Friday, 20th September 2024

ಐಪಿಎಲ್: ಕರಾವಳಿಯಲ್ಲಿ ಬೆಟ್ಟಿಂಗ್‌ ಆ್ಯಪ್‌ಗಳದ್ದೇ ಕಾರುಬಾರು

ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು

ಐಪಿಎಲ್ ಪಂದ್ಯಗಳಲ್ಲಿ ಬೌಂಡರಿ, ಸಿಕ್ಸರ್‌ಗಳು ಸಡಿಯುತ್ತಿದ್ದರೆ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಕೋಟಿಗಟ್ಟಲೆ ಹಣ ಭೋರ್ಗರೆಯು ತ್ತಿದೆ.

ಮುಂಬಯಿ ಲಿಂಕ್ ಮೂಲಕ ಬಂದಿಳಿದ ಬೆಟ್ಟಿಂಗ್ ಆ್ಯಪ್ ಗಳು ಇದೀಗ ಕರಾವಳಿಯಲ್ಲಿ ಸ್ವತಂತ್ರ್ಯವಾಗಿ ಕಾರ್ಯಾಚರಿಸುತ್ತಿವೆ. 8
ತಂಡಗಳು, 60 ಪಂದ್ಯಗಳಿವೆ. ಒಂದು ಕೂಟದಲ್ಲಿ 100 ಕೋಟಿ ವರೆಗೆ ಕರಾವಳಿಯಲ್ಲಿ ಬೆಟ್ಟಿಗ್ ವ್ಯವಹಾರ ನಡೆಯುತ್ತದೆ.
ಮಂಗಳೂರಿನ ಪ್ರಮುಖ ಬುಕ್ಕಿಗಳೆಲ್ಲ ಮುಂಬಯಿ ಅಂಧೇರಿ, ಗೋವಾದಲ್ಲಿ ಅಡಗುತಾಣದಲ್ಲಿದ್ದು ಅಲ್ಲಿಂದಲೇ ವ್ಯವಹಾರ
ನಡೆಸುತ್ತಿದ್ದಾರೆ.

ಕರಾವಳಿಯಲ್ಲಿ ಬೆಟ್ಟಿಂಗ್ ಉದ್ಯಮದಲ್ಲಿ ಪ್ರಮುಖವಾಗಿ ಲೋಟಸ್ ಮತ್ತು ಆರೆಂಜ್ ಆ್ಯಪ್‌ಗಳು ಹೆಚ್ಚಿನ ಪಾಲು ಹೊಂದಿವೆ.
ಆ್ಯಪ್‌ಗಳನ್ನು ಬುಕ್ಕಿಗಳು ನೇಮಿಸಿದ ಏಜೆಂಟರ ಮೂಲಕವೇ ಹಾಕಿಸಬೇಕು. ಹಾಕಿಸುವಾಗ ಕನಿಷ್ಠ 50 ಸಾವಿರ ರು. ಠೇವಣಿ
ಕೂಡಾ ರಿಚಾರ್ಜ್ ಮಾಡಬೇಕು. ಏಜೆಂಟರಿಗೆ ಹಣ ನೀಡಿದರೆ ಮಾತ್ರ ಅವರು ರೀಚಾರ್ಜ್ ಮಾಡುತ್ತಾರೆ. ಆ್ಯಪ್‌ನಲ್ಲಿ ಹಣ ಇಲ್ಲದಿದ್ದರೆ ಆಡಲು ಸಾಧ್ಯವಿಲ್ಲ.

ಏಜೆಂಟ್‌ಗಳ ಮೂಲಕ ಹಣ ಸಂಗ್ರಹಿಸಿ, ಫೋನ್ ಮೂಲಕ ಬೆಟ್ಟಿಂಗ್ ಆಡುವ ಸಾಂಪ್ರದಾಯಿಕ ಕ್ರಮವೂ ಚಾಲ್ತಿಯಲ್ಲಿದೆ.
ಆದರೆ ಆ್ಯಪ್ ಮೂಲಕ ಆಟ ಬಹಳ ಸುರಕ್ಷಿತ ಮತ್ತು ಮೋಸ ಮಾಡುವುದು ಕಷ್ಟವಾಗಿರುವುದರಿಂದ ಈ ಆ್ಯಪ್ ಬೆಟ್ಟಿಂಗ್‌ಗೆ ಜನರೂ ಮತ್ತು ಆಟ ಆಡಿಸುವವರು ಹೊಂದಿಕೊಂಡಿದ್ದಾರೆ.

ವೈಟ್ ಕಾಲರ್ ಉದ್ಯಮಿಗಳಿಗೆ ಮುಂಬಯಿ ನೇರ ಲಿಂಕ್ ಇದೆ. ಮುಂಬಯಿಯಲ್ಲಿದ್ದು ಮಂಗಳೂರಿಗೆ ಬರುವಾಗ ಕಾರ್ಯಕ್ರಮ ಗಳಲ್ಲಿ ಉದ್ಯಮಿ ಫೋಸ್ ನೀಡುತ್ತಾರೆ. ಪಂದ್ಯ ಆರಂಭಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಫೇವರಿಟ್ ರೇಟ್ ನೀಡಲಾಗುತ್ತದೆ. ದರಗಳ ಅನುಃಪಾತ ಬದಲಾಗುತ್ತಲೇ ಇರುತ್ತದೆ. ಮಂಗಳೂರಲ್ಲಿ ಪ್ರಮುಖ ಬುಕ್ಕಿಗಳು 30ರ ಆಸುಪಾಸು ಇದ್ದಾರೆ.

ಇವರಿಗೆ ಸಹಕರಿಸಲು 100ಕ್ಕೂ ಮಿಕ್ಕಿ ಸಬ್ ಬುಕ್ಕಿಗಳು ಇದ್ದಾರೆ. ಮಟ್ಕಾ ದಂಧೆಗಳು ಐಪಿಎಲ್ ತಂಡಗಳ ಮೊತ್ತಗಳ ಕೊನೆಯ ಸಂಖ್ಯೆೆಯ ಮೇಲೂ ಬೆಟ್ಟಿಂಗ್ ನಡೆಯುತ್ತದೆ. ಕೊನೆಯ ಸಂಖ್ಯೆೆಗೆ ಹತ್ತುಪಟ್ಟು ಹಣ ನೀಡಬೇಕು. 100 ರೂ. 1 ಸಾವಿರ ರು. ಮಟ್ಕಾ ಪ್ರಿಯರು ಇದನ್ನು ಈಗ ಹೆಚ್ಚಾಗಿ ಅನುಸರಿಸುತ್ತಿದ್ದಾರೆ.

ಇಸ್ಪೀಟ್ ಕ್ಲಬ್ ಗಳಲ್ಲಿಯೂ ಕುಳಿತು ಬೆಟ್ಟಿಂಗ್ ಆಡುವರು ಕಾಣ ಸಿಗುತ್ತಾರೆ. ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಆ್ಯಪ್‌ಗಳು ಹೀಗಿವೆ. ಲೋಟಸ್ ಮತ್ತು ಆರೆಂಜ್ ಸ್ಥಳೀಯವಾಗಿ ಪ್ರಸಿದ್ಧಿಯಲ್ಲಿದೆ. ಲೋಟಸ್ ಬುಕ್ 247, ಡೈಮಂಡ್
ಎಕ್ಸ್‌‌ಚೇಂಜ್, ಸ್ಕೈ ಇಂಪ್ಲೈ, ಲೋಡ್ ಎಕ್ಸ್ಚೇಂಜ್ ಪೂನಾ (ಕುಂದಾಪುರ ಪರಿಸರದಲ್ಲಿ ಪ್ರಸಿದ್ಧ), ಬೆಟ್ಟದ ಎಕ್ಸ್‌ಚೇಂಜ್ 247
(ಮಂಗಳೂರು ಮೂಲ), ವರ್‌ಲ್ಡ್‌ 247.

ಸಬ್ ಏಜೆಂಟ್ ಗಳು: ಎಲ್ಯಾರ್ ಪದವು,  ಕುತ್ತಾರ್, ಕುಂಪಲ, ಸೋಮೇಶ್ವರ, ತೊಕ್ಕೊಟ್ಟು ಚೊಂಬುಗುಡ್ಡೆ, ಕಾವೂರು,
ಸುರತ್ಕಲ್‌ನಲ್ಲಿ (10ಮಂದಿ), ಮಂಗಳೂರು ಅಶೋಕನಗರ, ಉರ್ವ, ಪಣಂಬೂರು, ಬಿಕರ್ನಕಟ್ಟೆ, ತಲಪಾಡಿ, ಕೋಡಿಕಲ್, ಕದ್ರಿ,
ಯೆಯ್ಯಾಡಿ, ಪಂಪ್‌ವೆಲ್, ನಾಗುರಿ, ಎಕ್ಕೂರು, ಪಡೀಲ್, ಪಾಂಡೇಶ್ವರ, ಬಂಟ್ಸ್ ಹಾಸ್ಟೆಲ್, ಬಜಾಲ್. ಉಡುಪಿ-ಕುಂದಾಪುರದಲ್ಲಿ 50 ಮಂದಿ.

ಅತಿ ಹೆಚ್ಚು ನಷ್ಟ ! ಇದುವರೆಗೆ ನಡೆದ ಪಂದ್ಯಗಳಲ್ಲಿ ಬೆಟ್ ಹಾಕಿದ ಜನರಿಗೇ ಲಾಭ. ರಾಜಸ್ಥಾನ- ಪಂಜಾಬ್ ಪಂದ್ಯಗಳೂ ಕೂಡಾ ಅನಿರೀಕ್ಷಿತ ಫಲಿತಾಂಶದಿಂದ ಬುಕ್ಕಿಗಳು ಇದುವರೆಗೆ ಲಕ್ಷಗಟ್ಟಲೆ ನಷ್ಟದಲ್ಲಿದ್ದಾರೆ.

ಏ.13ರಂದು ನಡೆದ ಮುಂಬಯಿ ಇಂಡಿಯನ್ಸ್‌- ಕೆಕೆಆರ್ ನಡುವಿನ ಪಂದ್ಯ ಬುಕ್ಕಿಗಳೇ ನಷ್ಟ ಅನುಭವಿಸುವಂತಾಗಿದೆ.
ಮುಂಬಯಿ ಗೆ ರೇಟ್ ಇತ್ತು. ಆದರೆ 6 ವಿಕೆಟ್ ಇದ್ದು 38 ಎಸೆತಕ್ಕೆ 38 ರನ್ ಗಳಿಸಲು ಗುರಿ ಇದ್ದಾಗ ಕೊಲ್ಕೊತ್ತ ಪರ ಗೆಲ್ಲುವ ಸಾಧ್ಯತೆ ಹಚ್ಚಿದ ಕಾರಣ. ಕೊಲ್ಕೊತ್ತಾ 1 ರೂ. ಮುಂಬಯಿಗೆ 3 ಪೈಸೆ ತಲುಪಿತ್ತು. ಆದರೂ ಕೊಲ್ಕೊತ್ತ ಸೋತಿತು.

ಹಚ್ಚಿನವರು ಮುಂಬಯಿ ಪರವಾಗಿಯೇ ಬೆಟ್ ಕಟ್ಟಿದರು. ಹೀಗಾಗಿ 3 ಸಾವಿರ ಕಟ್ಟಿದವರಿಗೂ 1 ಲಕ್ಷ ರು. ಬುಕ್ಕಿಗಳು ನೀಡಬೇಕಾಯಿತು. ಮುಂಬಯಿ ಪರ ಬೆಟ್ ಮಾಡಿದವರು ಹಣ ಮಾಡಿದರು, ಕೊಲ್ಕತ್ತಾ ಪರ ಹಣ ಹೂಡಿದವರ ಸಂಖ್ಯೆಯೂ ಕಡಿಮೆ ಇತ್ತು. ಹೀಗಾಗಿ ಬುಕ್ಕಿಗಳು ಅಪಾರ ನಷ್ಟ ಅನುಭವಿಸಿದರು.

ಫೇವರಿಟ್ ತಂಡ: ಕಪ್ ಗೆಲ್ಲುವ ಫೇವರಿಟ್ ಟೀಮ್‌ಗಳಲ್ಲಿ ಮುಂಬಯಿ ಬಳಿಕ ಚೆನ್ನೈ ಆಮೇಲೆ ಬೆಂಗಳೂರು ತಂಡಗಳಿತ್ತು. ಇದೀಗ ಚೆನ್ನೈ ಕೆಳಗಿಳಿದು ಬೆಂಗಳೂರು ಎರಡನೇ ಸ್ಥಾನಕ್ಕೆ ಏರಿದೆ. ಈ ತಂಡಗಳ ಎದುರು ಉಳಿದ ತಂಡಗಳ ರೇಟ್ ಯಾವಾಗಲೂ ಕಡಿಮೆ ಇರುತ್ತದೆ. ಕೊನೆಯ ಸ್ಥಾನ ಕೊಲ್ಕೊತ್ತಾ ನೈಟ್ ರೈಡರ್‌ಸ್‌‌ಗೆ ಎನ್ನುತ್ತಾರೆ ಬೆಟ್ಟಿಂಗ್ ವಿಶ್ಲೇಷಕರು.

ಕರಾವಳಿಯಲ್ಲಿ 100 ಕೀಟಿ ವ್ಯವಹಾರ
*ಒಂದು ಐಪಿಎಲ್ ಟೂರ್ನಿಯಲ್ಲಿ 45 ಕೋಟಿ ರು. ಮಂಗಳೂರಲ್ಲಿಯೇ ವ್ಯವಹಾರ ನಡೆಯುತ್ತದೆ.
*ಎಲ್ಲ ಆಟ, ಕೂಟಕ್ಕೆ ಸೈ: ಟೆನಿಸ್, ಫುಟ್ ಬಾಲ್ ಸಹಿತ ಯಾವುದೇ ಆಟಕ್ಕೂ ಕೂಟಕ್ಕೂ ಆ್ಯಪ್‌ನಲ್ಲಿ ಬೆಟ್ಟಿಂಗ್
ಮಾಡಬಹುದಾಗಿದೆ.