ಕೆ.ಲೀಲಾ ಶ್ರೀನಿವಾಸ್
ಮದುವೆಯಾಗಿ ಬರುವ ಸೊಸೆಯನ್ನು ಮಗಳ ರೀತಿ ನೋಡಲು ಹಲವು ಉಪಾಯಗಳಿವೆ. ನಿಧಾನವಾಗಿ, ತಾಳ್ಮೆಯಿಂದ ಸೊಸೆಯನ್ನು ನೋಡಿಕೊಂಡರೆ, ಅವಳು ಸಹ ಮಗಳ ರೀತಿಯೇ ಬದಲಾಗುತ್ತಾಳೆ, ಮನೆಯಲ್ಲಿ ಹೆಚ್ಚಿನ ಸಂತಸ, ನೆಮ್ಮದಿ ತರುತ್ತಾಳೆ.
ಮಗನ ಕೈ ಹಿಡಿದು ಮಹಾಲಕ್ಷ್ಮಿಯಂತೆ ಮನೆಯೊಳಗಡಿಯಿಡುವ ಸೊಸೆಯ ಬಗ್ಗೆ ಅತ್ತೆಗೆ ಒಂಥರಾ ಬಿಗುಮಾನ. ಅತ್ತೆಗೆ ಹಿರಿತನದ ಹಿರಿಮೆ, ಮಗ ಎಲ್ಲಿ ತನ್ನನ್ನು ಅಲಕ್ಷಿಸುವನೋ ಎಂಬ ಭೀತಿ. ಸೊಸೆಗೆ ತವರನ್ನು ಬಿಟ್ಟುಬಂದ ಬೇಸರ, ಹೊಸ ಜನ, ಹೊಸ ನೆಲೆ, ಯಾರು ಏನೆಂದುಕೊಳ್ಳುವರೋ ಎಂಬ ಆತಂಕ. ಇಬ್ಬರಿಗೂ ಕೊಂಚ ಕಾಲಾವಧಿ ಬೇಕು.
ಅನಾದಿ ಕಾಲದ ‘ರಮಾದೇವಿ’ ಯಂಥ ಅತ್ತೆಯರು ಈಗಿಲ್ಲವಾದರೂ ಸೊಸೆಯಿಂದ ಅಂತರ ಕಾಪಾಡಿಕೊಳ್ಳುವ ಅತ್ತೆಯರೇ ಅಧಿಕ. ಏಕೆ ಸೊಸೆ ಮಗಳಾಗಲಾರಳೇ? ನಿಜ, ಸೊಸೆಯನ್ನು ಮಗಳ ರೀತಿ ನೋಡಿಕೊಳ್ಳಬೇಕೆಂಬ ಆಸೆ ಅತ್ತೆಯರಿಗೆ ಇರುತ್ತದೆ. ಆದರೂ ಅದೇನೋ ಬಿಗುಮಾನ ಕಾಡಬಹುದು, ಒಮ್ಮೆಗೇ ಒಪ್ಪಿಕೊಳ್ಳಲು ಮನ ಹಿಂದೆ ಮುಂದೆ ನೋಡಬಹುದು.
ಮನಸ್ಸಿನಾಳದಲ್ಲಿ ಸೊಸೆಯನ್ನು ಮಗಳ ರಿತಿ ನೋಡಬೇಕೆಂದುಕೊಂಡರೂ, ಒಮ್ಮೆಗೇ ಅದ ನ್ನು ಆಚರಣೆಗೆ ತರಲು ತುಸು ಸಂಕೋಚವೂ ಆಗಬಹುದು. ಈ ಬಿಗುಮಾನ, ಸಂಕೋಚ ಕಳೆದು, ಹೊರಗಿನಿಂದ ಬರುವ ಸೊಸೆಯನ್ನು ಮಗಳ ರೀತಿ ನೋಡಲು ಕೆಲ ಮಾರ್ಗೋಪಾಯಗಳು ಇವೆ.
*ಸೊಸೆ ಸಂಕೋಚದಿಂದ ಮೊದ ಮೊದಲು ಅಡುಗೆ ಮನೆಗೆ ಕಾಲಿಡುವಳು. ಅವಳಿಗೆ ನಿಧಾನವಾಗಿ ಅಡುಗೆ ಮನೆಯ ಅಧಿಕಾರ ಮತ್ತು ಜಿನಸಿ ವಸ್ತುಗಳನ್ನು ತರುವ ಸ್ವಾತಂತ್ರ್ಯ ನೀಡಿ. ನಿಧಾನವಾಗಿ ಅವಳಲ್ಲಿ ಇದು ತನ್ನಮನೆ ಎಂಬ ಭಾವನೆ ಮೂಡಿಸಿ.
*ಅಪ್ಪಿತಪ್ಪಿಯೂ ಅವಳ ತವರಿನವರನ್ನು ಮಾತಿನ ನಡುವೆ ಹೀಗಳೆಯಬೇಡಿ. ಕುಂದು ಕೊರತೆಗಳಿದ್ದರೂ, ಅದನ್ನು ಮುನ್ನೆಲೆಗೆ ತರದೇ, ಸಹಕರಿಸಿ. ಅವಳ ತವರಿನವರು ಬಂದಾಗ ಸಹೃದಯತೆಯಿಂದ, ಸ್ನೇಹದಿಂದ ನೋಡಿ, ಆದರಿಸಿ, ಸತ್ಕರಿಸಿ.
* ವಯೋಸಹಜವಾಗಿ ಅವಳು ಹೊಸ ಮಾದರಿಯ ಡ್ರೆಸ್ ಧರಿಸಿದರೆ ಆಕ್ಷೇಪಿಸಬೇಡಿ, ಆಸೆ ಸಹಜ. ಹಾಗೆಂದು ತೀರಾ ಮಿತಿ ಮೀರಿತು ಎನಿಸುವ ದಿರಿಸು ಬೇಡ.
*ಮಗ, ಸೊಸೆ ಒಟ್ಟಾಗಿ ಹೊರಗೆ ಶಾಪಿಂಗ್, ಮಾಲ್, ಸಿನೆಮಾ, ಊಟ ಎಂದೆಲ್ಲಾ ಹೊರಟಾಗ, ಅವರನ್ನು ನಗುತ್ತಾ ಕಳಿಸಿ. ನೀವೂ ಅವರ ಜತೆಯಲ್ಲೇ ಹೋಗಿ ಅವರ ಮಧ್ಯೆೆ ‘ಕರಡಿ’ಯಾಗಬೇಡಿ.
*ಮನೆಗೆ ಬಂದ ಅತಿಥಿಗಳೆದುರು ಸೊಸೆ ಹಾಗೂ ಅವಳ ತವರನ್ನು ಮೆಚ್ಚಿ ಮಾತನಾಡಿ.
*ಅವಳು ಏನೇ ಹೇಳಿದರೂ ‘ನಿಂಗೆ ಗೊತ್ತಾಗೋಲ್ಲ ಸುಮ್ನಿರು’ ಎನ್ನಬೇಡಿ. ಅವಳಿಗೂ ಅಭಿಪ್ರಾಯ ಸ್ವಾತಂತ್ರ್ಯವಿರಲಿ, ತಪ್ಪುಗಳನ್ನು ಎತ್ತಿ ಆಡದೇ, ಮೆದುವಾಗಿ ತಿದ್ದುಪಡಿ ತಿಳಿಸಿ.
*ನಿಮ್ಮ ಹಿರಿಯರು, ಮನೆತನ, ಬಾಲ್ಯ, ಮಗನ ಇಷ್ಟಾನಿಷ್ಟಗಳು, ಬಂಧು ಬಳಗದವರ ಬಗ್ಗೆ ತಿಳಿಸಿ, ಎಲ್ಲರೂ ಒಟ್ಟಾಗಿ ಕುಳಿತು ವಿಷಯಗಳನ್ನು ಚರ್ಚಿಸಿ. ಕಣ್ಣಾಮುಚ್ಚಾಲೆ ಬೇಡ.
* ಹೊಸ ಮನೆಗೆ ಬಂದ ಸೊಸೆಗೆ ಹೊಂದಿಕೊಳ್ಳಲು ಸಮಯಾವಕಾಶ ನೀಡಿ. ಅವಳೇ ಕ್ರಮೇಣ ಹೊಂದಿಕೊಳ್ಳುವ ತನಕ ತಾಳ್ಮೆೆಯಿಂದ ಕಾಯಿರಿ.
*ಮಗನು ತನ್ನ ಹೆಂಡತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಾಗ, ಆ ಕುರಿತು ಅಸೂಯೆ ಪಡಬೇಡಿ. ಸೊಸೆಯೂ ಈ ಮನೆಯ ಮುಂದಿನ ಯಜಮಾನಿ ಎಂದು ತಿಳಿದು, ಅವಳನ್ನು ಗುರುತಿಸಿ. ಹೀಗೆ ಮಾಡಿ ನೋಡಿ ಹೇಳಿ – ಸೊಸೆ ಮಗಳಾಗಲಾರಳೇ? ಎಂದು.