ನವದೆಹಲಿ: ಮುಂಬರುವ ಸೆಪ್ಟೆಂಬರ್ 15ರೊಳಗೆ 9 ಹೊಸ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ತಮಿಳುನಾಡು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮಂಗಳವಾರ ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಳಾದ ಹೇಮಂತ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾ ಪೀಠ, ‘4 ಜಿಲ್ಲೆಗಳನ್ನು ವಿಂಗಡಿಸಿ ಹೊಸ ಜಿಲ್ಲೆಗಳನ್ನಾಗಿ ಪರಿವರ್ತಿಸ ಲಾಗಿರುವ ಒಂಬತ್ತು ಜಿಲ್ಲೆ ಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ, ಸೆಪ್ಟೆಂಬರ್ 15ರೊಳಗೆ ಫಲಿತಾಂಶ ಪ್ರಕಟಿಸಬೇಕು’ ಎಂದು ಹೇಳಿದೆ.
4 ತಿಂಗಳೊಳಗೆ ಚುನಾವಣೆ ನಡೆಸುವಂತೆ ನ್ಯಾಯಾಲಯವು 2019ರ ಡಿಸೆಂಬರ್ 11ರಂದು ಆದೇಶಿಸಿತ್ತು. ಆದರೆ ಆಯೋಗವು ಇದಕ್ಕಾಗಿ 18 ತಿಂಗಳುಗಳು ತೆಗೆದುಕೊಂಡಿದೆ. 2018-2019ರಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಅಂದಿನಿಂದ ಯಾವುದೇ ಹೊಸ ಪ್ರತಿನಿಧಿಗಳಿಲ್ಲ. ಒಂದು ವೇಳೆ ಆಯೋಗವು ನ್ಯಾಯಾಲಯದ ಆದೇಶ ಪಾಲಿಸದಿದ್ದಲ್ಲಿ, ನ್ಯಾಯಾಂಗ ನಿಂದನೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಪೀಠ ಎಚ್ಚರಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ ಚುನಾವಣೆ ನಡೆಸಲು ಸ್ವಲ್ಪ ಸಮಯ ಅವಕಾಶ ನೀಡಬೇಕು’ ಎಂದು ಭಾರತದ ಚುನಾವಣಾ ಆಯೋಗದ (ಇಸಿಐ) ಪರವಾಗಿ ಹಾಜರಿದ್ದ ಹಿರಿಯ ವಕೀಲ ಪಿ.ಎಸ್. ನರಸಿಂಹ ಅವರು ಪೀಠಕ್ಕೆ ಮಾಡಿದ ಮನವಿಯನ್ನು ನಿರಾಕರಿಸಿದ ನ್ಯಾಯಾಲಯವು, ಪ್ರತಿಯೊಂದು ವಿಷಯಕ್ಕೂ ಕೋವಿಡ್ ಸಾಂಕ್ರಾ ಮಿಕದ ಕಾರಣ ನೀಡಲಾಗುತ್ತದೆ. ರಾಜಕೀಯ ಪಕ್ಷಗಳು ಹೇಳಿದರೆ, ಆಯೋಗವು ಚುನಾವಣೆಗಳನ್ನು ಆಯೋಜಿಸುತ್ತದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ (ಸಿಇಸಿ) ನಡೆಸುತ್ತದೆಯೇ ವಿನಃ ಇಸಿಐ ಅಲ್ಲ’ ಎಂದು ಪೀಠ ಹೇಳಿದೆ.