Thursday, 19th September 2024

ಒಲಿದು ಬರುವ ಅಧಿಕಾರಯೋಗ ಮತ್ತು ಹುದ್ದೆಗಳು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

vbhat@me.com

ಮೊನ್ನೆ ಮೋದಿಯವರು ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ ಹಿನ್ನೆಲೆಯಲ್ಲಿ, ಖ್ಯಾತ ಪತ್ರಕರ್ತ ಮತ್ತು ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ಒಂದು ಘಟನೆಯನ್ನು  ನೆನಪಿಸಿಕೊಂಡಿದ್ದಾರೆ. ಕೇಂದ್ರ ಸಂಪುಟ ವಿಸ್ತರಿಸುವ ಸಂದರ್ಭದಲ್ಲಿ ತಮಗೆ ಒಂದು ಘಟನೆ ನೆನಪಿಗೆ ಬರುವುದಾಗಿ ಹೇಳಿದ್ದಾರೆ.

1982ರಲ್ಲಿ ರಾಷ್ಟ್ರಪತಿ ಹುzಗೆ ಪಿ.ವಿ.ನರಸಿಂಹ ರಾವ್ ಮತ್ತು ಗ್ಯಾನಿ ಜೈಲ್ ಸಿಂಗ್ ನಡುವೆ ಪೈಪೋಟಿ ಏರ್ಪ ಟ್ಟಿತ್ತು. ವಿದ್ವಾಂಸ-ಬಹುಭಾಷಾ ಪಂಡಿತ-ಸುಸಂಸ್ಕೃತ ರಾಜಕಾರಣಿ ಎಂದು ಕರೆಯಿಸಿಕೊಂಡಿದ್ದ ನರಸಿಂಹ ರಾಯರು ಆ ಹುದ್ದೆಗೆ ಲಾಯಕ್ಕಾದ ಅಭ್ಯರ್ಥಿಯಾಗಿದ್ದರು. ಆದರೆ ಅಂದಿನ ರಾಜಕೀಯ ವಾತಾವರಣ ಅವರಿಗೆ ಪೂರಕವಾಗಿರಲಿಲ್ಲ. ಪಂಜಾಬಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿತ್ತು. ಯಾರನ್ನು ರಾಷ್ಟ್ರಪತಿ ಭವನದಲ್ಲಿ ಕುಳ್ಳಿರಿಸಬೇಕು ಎಂದು ನಿರ್ಧಾರವಾಗಿರಲಿಲ್ಲ.

ಈ ಮಧ್ಯೆ ಕೇಂದ್ರ ಗೃಹ ಸಚಿವರಾದ ಜೈಲ್ ಸಿಂಗ್ ವಿದೇಶ ಪ್ರವಾಸಕ್ಕೆ ಹೋಗುವವರಿದ್ದರು. ಆಗ ಅವರು ಅಂದಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರಾದ ನರಸಿಂಹರಾಯರಿಗೆ ಫೋನ್ ಮಾಡಿ, ’ಈ ಸಂದರ್ಭದಲ್ಲಿ ವಿದೇಶ ಪ್ರವಾಸ ಹೋಗಬಹುದಾ ಅಥವಾ ದಿಲ್ಲಿಯಲ್ಲಿಯೇ ಇರುವುದು ಒಳ್ಳೆಯದಾ?’ ಎಂದು ಕೇಳಿದರು. ಅದಕ್ಕೆ ರಾಯರು ತಮ್ಮ ಎಂದಿನ ಶಾಂತ ಮತ್ತು ಗಂಭೀರ ಸ್ವರದಲ್ಲಿ, ’ನಿಮ್ಮ ಹೆಸರು ರಾಷ್ಟ್ರಪತಿ ಹುದ್ದೆಗೆ ಪ್ರಸ್ತಾಪ ವಾಗುವುದಕ್ಕೂ, ನೀವು ವಿದೇಶಕ್ಕೆ ಹೋಗುವುದಕ್ಕೂ ಸಂಬಂಧವಿಲ್ಲ.

ನೀವು ದಿಲ್ಲಿಯಲ್ಲಿರುತ್ತೀರೋ, ಅಂಟಾರ್ಟಿಕಾದಲ್ಲಿ ಇರುತ್ತೀರೋ ಅದೂ ಮುಖ್ಯವಲ್ಲ. ಇಂದಿರಾ ಗಾಂಧಿಯವರು ನಿಮ್ಮನ್ನು ರಾಷ್ಟ್ರಪತಿಯನ್ನಾಗಿ ಮಾಡಲು ನಿರ್ಧರಿಸಿದರೆ, ನೀವು ಜಗತ್ತಿನ ಯಾವ ತುದಿಯಲ್ಲಿದ್ದರೂ ನಿಮ್ಮನ್ನು ಕರೆಯಿಸುತ್ತಾರೆ. ಅವರು ನಿಮ್ಮನ್ನು ಬಿಟ್ಟು ಬೇರೆಯವರನ್ನು ಮಾಡಬೇಕೆಂದು ತೀರ್ಮಾನಿಸಿದರೆ, ಅವರ ಮನೆಯ ಜಗುಲಿಯಲ್ಲಿ ಇಡೀ ದಿನ ಕುಳಿತುಕೊಂಡರೂ ಏನೂ ಪ್ರಯೋಜನವಿಲ್ಲ. ಆದ್ದರಿಂದ ನೀವು ವಿದೇಶ ಪ್ರಯಾಣಕ್ಕೆ ಹೊರಡಬಹುದು’ ಎಂದರು.

ಅದಾಗಿ ಕೆಲವು ದಿನಗಳಲ್ಲಿ ಜೈಲ್ ಸಿಂಗ್ ರಾಷ್ಟ್ರಪತಿ ಆದರು! ಕೆಲವು ಹುದ್ದೆಗಳು ಯಾವಾಗ, ಹೇಗೆ ಒಲಿದು ಬರುತ್ತವೆ ಎಂದು ಹೇಳಲು ಆಗುವುದಿಲ್ಲ. ಮೊನ್ನೆಯ ವಿಸ್ತರಣೆಯಲ್ಲಿ ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್ ಸಚಿವರಾದರು. ಅದಕ್ಕಿಂತ ಒಂದು ದಿನ ಮುಂಚೆ ಅವರಿಗೆ ತಾವು ಮಂತ್ರಿಯಾಗುತ್ತೇವೆ ಎಂಬುದು ಗೊತ್ತಿರಲಿಲ್ಲ. ರಾಜಕಾರಣದಲ್ಲಿ ತಾಳ್ಮೆ ಬಹಳ ಬಹಳ ಮುಖ್ಯ. ನಮಗಿಂತ ಕಿರಿಯರು, ಅಪಾತ್ರರು ಮಂತ್ರಿ ಯಾದರೆ, ಮೇಲ ಮೇಲಕ್ಕೆ ಹೋದರೆ ಬೇಸರಪಟ್ಟುಕೊಳ್ಳುಬಾರದು.

ನಮ್ಮ ಕತೆ ಮುಗಿಯಿತು ಎಂದು ಅಂದುಕೊಳ್ಳಬಾರದು. ನಮಗೆ ಬೇರೆ ಯಾವುದೋ, ಇನ್ನೊಂದು ಹುದ್ದೆ ಕಾಯುತ್ತಿದೆ ಎಂದು ಭಾವಿಸಬೇಕು. ಅದು ಕರೆಯುವ ತನಕ ಕಾಯಬೇಕು. ’ತಾಳಿದವನು ಬಾಳಿಯಾನು’ ಎಂಬುದು ರಾಜಕಾರಣಿಗಳಿಗೆ ಹೇಳಿ ಮಾಡಿಸಿದ ಗಾದೆ. ರಾಜಕೀಯದಲ್ಲಿ ನಿವೃತ್ತಿ ಎಂಬುದಿಲ್ಲ. ನಿವೃತ್ತಿ ಘೋಷಿಸಿ ಹೈದರಾಬಾದಿನಲ್ಲಿ ತಮ್ಮ ಪಾಡಿಗಿದ್ದ ನರಸಿಂಹರಾಯರು, ನಂತರ ದಿಲ್ಲಿಗೆ ಬಂದು ಪ್ರಧಾನಿಯಾದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ಮುಖ್ಯ ನ್ಯಾಯಾಽಶರಾದ ರಾಮಾ ಜೋಯಿಸ್ ಅವರು ನಿವೃತ್ತರಾಗಿ ಮನೆಯಲ್ಲಿದ್ದರು. ಒಂದು ದಿನ ಆಡ್ವಾಣಿಯವರು ಅವರಿಗೆ ಫೊನ್ ಮಾಡಿ, ರಾಜ್ಯಪಾಲ ರಾಗುತ್ತೀರಾ ಎಂದು ಕೇಳಿದರು. ಅದಕ್ಕೆ ಸಮ್ಮತಿಸಿದ ಜೋಯಿಸರು, ಕೆಲ ದಿನಗಳಲ್ಲಿ ಬಿಹಾರ ಮತ್ತು ಝಾರ್ಖಂಡ್ ರಾಜ್ಯಪಾಲರಾದರು.

ಅದಿಕಾರಯೋಗ ಬಂದಾಗ ಎಲ್ಲವೂ ದಾರಿ ಮಾಡಿಕೊಡುತ್ತವೆ. ಯಾರು ಎಷ್ಟೇ ಅಡೆ-ತಡೆಯೊಡ್ಡಿದರೂ ಪ್ರಯೋಜನವಾಗುವುದಿಲ್ಲ. ಅದು ಬರದಿದ್ದಾಗ, ಎಷ್ಟೇ ತಿಪ್ಪರಲಾಗ ಹಾಕಿದರೂ, ಪ್ರಯೋಜನ ವಾಗುವುದಿಲ್ಲ. ಅಧಿಕಾರ ಯೋಗದ ಹಿಂದೆ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತದೆ. ಅದು ಉಳಿದೆಲ್ಲ ಶಕ್ತಿಗಳನ್ನು ಬದಿಗೆ ಸರಿಸಿ ಮುನ್ನುಗ್ಗಲು ಅನುವು ಮಾಡಿಕೊಡುತ್ತದೆ. ಇಲ್ಲದಿದ್ದರೆ ದೇವೇಗೌಡರು ಈ ದೇಶದ ಪ್ರಧಾನಿ ಆಗುತ್ತಿರಲಿಲ್ಲ. ಕೇವಲ ಹದಿನಾರು ಸಂಸದರನ್ನು ಹೊಂದಿದ ಪಕ್ಷದ ನಾಯಕರೊಬ್ಬರು ದೇಶದ ಪ್ರಧಾನಿಯಾಗುವುದು ಸಣ್ಣ ಮಾತಲ್ಲ.

ರಾಷ್ಟ್ರ ರಾಜಕಾರಣದಲ್ಲಿ ಘಟಾನುಘಟಿ ನಾಯಕರಿದ್ದರೂ, ಅಧಿಕಾರ ಯೋಗ ದೇವೇಗೌಡರನ್ನು ಹುಡುಕಿಕೊಂಡು ಹೋಯಿತು. ಆ ಸಮಯದಲ್ಲಿ ಗೌಡರು ಮಾನಸಿಕವಾಗಿ ಸಿದ್ಧರಾಗಿದ್ದರೋ, ಇಲ್ಲವೋ ಅದು ಅವರಿಗೊಂದೇ ಗೊತ್ತು. ಅಂದು ಜ್ಯೋತಿ ಬಸು ಮನಸ್ಸು ಮಾಡಿದ್ದರೆ, ಪ್ರಧಾನಿಯಾಗುವುದು ದೊಡ್ಡ ಮಾತಾಗಿರಲಿಲ್ಲ. ಆಗ ಅವರಿಗೆ ಯಾರೂ ಬೇಡ ಎನ್ನುತ್ತಿರಲಿಲ್ಲ. ಆದರೆ ಬಹುಪಕ್ಷಗಳ ಬೆಂಬಲ ಪಡೆದು ತಾವು ಪ್ರಧಾನಿಯಾದರೆ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಜಾರಿಗೆ ತರಲಾಗುವುದಿಲ್ಲ ಎಂಬ ಕಾರಣಕ್ಕೆ ಬಸು ತಮ್ಮಷ್ಟಕ್ಕೆ ಹಿಂದೆ ಸಾರಿದರು. ಅದಕ್ಕೆ ಅವರ ಪಕ್ಷವೂ ಸಮ್ಮತಿಸಿತು. ಇಲ್ಲದಿದ್ದರೆ ಅವರು ಪ್ರಧಾನಿ ಯಾಗುವುದಕ್ಕೆ ಯಾವ ಪ್ರಯತ್ನವನ್ನೂ ಮಾಡಬೇಕಿರಲಿಲ್ಲ. ಒಟ್ಟಾರೆ ಅವರಿಗೆ ಪ್ರಧಾನಿಯಾಗುವ ಯೋಗ ಇರಲಿಲ್ಲ.
***

ಕೋತಿಯೊಂದಿಗೆ ಸಂಸಾರ
ಇತ್ತೀಚಿಗೆ ’ರೀಡರ್ಸ್ ಡೈಜೆ, ಬ್ರಿಟನ್’ ಆವೃತ್ತಿಯನ್ನು ಓದುತ್ತಿದ್ದೆ. ಅದರಲ್ಲಿ ಒಂದು ತಮಾಷೆಯ ಪ್ರಸಂಗವನ್ನು ಓದುಗರೊಬ್ಬರು ಹಂಚಿಕೊಂಡಿದ್ದರು.
ನನ್ನ ಹೆಂಡತಿಗೆ ಕೋತಿಗಳನ್ನು ಕಂಡರೆ ಬಹಳ ಇಷ್ಟ. ಅವಳು ನನ್ನನ್ನು ಇಷ್ಟಪಟ್ಟು ಮದುವೆಯಾಗಿದ್ದು ಏಕಿರಬಹುದು ಎಂಬ ಬಗ್ಗೆ ನನಗೆ ಅನುಮಾನಗಳಿವೆ, ಇರಲಿ. ಒಂದು ದಿನ ಆಕೆ ಮಾರ್ಕೆಟ್ ಹೋಗಿ, ಒಂದು ಕೋತಿಯನ್ನು ಖರೀದಿಸಿ ತಂದಳು. ಸಾಕುಪ್ರಾಣಿಯಾಗಿ ಇದು ನಮ್ಮ ಜತೆಯ ಇರಲಿ ಎಂದಳು.

ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಆ ಕೋತಿಯನ್ನು ಆಕೆ ನಮ್ಮಿಬ್ಬರ ಮಧ್ಯೆ ಮಲಗಿಸಿಕೊಳ್ಳಲು ಆರಂಭಿಸಿದಳು. ನಾನು ಎರಡು ದಿನ ಸಹಿಸಿಕೊಂಡೆ. ಕೋತಿಯ ವಾಸನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇನ್ನೊಂದು ದಿನ ಅದರ ಜತೆ ಮಲಗುವುದು ನನ್ನಿಂದ ಆಗದು ಅನಿಸಿತು. ನಾನು ನನ್ನ ಹೆಂಡತಿಗೆ, ’ಇಂದಿನಿಂದ ಆ ಕೋತಿಯನ್ನು ಬೇರೆಡೆ ಮಲಗಿಸು. ಅದರ ಜತೆ ಮಲಗುವುದು ಸಾಧ್ಯವೇ ಇಲ್ಲ’ ಎಂದು ಪ್ರತಿಭಟಿಸಿದೆ.

ಅದಕ್ಕೆ ನನ್ನ ಹೆಂಡತಿ, ’ನಾನು ನಿಮ್ಮ ಜತೆ ಇಪ್ಪತ್ತು ವರ್ಷಗಳಿಂದ ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೇನೆ. ನನ್ನ ಬಗ್ಗೆ ಒಂದು ದಿನವಾದರೂ ಯೋಚಿಸಿದ್ದೀರಾ? ಆ ಕೋತಿ ನಿಮ್ಮನ್ನು ಸಹಿಸಿಕೊಳ್ಳುತ್ತದೆ, ಪರವಾಗಿಲ್ಲ’ ಎಂದಳು. ನಾನು ಸುಮ್ಮನಾದೆ. ಈಗ ನಾವು ಮೂವರೂ ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದೇವೆ.
***

ಬಟ್ಟೆಯಲ್ಲಿ ಬಯಲಾದ ಭಾಷೆ
ಇದು ದಿಲ್ಲಿಯಲ್ಲಿ ನಡೆದ ಘಟನೆ. ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಅಂಡರ್ ವೇರ್ ತೊಳೆದು, ಪಕ್ಕದ ಮನೆಯವನ ತಂತಿ ಮೇಲೆ ಅದನ್ನು ಒಣಗಿಸಲು ನೇತು
ಹಾಕಿದ. ಪಕ್ಕದ ಮನೆಯವನಿಗೆ ತನ್ನ ಬಟ್ಟೆ ಒಣಗಿಸಲು ತೊಂದರೆಯಾಗಬಹುದು ಎಂದು ಅವನಿಗೆ ಅನಿಸಿತು. ಅಂಥ ಪ್ರಸಂಗ ಬಂದರೆ ತಾನು ತನ್ನ ಬಟ್ಟೆಯನ್ನು ತೆಗೆದರಾಯಿತು ಎಂದು ಭಾವಿಸಿದ.

ಆದರೂ ಯಾವುದಕ್ಕೂ ಗೊಂದಲವಾಗದಿರಲಿ ಎಂದು ಒಂದು ಪೇಪರ್ ಮೇಲೆ ಸಣ್ಣ ಸೂಚನೆಯನ್ನು ಬರೆದ. ಅವನ ಇಂಗ್ಲಿಷ್ ಅಷ್ಟು ಸರಿ ಇರಲಿಲ್ಲ. ಆದರೂ ತನಗೆ ಬರುತ್ತಿದ್ದ ಹರಕು-ಮುರುಕು ಭಾಷೆಯಲ್ಲಿ ಬರೆದ – Sir, Please remind me to remove my underwear, when you remove your clothes or if you please tell me I will remove your clothes, when I remove my underwear.
***

ಶಿಕ್ಷಣ ಅಂದ್ರೆ ಏನು?

ಮುಲ್ಲಾ ನಸರುದ್ದೀನ್ ಮಗ ಬಹಳ ಕಷ್ಟಪಟ್ಟು ಹೋಮ್ ವರ್ಕ್ ಮಾಡುತ್ತಿದ್ದ. ಮಗನಿಗೆ ಓದಿದ್ದು ಅರ್ಥವಾಗುತ್ತಿರಲಿಲ್ಲ. ತನಗೆ ಸಹಾಯ ಮಾಡುವಂತೆ ಅಪ್ಪನನ್ನು ಕರೆದ. ಮುಲ್ಲಾ ಬೇರೆ ಕೆಲಸದಲ್ಲಿ ನಿರತನಾಗಿದ್ದ. ಮುಲ್ಲಾನ ಪತ್ನಿಯೂ ತನ್ನ ಕೆಲಸದಲ್ಲಿ ನಿರತಳಾಗಿದ್ದಳು. ಮಗ ಕಾಯುವಷ್ಟು ಹೊತ್ತು ಕಾದು, ಓದಿದ್ದು ತಲೆಗೆ ಹತ್ತದಿದ್ದಾಗ ಅಲ್ಲಿಯೇ ನಿದ್ದೆ ಹೋದ. ಮರುದಿನ ಮಧ್ಯಾಹ್ನ ಮುಲ್ಲಾನ ಮಗ ಅಪ್ಪನ ಹತ್ತಿರ ಹೋಗಿ ಕೇಳಿದ – ’ಅಪ್ಪ, ನನಗೆ ಓದಿದ್ದೇ ಅರ್ಥವಾಗುವುದಿಲ್ಲ. ನನಗೆ ಅರ್ಥವಾಗದ ಇನ್ನೊಂದು ಪ್ರಶ್ನೆಯೆಂದರೆ, ಈ ಶಿಕ್ಷಣ ಅಂದ್ರೆ ಏನು?’ ಅದಕ್ಕೆ ಕ್ಷಣ ಹೊತ್ತು ಯೋಚಿಸಿದ ಮುಲ್ಲಾ, ನಂತರ ಹೇಳಿದ – ಶಿಕ್ಷಣ ಅಂದ್ರೆ ಶಿಕ್ಷಣ. ಶಿಕ್ಷಣ ಬಹಳ ಉಪಯುಕ್ತವಾದುದು.

ನಿನ್ನನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸಲು ಕಲಿಸುವುದೇ ಶಿಕ್ಷಣ’ ಮುಲ್ಲಾನ ಮಗ ಪುಸ್ತಕವನ್ನು ತಲೆದಿಂಬಾಗಿ ಮಾಡಿಕೊಂಡು ಅ ಮಲಗಿದೆ.
***

ರೊಲೆಕ್ಸ್ ವಾಚು ಮತ್ತು ಬೆಲೆ
ಕೆಲವು ವರ್ಷಗಳ ಹಿಂದೆ ನಾನು ಝುರಿಕ್‌ನಲ್ಲಿರುವ ಬೆಯೆರ್ ವಾಚ್ ಅಂಡ್ ಕ್ಲಾಕ್ ಮ್ಯೂಸಿಯಂ ಗೆ ಹೋಗಿದ್ದೆ. ಅಲ್ಲಿ ಸರ್ ಎಡಮಂಡ್ ಹಿಲರಿ ಮತ್ತು ತೇನ್ಸಿಂಗ್ ಹಿಮಾಲಯ ಪರ್ವತವನ್ನು ಏರುವಾಗ ಕಟ್ಟಿದ ರೋಲೆಕ್ಸ್ ವಾಚನ್ನು ನೋಡಿ ಆಶ್ಚರ್ಯವಾಯಿತು. ಜಗತ್ತಿನಲ್ಲಿಯೇ ಅತಿ ಎತ್ತರದ (ಇಪ್ಪತ್ತೊಂಬತ್ತು ಸಾವಿರ ಅಡಿ ) ಪರ್ವತವನ್ನು ಏರುವಾಗ ರೋಲೆಕ್ಸ್ ಕಂಪನಿ ಅವರಿಗೆ ಈ ವಾಚನ್ನು ನೀಡಿತ್ತು. ಅಷ್ಟು ಎತ್ತರದ ಪ್ರದೇಶದಲ್ಲೂ ಈ ವಾಚು ಸಮರ್ಪಕವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ದೃಷ್ಟಿಯಿಂದ ಆ ವಾಚನ್ನು ನೀಡಲಾಗಿತ್ತು.

ಕೆಲವು ವರ್ಷಗಳ ನಂತರ ತೇನ್ಸಿಂಗ್‌ಗೆ ಹಣಕಾಸಿನ ತೊಂದರೆ ಎದುರಾದಾಗ ಆತ ಈ ವಾಚನ್ನು ಮಾರಲು ಮುಂದಾದ. ಸಾಮಾನ್ಯವಾಗಿ ಗಣ್ಯ ರೋಲೆಕ್ಸ್
ವಾರಸುದಾರರು ವಾಚನ್ನು ಮಾರುತ್ತಾರೆಂಬ ಸುದ್ದಿ ಗೊತ್ತಾದರೆ ಕಂಪನಿಯೇ ಖರೀದಿಸುತ್ತದೆ. ತೇನ್ಸಿಂಗ್‌ನ ವಾಚನ್ನು ಕಂಪನಿಯೇ ಖರೀದಿಸಿ ಮ್ಯೂಸಿಯಂನಲ್ಲಿ ಇಟ್ಟಿದೆ. ಈ ವಾಚಿಗೆ ಇಂದು ಬೆಲೆ ಕಟ್ಟಲಾಗದು. ನನ್ನ ಸ್ನೇಹಿತರೊಬ್ಬರಿದ್ದಾರೆ. ಅವರ ಬಳಿ ಕನಿಷ್ಠ ಇಪ್ಪತ್ತಾದರೂ ರೋಲೆಕ್ಸ್ ವಾಚುಗಳಿರಬಹುದು. ಈ ಕಾರಣ ಕ್ಕಾಗಿಯೇ ಅವರ ಹೆಸರನ್ನು ಹೇಳಿಲ್ಲ.

ಏಕಕಾಲದಲ್ಲಿ ಅವರು ಕಟ್ಟುವುದು ಒಂದೇ ವಾಚಾದರೂ ಉಳಿದ ವಾಚುಗಳನ್ನು ವಿಶೇಷ ತಿರುಗಣೆಯ ಮೇಲಿಟ್ಟು ಅವು ನಿಲ್ಲದಂತೆ ಕಾಳಜಿ ವಹಿಸಿದ್ದಾರೆ. ನಿಂತು ಹೋದ ರೋಲೆಕ್ಸ್ ವಾಚನ್ನು ನೋಡಲಾಗುವುದಿಲ್ಲ ಎನ್ನುವ ಅವರು ನಿತ್ಯವೂ ಅವೆಲ್ಲವನ್ನೂ ಒರೆಸಿ ಅತೀವ ಕಾಳಜಿ ಮೆರೆಯುತ್ತಾರೆ. ಈ ಜಗತ್ತಿನ ಅದ್ಭುತ ಸೃಷ್ಟಿಗಳಲ್ಲಿ ರೋಲೆಕ್ಸ್ ವಾಚಿಗೆ ಒಂದನೇ ಸ್ಥಾನ ಎಂಬುದು ಅವರ ಸಿಗ್ನೇಚರ್ ಸ್ಟೇಟ್‌ಮೆಂಟ್. ಕಾರಿನಲ್ಲಿ ಬೆಂಜ್, ಆಡಿಯನ್ನು ಮೀರಿಸಿದ ಕಾರುಗಳಿರಬಹುದು. ಆದರೆ ಕಾರೆಂದರೆ ಬೆಂಜ್ ಎನ್ನುವ ಅಭಿಪ್ರಾಯ ಹಲವರದ್ದು. ಇದೇ ಮಾತು ರೋಲೆಕ್ಸ್ಗೂ ಅನ್ವಯ.

ಅದೇನೇ ಇರಲಿ, ಪಕ್ಕದವರನ್ನು ಕೇಳಿದರೂ ಟೈಮ್ ಹೇಳುತ್ತಾರೆ. ಸಮಯ ತಿಳಿಯಲು ವಾಚನ್ನೇ ಕಟ್ಟಬೇಕಿಲ್ಲ. ಆದರೆ ರೋಲೆಕ್ಸ್ ಕಟ್ಟಿದರೆ ಪಕ್ಕದವರು ಸಹ ನಿಮ್ಮನ್ನು ದಿಟ್ಟಿಸದೇ ಹೋಗುವುದಿಲ್ಲ.
***

ಎರಡು ಕಾರ್ಯಕ್ರಮಗಳೇಕೆ ಹಾಗೆ?
ಮೊನ್ನೆ ಎರಡು ಪ್ರಸಂಗಗಳನ್ನು ನೋಡಿದೆ. ಮೊದಲನೆಯದು, ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮ ಮತ್ತು ಇನ್ನೊಂದು ಟೆನಿಸ್ ಪಂದ್ಯ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲಿನಲ್ಲಿ ನಡೆಯುವ ಪ್ರಮಾಣ ವಚನ ಕಾರ್ಯಕ್ರಮ ಅತ್ಯಂತ ಕರಾರುವಾಕ್ಕಾಗಿ ನಡೆಯುತ್ತದೆ. ಎಲ್ಲರೂ ನೀಟಾಗಿ ಕುಳಿತಿರು ತ್ತಾರೆ, ಇಸಸ್ವಿ ಹೊಡೆದವರ ರೀತಿ ಕುಳಿತಿರುತ್ತಾರೆ. ಯಾರೂ ಮಾತಾಡುವುದಿಲ್ಲ. ಮಾತಾಡಿದರೂ ಕಣ್ಣ, ಕೈಯ. ಅಷ್ಟು ಮುಖಗಂಟಿಕ್ಕಿಕೊಂಡಿರುತ್ತಾರೆ. ರಾಷ್ಟ್ರಪತಿಗಳೂ ಯಾರ ಬಳಿಯೂ ಮಾತಾಡುವುದಿಲ್ಲ. ಅದ್ಯಾಕೆ ಹಾಗಿರುತ್ತಾರೋ ಗೊತ್ತಿಲ್ಲ.

ವಿಂಬಲ್ಡನ್ ಟೆನಿಸ್ ಪಂದ್ಯ ನೋಡುವಾಗಲೂ ನನಗೆ ಹೀಗೆ ಅನಿಸುತ್ತದೆ. ಎಲ್ಲರೂ ಕಟ್ಟುನಿಟ್ಟು. ಆಗ ಎಲ್ಲರೂ ನೀಟಾಗಿ ವರಪೂಜೆಗೆ ಬಂದ ಹಾಗೆ ಬಂದಿರುತ್ತಾರೆ. ಎರಡು ಸಲ ಜಾಸ್ತಿ ಚಪ್ಪಾಳೆ ಹೊಡೆದರೆ ಅಸಭ್ಯ ವರ್ತನೆಯಾಗಿಬಿಡಬಹುದು ಎಂದು ಲೆಕ್ಕಾಚಾರ ಹಾಕಿ ವರ್ತಿಸುತ್ತಾರೆ. ನಮ್ಮ ಐಪಿಎಲ್ ಪಂದ್ಯಗಳನ್ನೂ ನೋಡಬೇಕು. ಒಂದು ಸಿಕ್ಸ್ ಹೊಡೆದರೆ ಇಡೀ ಮೈದಾನದಲ್ಲಿ ರಣಹೋಳಿ. ಎರಡು ವಿಕೆಟ್ ಉರುಳಿದರೆ ಪ್ರೇಕ್ಷಕರು ರಣಚಂಡಿ !

ಮೂರು ತಾಸು ಮಜವೋ ಮಜಾ… ದಾಂಧಲೆಯೋ ದಾಂಧಲೆ. ಆದರೆ ಓವಲ್‌ನಲ್ಲಿ ಪ್ರೇಕ್ಷಕರು ಮಂತ್ರಮುಗ್ದ. ಹಾರಾಡಿ ಚೀರಾಡಿದರೆ ಕ್ರೀಡೆಯ ಸಭ್ಯತೆ, ಘನತೆ ಹಾಳಾಗಿಬಿಡಬಹುದು ಎಂಬಂತೆ ಬಹಳ ಮಡಿವಂತರಂತೆ ವರ್ತಿಸುತ್ತಾರೆ. ಹೀಗಾಗಿ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದೇವೋ ಅಥವಾ ಗಣ್ಯರ ಅಂತ್ಯ ಸಂಸ್ಕಾರ ನೋಡುತ್ತಿದ್ದೇವೋ ಎಂಬ ಸಂದೇಹ ಬರುತ್ತದೆ. ಜನ ಇದೇಕೆ ಇರ್ತಾರೋ, ಗೊತ್ತಿಲ್ಲ. ರಾಷ್ಟ್ರಪತಿ ಭವನದ ಕಾರ್ಯಕ್ರಮ ಅಂದ್ರೆ ಶಿಷ್ಟಾಚಾರದ ಪರಾಕಾಷ್ಠೆ !