ಹುವಾಲಿಯೆನ್ ಕೌಂಟಿ: ತೈವಾನ್ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 146 ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ತೈವಾನ್ ಅಧ್ಯಕ್ಷ ತ್ಸಾಯ್ ಇಂಗ್-ವೆನ್ ಅವರು ಅಪಘಾತ ಸಂಭವಿಸಿರುವ ಸ್ಥಳಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ.
ಅಪಘಾತ ಸಂಭವಿಸಿದ ರೈಲಿನ ಕೆಲವು ಬೋಗಿಗಳು ಸುರಂಗದಲ್ಲಿ ಸಿಲುಕಿದ್ದ ರಿಂದ, ರೈಲಿನೊಳಗೆ ಕುಳಿತಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದರು. ಇನ್ನೂ ಕೆಲವು ಪ್ರಯಾಣಿಕರು ರೈಲಿನ ಕಿಟಕಿ ಗಳನ್ನು ಮುರಿದು ಹೊರಗೆ ಜಿಗಿದು, ರೈಲಿನ ಚಾವಣಿ ಮೇಲೆ ಏರಿ ಸುರಕ್ಷಿತವಾಗಿ ಹೊರ ಬಂದಿದ್ದರು.
ಟೊರೊಕೊ ಜಾರ್ಜ್ ಪ್ರದೇಶದಲ್ಲಿ ಶುಕ್ರವಾರ ರೈಲು ಸುರಂಗದಿಂದ ಹೊರ ಬರುತ್ತಿದ್ದಾಗ, ನಿರ್ಮಾಣ ಚಟುವಟಿಕೆಗಳಿಗೆ ನಿಯೋಜನೆಗೊಂಡಿದ್ದ ಲಾರಿ ಸೇತುವೆಯಿಂದ ರೈಲ್ವೆ ಹಳಿಯ ಮೇಲೆ ಉರುಳಿತು. ಪರಿಣಾಮ ರೈಲು ಹಳಿ ತಪ್ಪಿ ಅಪಘಾತ ಕ್ಕೀಡಾಯಿತು. ರೈಲಿನಲ್ಲಿ 494 ಪ್ರಯಾಣಿಕರಿದ್ದರು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಲಾರಿ ರೈಲು ಹಳಿ ಮೇಲೆ ಬಿದ್ದಾಗ, ಅದರೊಳಗೆ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ಪ್ರಶ್ನೆಗೆ ಒಳಪಡಿಸಿದ್ದಾರೆ. ‘ಟ್ರಕ್ನ ತುರ್ತು ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ’ ಎಂದು ಸರ್ಕಾರದ ವಿಪತ್ತು ಪರಿಹಾರ ಕೇಂದ್ರ ತಿಳಿಸಿದೆ.