Wednesday, 27th November 2024

ಎಲ್ಲಿ ಹೋದವು ಜಪಾನ್‌ ಫೋನುಗಳು ?

ಟೆಕ್ ಫ್ಯೂಚರ್‌

ವಸಂತ ಗ ಭಟ್‌

ಎರಡು ದಶಕಗಳ ಹಿಂದೆ ಸ್ಮಾರ್ಟ್‌ಫೋನ್ ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಜಪಾನ್ ಸಂಸ್ಥಗಳು ಇಂದು ಆ ಕ್ಷೇತ್ರದಿಂದ ಬಹುಮಟ್ಟಿಗೆ ನಿರ್ಗಮಿಸಿವೆ. ಜಪಾನಿನ ಸೋನಿ ಮಾತ್ರ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಏಕೆ ಹೀಗಾಯಿತು?

ಜಪಾನ್ ಎಂದ ತಕ್ಷಣ ಎಲ್ಲರ ತಲೆಯಲ್ಲೂ ಮೂಡುವುದು ಉನ್ನತ ತಂತ್ರಜ್ಞಾನ ಮತ್ತು ಅವುಗಳನ್ನು ಬಳಸುವ ತೋಷಿಬಾ, ಸೋನಿ, ಮಿತ್ಸುಬಿಷಿ ತರಹದ ಸಂಸ್ಥೆಗಳು. ಇಂದಿಗೂ ಬಳಕೆದಾರ ಎಲೆಕ್ಟ್ರೋನಿಕ್ ಕ್ಷೇತ್ರದಲ್ಲಿ ಜಪಾನ್ ವಿಶ್ವದ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ.

ಫೋಟೋ ತೆಗೆಯುವ ಕ್ಯಾಮೆರಾದಿಂದ ಹಿಡಿದು ಕಟ್ಟಡವನ್ನು ನೆಲಸಮ ಮಾಡವ ಹಿಟಾಚಿಯ ವರೆಗೆ ವಿಶ್ವದ ಜನ ಬಳಕೆ ಮಾಡುವ ಉಪಕರಣಗಳಲ್ಲಿ ಜಪಾನ್ ಸಂಸ್ಥೆಗಳ ಹಿಡಿತ ಸಾಕಷ್ಟಿದೆ. ಸೋನಿ, ಫಿಲಿಪ್ಸ್‌ ತರಹದ ಜಪಾನ್ ಸಂಸ್ಥೆಗಳು ಒಂದು ಕಾಲದಲ್ಲಿ ವಿಶ್ವದ ಮೊಬೈಲ್ ಮಾರಾಟದ ಬಹುಪಾಲನ್ನು ಹೊಂದಿದ್ದವು.

ಇಂದು ಸೋನಿ ಸತತ ಎರಡು ವರ್ಷಗಳಿಂದ ವಿಶ್ವದ ಮೊಬೈಲ್ ಮಾರುಕಟ್ಟೆ ಯ 0.2 -0.3 ಶೇಕಡದಷ್ಟು ಪಾಲನ್ನು ಹೊಂದಿದೆ. ಫಿಲಿಪ್ಸ್ 2019 ರ ನಂತರ ಯಾವುದೇ ಮೊಬೈಲ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲದೆ ವಿಶ್ವದ ಹೆಚ್ಚಿನ ದೇಶಗಳಲ್ಲಿ ಎಲೆಕ್ಟ್ರೋನಿಕ್ ಉಪಕರಣಗಳಿಗೆ ಹೆಸರುವಾಸಿಯಾಗಿರುವ ಜಪಾನ್‌ನ ಮಾರುಕಟ್ಟೆಯ 43.7 ಪ್ರತಿಶತ ಮೊಬೈಲ್ ಮಾರಾಟಸ್ವಾಮ್ಯವನ್ನು ಆ್ಯಪಲ್ ಸಂಸ್ಥೆ ಹೊಂದಿದೆ ಎಂದರೆ ನೀವು ನಂಬಲೇ ಬೇಕು.

ಸಧ್ಯ ಜಪಾನ್ ಮಾರುಕಟ್ಟೆಯಲ್ಲಿ ಉಳಿದುಕೊಂಡಿರುವ ಜಪಾನ್ ಮೂಲದ ನಾಲ್ಕು ಸ್ಮಾರ್ಟ್‌ಫೋನ್ ಸಂಸ್ಥೆಗಳಾದ
ಫ್ಯೂಜಿಸ್ತು, ಕ್ಯೋಸೇರಾ, ಸೋನಿ ಮತ್ತು ಶಾರ್ಪ್ ಸಂಸ್ಥೆಗಳು ಮಾರುಕಟ್ಟೆಯ ಒಟ್ಟು 26 ಪ್ರತಿಶತ ಪಾಲನ್ನು ಹೊಂದಿವೆ. ಒಂದು
ಕಾಲದಲ್ಲಿ ಸ್ಮಾರ್ಟ್‌ಫೋನ್ ಜಗತ್ತನ್ನು ಆಳುತ್ತಿದ್ದ ಜಪಾನ್ ಸ್ಮಾರ್ಟ್‌ಫೋನ್‌ಗಳು ಇಂದು ಜಪಾನ್ ನಲ್ಲೇ ಕಣ್ಮರೆಯಾಗಲು ಕಾರಣವೇನು? 1990 ರ ದಶಕ ಜಪಾನ್ ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತ್ತು.

ಸೋನಿ, ಪ್ಯಾನಾಸೋನಿಕ್, ತೋಷಿಬಾ ಇತ್ಯಾದಿ ಮೂವತ್ತೆರಡು ಜಪಾನಿ ಸಂಸ್ಥೆಗಳು ಜಾಗತಿಕವಾಗಿ ಅತಿ ಹೆಚ್ಚು ಆದಾಯ ಹೊಂದಿರುವ ಮೊದಲ 50 ಸಂಸ್ಥೆಗಳ ಪಟ್ಟಿಯಲ್ಲಿದ್ದವು. ಭಾರತದಂತಹ ದೇಶಗಳಲ್ಲಿ ಜನರು ಒಂದು ಲ್ಯಾಂಡ್ ಲೈನ್ ಸಂಪರ್ಕ ಪಡೆಯಲು ಕಷ್ಟ ಪಡುತ್ತಿದ್ದ ಸಮಯದಲ್ಲಿ ಜಪಾನ್‌ನಲ್ಲಿ ರೋಬೋಟ್ ತಯಾರಾಗುತ್ತಿದ್ದವು. ಈ ಸಮಯದಲ್ಲಿ ಜಪಾನ್ ದೇಶ ಮೊಬೈಲ್ ಮಾರಾಟಕ್ಕೆ ಉತ್ತಮ ಮಾರುಕಟ್ಟೆಯಾಗಲು ಮುಖ್ಯವಾಗಿ ಮೂರು ಕಾರಣಗಳಿದ್ದವು.

ಮೊದಲನೆಯದು ಮೇಲೆ ಹೇಳಿದಂತೆ ವಿಶ್ವದ ಅತ್ಯುತ್ತಮ ತಂತ್ರಜ್ಞಾನ ಸಂಸ್ಥೆಗಳು ಜಪಾನ್ ದೇಶದಲ್ಲಿದ್ದುದರಿಂದ ಉತ್ತಮ ಸ್ಮಾರ್ಟ್‌ಫೋನ್ ಗಳನ್ನು ಉತ್ಪಾದಿಸುವ ಶಕ್ತಿ ಜಪಾನ್‌ಗಿತ್ತು. ಇನ್ನು ಎರಡನೆಯ ಕಾರಣ ಜಪಾನ್‌ನ ಜನ ಸಂಖ್ಯೆ, ಸುಮಾರು 100 ಮಿಲಿಯನ್ ಗಿಂತಲೂ ಅಧಿಕ ಜನಸಂಖ್ಯೆ ಹೊಂದಿದ್ದ ಜಪಾನ್ ದೇಶದಲ್ಲಿ ಸ್ಮಾಟ್ ಫೋರ್ನ್‌ಗಳನ್ನು ಇಷ್ಟಪಡುವ ಮತ್ತು ಕೊಳ್ಳುವ ಸಾಮರ್ಥ್ಯವಿರುವ ಜನರ ಸಂಖ್ಯೆ ಹೇರಳವಾಗಿತ್ತು. ಇನ್ನೂ ಕೊನೆಯ ಮತ್ತು ಅತಿ ಮುಖ್ಯ ಕಾರಣ ಜಪಾನ್‌ನ ಮೊಬೈಲ್ ನೆಟ್ವರ್ಕ್ ಹಂಚಿಕೆದಾರ ಸಂಸ್ಥೆಗಳಾದ ಎನ್ ಟಿ ಟಿ, ಡೊಕೊಮೊ, ಸಾಫ್ಟ್‌ ಬ್ಯಾಂಕ್, ಕೆಡಿಡಿಐ ಜಪಾನ್ ಜನರ
ಅವಶ್ಯಕತೆಗನುಗುಣವಾಗಿ ಪ್ರತ್ಯೇಕ ಐ-ಮೊಡ್ ಎನ್ನುವ ಅಂತರ್ಜಾಲವನ್ನು ಸಿದ್ಧಪಡಿಸಿದ್ದರು.

1990 ರಲ್ಲೇ ಸಾಮಾನ್ಯ ಎಸ್‌ಎಂಎಸ್ ಗಳಿಗೆ ಗುಡ್ ಬೈ ಹೇಳಿದ ಈ ಹಂಚಿಕೆದಾರರು ಇಮೇಲ್, ಷೇರು ಮಾರುಕಟ್ಟೆ, ಹವಾಮಾನ
ವರದಿ ಇವುಗಳನ್ನೆಲ್ಲ ತಿಳಿಯಲು ತಮ್ಮದೇ ಆದ ವಿಶೇಷ ಆಪ್ ಸೌಲಭ್ಯವನ್ನು ತಯಾರಿಸಿದ್ದರು. ಮುಂಚೂಣಿಯಲ್ಲಿದ್ದ ದೇಶ
1999 ರಲ್ಲಿ ಹೆಚ್ಚಿನ ಜಪಾನಿ ಮೊಬೈಲ್ ತಯಾರಕರು ಮೊಬೈಲ್‌ನಲ್ಲಿ ಐ-ಮೊಡ್ ಗೋಸ್ಕರ ಪ್ರತ್ಯೇಕ ಬಟನ್ ನೀಡುವ ಮೂಲಕ
ಹೆಚ್ಚಿನ ಜನತೆ ಪ್ರತ್ಯೇಕ ಅಂತರ್ಜಾಲವನ್ನು ಉಪಯೋಗಿಸುವಂತೆ ನೋಡಿಕೊಂಡರು.

ಅದೇ ವರ್ಷ ಮೊಬೈಲ್‌ನಲ್ಲಿ ಪೇಮೆಂಟ್ ಗೇಟ್ ವೇಗಳನ್ನು ಬಳಸುವ ಸೌಲಭ್ಯವನ್ನು ಸಹ ಮೊಬೈಲ್ ತಯಾರಕರು ನೀಡಿದರು. 2000 ದಲ್ಲಿ ಶಾರ್ಪ್ ಮೊಬೈಲ್ ಸಂಸ್ಥೆ ಜಗತ್ತಿನ ಮೊದಲ ಕ್ಯಾಮೆರಾ ಮೊಬೈಲ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. 2001 ಮಿಸ್ತುಶಿತಾ ಸಂಸ್ಥೆ ಜಗತ್ತಿನ ಮೊದಲ 3 ಜಿ ಮೊಬೈಲ್ ಅನ್ನು ಬಿಡುಗಡೆ ಮಾಡಿದರೆ, 2004 ರಲ್ಲಿ ಶಾರ್ಪ್ ತನ್ನ 912 ಎಸ್ ಹೆಚ್ ಮೊಬೈಲ್‌ನಲ್ಲಿ ಮೊಬೈಲ್ ಪೇಮೆಂಟ್, 3 ಮೆಗಾ ಪಿಕ್ಸೆಲ್‌ನ ಕ್ಯಾಮೆರಾ, ಮೊಬೈಲ್‌ನಲ್ಲೇ ಟಿವಿ ಚಾನಲ್‌ಗಳನ್ನು ವೀಕ್ಷಿಸುವಂತಹ ಅವಕಾಶವನ್ನು ನೀಡಿತು.

ನೆನಪಿಡಿ, 2004 ರ ಸಮಯದಲ್ಲಿ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಫಿನ್ಲೆಂಡ್‌ನ ನೋಕಿಯಾ ತನ್ನ ಪ್ರಾಬಲ್ಯ ಮೆರೆಯುತ್ತಿದ್ದ ಕಾಲ. ಆಗ ನೋಕಿಯಾ ಮೊಬೈಲ್‌ನಲ್ಲಿ ಹಾಡು ಕೇಳುವುದೇ ಒಂದು ಸೋಜಿಗ ಎಂದು ಜನ ಭಾವಿಸಿದ್ದರು ಆದರೆ ಜಪಾನ್ ಮೊಬೈಲ್ ಬಳಕೆದಾರರು ಅದಾಗಲೇ ಮೊಬೈಲ್‌ನಲ್ಲಿ ವೀಡಿಯೋ ಕಾಲ್ ಅನ್ನು ಮಾಡುತ್ತಿದ್ದರು.

ಹೀಗೆ ಉತ್ತಮ ಮೊಬೈಲ್ ಸೇವೆಗಳನ್ನು ಒದಗಿಸಿ ಜಪಾನ್ ಜನರಿಗೆ ಇಷ್ಟವಾಗಿದ್ದ ಜಪಾನ್ ಮೊಬೈಲ್ ಸಂಸ್ಥೆಗಳು, ನಂತರ ಆ
ಕ್ಷೇತ್ರದಲ್ಲಿ ಹೇರಳ ನಷ್ಟ ಅನುಭವಿಸಿದ್ದೇಕೆ? ಅದು 2008 ರ ಸಮಯ ಅನ್‌ದ್ರೋಯಿಡ್ ಮತ್ತು ಆಪಲ್ ಜಪಾನ್ ದೇಶವನ್ನು
ಪ್ರವೇಶಿಸಿದ ಸಮಯ. ಚಾಟಿಂಗ್, ಹವಾಮಾನ ವರದಿ, ಮಾರುಕಟ್ಟೆ ಧಾರಣೆ ಇತ್ಯಾದಿ ಸೇವೆಗಳಿಗೋಸ್ಕರ ಪ್ರತ್ಯೇಕವಾಗಿ ಸಿದ್ಧ ಪಡಿಸಿದ್ದ ಜಪಾನ್‌ನ ಅಂತರ್ಜಾಲ ಸೇವೆಗಳೆಲ್ಲ ಅನ್ ದ್ರೋಯಿಡ್ ಮತ್ತು ಐಒಎಸ್ ಮೊಬೈಲ್‌ನಲ್ಲಿ ಸಾಮಾನ್ಯ ಅಂತರ್ಜಾಲ ಬಳಕೆಮಾಡಿ ಪಡೆದುಕೊಳ್ಳಬಹುದಾಗಿತ್ತು.

ವಿಶೇಷ ಅಂತರ್ಜಾಲ ಮತ್ತು ಸೇವೆಗಳನ್ನು ಕೊಡಲು ಹೇರಳ ಹಣ ಖರ್ಚು ಮಾಡಿದ್ದ ಸಂಸ್ಥೆಗಳು ನಿಧಾನವಾಗಿ ನಷ್ಟದ ಹಾದಿ ಹಿಡಿದವು. ಅಷ್ಟೇ ಅಲ್ಲದೆ ಜಪಾನ್ ನ ನೆಟ್ವರ್ಕ್ ಹಂಚಿಕೆ ಸಂಸ್ಥೆಗಳು ನಮ್ಮ ಏರ್ ಟೆಲ್, ಬಿಎಸ್‌ಎನ್‌ಎಲ್ ತರಹ ಕೇವಲ ತರಂಗ ಹಂಚಿಕಾ ಸಂಸ್ಥೆಗಳಾಗಿರಲಿಲ್ಲ. ಮೊಬೈಲ್ ಪೇಮೆಂಟ್, ವೀಡಿಯೋ ಕಾಲಿಂಗ್ ಇತ್ಯಾದಿ ಸೇವೆಗಳಿಗೆ ಅಗತ್ಯವಾದ ತಂತ್ರಜ್ಞಾನವನ್ನು ಅದೇ ಸಂಸ್ಥೆಗಳು ನೀಡುತ್ತಿದ್ದವು, ಹಾಗಾಗಿ ಪ್ರತಿಯೊಂದು ಮೊಬೈಲ್ ಸಂಸ್ಥೆಯು ಯಾವುದಾದರೊಂದು ಮೊಬೈಲ್ ತರಂಗ ಹಂಚಿಕೆದಾರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡೇ ಮೊಬೈಲ್‌ಅನ್ನು ಅವರ ಆಪ್ ಗಳನ್ನು ಬಳಸಲು ಸೂಕ್ತವಾಗುವಂತೆ ರೂಪಿಸುತ್ತಿದ್ದವು.

ಅನ್‌ದ್ರೋಯಿಡ್ ಮತ್ತು ಐಒಎಸ್ ಸಂಸ್ಥೆಗಳು ಜಪಾನ್ ಸೇರಿದ ನಂತರ ಮೊಬೈಲ್ ಸಂಸ್ಥೆಗಳು ಅವುಗಳನ್ನು ಬಳಸಿಕೊಂಡು
ಮೊಬೈಲ್ ಉತ್ಪಾದಿಸಲು ಶುರು ಮಾಡಿದ ಕಾರಣ ತರಂಗ ಹಂಚಿಕೆದಾರ ಸಂಸ್ಥೆಗೆ ಹೇರಳ ನಷ್ಟವಾಗತೊಡಗಿತು. ಜೊತೆಗೆ ಈಗ ಯಾವುದೇ ಮೊಬೈಲ್ ನಲ್ಲಿಯೂ ಸ್ವಂತದ್ದು ಎನ್ನುವ ವಿಶೇಷ ವೈಶಿಷ್ಟ್ಯತೆಗಳು ಇಲ್ಲದ ಕಾರಣ ಮೊಬೈಲ್ ಸಂಸ್ಥೆಗಳ ಲಾಭವು ಕಡಿಮೆಯಾಗತೊಡಗಿತು.

ಈಗ ಕೇವಲ ಸೋನಿ ಮಾತ್ರ ಜಗತ್ತಿನ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಜಪಾನ್ ಮೊಬೈಲ್ ಸಂಸ್ಥೆ. 2020ರ
ಸೆಪ್ಟೆಂಬರ್‌ನ ತ್ರೈ ಮಾಸಿಕದಲ್ಲಿ ಸೋನಿ 60,000 ಮೊಬೈಲ್‌ಗಳನ್ನು ಮಾರಾಟ ಮಾಡಿದೆ. ಸ್ಯಾಮ್ಸಂಗ್ ಪ್ರತಿ ದಿನ ವಿಶ್ವಾದ್ಯಂತ ಇಷ್ಟು ಮೊಬೈಲ್‌ಗಳನ್ನು ಮಾರಾಟ ಮಾಡುತ್ತದೆ!

2008 ರಲ್ಲಿ ಮಿತ್ಸುಬಿಷಿ ಮೊಬೈಲ್ ಮಾರುಕಟ್ಟೆಯಿಂದ ಹೊರಬಂದಿದೆ, ತೋಶಿಬಾ 2014 ರಲ್ಲಿ ಬಿಡುಗಡೆ ಮಾಡಿದ ಅನ್‌ ದ್ರೋಯಿಡ್ ಮೊಬೈಲ್ ಅದರ ಕೊನೆಯ ಮೊಬೈಲ್. ಶಾರ್ಪ್ 2016 ರಲ್ಲಿ ಸಂಸ್ಥೆಯ ಅರವತ್ತು ಪ್ರತಿಶತ ಭಾಗವನ್ನು ತೈವಾನ್ ಮೂಲದ ಫಾಕ್ಸ್ ಕಾನ್ ಸಂಸ್ಥೆಗೆ ಮಾರಾಟ ಮಾಡಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಜಪಾನ್ ಮೊಬೈಲ್ ಸಂಸ್ಥೆಗಳು ಜಗತ್ತನ್ನು ಮತ್ತೊಮ್ಮೆ ತಮ್ಮ ಮೋಡಿಗೆ ಸಿಲುಕಿಸುವ ಸಾಧ್ಯತೆ ಕಡಿಮೆ.

ಅಮೆರಿಕ ಸಂಸ್ಥೆಯ ಮೋಡಿ

ಗುಣಮಟ್ಟದ ವಸ್ತುಗಳನ್ನು ಸಾಮಾನ್ಯವಾಗಿ ಇಷ್ಟಪಡುವ ಜಪಾನ್ ಜನತೆಗೆ ಅಮೆರಿಕದ ಆ್ಯಪಲ್ ಮೊಬೈಲ್ ಬಹಳಷ್ಟು ಇಷ್ಟವಾಗತೊಡಗಿತು. ಇವೆಲ್ಲದರ ನಡುವೆ 2008ರ ರಿಸೆಷನ್, ಜಪಾನ್ ಸಂಸ್ಥೆಗಳನ್ನು ವಿಶ್ವಾದ್ಯಂತ ಹೇರಳವಾಗಿ ಭಾಧಿಸಿತ್ತು. ಅಂತಹ ಸನ್ನಿವೇಶದಲ್ಲಿ ಮೊಬೈಲ್ ಹೊರತುಪಡಿಸಿ ಹಲವಾರು ಉದ್ದಿಮೆಗಳನ್ನು ಹೊಂದಿದ್ದ ತೋಷಿಬಾ, ಕ್ಯಾಶಿಯೋ ತರಹದ ಸಂಸ್ಥೆಗಳು ಮೊಬೈಲ್ ಮಾರುಕಟ್ಟೆಯಿಂದ ವಿಮುಖವಾಗಿ ಇತರ ಲಾಭದಾಯಕ ಎಲೆಕ್ಟ್ರೋನಿಕ್ ಉತ್ಪನ್ನಗಳನ್ನು ಸಿದ್ಧ ಪಡಿಸುವುದರಲ್ಲಿ ತೊಡಗಿಸಿಕೊಂಡವು.