Thursday, 19th September 2024

ಸಾವಿಗೂ ಮೊದಲೇ ಸ್ಥಾಪಿಸಿಕೊಂಡ ಸ್ಥಾವರಗಳು

ಅಲೆಮಾರಿಯ ಡೈರಿ

ಸಂತೋಷ ಕುಮಾರ ಮೆಹೆಂದಳೆ

mehandale100@gmail.com

ಊರ ತುಂಬ ಅರಮನೆಗಳು ಮತ್ತು ಪ್ರತಿ ಕಟ್ಟಡಗಳನ್ನು ತಮ್ಮ ಪರಂಪರೆಯ ಹೆಗ್ಗುರುತಾಗಿ ಅಂದಚೆಂದದ ವಿನ್ಯಾಸ ಸೇರಿಸಿ ನಿರ್ಮಿಸುವ ಅಭ್ಯಾಸದ ಕಾರಣ ಈ ಹಳದಿ ವರ್ಣದ ನಗರಿ ಚೆಂದದ ಸಿನಿಮಾ ಸೆಟ್‌ನಂತೆ ಕಾಣುತ್ತದೆ. ಇತ್ತೀಚಿನ ಹೋಟೆಲ್‌ಗಳಲ್ಲೆಲ್ಲ ಹಳೆಯ ಕಾಲದ ಮಂಚಗಳು, ಟೀಪಾಯ್‌ಗಳು, ಖುರ್ಚಿ ಗಳದ್ದೇ ದರಬಾರು. ಅವೆಲ್ಲ ಇಲ್ಲದಿದ್ದರೂ ಈಗಲೂ ಅಂತಹದ್ದೇ ಡಿಸೈನ್‌ನಲ್ಲಿ ನಿರ್ಮಿಸಿ ಹಳತಾಗಿಸಿಡುವ ಕಾರಣ ಯಾವುದು ಹೊಸದು, ಯಾವುದು ನಿಜವಾದ ಪಾರಂಪರಿಕೆ ವಸ್ತುಗಳು ಗೊತ್ತಾಗದಷ್ಟು ಸಾಮ್ಯತೆ.

ಅದರಲ್ಲೂ ಕಟ್ಟಿಗೆ ಬಳಸಿ ನಿರ್ಮಿಸುವ ಅಂದ ಚೆಂದ ಲಾಟಿನ್ ಗಳಲ್ಲಿ ದೀಪದ ಮಾದರಿಯಲ್ಲಿ ಎಲ್‌ಇಡಿ ಬಳಸಿ ದೀಪ ಉರಿಸಿಡುವ ರಾತ್ರಿಯ ಅಲಂಕಾರ, ಹೋಟೆಲ್‌ಗಳಲ್ಲು ಜನ ಕಿಕ್ಕಿರಿಯಲು ಕಾರಣ. ಪಾರ್ಟಿಗಳಿಗಂತೂ ಹೇಳಿ ಮಾಡಿಸಿದ ವೈಭವ ಇಲ್ಲಿನ ಪಾನಶಾಲೆಗಳದ್ದು. ಅದರಲ್ಲೂ ಸಂಜೆಯ ಮಾರುಕಟ್ಟೆ ಮತ್ತು ಪಾರಂಪರಿಕ ವಸ್ತ್ರವಿನ್ಯಾಸದ ಈ ಮರಳು ನಗರಿ ಜೈಸಲ್ಮೇರ್ ಹೆಸರಿಗೆ ತಕ್ಕಂತೆ ಚಿನ್ನದ ನಗರಿ. ಪ್ರತಿ ಕಟ್ಟಡದ ಮತ್ತು ಶಿಲ್ಪ ವಿನ್ಯಾಸಕ್ಕೆ ಸ್ಥಳೀಯ ಕಲಾತ್ಮಕತೆ ಒತ್ತು ನೀಡುತ್ತಿರುವುದು, ಪ್ರವಾಸೋದ್ಯಮದ ಲೆಕ್ಕದಲ್ಲಿ ಬದಲಾಗುತ್ತಿರುವ ಸೌಹಾರ್ದತೆ, ಬಣ್ಣದ ದೀಪಗಳ ಕಾರಣ, ಮೇಲಿನಿಂದ ಕಾಣುವ ಪಕ್ಷಿ ನೋಟದಲ್ಲಿ ಮೇಲ್ಭಾಗದಿಂದ ಈ ನಗರ ಅದ್ಭುತವಾಗಿ ಗೋಚರಿಸುತ್ತಿದೆ.

ಅದರಲ್ಲೂ ಭೋಜನ ಮತ್ತು ಅಹಾರ ಸವಿಯುವ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಚಿನ್ನದ ನಗರಿ ಇದು. ಊಟಕ್ಕೋಸ್ಕರ ಸ್ಥಳಗಳ ಪಟ್ಟಿ ಮಾಡಿಟ್ಟುಕೊಂಡು ಹೊರಟರೆ, ಉತ್ತಮ ಎನ್ನಬಹುದಾದ ಮತ್ತು ಸ್ಥಳೀಯ ಆಕರ್ಷಕ ಊಟದ ತಿನಿಸಿನ ಕೇಂದ್ರಗಳ ಭೇಟಿಗೆ ಕನಿಷ್ಟ ಹದಿನೈದು ದಿನಗಳ ಠಿಕಾಣಿ ಆದರೂ ಬೇಕೇ ಬೇಕು. ಬೆಳಗಿನ ಚಹ ಮತ್ತು ವರೈಟಿ ಪರೋಟ ಸರಿಯಾಗಿ ಹಸಿದು ಹೋಗಿಯೇ, ತಿಂದು ಸವಿಯಬೇಕು. ಅತಿಥಿ ಸತ್ಕಾರಕ್ಕೆ ಒತ್ತು ಮತ್ತು ಬೆಲೆಗೂ ಮಿಗಿಲಾದ ರುಚಿ ಶುಚಿ ಊಟ ಪೂರೈಸುವಲ್ಲಿ ಇಲ್ಲಿನ ಹೋಟೆಲ್‌ಗಳು ಉಳಿದೆಲ್ಲದಕ್ಕಿಂತ ಆಪ್ತವಾಗುತ್ತವೆ.

ಜೈಸಲ್ಮೇರ್‌ನಲ್ಲಿ ಇದ್ದಷ್ಟೂ ದಿನವೂ ನಿಂತಲ್ಲಿ ಕೂತಲ್ಲಿ ಅಲ್ಲಲ್ಲಿನ ವಿಶೇಷ ಖಾದ್ಯ ಸವಿಯುವ ಕೆಲಸ ಮಾತ್ರ ನಾನು ಮುಲಾಜಿಲ್ಲದೆ ಮಾಡಿದ್ದೆ. ಅದರಲ್ಲೂ ಹಗಲಲ್ಲಿ ಲಸ್ಸಿ ಮತ್ತು ಬೆಳಗ್ಗೆ ಸಂಜೆಯ ಹೊತ್ತಿಗಿನ ಮಣ್ಣಿನ ಕುಡಿಕೆಯಲ್ಲಿ ಕೊಡುವ ಗೂಡಂಗಡಿಗಳ ಚಹದ ರುಚಿಗೆ ಮಾರುಹೋಗದವರೇ ಇಲ್ಲ. ಸ್ಟ್ರೀಟ್ ಫುಡ್ ಮತ್ತು
ಸ್ಥಳೀಯ ತಿನಿಸು ಹುಚ್ಚುಹಿಡಿಸಬಲ್ಲವು. ಸಂಜೆಯ ಹೊತ್ತಿಗೆ ಊರ ಹೊರಗಿರುವ ಸಮಾಧಿಗಳ ದೇವಸ್ಥಾನ ನೋಡುವುದಕ್ಕೆ ಹೋಗೋಣ ಎಂದಾಗ,
ಮಧ್ಯಾಹ್ನದ ರಣಬಿಸಿಲಿನ ಹೊತ್ತಿಗೆ ಬಸವಳಿದಿದ್ದ ನಾವು ಸರಿ,ಸರಿ ಎಂದಿದ್ದೆವು. ಮತ್ತೆ ತಿರುಗುವ ಉಮೇದಿ ಇರಲಿಲ್ಲ.

ಆದರೂ ಸಮಾಽಗಳು ದೇವಸ್ಥಾನಗಳೇಕಾಗುತ್ತವೇ..? ಯಾವ ಗೈಡೂ ಉತ್ತರಿಸಿರಲಿಲ್ಲ. ಸಂಜೆಯ ಹೊತ್ತಿಗೆ ಜೈಸಲ್ಮೇರ್ ಏನಿದ್ದರೂ ಮರಳು ದಂಡೆಯಲ್ಲಿ ಅಲ್ಲ, ಈ ಹತ್ತಾರು ಸ್ಮಾರಕಗಳ ಬದಿಯಲ್ಲೇ ನೋಡಬೇಕು. ಕಾರಣ ಹೊಂಬಣ್ಣದ ಬಿಸಿಲು ಇಲ್ಲಿನ ಅಕರ್ಷಣೆ. ಆಗಿನ ಆ ರಾಜಮನೆತನದವರಿಗೆ ತಮ್ಮ ಅವಸಾನ
ಸಮೀಪಿಸಿತೆಂದೋ, ಇನ್ನೇನು ಕಾಲ ಮುಗಿಯುತ್ತದೆಂದೋ ಮೊದಲೇ ಗೊತ್ತಾಗಿ ಬಿಡುತ್ತಿತ್ತೇನೊ. ಅದಕ್ಕಾಗಿ ಹಲವು ವರ್ಷಗಳ ಮೊದಲೇ ಒಂದು ಕಲಾತ್ಮಕ ಚಿತ್ರಣದ ಅಪ್ಪಟ ದೇವಸ್ಥಾನ ಆಥವಾ ಸ್ಮಾರಕದ ಮಾದರಿಯ ನಿರ್ಮಾಣಕ್ಕೆ ಜನಹಿತದ ದೃಷ್ಠಿಯಲ್ಲಿ ಚಾಲನೆ ನೀಡುತ್ತಿದ್ದರು. ಹಾಗೆ ಅಂದ ಚೆಂದ ಮತ್ತು ಊರಿನಿಂದ ದೂರದ, ಯಾವ ದಿಕ್ಕಿನಿಂದಲೂ ನೈಸರ್ಗಿಕ ಹಾನಿಗೊಳಗಾಗದ ಜಾಗವನ್ನು ಹುಡುಕಿ, ದಿಬ್ಬದ ಮೇಲೆ ಚೆಂದಚೆಂದ ಚಿನ್ನದ ಬಣ್ಣದ ಕಲ್ಲಿನಲ್ಲಿ ಕಟ್ಟಡ ಎದ್ದು ನಿಲ್ಲುತ್ತಿದ್ದವು. ಅದರ ಪಕ್ಕದಲ್ಲೇ ಇದ್ದು ಅದ್ಭುತ ಎನ್ನುವಂತಹ ಹೂ ತೋಟದ ಸೌಂದರ್ಯ ಸವಿಯಲು ಅದನ್ನು ನಿರ್ಮಿಸಿದಂತೆ ಕಾಣಿಸುತ್ತಿತ್ತು.

ಹಾಗೆ ಯಾವ ರಾಜನಿಂದ ನಿರ್ಮಿತವಾಗುತ್ತಿದ್ದವೋ ಅದರಲ್ಲಿ ಆಯಾ ರಾಜನ ಮರಣಾನಂತರ, ಅವನ ಹೆಸರು ಮಾಹಿತಿ ಇತ್ಯಾದಿ ವಿವರವಿದ್ದ ಫಲಕಗಳನ್ನು ಅದರಲ್ಲಿ ಇಡಲು ಆರಂಭಿಸಲಾಯಿತು. ಹೀಗೆ ಕಾಲಾವಧಿಯ ಅನುಸಾರ ಪ್ರತಿಯೊಬ್ಬ ಅರಸ ಅವನ ಸಹೋದರ ಅಥವಾ ಇನ್ಯಾರೋ ಮುಖ್ಯವ್ಯಕ್ತಿಗಳ ಒಂದೊಂದು ಸ್ಮಾರಕ ನಿರ್ಮಾಣ ಆಗುತ್ತಿದ್ದಂತೆ, ಕ್ರಮೇಣ ಈ ಸಾವಿನ ಸ್ಥಾವರಗಳ ಸಮೂಹವೇ ಅಲ್ಲಿ ಬೆಳೆಯಿತು. ಸರಿ ಸುಮಾರು 450 ವರ್ಷಗಳಿಗೂ
ಮೊದಲೇ ನಿರ್ಮಾಣವಾದ ಛತ್ರಿಯಿಂದ ಹಿಡಿದು, ಇತ್ತಿಚಿಗೆ 19 ನೇ ಶತಮಾನದ ಆರಂಭದವರೆಗೂ ಇದು ಮುಂದುವರೆದುಕೊಂಡು ಬಂದುದರಿಂದ ಅಲ್ಲೊಂದು
ಸಾವುಗಳ ಸ್ಮಾರಕದ ಛತ್ರಿಗಳ ಸಂಕೀರ್ಣವೇ ನಿರ್ಮಾಣವಾಯಿತು.

ಕೊನೆಗೆ ಅರಸೊತ್ತಿಗೆ ಮುಗಿದು ಇದ್ದಬದ್ದ ಅಂತಹ ಸ್ಥಳಗಳೆಲ್ಲಾ ಪುರಾತತ್ವ ಇಲಾಖೆಯ ಸುಪರ್ದಿಗೆ ಒಳಗಾಗಿ ಸ್ವಚ್ಛತೆಯೂ ಸುರಕ್ಷತೆಯೂ ಆರಂಭವಾಗಿ ಪ್ರವಾಸಿ ಸ್ಥಳಗಳಾಗಿ ಬದಲಾದವು. ಸಾವಿಗೂ ಮೊದಲಿನ ಸ್ಮಾರಕಗಳಿಗೆ ಸಾರ್ಥಕತೆ ಬಂದಿದ್ದೇ ಹೀಗೆ. ನಂತರದಲ್ಲಿ ಬದಲಾದ ಈ ಸಂಕೀರ್ಣ ಮತ್ತು ಸಾಲು
ಸಾಲು ಬಂಗಾರದ ವರ್ಣದ ಕಲಾತ್ಮಕ ಕಟ್ಟಡಗಳು ಇವತ್ತು ಕ್ಯಾನೋಪಿ ಅಥವಾ ಬಡಾಭಾಗ್ ಎಂದು ಕರೆಸಿಕೊಳ್ಳತೊಡಗಿದರೆ, ಪ್ರಸ್ತುತ ರಾಜಸ್ಥಾನದ ಕೊನೆಯ
ಬಂಗಾರದ ನಗರಿ ಜೈಸಲ್ಮೇರ್ ತಲುಪುವ ಪ್ರತಿಯೊಬ್ಬನಿಗೂ ಇದು ಸಂಜೆಯ ಸೂರ್ಯಾಸ್ತದ ಹೊತ್ತಿಗಿನ ಆಕರ್ಷಕ ಕೇಂದ್ರ.

ಜೋಡಿಗಳ ಫೋಟೊಗ್ರಾಫಿಗೆ, ಪ್ರೀ ಮ್ಯಾರೇಜ್ ಶೂಟಿಂಗ್‌ಗೆ ಹೇಳಿ ಮಾಡಿಸಿದ ತಾಣ. ಪಕ್ಕದಲ್ಲೇ ಹರಿಯುವ ನದಿಯತ್ತ ಮುಖ ಮಾಡಿ ಕೂತುಕೊಳ್ಳುವ ವಿದೇಶಿಗರಿಗೆ ಈಗ ಇದು ಅಚ್ಚುಮೆಚ್ಚಿನ ತಾಣ. ಭಾರತೀಯರಿಗೆ ಫೋಟೊಗೇ ಸಮಯ ಸಾಕಾಗುವುದಿಲ್ಲ. ಇನ್ನು ಅವರಂತೆ ತೆಪ್ಪಗೆ ಕೂತು ಸಂಜೆಯ ಮೌನ ಸಂವಹನ ಈ ಜನ್ಮದಲ್ಲಿ ಆಸ್ವಾದಿಸಲಾರರು ಎನ್ನಿಸುತ್ತದೆ.

ಮೊದಲಿಗೆ 1470-1506 ರ ಕಾಲಾವಽಯ ಮಹಾರಾಜ ಮೆಹರವಾಲ್ ಜೈತ್ಸಿಂಗ್ ಸುಮ್ಮನೆ ಒಂದು ಚೆಂದದ ಸಿಟ್ಟಿಂಗ್ ಹೌಸ್ ತರಹದ್ದನ್ನು ಪಕ್ಕದಲ್ಲೆ ಇರುವ ಅಣೆಕಟ್ಟೆಯ ಸೌಂದರ್ಯವನ್ನು ಸವಿಯಲು ಸಲುವಾಗಿ ನಿರ್ಮಿಸಿಕೊಂಡಿದ್ದ. ನಂತರದಲ್ಲಿ ಬಂದ ಎಲ್ಲಾ ರಾಜರುಗಳು ತಂತಮ್ಮ ಕಾಲಾವಧಿಯಲ್ಲಿ ತಮ್ಮ ನೆನಪಿಗಾಗಿಯೂ ಮತ್ತು ಹಳೆಯ ಪದ್ಧತಿಯನ್ನು ಮುಂದುವರೆಸುವ ರೀತಿಯಲ್ಲಿ ಒಂದೊಂದು ಇಂಥಾ ಛತ್ರಿಗಳ ರೂಪದ ಆಕರ್ಷಕ ಕಟ್ಟಡಗಳನ್ನು ಕಟ್ಟಿಸುತ್ತಾ ಸಾಗಿದ್ದು, ಸರಿ ಸುಮಾರು 1914 ರವರೆಗೂ ಮುಂದುವರೆಯಿತು. ಈ ಕೊನೆಯ ನಿರ್ಮಾಣ ಕಾಲಾವಧಿಯಲ್ಲಿ ಅದರ ರಾಜನೇ ಮರಣ ಹೊಂದಿದ ಕಾರಣ ಅದನ್ನು ಅಪಶಕುನ ಎಂದು ಭಾವಿಸಿದ ನಂತರದ ತಲೆಮಾರು ಇದನ್ನು ಮುಂದುವರೆಸಲಿಲ್ಲ.

ಸಾಯುವ ನಂತರ ಸ್ಥಿತಿಗಾಗಿ ನಿರ್ಮಿಸಿಕೊಳ್ಳುತ್ತಿದ್ದ ಸ್ಮಾರಕ, ಸಾಯುವ ಶಕುನಕ್ಕೆ ಹೆದರುವ ಕಾರಣ ನಿಲ್ಲಿಸಿದ ಕುಚೋದ್ಯ ಇದು. ಆಗಿನ ರಾಜರಾದ ಜೈಸಲ್ಮೇರನ್ನು ಆಳಿದ ಭಟ್ಟಿ ರಾಜಮನೆತನ ಪ್ರತಿ ತಲೆಮಾರು ತನ್ನ ಕಾಲಾವಽಯುದ್ಧಕ್ಕೂ ಇದನ್ನು ಬೆಳೆಸುತ್ತಾ ಬಂದಿದ್ದು ಅದೇ ಒಂದು ಸಂಕೀರ್ಣದಂತಾಗಿದೆ.
ಒಂದು ಲೆಕ್ಕದಲ್ಲಿ ಭಟ್ಟಿ ರಾಜ ಮನೆತನದ ಸಕಲ ತಲೆಮಾರುಗಳು ಇಲ್ಲಿ ಪವಡಿಸಿವೆ ಎಂದರೆ ತಪ್ಪಿಲ್ಲ. ಮೂಲತಃ ಬಡಾಭಾಗ್ ಎನ್ನುವುದು ದೊಡ್ಡ ಉದ್ಯಾನವನ ಎನ್ನುವ ಕಾರಣಕ್ಕಾಗಿ ಬಂದ ಹೆಸರಾಗಿದ್ದು ಅದರ ಸೌಂದರ್ಯ ಸವಿಯಲು ಮತ್ತು ಅಲ್ಲಿ ವಿಹರಿಸಲು ನಿರ್ಮಿಸಿದ ಸ್ಮಾರಕಗಳ ಕಲಾತ್ಮಕ ಚಿತ್ರಣಗಳ ಜೊತೆಗೆ ಇದರ ಎದುರಿಗಿರುವ ಗೋವರ್ಧನ ಸ್ಥಂಭಸುತ್ತಲಿನ ಸ್ಥಳ ಮತ್ತು ಪಕ್ಕದಲ್ಲೆ ಹರಿಯುವ ನದಿಯ ಹರಿವಿನ ಲೆಕ್ಕಾಚಾರಕ್ಕಾಗಿ ನಿರ್ಮಿಸಿದ ಮಾಪಿನ ಕಂಭವನ್ನು ಇವತ್ತು ಚಾರಿತ್ರಿಕ ಸ್ಮಾರಕಗಳ ಪಟ್ಟಿಗೆ ಸೇರಿಸಲಾಗಿದೆ.

ಸುಮಾರು ೪೨ಕ್ಕೂ ಹೆಚ್ಚಿನ ಇಂತಹ ಕಲಾತ್ಮಕ ಕಟ್ಟಡಗಳು ಇಲ್ಲಿದ್ದು ಈಗ ಅವನ್ನೆಲ್ಲಾ ಸುರಕ್ಷತೆಯ ದೃಷ್ಟಿಯಿಂದ ರಕ್ಷಿಸಲಾಗುತ್ತಿದ್ದು, ಮೂಲ ವಿನ್ಯಾಸದಲ್ಲಿ
ಮನಮೋಹಕವಾಗಿದ್ದರೂ ಕಟ್ಟಡ ತಂತ್ರಜ್ಞಾನದಲ್ಲಿ ಸಂಕೀರ್ಣತೆ ಕಾಣುವುದಿಲ್ಲ. ಹಾಗಾಗಿ, ಇಲ್ಲಿನ ಪ್ರತಿಯೊಂದು ಸ್ಮಾರಕದ ಮೇಲ್ಭಾಗಗಳು ಕ್ರಮೇಣ
ಉದುರಿ ಹೋಗುತ್ತಿದ್ದು ಈಗ ಸಿಮೆಂಟ್ ಬಳಸಿ ಮರುನಿರ್ಮಾಣ ಮತ್ತು ಭದ್ರತೆಯನ್ನು ಒದಗಿಸಲಾಗುತ್ತಿದೆ. ಆದರೆ ಮೂಲ ವಿನ್ಯಾಸದಲ್ಲಿ ಎಲ್ಲಿಯೂ ಜೋಡಣೆಯ ಅಂಶ ಕಾಣದಂತೆ ಕೇವಲ ಬಂಗಾರದ ಬಣ್ಣದ ಕಲ್ಲಿನ ಅಂಶಗಳು ಕಾಣಿಸುತ್ತಿದ್ದರೆ, ಈಗ ಸಿಮೆಂಟ್ ಬಳಸುವುದರಿಂದ ಮೂಲ ವಿನ್ಯಾಸದಲ್ಲಿ ಧಕ್ಕೆಯಾದಂತೆ ಕಾಣಿಸುತ್ತಿದ್ದು, ಬದಲಾವಣೆಯ ಅವಶ್ಯಕತೆ ಇದೆ. ಮುಖ್ಯವಾಗಿ ಆಗಿನ ತಂತ್ರಜ್ಞಾನ ಬಳಸಿ ದೃಢತೆಗೆ ನೀಡಬೇಕಾಗಿದ್ದ ಒತ್ತು ನೀಡದೆ, ಸೌಂದರ್ಯಕ್ಕೆ ಪ್ರಥಮ
ಪ್ರಾಶಸ್ತ್ಯ ಕೊಟ್ಟಿದ್ದು ಸ್ಮಾರಕಗಳೆಲ್ಲ ಬರುಬರುತ್ತಾ ಶಿಥಿಲವಾಗುತ್ತಿವೆ.

ಆದರೂ ಜೈಸಲ್ಮೇರ್‌ದಲ್ಲೊಮ್ಮೆ ಫೋಟೊಗಾದರೂ ಈ ಸಾವಿನ ಸರಣಿ ಸ್ಮಾರಕಕ್ಕೆ ಭೇಟಿ ಬೇಕೆ ಬೇಕು ಬಿಡಿ. ಜೈಸಲ್ಮೇರ್‌ನಿಂದ ಕೇವಲ ಐದು ಕಿ.ಮೀ.
ಇರುವ ಬಡಾಭಾಗ್ ಚಾರಿತ್ರಿಕವಾಗಿ ಮತ್ತು ನೈಸರ್ಗಿಕವಾಗಿಯೂ ಆಯ್ದ ಸ್ಥಳವಾಗಿದ್ದು ಬಹುಶ: ಜೈಸಲ್ಮೇರ್ ಸಂದರ್ಶಿಸುವ ಯಾವ ಪ್ರವಾಸಿಗನೂ
ಸಂಜೆಯ ಹೊತ್ತಿನಲ್ಲಿ ಇದನ್ನು ತಪ್ಪಿಸಿಕೊಳ್ಳಲಾರ. ಹೋದರೆ ಒಮ್ಮೆ ಕೂತು ಬಂದು ಬಿಡಿ ಸತ್ತವರ ಮಾಹಿತಿಯ ಪಕ್ಕದಲ್ಲಿ.