370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಹಿಂಸಾಚಾರ ಗಮನಾರ್ಹವಾಗಿ ಕಡಿಮೆ ಯಾಗಿದೆ.
2019ಕ್ಕೆ ಹೋಲಿಸಿದರೆ 2020ರಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದಿರುವ ಭಯೋತ್ಪಾದಕ ಚಟುವಟಿಕೆಗಳ ಪ್ರಮಾಣ ಕಡಿಮೆ. 370ನೇ ವಿಧಿಯ ರದ್ಧತಿಗೆ ವಿರೋಧಗಳನ್ನು ಗಮನಿಸಿದಾಗ, ಇದೀಗ ರದ್ದತಿಯಿಂದಾಗಿ ಬದಲಾವಣೆಗಳು
ಗೋಚರಿಸುತ್ತಿವೆ. ಜಮ್ಮ – ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾದರೂ 370ನೇ ವಿಧಿ ಅನ್ವಯ ಪ್ರತ್ಯೇಕ ಸಂವಿಧಾನ ಮತ್ತು ಧ್ವಜಹೊಂದಲು ಅವಕಾಶ ನೀಡಲಾಗಿತ್ತು.
1949ರಲ್ಲಿ ಸಂವಿಧಾನಕ್ಕೆ ಸೇರಿಸಲಾಗಿದ್ದು, 1952ರಿಂದ ಇದು ಅಸ್ತಿತ್ವಕ್ಕೆ ಬಂದಿತ್ತು. ಇದನ್ನು ರದ್ದುಗೊಳಿಸಬೇಕೆಂಬ ಬೇಡಿಕೆಯೂ ಇತ್ತೀಚಿನದ್ದಲ್ಲ. 1964ರಿಂದಲೇ ಸಂಸತ್‌ನಲ್ಲಿ ಚರ್ಚೆಯಾಗಿತ್ತು. 2019ರ ಆಗಸ್ಟ್‌ನಲ್ಲಿ ಕೇಂದ್ರ ಸರಕಾರ ಈ ವಿಧಿಯನ್ನು ರದ್ದುಗೊಳಿಸಿತು. ಸರಕಾರದ ಈ ನಡೆ ಬಹು ಚರ್ಚೆಗೆ ಗ್ರಾಸವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಲ್ಲಿ 594 ಭಯೋತ್ಪಾದಕ ಘಟನೆಗಳು ನಡೆದಿದ್ದು, 157 ಭಯೋತ್ಪಾದಕರು ಮೃತಪಟ್ಟಿದ್ದರು.
2020ರಲ್ಲಿ 244 ಭಯೋತ್ಪಾದಕ ಘಟನೆಗಳು ನಡೆದಿದ್ದು, 221 ಭಯೋತ್ಪಾದಕರು ಮೃತಪಟ್ಟಿದ್ದರು. ಈ ಅಂಕಿ ಅಂಶ ಗಳನ್ನು ಗಮನಿಸಿದಾಗ ಭಯೋತ್ಪಾದಕ ಚಟುವಟಿಕೆ ಕ್ಷೀಣಿಸಿರುವುದು ಸ್ಪಷ್ಟವಾಗುತ್ತದೆ. ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿದ ನಂತರ, ಒಂದು ವರ್ಷದೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳ ಸಂಖ್ಯೆ ಗಮನಾರ್ಹ ವಾಗಿ ಕಡಿಮೆಯಾಗಿದೆ.
ಅಭಿವೃದ್ಧಿಗೆ ಆದ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಧಿಯನ್ನು ರದ್ದುಗೊಳಿಸಲಾದರೂ, ಶಾಂತಿ ಸ್ಥಾಪನೆ ನಿಟ್ಟಿನಲ್ಲಿಯೂ ಇದೊಂದು ಮಹತ್ವದ ಬದಲಾವಣೆ.