ಟ್‌‌ಗಳನ್ನು ನೀಡುವ ಡಕ್‌ಡಕ್ ಗೋ ಯಾರು, ಎಲ್ಲಿ ಎಷ್ಟು ಮಾಹಿತಿಯನ್ನು ಹುಡುಕುತ್ತಿದ್ದಾರೆ ಎನ್ನುವುದನ್ನು ಅರಿತರೂ, ಅವರ್ಯಾರು, ಅವರ ವೈಯಕ್ತಿಕ ಆಯ್ಕೆಗಳೇನು, ಆಸೆಗಳೇನು, ಇಂತಹ ವಿವರಗಳನ್ನು ಯಾರಿಗೂ ಬಹಿರಂಗಪಡಿಸುವುದಿಲ್ಲ ಎನ್ನುವ ಶಪಥವನ್ನು ಮಾಡಿಯೇ ಬ್ಯುಸಿನೆಸ್‌ಗಿಳಿದ ಸಂಸ್ಥೆ.

ಗೂಗಲ್ ಇದಕ್ಕೆ ತದ್ವಿರುದ್ಧ, ನಮ್ಮೆಲ್ಲಾ ಮಾಹಿತಿಯನ್ನು ಗೊತ್ತಿಲ್ಲದೇ ಸಂಗ್ರಹಿಸುವ ದೈತ್ಯ ಅದು. ವಾಟ್ಸಾಪ್‌ನ ಯು ಟರ್ನ್
ಜನ ದಿನದಿಂದ ದಿನಕ್ಕೆ ತಮ್ಮ ಮಾಹಿತಿ ಯಾರ್ಯಾರದೋ ಕೈಯಲ್ಲಿದೆ ಎನ್ನುವುದನ್ನು ಅರಿತು ಅದರಿಂದ ಭಯ ಬಿದ್ದು
ಈ ರೀತಿಯ ಗೌಪ್ಯತೆಯನ್ನು ಪ್ರತಿಪಾದಿಸುವ ಆ್ಯಪ್ ಅಥವಾ ಜಾಲತಾಣಗಳತ್ತ ಹೆಚ್ಚು ಹೆಚ್ಚು ವಾಲುತ್ತಿರುವುದರಿಂದ ಮೊನ್ನೆ
ಮೊನ್ನೆಯಷ್ಟೇ ಫೆಬ್ರವರಿ 8ರ ಒಳಗೆ ತಮ್ಮ ಗೌಪ್ಯತೆಯ ಪಾಲಿಸಿಯನ್ನು ಪಾಲಿಸಲೇಬೇಕು ಎಂದು ತಾಕೀತು ಮಾಡಿದ್ದ
ಮಾತನ್ನು ವಾಟ್ಸಾಪ್ ಸ್ವಲ್ಪ ದಿನಗಳ ಮಟ್ಟಿಗೆ ಮುಂದೂಡಿದೆ.

ಮೊದಲಿಗೆ ಕೇವಲ ವಾಟ್ಸಾಪ್ ಬ್ಯುಸಿನೆಸ್ ಅಕೌಂಟ್‌ಗಳ ಮಾಹಿತಿಯನ್ನು ಮಾತ್ರ ತಾನು ಫೇಸ್‌ಬುಕ್ ಜೊತೆಗೆ ಹಂಚಿಕೊಂಡು ಅದರ ಬಳಕೆ ಮಾಡುವ ಇರಾದೆ ತನ್ನದು ಎಂದಿದ್ದ ವಾಟ್ಸಾಪ್ ಇದೀಗ ತನ್ನ ಈ ಕುರಿತಾದ ನಿಲುವನ್ನು ವಿಶ್ವದಾದ್ಯಂತ ಕೋಟ್ಯಂತರ ಮಂದಿ ವಿರೋಧಿಸುತ್ತಿರುವ ಹಾಗೂ ಉಳಿದ ಗೌಪ್ಯತೆಯನ್ನು ಪ್ರತಿಪಾದಿಸುವ ಚ್ಯಾಟ್ ಆ್ಯಪ್‌ಗಳತ್ತ ಮುಖ ಮಾಡಿರುವುದರಿಂದ ಮೇ 15ರ ವರೆಗೆ ತನ್ನ ಈ ಹೊಸ ನೀತಿಯನ್ನು ಜಾರಿಗೆ ತರುವುದಕ್ಕೆ ತಡೆ ನೀಡುತ್ತೇನೆಂದು ತಿಳಿಸಿದೆ.

ಒಂದೆಡೆ ಸದ್ಯದ ಮಟ್ಟಿಗೆ ನಿರಾಳತೆ ಕಂಡಿದ್ದರೂ ಮೇ 15ರ ಒಳಗೆ ತನ್ನ ನಿಲುವೇನು ಹಾಗೂ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಕಾಲಾವಕಾಶ ತೆಗೆದುಕೊಂಡಿರುವುದನ್ನು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಪೂರಕವಾಗಿ, ಅಂದರೆ ಗೌಪ್ಯತೆ ಪ್ರತಿಪಾದಿಸುವವರ ಪರವಾಗಿ ದೆಹಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯೊಂದನ್ನು ದಾಖಲಿಸಲಾಗಿದ್ದು, ಇದರ ವಿಚಾರಣೆ ಇನ್ನೂ ಆಗುವುದಿದೆ. ತನ್ನ ಗೌಪ್ಯತಾ ನೀತಿಯ ಬಗ್ಗೆ ತಪ್ಪು ತಿಳುವಳಿಕೆ ಹೊಂದಿರುವವರಿಗೆ ನಾವು ಈ ಮುಂದಿನ ದಿನಗಳಲ್ಲಿ ಸರಿಯಾದ ಮಾಹಿತಿಯನ್ನು ನೀಡುವ ಮೂಲಕ ಅವರ ನಂಬಿಕೆಯನ್ನು ಗಳಿಸುವಲ್ಲಿ ಸಫಲರಾಗುತ್ತೇವೆ ಎನ್ನುವ ವಿಶ್ವಾಸವನ್ನು ಫೇಸ್‌ಬುಕ್ ವ್ಯಕ್ತಪಡಿಸಿದ್ದರೆ, 2012ರಲ್ಲಿ ವಾಟ್ಸಾಪ್ ಅನ್ನು ಖರೀದಿಸಿದ ಬಳಿಕ ಫೇಸ್‌ಬುಕ್ 2016ರ ವೇಳೆಗೆ ಸ್ವಲ್ಪ ಮಟ್ಟಿನ ಮಾಹಿತಿಯನ್ನು ತನ್ನ ಉಳಿದ ಪ್ಲಾಟ್‌ಫಾರ್ಮ್‌ಗಳ ಜೊತೆಗೆ  ಹಂಚಿಕೊಳ್ಳು ವುದನ್ನು ಶುರು ಮಾಡಿ, ನಿಧಾನಕ್ಕೆ ತನ್ನ ನೀತಿಯನ್ನ ಸ್ವಲ್ಪ ಸ್ವಲ್ಪವೇ ಬದಲು ಮಾಡಿ, ಇದೀಗ ಹೆಚ್ಚು ಪಾರದರ್ಶಕವಾಗಿ ಮಾಹಿತಿಗಳನ್ನು ಹಂಚಿಕೊಳ್ಳುವ ಪ್ರಯತ್ನಕ್ಕೆ ತೊಡಗಿದೆ.

ಗೌಪ್ಯತೆ ತಮ್ಮ ಡಿಎನ್‌ಎಯಲ್ಲಿಯೇ ಇದೆ, ಹಾಗೂ ನಾವು ಯಾವುದೇ ಗ್ರಾಹಕರ ಫೋನ್ ನಂಬರ್ ಬಿಟ್ಟರೆ ಬೇರೇನೂ ಮಾಹಿತಿ ಯನ್ನು ಸಂಗ್ರಹಿಸುವುದಿಲ್ಲ ಅನ್ನುವ ವಾಟ್ಸಾಪ್ ಮೂಲ ಮಾಲಕರ ಮಾತನ್ನು ಬಳಸಿಕೊಂಡಿದ್ದ ವಾಟ್ಸಾಪ್ ನಿಮ್ಮ ಈಮೇಲ್ ಐಡಿ, ಹುಟ್ಟು ಹಬ್ಬ, ನಿಮ್ಮ ಮನೆಯ ವಿಳಾಸ, ನೀವು ಕೆಲಸ ಮಾಡುವ ಸ್ಥಳದ ವಿವರ, ನಿಮ್ಮ ಇಷ್ಟಗಳು, ಜಿಪಿಎಸ್ ಮಾಹಿತಿ, ಹೀಗೆ ಯಾವುದನ್ನೂ ಪಡೆದುಕೊಳ್ಳುವ ಗೋಜಿಗೇ ಹೋಗುವುದಿಲ್ಲ, ಹಾಗಾಗಿ ನಮ್ಮನ್ನು ನಂಬುವುದಕ್ಕೆ ಭಯ ಪಡಬೇಕಿಲ್ಲ ಅನ್ನುವ ಮಾತನ್ನು ತಿಳಿಸಿತ್ತು.

ಇಷ್ಟೆಲ್ಲಾ ಹೇಳಿದ ಮೇಲೂ ಇತರೇ ಗೌಪ್ಯತೆಗೆ ಒತ್ತುಕೊಡುವ ಚ್ಯಾಟ್ ಆಪ್‌ಗಳ ಬೇಡಿಕೆ ಹೆಚ್ಚುತ್ತಿರುವ ಹಾಗೂ ತನ್ನ ಜನಪ್ರಿಯತೆ ಕುಂದುತ್ತಿರುವುದು ಕಂಡು ಭಯಗೊಂಡಿರುವ ವಾಟ್ಸಾಪ್ ತನ್ನ ಈ ನೀತಿಯನ್ನು ಜನರಿಗೆ ಎಷ್ಟರಮಟ್ಟಿಗೆ ಅರ್ಥಮಾಡಿಸಿ ಕೊಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.