ಮಲ್ಲಿಕಾರ್ಜುನ ಹೆಗ್ಗಳಗಿ
ಹಳ್ಳಿಯ ಅಮಾಯಕ, ವಿಕ್ಷಿಪ್ತ ಮನಸ್ಸಿನ ಬಡ ಹುಡುಗನೊಬ್ಬ ಪಟ್ಟಣಕ್ಕೆ ವಲಸೆ ಹೋಗಿ ಅಲ್ಲಿಯ ಜನರ ಪ್ರೀತಿ ಮತ್ತು ನಂಬಿಕೆ ಗಳಿಸಿ, ಈ ಬರಹದ ಲೇಖಕರೇ ಸ್ವತಃ ಕಣ್ಣಾರೆ ಕಂಡಂತೆ, ದೈವತ್ವಕ್ಕೆ ಏರಿದ ಅಪರೂಪದ ಕಥೆ.
ಆ ಹುಡುಗನ ಹುಟ್ಟೂರು ಬಾಗಲಕೋಟ ಜಿಲ್ಲೆಯ ಮುಗಳಖೋಡ. ಸುಮಾರು ಆರೇಳು ದಶಕಗಳ ಹಿಂದೆ ಮುಗಳಖೋಡ
ಗ್ರಾಮದಲ್ಲಿ ಸುತ್ತಾಡಿಕೊಂಡು ಇದ್ದ ಆತ, ಅಲ್ಪಸ್ವಲ್ಪ ಕೃಷಿ ಕೆಲಸಗಳನ್ನು ಮಾಡುತ್ತಿದ್ದ. ಆತ ಅಷ್ಟು ಬುದ್ಧಿವಂತನಾಗಿರಲಿಲ್ಲ. ಅವನಿಗೆ ಶಾಲೆಗೆ ಹೋಗುವ ಅವಕಾಶ ದೊರೆಯಲಿಲ್ಲ. ಹೀಗೇ ದಿನ ಕಳೆದು, ಆ ಹುಡುಗ ಯುವಕನಾದ. ಆದರೆ ತನ್ನ ಅಮಾಯ ಕತನವನ್ನು ಬಿಡಲಿಲ್ಲ, ಅಲ್ಲಿ ಇಲ್ಲಿ ಸುತ್ತುವುದು ಮಾಡುತ್ತಿದ್ದ.
ಇವನಿಗೊಂದು ಮದುವೆ ಮಾಡಿದರೆ ಸುಧಾರಿಸುತ್ತಾನೆ ಎಂದು ಊರ ಹಿರಿಯರು ಹಾಗೂ ಪಾಲಕರು ಸೇರಿ ಮದುವೆ ಮಾಡಿದರು. ಅವನು ಮದುವೆ ಮಾಡಿದ್ದಕ್ಕೋ ಏನೋ ಹೆದರಿಕೊಂಡು ಒಂದು ಲಾರಿ ಹತ್ತಿ ಬಾಗಲಕೋಟ ಪಟ್ಟಣಕ್ಕೆ ಪಲಾಯನ ಮಾಡಿ ದನು. ಈ ದೊಡ್ಡ ಊರಿನಲ್ಲಿ ಏನು ಮಾಡುವುದೆಂದು ತೋಚದೆ, ಬಾಗಲಕೋಟೆ ರಸ್ತೆಯಲ್ಲಿ ಅನಾಥನಾಗಿ ಅಲೆದಾಡ ತೊಡಗಿ ದನು. ಅಲ್ಲಿಯ ಹೋಟೆಲ್, ಕಿರಾಣಿ ಅಂಗಡಿ, ರಸ್ತೆ ಬದಿಯ ಹಣ್ಣು ವ್ಯಾಪಾರಿಗಳ ಮಳಿಗೆಗಳಿಗೆ ನುಗ್ಗಿ ಕೈಗೆ ಸಿಕ್ಕ ತಿಂಡಿ ಹಣ್ಣು ಎತ್ತಿಕೊಂಡು ತಿನ್ನತೊಡಗಿದನು.
ರಸ್ತೆಯಲ್ಲಿ ಓಡಾಡುವ ಹುಡುಗರಿಗೆ ಹಣ್ಣು, ತಿಂಡಿ ಹಂಚತೊಡಗಿದ. ಒಂದು ಮಾಸಿದ ಧೋತರ, ಮಾಸಿದ ನಿಲುವಂಗಿ ಹಾಗೂ ತಲೆಗೆ ಒಂದು ಹಗ್ಗ ಈ ಇಷ್ಟು ಆತನ ಪೋಷಾಕು. ಕ್ರಮೇಣ ಊರಿನ ಜನರಲ್ಲಿ ಒಂದು ನಂಬಿಕೆ ಬೆಳೆಯತೊಡಗಿತು. ಈ ಅಮಾ ಯಕ ವ್ಯಕ್ತಿ ತಮ್ಮ ಅಂಗಡಿಗಳಿಗೆ ಬಂದು ಅಲ್ಲಿಯ ತಿಂಡಿ ಅಥವಾ ಹಣ್ಣು ತಗೆದುಕೊಂಡರೆ ಶುಭ ಎಂದು ಭಾವಿಸ ತೊಡಗಿದರು. ಈ ವಿಚಾರ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹರಡಿ. ಎಲ್ಲರೂ ತಮ್ಮ ಅಂಗಡಿಯಿಂದ ಈತ ಬೆಲ್ಲವನ್ನೋ ತಿಂಡಿಯನ್ನೋ ಕಿತ್ತುಕೊಂಡು ಹೋಗಲಿ ಎಂದು ಬಯಸತೊಡಗಿದರು.
ಇದಕ್ಕೆ ವೈಜ್ಞಾನಿಕ ಆಧಾರವೇನೂ ಇರಲಿಲ್ಲ, ಇದು ನಂಬಿಕೆ. ಈತ ಮನೆಗೆ ಪ್ರವೇಶಿಸಿದರೆ ಆ ಮನೆಯವರು ಶ್ರೀಮಂತರಾಗು ತ್ತಾರೆ ಎನ್ನುವ ನಂಬಿಕೆಯೂ ಬೆಳೆಯಿತು. ಅನೇಕರು ಈತನ ಆಗಮನಕ್ಕೆ ಕಾಯುತ್ತಿದ್ದರು. ಆ ಮಟ್ಟದಲ್ಲಿ ಅವನ ಬಗ್ಗೆ ಭಕ್ತಿ ಬೆಳೆಯಿತು.
ಕ್ರಮೇಣ ಇವನ ಸುತ್ತ ಒಂದು ಪ್ರಭಾವಳಿ ಬೆಳೆಯತೊಡಗಿತು. ಜನರು ತಮ್ಮದೇ ರೀತಿಯಲ್ಲಿ ಈತನನ್ನು ಗೌರವಿಸತೊಡಗಿದರು, ಭಕ್ತಿಯಿಂದ ನೋಡತೊಡಗಿದರು.
ತಲೆಗೆ ಕಟ್ಟಿದ ಹಗ್ಗ
ತಲೆಗೆ ಹಗ್ಗ ಕಟ್ಟಿಕೊಳ್ಳುವುದರಿಂದ ಎಲ್ಲರೂ ಈತನನ್ನು ಲಡ್ಡು ಮುತ್ಯಾ ಎಂದು ಪ್ರೀತಿಯಿಂದ ಕರೆಯತೊಡಗಿದರು. ಕ್ರಮೇಣ ಈತನನ್ನು ಒಬ್ಬ ಅವಧೂತನೋ ಎಂಬಂತೆ ಜನಸಾಮಾನ್ಯರು ಭಕ್ತಿ -ಭಾವ ತೋರಿಸತೊಡಗಿದರು. ಆತ ಯಾವುದಾದರೂ ಗುಡಿಗುಂಡಾಗಳಲ್ಲಿ ಮಲಗಿ ದಿನ ಕಳೆಯುತ್ತಿದ್ದ. ಇರುವುದಕ್ಕೆ ಒಂದು ನಿರ್ದಿಷ್ಟ ಸ್ಥಳ ಎಂದು ಇರಲಿಲ್ಲ. ಇದನ್ನು ಗುರುತಿಸಿದ
ಜನರು, ಗದ್ದನಕೇರಿ ಕ್ರಾಸ್ ಬಳಿ ಒಂದು ಪುಟ್ಟ ಕುಟೀರ ಕಟ್ಟಿ ಅಲ್ಲಿ ವಾಸ ಮಾಡಲು ಅನುಕೂಲಮಾಡಿ ಕೊಟ್ಟರು.
ಸುಮಾರು 20 ವರ್ಷ ಬಾಗಲಕೋಟೆಯ ರಸ್ತೆಗಳಲ್ಲಿಯೇ ದಿನ ಕಳೆದ ಈತ, ಕಾಲಕ್ರಮೇಣ ವಯೋಸಹಜವಾಗಿ ಮತ್ತು ಪುಟ್ಟ ಅನಾರೋಗ್ಯದಿಂದ ನಿಧನ ಹೊಂದಿದ. ಅದಾಗಲೇ ದೈವೀ ಸ್ವರೂಪದ ವ್ಯಕ್ತಿ ಎಂದು ಹೆಸರಾಗಿದ್ದರಿಂದ, ಬಾಗಲಕೋಟೆಯ ಜನ ತುಂಬ ವೈಭವದಿಂದ ಸಮೀಪದ ಗದ್ದನಕೇರಿ ಕ್ರಾಸ್ ಬಳಿ ಅಂತ್ಯಕ್ರಿಯೆ ಮಾಡಿದರು.
ಲಡ್ಡು ಮುತ್ಯಾಗೆ ಯಾರು ಏನೇ ಕೊಟ್ಟರು ಅವರ ಸುತ್ತಮುತ್ತಲು ಇದ್ದವರಿಗೆ ಕೊಟ್ಟು ಬಿಡುತ್ತಿದ್ದ. ಇಲ್ಲವೇ ತೂರಿ ಒಗೆಯುತ್ತಿದ್ದ. ಹೊಸ ಬಟ್ಟೆೆ ಕೊಟ್ಟರೆ ಧರಿಸುತ್ತಿರಲಿಲ್ಲ. ಎಂದಿನಂತೆ ಕೊಳಕು ಬಟ್ಟೆಯಲ್ಲಿಯೇ ಇರುತ್ತಿದ್ದ. ಅವನಿಗೆ ಹೆಚ್ಚು ಮಾತಾಡಲು ಬರುತ್ತಿರಲಿಲ್ಲ. ಮಾತನಾಡಿದ್ದು ಅರ್ಥವೂ ಆಗುತ್ತಿರಲಿಲ್ಲ.
ಸೇವಾ ಸಮಿತಿ ರಚನೆ
ಈಗ ಸುಮಾರು 10 ವರ್ಷಗಳ ಹಿಂದೆ ಲಡ್ಡು ಮುತ್ಯಾ ಅನಾರೋಗ್ಯದಿಂದ ನಿಧನಹೊಂದಿದ. ಜನರು ಭಕ್ತಿಯಿಂದ ಬೀದಿ ಬೀದಿ ಗಳಲ್ಲಿ ಮೆರವಣಿಗೆ ಮಾಡಿ ಗೌರವದಿಂದ ಅಂತ್ಯಕ್ರಿಯೆ ನೆರವೇರಿಸಿದರು. ಈಗ ಲಡ್ಡು ಮುತ್ಯಾನ ಗದ್ದಿಗೆ ನಿರ್ಮಿಸಿದ್ದಾರೆ.
ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ. ಲಡ್ಡು ಮುತ್ಯಾ ಹೆಸರಿನಲ್ಲಿ ಸೇವಾ ಟ್ರಸ್ಟ್ ರಚನೆಯಾಗಿದೆ. ಜನರ ಕೊಡುಗೆಯಿಂದ ಟ್ರಸ್ಟ್ ಕೂಡ ಬೆಳೆದಿದೆ. ಕಲ್ಯಾಣ ಮಂಟಪ, ಸಭಾ ಭವನ, ಬರುವ ಭಕ್ತರಿಗೆ ವಾಸಕ್ಕೆ ರೂಮ್ಗಳನ್ನು ನಿರ್ಮಿಸಲಾಗಿದೆ. ಲಡ್ಡು ಮುತ್ಯಾನ ಭಕ್ತರ ಸಂಖ್ಯೆ ದಿನೆ ದಿನೇ ಬೆಳೆಯುತ್ತಿದೆ.
ಲಡ್ಡು ಮುತ್ಯಾನನ್ನು ಕೊಂಡಾಡುವ, ಆತನ ಪವಾಡಗಳನ್ನು ತಿಳಿಸುವ ಹಾಡುಗಳನ್ನು ರಚಿಸಲಾಗಿದ್ದು, ಅವುಗಳ ಸಿಡಿಗಳು ಬಿಡುಗಡೆಯಾಗಿವೆ. ಹಲವು ಕಡೆ ಆತನನ್ನು ಕೊಂಡಾಡುವ ಹಾಡುಗಳನ್ನು ಹಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಈತನ ಅಧ್ಯಾತ್ಮ ಜೀವವನ್ನಾಧರಿಸಿದ ಒಂದು ಚಲನಚಿತ್ರವೂ ಬಿಡುಗಡೆಯಾಗಿದೆ. ಅಮಾಯಕ ಮತ್ತು ವಿಕ್ಷಿಪ್ತ ಸ್ವಭಾವದ ವ್ಯಕ್ತಿಯು,
ಹೇಗೆ ಜನರ ವಿಶ್ವಾಸ ಗಳಿಸಿ, ದೈವತ್ವಕ್ಕೇರಬಹುದು ಎಂಬುದಕ್ಕೆ ಲಡ್ಡು ಮುತ್ಯಾನ ಜೀವನ ಒಂದು ಉದಾಹರಣೆ.