ಡಾ ಕೆ.ಪಿ.ಪುತ್ತೂರಾಯ
ನಾವೆಲ್ಲರೂ ನಮ್ಮ ಒಪ್ಪಿಗೆ ಇಲ್ಲದೇ ಜನಿಸಿದವರು ಹಾಗೂ ನಮ್ಮ ಅಪ್ಪಣೆ ಇಲ್ಲದೇ ಸಾಯುವವರು. ಹುಟ್ಟುವ ಮುನ್ನ ನಮ್ಮನ್ನು ಹೆರುವವರು ಯಾರು, ಸತ್ತ ಮೇಲೆ ನಮ್ಮನ್ನು ಹೊರುವವರು ಯಾರು ಎಂಬುದು ನಮಗೆ ತಿಳಿಯದು. ಆದ್ದ ರಿಂದ ನಮ್ಮದೆಂಬುದೆಲ್ಲವನ್ನೂ, ನಾವು ಜೀವಂತ ವಾಗಿರುವಾಗಲೇ ಸೂಕ್ತ ವ್ಯಕ್ತಿಗಳಿಗೆ ಕೊಟ್ಟು ಹೋಗುವುದು ಲೇಸ ಲ್ಲವೇ!
ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಬರಿಕೈಗಳಲ್ಲೇ ಬಂದಿರುತ್ತೇವೆ. ಈ ಜಗತ್ತನ್ನು ಬಿಟ್ಟು ಹೊಗುವಾಗಲೂ ಬರಿಕೈಗಳಲ್ಲೇ ಹೊರಟು ಹೋಗುತ್ತೇವೆ. ಏನನ್ನೂ ನಮ್ಮ ಜೊತೆ ಒಯ್ಯಲು ಸಾಧ್ಯವಾಗದು. ಈ ಸತ್ಯವನ್ನು ಅರ್ಧ ಜಗತ್ತನ್ನೇ ಗೆದ್ದ ದೂರೆ ಅಲೆಕ್ಸಾಂಡರ್ ಕೂಡ ಸಾಯುವ ಕಾಲಕ್ಕೆ ಹೇಳಿದ್ದ.
ತಾನು ಮರಣಶಯ್ಯೆಯಲ್ಲಿದ್ದಾಗ ಆತ ತನ್ನ ಸೇನಾಧಿಪತಿಗೆ ಹೀಗೆ ಆದೇಶಿಸಿದ್ದ ‘ನನ್ನ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿಡು ವಾಗ, ನನ್ನ ಎರಡೂ ಕೈಗಳು ಪೆಟ್ಟಿಗೆಯ ಹೊರಗೆ ಚಾಚುವಂತೆ ನೋಡಿಕೊಳ್ಳಿ. ತನ್ಮೂಲಕ, ಖಾಲಿ ಕೈಗಳಿಂದ ಈ ಜಗತ್ತಿಗೆ ಬಂದ ನಾನು ಏನೆಲ್ಲಾ, ಎಷ್ಟೆಲ್ಲಾ ಗಳಿಸಿದರೂ ಖಾಲಿ ಕೈಗಳಿಂದಲೇ ಜಗತ್ತನ್ನು ಬಿಟ್ಟು ಹೊರಟು ಹೋಗುತ್ತಿದ್ದೇನೆ ಎಂಬ ಸಂದೇಶ ಎಲ್ಲರಿಗೂ ರವಾನೆಯಾಗಲಿ’.
ಹೀಗೆ ಸಾಯುವಾಗ ನಮ್ಮ ಜೊತೆ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲವೆಂಬುದು ಶತಸಿದ್ಧವಾಗಿರುವಾಗ, ಏನನ್ನೂ ಬಿಟ್ಟು ಹೋಗದೆ, ಗಳಿಸಿದ್ದೆಲ್ಲವನ್ನು ಇದ್ದವರಿಗೆ ಕೊಟ್ಟು ಹೋಗೋದು ಲೇಸಲ್ಲವೇ. ಅರ್ಥಾಥ್, ನಮ್ಮ ಜೀವಿತ ಕಾಲದಲ್ಲಿ ನಾವು ಸಂಪಾದಿಸಿದ್ದೆಲ್ಲವನ್ನೂ ನಮ್ಮ ಕೈಯಾರೆಯೇ ಸತ್ಪಾತ್ರರಿಗೆ ಕೊಟ್ಟು ಕೈ ಖಾಲಿ ಮಾಡಿಕೊಂಡರೆ, ನಿರಾಳವಾದ, ನೆಮ್ಮದಿಯ ಸಾವು ನಮ್ಮದಾಗಬಹುದಲ್ಲವೇ!
ಆದರೆ, ಎಷ್ಟೋ ಜನರ ಜೀವನದಲ್ಲಿ ಹೀಗಾಗೋದಿಲ್ಲ, ಜೀವನದಲ್ಲಿ ತಾವು ಸಂಪಾದಿಸಿದ ಆಸ್ತಿ-ಪಾಸ್ತಿ, ಧನ-ಕನಕ, ಗಳಿಸಿ ಕೊಂಡ ಅನುಭವ-ಜ್ಞಾನ, ಕರಗತ ಮಾಡಿಕೊಂಡ ಕಲೆ-ಕರಕುಶಲತೆ ಹಾಗೂ ತಮ್ಮೊಳಗಿನ ಅಪಾರವಾದ ಪ್ರೀತಿ -ಪ್ರೇಮ-ಸ್ನೇಹ ವಿಶ್ವಾಸ ಇತ್ಯಾದಿಗಳೆಲ್ಲವನ್ನೂ ಯಾರಿಗೂ ನೀಡದೆ ಯಾರಲ್ಲೂ ಹಂಚಿಕೊಳ್ಳದೆ, ಸತ್ತು ಬಿಡುತ್ತಾರೆ. ಇದರಿಂದ ನಷ್ಟವೇ ಮಾತ್ರವಲ್ಲ, ಯಾರಿಗೂ ಯಾವ ಪುರುಷಾರ್ಥವೂ ಇಲ್ಲ.
ಎಲ್ಲವೂ ಅದರ ಜೊತೆಯೇ ಮರೆಯಾಗುತ್ತವೆ ಹಾಗೂ ಮಸಣವನ್ನು ಸೇರುತ್ತವೆ. ಈ ಸತ್ಯವನ್ನೇ ಸಾರುವ ಘಟನೆಯೊಂದು ಹೀಗಿದೆ. ಒಮ್ಮೆ ಹೆಸರಾಂತ ಪ್ರವಚನಕಾರರೊಬ್ಬರು ನೆರೆದಿದ್ದ ಸಭಿಕರಿಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ. ‘ಈ ಭೂಮಿಯ ಮೇಲೆ
ಅತ್ಯಂತ ಬೆಲೆಬಾಳುವ ಜಾಗ ಎಲ್ಲಿದೆ?’. ಒಬ್ಬರೆಂದರು ‘ಪೆಟ್ರೋಲ್ ಅಪಾರವಾಗಿರುವ ಕೊಲ್ಲಿ ರಾಷ್ಟ್ರಗಳಲ್ಲಿ’; ಇನ್ನೊಬ್ಬ ರೆಂದರು ‘ವಜ್ರಗಳು ತುಂಬಿದ ಆಫ್ರಿಕಾದ ಗಣಿಗಳಲ್ಲಿ’; ಮತ್ತೊಬ್ಬರೆಂದರು ‘ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಗಳಂತಹ ವಿಶ್ವದ ಖ್ಯಾತ ನಗರಗಳಲ್ಲಿ’.
ಇದಕ್ಕೆ ಪ್ರತಿಕ್ರಿಯಿಸಿದ ಪ್ರವಚನಕಾರರೆಂದರು ‘ಇವಾವುದೂ ಅಲ್ಲ. ತಮ್ಮ ಜೀವಿತಕಾಲದಲ್ಲಿ ತಾವು ಸಂಪಾದಿಸಿದ ಅನುಭವ,
ಜ್ಞಾನ, ಸಂಪತ್ತು ಇತ್ಯಾದಿಗಳನ್ನೆಲ್ಲಾ ಯಾರಿಗೂ ನೀಡದೇ ಸಾಯುವಾಗಲೂ, ತಮ್ಮೊಂದಿಗೇ ಉಳಿಸಿಕೊಂಡು ಈಗ ಸಮಾಧಿ ಯಾಗಿರುವ ಇವರ ಸ್ಮಶಾನ ಭೂಮಿಯೇ ಅತ್ಯಂತ ಬೆಲೆಬಾಳುವ ಜಾಗ!’. ಇದರಲ್ಲಿ ವ್ಯಂಗ್ಯಾರ್ಥವಿದೆ. ಇದರ ತಾತ್ಪರ್ಯ ಇಷ್ಟೇ, ಈ ಜಗತ್ತಿಗೆ ಬರುವಾಗ ನಾವು ಖಾಲಿ ಕೈಗಳಲ್ಲೇ ಬಂದರೂ, ನಮ್ಮ ಜೀವನಾಧಿಯಲ್ಲಿ ಅನೇಕ ಅಮೂಲ್ಯ ವಸ್ತು ವಿಷಯಗಳನ್ನು ಗಳಿಸಿಕೊಂಡಿರುತ್ತೇವೆ.
ಇವನ್ನೆಲ್ಲ ಸಾಯುವ ಮುನ್ನ ಇತರರಿಗೆ ಹಂಚಿ, ವಿತರಿಸಿ ಹೋಗೋದು ಅರ್ಥಪೂರ್ಣವೂ ಜಾಣತನವೂ ಆದೀತು. ಸಂಪತ್ತು
ಸಂಪತ್ತಿಗೆ 3 ಹಂತಗಳು-ಸಂಪಾದನೆ (ಗಳಿಕೆ), ಸಂಗ್ರಹಣೆ (ಉಳಿಕೆ) ಮತ್ತು ವಿತರಣೆ (ಬಳಕೆ) ಇವೆಲ್ಲವೂ ಸಕಾಲದಲ್ಲಿ ಸಮ ಪ್ರಮಾಣದಲ್ಲಿ ಜರುಗಬೇಕಾದ ಪ್ರಕ್ರಿಯೆಗಳು. ಒಬ್ಬ ವ್ಯಕ್ತಿ ಎಷ್ಟು ಗಳಿಸಿದ, ಉಳಿಸಿದ ಅನ್ನೋದಕ್ಕಿಂತಲೂ, ಅದನ್ನು ಹೇಗೆ ಬಳಸಿದ ಅನ್ನೋದು ಮುಖ್ಯವಾಗುತ್ತದೆ.
ಗಳಿಸಿದ ಸಂಪತ್ತಿಗೆ 3 ಅವಸ್ಥೆಗಳು- ಭೋಗ, ತ್ಯಾಗ, ಇಲ್ಲವೆ ನಾಶ. ಕಷ್ಟಪಟ್ಟು ನಾವು ಸಂಪಾದಿಸಿದ ಸಂಪತ್ತನ್ನು ನಾವು ಮತ್ತು ನಮ್ಮವರು ಭೋಗಿಸುವುದು ಹಾಗೂ ಭೋಗಿಸಬೇಕಾದುದು ಸಹಜ ಸ್ವಾಭಾವಿಕವೇ. ಕೋಟ್ಯಧಿಪತಿಯಾಗಿ ಸಾಯೋದಕ್ಕಿಂತ, ಕೋಟ್ಯಧಿಪತಿಯಾಗಿ ಬಾಳೊದೇ ಉತ್ತಮ ಹಾಗೂ ಜಾಣತನ. ಅಂತೆಯೇ ನಾವು ಗಳಿಸಿದ ಸಂಪತ್ತಿನ ಒಂದಂಶವನ್ನಾದರೂ, ಬಡಬಗ್ಗರಿಗೆ ದೀನ-ದುರ್ಬಲರಿಗೆ ದಾನ ಮಾಡಲೇಬೇಕೆಂದು ಎಲಾ ಧರ್ಮಶಾಸ್ತ್ರಗಳೂ ಸಾರಿವೆ.
ತಾನೂ ಭೋಗಿಸದೆ, ಇತರರಿಗೂ ದಾನ ಮಾಡದೆ, ಬಿಟ್ಟುಹೋದ ಸಂಪತ್ತು ಅನ್ಯರ ಪಾಲಾಗಿ ನಾಶವಾಗಿ ಹೋಗೋದು ಖಂಡಿತ. ಆದುದರಿಂದ, ಬೇಕಾದುದನ್ನು ನಮ್ಮ ಸುಖ-ಸಂತೋಷಗಳಿಗೆ ಬಳಸಿಕೊಂಡು, ಉಳಿದುದೆಲ್ಲವನ್ನೂ ಸತ್ಪಾತ್ರರಿಗೆ ನೀಡಿ, ಸಾಯುವ ಮುನ್ನ ಕೈಖಾಲಿ ಮಾಡಿಕೊಳ್ಳೊೊದು, ಬುದ್ಧಿವಂತಿಕೆ ಮಾತ್ರವಲ್ಲ ಸಂಪತ್ತಿನ ಸದುಪಯೋಗವಾದಂತಾದೀತು.
ಅನುಭವ
ಅನುಭವವೆಂದರೆ, ಗೈದ ತಪ್ಪುಗಳಿಂದ ನಾವು ಕಲಿತುಕೊಂಡ ಪಾಠದ ಇನ್ನೊಂದು ಹೆಸರು. ಪ್ರಮಾದಗಳು ನಮ್ಮ ಅನುಭವ ವನ್ನು ಹೆಚ್ಚಿಸುತ್ತವೆ; ಅನುಭವಗಳು ಮುಂದೆ ನಡೆಯಬಹುದಾದ ಪ್ರಮಾದಗಳನ್ನು ತಪ್ಪಿಸು ತ್ತವೆ. ಅನುಭವವು ಅತ್ಯುತ್ತಮ ಶಿಕ್ಷಕ. ಗುರುವಿಗೇ ಗುರು. ಆದರೆ, ಶುಲ್ಕ ಮಾತ್ರ ದುಬಾರಿ. ಇಂತಹ ಬೆಲೆಬಾಳುವ, ಉಪಯುಕ್ತ ವಾದ ನಮ್ಮ ಅನುಭವಗಳನ್ನು ಕಿರಿಯರಿಗೆ ಹಂಚಿ, ಅವರ ಬಾಳಿಗೆ ಅದು ಮಾರ್ಗದರ್ಶನ ನೀಡುವಂತಾದರೆ, ಕೊನೆಯಲ್ಲಿ ಇದಕ್ಕಿಂತ ಮಿಗಿಲಾದ ಸಂತೃಪ್ತಿ ಬೇರೊಂದು ಇದೆಯೇ? ಹಂಚದಿರುವ ಅನುಭವಗಳು ವ್ಯರ್ಥವಾಗಿಬಿಡುತ್ತವೆ.
ಅಧಿಕಾರ ಅಧಿಕಾರವೆಂದರೆ, ಕಾನೂನಿನ ಚೌಕಟ್ಟಿನಲ್ಲಿ, ಜನರಿಗೆ ಸಹಾಯಮಾಡಲು, ಸತ್ಕಾರ್ಯಗೈಯಲು ಹಾಗೂ ಸಮಾಜ ಸೇವೆ ಮಾಡಲು, ನಮ್ಮ ಕೈಗೆ ಒದಗಿ ಬಂದಿರುವ ಒಂದು ಸದವಕಾಶ. ಅಧಿಕಾರದ ಸದುಪಯೋಗವಾಗಬೇಕು. ಅಧಿ
ಕಾರವಿರುವ ಅವಧಿಯಲ್ಲಿ ಅಧಿಕಾರದ ಸದುಪಯೋಗ ಮಾಡದೇ, ಅಧಿಕಾರ ಕಳಕೊಂಡ ಮೇಲೆ ‘ನನ್ನಿಂದ ಯಾರಿಗೂ ಉಪಕಾರವಾಗಿಲ್ಲ ’ ವೆಂದು ಪರಿತಪಿಸಿದರೆ, ಏನು ಪ್ರಯೋಜನ?
ಜ್ಞಾನ
ಜ್ಞಾನಕ್ಕೆ ಸರಿಸಮಾನವಾದುದು ಇನ್ನೊಂದಿಲ್ಲ. ನಾವು ಪರಿಶ್ರಮ ಪಟ್ಟು ಪಡೆದ ಅಮೂಲ್ಯವಾದ ಜ್ಞಾನ, ನಮ್ಮೊಂದಿಗೆ ಮರೆಯಾಗಬಾರದು. ಈ ಜಗತ್ತನ್ನು ಬಿಟ್ಟು ಹೋಗುವ ಮುನ್ನ ಅದನ್ನೂ ಬೇರೆಯವರಿಗೆ ಕೊಟ್ಟು ಹೋಗಬೇಕು. ಜ್ಞಾನ ವಿರೋದೇ ಅಜ್ಞಾನವನ್ನು ಹೊಡೆದೋಡಿಸಲು ಹಾಗೂ ಹಂಚಲು. ಹಂಚುವುದರಿಂದ ಸಂತೋಷವು ವೃದ್ಧಿಯಾಗುತ್ತದೆ. ಹೇಗೆ ಒಂದು ದೀಪವು ಇನ್ನೊಂದು ದೀಪವನ್ನು ಹಚ್ಚುವಾಗ, ತನ್ನ ಏನನ್ನೂ ಕಳಕೊಳ್ಳುವುದಿಲ್ಲವೋ, ಅಂತೆಯೇ ಜ್ಞಾನವನ್ನು ಹಂಚುವುದರಿಂದ ಅದು ಎಂದೂ ಕಡಿಮೆಯಾಗದು.
ಮೇಲಾಗಿ ಅದು ಅದನ್ನು ಪಡೆಕೊಂಡವರ ಪ್ರಗತಿ-ಉನ್ನತಿಗೆ ಕಾರಣವಾಗುತ್ತದೆ. ಗಂಧದ ಕೊರಡನ್ನು ಪೆಟ್ಟಿಗೆಯ ಒಳಗಿಟ್ಟರೆ, ಅದರ ಸುವಾಸನೆ ಯಾರಿಗೂ ಗೊತ್ತಾಗದು. ಅದನ್ನು ಹೊರತೆಗೆದು, ತೀಡಬೇಕು, ತೇಯಬೇಕು, ಆಗಲೇ ಅದರ ಪರಿಮಳ
ಎಲ್ಲರಿಗೂ ಲಭ್ಯ. ಆಗಲೇ ಅದರ ಲಾಭ. ಅದೇ ರೀತಿ ಜ್ಞಾನವೂ ಹೊರಗೆ ಹರಿದಷ್ಟೂ ಹೆಚ್ಚು ಮೌಲ್ಯವನ್ನು ಪಡೆಯುತ್ತಲೇ ಹೋಗುತ್ತದೆ.
ಕರಗತ ಮಾಡಿಕೊಂಡಿರುವ ಕಲೆ
ವರುಷಗಳ ಪರಿಶ್ರಮದಿಂದ, ನಾವು ಕರಗತ ಮಾಡಿಕೊಂಡ ಕಲೆ, ಕರಕುಶಲತೆಗಳನ್ನು ಅವನ್ನು ಕಲಿಯಲಿಚ್ಛಿಸುವವರಿಗೆ, ಸಾಯುವ ಮುನ್ನ ಹಸ್ತಾಂತರಿಸಬೇಕು. ಇಲ್ಲವಾದರೆ, ಅವು ನಮ್ಮೊಂದಿಗೆ ಮರೆಯಾದಾವು. ಹೀಗಾಗಬಾರದಲ್ಲವೇ? ಹೀಗೆ ಹಿಂದಿನವರು ಇವನ್ನು ಮುಂದಿನ ಪೀಳಿಗೆಯವರಿಗೆ ಕಲಿಸಿದುದರ ಪರಿಣಾಮದಿಂದಲೇ, ಹಲವಾರು ಜಾನಪದ ಕಲೆಗಳು, ಗ್ರಾಮೀಣ ವೃತ್ತಿಗಳು ಇನ್ನೂ ಜೀವಂತವಾಗಿರೋದು.
ಆಸ್ತಿ-ಪಾಸ್ತಿ, ಧನಕನಕ, ವಸ್ತು ಒಡವೆಗಳೇ ಇರಬಹುದು-ಎಲ್ಲವನ್ನೂ ಕೊಡಬೇಕಾದವರಿಗೆ ಕೊಟ್ಟುಬಿಟ್ಟು ಸಾಯಬೇಕೇ ಹೊರತು, ಬಿಟ್ಟು ಸಾಯಬಾರದು. ಇಲ್ಲವಾದರೆ, ಅದು ಕಂಡ ಕಂಡವರ ಪಾಲಾದೀತು.
ಪ್ರೀತಿ ಕೊಟ್ಟಾಗ ಪ್ರೀತಿ ಹೆಚ್ಚುತ್ತದೆ
ಇದೇ ರೀತಿ ಪ್ರೀತಿ-ಪ್ರೇಮ, ಸ್ನೇಹ-ಒಲುಮೆ, ಕರುಣೆ ವಾತ್ಸಲ್ಯ ಮುಂತಾದ ಮಾನವೀಯ ಗುಣಗಳನ್ನು ನಾವು ಬದುಕಿರುವಾಗಲೇ, ಎಲ್ಲರಿಗೂ ಧಾರಾಳವಾಗಿ ಕೊಡಬೇಕು. ಕೊಡದೆ, ನಮ್ಮೊಳಗೇ ಇಟ್ಟುಕೊಂಡರೆ ಏನು ಪುರುಷಾರ್ಥ? ಇದನ್ನೆಲ್ಲಾ ನೀಡಲು, ಯಾವ ಖರ್ಚೂ ಇಲ್ಲ. ಯಾವ ಬಂಡವಾಳವೂ ಬೇಕಿಲ್ಲ. ಯಾರು ಬೇಕಾದರೂ, ಎಷ್ಟು ಬೇಕಾದರೂ, ಯಾವಾಗ ಬೇಕಾದರೂ ನೀಡಬಹುದು.
ನಾವೆಲ್ಲರೂ, ಒಪ್ಪಿಗೆ ಇಲ್ಲದೇ ಜನಿಸಿದವರು ಹಾಗೂ ನಮ್ಮ ಅಪ್ಪಣೆ ಇಲ್ಲದೇ ಸಾಯುವವರು. ಹುಟ್ಟುವ ಮುನ್ನ ನಮ್ಮನ್ನು ಹೆರುವವರು ಯಾರು? ಸತ್ತ ಮೇಲೆ ನಮ್ಮನ್ನು ಹೊರುವವರು ಯಾರು ಎಂಬುದು ನಮಗೆ ತಿಳಿಯದು. ‘ಒಮ್ಮೆ ಅರಳಿದ ಹೂ ಮತ್ತೆ ಅರಳದು, ಒಮ್ಮೆ ಉರುಳಿದ ಮರ ಮತ್ತೆ ಏಳದು ಹಾಗೂ ಒಮ್ಮೆ ತೆರಳಿದ ಜೀವ ಮತ್ತೆ ಮರಳದು’ ಎಂಬ ಮಾತು ದಿಟ ವಾಗಿರುವಾಗ, ನಮ್ಮ ಜೀವನ ಸಾರ್ಥಕವಾಗೋದು, ‘ಸಾಯೋದಕ್ಕೆ ಮುನ್ನ ನಾನು ಈ ಪ್ರಪಂಚಕ್ಕೆೆ ಏನಾದರೂ ಒಳ್ಳೆಯದನ್ನು ಕೊಟ್ಟು ಹೋಗಬೇಕು, ಬಿಟ್ಟುಹೋಗಬೇಕು’ ಎಂಬ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದಾಗ ಮಾತ್ರ.
ಈ ದೃಷ್ಟಿಯಲ್ಲಿ, ನಮ್ಮದೆಂಬುದೆಲ್ಲವನ್ನೂ , ನಾವು ಜೀವಂತವಾಗಿರುವಾಗಲೇ ಸೂಕ್ತ ವ್ಯಕ್ತಿಗಳಿಗೆ ಕೊಟ್ಟುಬಿಟ್ಟು, ಕೈ ಖಾಲಿ ಮಾಡಿಕೊಂಡು ಹೋಗೋದು ಲೇಸಲ್ಲವೇ! ಈ ಸತ್ಯವನ್ನೆ ದಾಸರೂ ಹೇಳಿದ್ದೂ ‘ಬಿಟ್ಟು ಹೋಗೋದಕ್ಕಿಂತ, ಕೊಟ್ಟು
ಹೋಗೋದೇ ಲೇಸಯ್ಯ’ ಎಂದು.