Thursday, 19th September 2024

ಮೆದುಳಿಗೆ ಮಾರಕವಾಗುವ ಆಧುನಿಕ ಅರಿಷಡ್ವರ್ಗ

ತಿಳಿರುತೋರಣ

ಶ್ರೀವತ್ಸಜೋಶಿ

srivathsajoshi@gmail.com

ಅರಿಷಡ್ವರ್ಗವೆಂದರೆ ಆರು ತೆರನಾದ ವೈರಿಗಳು: ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಗೆಡವುವ, ಮನಶ್ಶಾಂತಿಯನ್ನೆಲ್ಲ ಕದಡುವ, ತನ್ಮೂಲಕ ನಮ್ಮ ಅಸ್ತಿತ್ವವನ್ನೇ ದೋಚುವ, ನಾವೇ ಪೋಷಿಸಿಕೊಂಡಿರುವ ಶತ್ರುಗಳು.

‘ಕಂಡದ್ದನ್ನೆಲ್ಲ ಬಯಸುವುದೇ ಕಾಮ; ಬಯಸಿದ್ದು ದೊರೆಯದಿದ್ದರೆ ಕ್ರೋಧ; ದೊರೆತರೆ ಇನ್ನಷ್ಟು ದೊರೆಯ ಲೆಂಬ ಲೋಭ; ಇನ್ನಷ್ಟು ದೊರಕಿತೆಂದರೆ ಅದು ತನ್ನ ಕೈಬಿಟ್ಟು ಹೋಗಬಾರದೆಂಬ ಮೋಹ; ಕೈಬಿಟ್ಟು ಹೋಗದೆ ತನ್ನಲ್ಲಿಯೇ ಉಳಿದರೆ ಅದು ತನ್ನೊಬ್ಬನಿಗೇ ಇದೆಯೆಂಬ ಮದ; ತನ್ನಲ್ಲಿರುವುದು ಬೇರೊಬ್ಬನಲ್ಲೂ ಇದೆಯೆಂದು ತಿಳಿದುಬಂದಾಗ ಮತ್ಸರ… ಹೀಗೆ ಕಾಮವೊಂದರಿಂದ ಆರು ವೈರಿಗಳು ರಕ್ತಬೀಜಾಸುರನ ಸಂತತಿಯಂತೆ ಬೆಳೆಯುತ್ತ ಹೋಗುತ್ತವೆ.’ – ಅಂತೊಂದು ವಿಶ್ಲೇಷಣೆ ಅರಿಷಡ್ವರ್ಗದ ಬಗ್ಗೆ ಹಿಂದೊಮ್ಮೆ ಎಲ್ಲಿಯೋ ಓದಿದ್ದೆ.

ಬಹಳ ಕನ್ವಿನ್ಸಿಂಗ್ ಆಗಿ ಹೇಳಿದ್ದಾರೆ ಅನಿಸಿತ್ತು. ಎಷ್ಟೆಂದರೂ ಅದು ವೇದೋಪನಿಷತ್ತುಗಳ ಕಾಲದಿಂದಲೂ ಗುರುತಿಸಲ್ಪಟ್ಟಿರುವ ಆರು ವೈರಿಗಳ ವಿಚಾರ ತಾನೆ? ಟೈಮ್ ಟೆಸ್ಟೆಡ್ ಟ್ರುಥ್ ರೀತಿಯದು. ಇತ್ತೀಚೆಗೆ ಅಮೆರಿಕದ ಒಂದು ಆನ್‌ಲೈನ್ ಜರ್ನಲ್‌ನಲ್ಲಿ ಪ್ರಕಟವಾದ ‘”6 Brain Damaging Habits You May Want to Quit‘ ಎಂಬ ಶೀರ್ಷಿಕೆಯ ಲೇಖನವನ್ನೋದಿದೆ. ಬರೆದವರು ಶಿವೇಂದ್ರ ಮಿಶ್ರಾ ಎಂಬುವ ರೊಬ್ಬರು. ಭಾರತೀಯರೇ! ಇದುವರೆಗೆ ನಾನವರ ಬಗ್ಗೆ ಕೇಳಿದ್ದಿಲ್ಲ/ಓದಿದ್ದಿಲ್ಲ. ಅವರು ಒಬ್ಬ ಯೋಗಿ, ವ್ಯಕ್ತಿತ್ವ ವಿಕಸನ ಗುರು, ಮತ್ತು ‘Bend Reality‘ ಎಂಬ ಪುಸ್ತಕದ ಲೇಖಕರಂತೆ.

ಅದಕ್ಕಿಂತಲೂ ಮುಖ್ಯವಾಗಿ, ಜಗದ್ವಿಖ್ಯಾತ  `Autobiography of a Yogi’  ಪುಸ್ತಕವನ್ನು ಬರೆದ ಪರಮಹಂಸ ಯೋಗಾನಂದರ ಅನುಯಾಯಿ ಶಿಷ್ಯ ಅಂತೆ. ಭಾವಚಿತ್ರ ನೋಡಿದರೆ 20-25 ವರ್ಷಗಳೊಳಗಿನ ತರುಣನಂತೆ ಕಾಣಿಸುತ್ತಾರೆ. ಇರಲಿ, ನಮಗಿಲ್ಲಿ ಅವರ ಬಗ್ಗೆ ಹೆಚ್ಚು ವಿವರ ಬೇಕಿಲ್ಲ. ಆದರೆ ಅವರ ಆ
ಲೇಖನವನ್ನು ಹೀಗೇ ಏನೋ ಆಸಕ್ತಿಯಿಂದ ಓದಿ ಮುಗಿಸಿದಾಗ ಇದು ನಿಜಕ್ಕೂ ಚಿಂತನಯೋಗ್ಯವಾಗಿದೆ ಎಂದು ನನಗನಿಸಿತು. ಕನ್ನಡೀಕರಿಸಿದರೆ ‘ಮೆದುಳಿಗೆ ಮಾರಕವಾಗುವ ಅರಿಷಡ್ವರ್ಗ’ದ ಬಗ್ಗೆ ನಮ್ಮೆಲ್ಲರಲ್ಲೂ ಅರಿವು ಮೂಡುವುದಕ್ಕೆ ಸಹಾಯವಾಗುತ್ತದೆ ಅಂತಲೂ ಅನಿಸಿತು.

ಆದ್ದರಿಂದ ತೀರ ಪದಶಃ ಅನುವಾದ ಅಲ್ಲದಿದ್ದರೂ ಲೇಖನದ ಮುಖ್ಯಾಂಶಗಳ ಕೆಲವು ಟಿಪ್ಪಣಿಗಳನ್ನು ಕನ್ನಡದಲ್ಲಿ ಮಾಡಿ ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಓದಿ ಅಳವಡಿಸಿಕೊಂಡು ಪ್ರಯೋಜನ ಪಡೆಯುವಂಥ ವಿಚಾರವಿದು ಎಂದು ನಿಮಗೂ ಅನಿಸಿದರೆ ಅದೇ ಒಂದು ಸಾರ್ಥಕ್ಯ. ಸುಮಾರು ಎಂಟು ಕೋಟಿಗಿಂತಲೂ ಹೆಚ್ಚು ಜೀವಕೋಶಗಳಿಂದ ಆಗಿರುವುದು ನಮ್ಮ ಮೆದುಳು. ಮೃದುವಾಗಿ ಅಂಟಿನಂತೆ ಇರುವ ಈ ‘ಮುದ್ದೆ’ಯು ನಮ್ಮ ಶರೀರದ ಬಹುಮುಖ್ಯ ಅಂಗಗಳಲ್ಲೊಂದು. ಇದರ ಆರೈಕೆಯ ಬಗ್ಗೆ ನಾವೆಲ್ಲ ಹೆಚ್ಚಿನ ಕಾಳಜಿ ವಹಿಸಬೇಕಿತ್ತು, ಆದರೆ ಯಾರೂ ವಹಿಸುವುದಿಲ್ಲ.

ಮೆದುಳಿಗೂ ಆರೈಕೆ ಬೇಕಾಗುತ್ತದೆ ಎಂದು ಹೆಚ್ಚಿನವರಿಗೆ ಗೊತ್ತೂ ಇಲ್ಲ. ಆದರೆ ತಜ್ಞರು ಏನನ್ನುತ್ತಿದ್ದಾರೆಂದರೆ ನಮ್ಮ ಆಧುನಿಕ ಜೀವನಶೈಲಿಯು ನಮ್ಮ ನರಮಂಡಲ ಮತ್ತು ಮೆದುಳನ್ನು ಘಾಸಿಗೊಳಿಸುತ್ತಲೇ ಇದ್ದು ನಮ್ಮನ್ನು ಮಂದಮತಿ ಮತ್ತು ಮಂದಗತಿಯವರನ್ನಾಗಿಸುತ್ತಿದೆ. ನಮ್ಮಲ್ಲಿನ ಸೃಜನಶೀಲತೆಯನ್ನು ಹೊಸಕಿಹಾಕುತ್ತಿದೆ. ಇದಕ್ಕೆ ನೂರಾರು ಕಾರಣಗಳೂ ಇವೆ. ಈ ಅಪಾಯವನ್ನು ತಡೆಯಬೇಕಾದರೆ ನಾವು ಮೈಗೂಡಿಸಿಕೊಂಡಿರುವ ಕೆಲವು ಕೆಟ್ಟ ಅಭ್ಯಾಸಗಳ
ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಕೆಲವರಿಗೆ ಇದು ಆಶ್ಚರ್ಯಕರ ಸಂಗತಿಯೆನಿಸಲೂಬಹುದು.

ಏಕೆಂದರೆ ಈ ದುರಭ್ಯಾಸಗಳು ಮೆದುಳಿಗೆ ಎಷ್ಟು ಮಾರಕವಾಗಿವೆಯೆಂಬ ಕಲ್ಪನೆಯೂ ಅವರಿಗಿಲ್ಲ. ಯಾವುವು ಆ ಅಭ್ಯಾಸಗಳೆಂದು ನೋಡೋಣ.
ಮೊದಲನೆಯದು ಅತಿಯಾದ ನಿಶ್ಚಲತೆ. ಈಗ ‘ವರ್ಕ್ ಫ್ರಂ ಹೋಮ್’ ಅನ್ನೋದು ವಾಡಿಕೆಯೇ ಆಗಿಹೋಗಿರುವುದರಿಂದ, ಮನೆಯ ಒಂದೆರಡು ಕೊಠಡಿಗಳನ್ನು ಬಿಟ್ಟು ಹೊರಗೆ ಹೋಗದಿರುವುದರಿಂದ, ಹಲವರಲ್ಲಿ ಒಂಥರದ ನಿಶ್ಚಲತೆ ಬೀಡುಬಿಟ್ಟಿದೆ. ಊಟ, ತಿಂಡಿ, ನಿದ್ದೆ, ಕೆಲಸ ಎಲ್ಲವನ್ನೂ ಬೆಡ್‌ರೂಮಿನಲ್ಲೇ ಮಾಡು ವವರೂ ಇದ್ದಾರೆ.

ದಿನಸಿ ಸಾಮಗ್ರಿ ತರುವ ಕೆಲಸವೊಂದೇ ಬಹುಶಃ ಅವರು ಮಾಡುವ ‘ವ್ಯಾಯಾಮ’. ಈಗ ತಂತ್ರಜ್ಞಾನದ ನೆರವಿನಿಂದ ದಿನಸಿಯನ್ನೂ, ಊಟ-ತಿಂಡಿಯನ್ನೂ
ಮನೆಬಾಗಿಲಿಗೇ ತರಿಸಬಹುದಾದ್ದರಿಂದ ಆ ವ್ಯಾಯಾಮಕ್ಕೂ ಖೋತಾ. ಇದರ ಅಡ್ಡ ಪರಿಣಾಮಗಳು ಘೋರ. ತುಂಬ ಹೊತ್ತು ಕುಳಿತುಕೊಂಡೇ ಇರುವುದು ಹೃದಯದ ಕಾಯಿಲೆಗೆ, ಶರೀರ ಸ್ಥೂಲವಾಗುವುದಕ್ಕೆ, ಖಿನ್ನತೆ, ಮರೆವು ಹೆಚ್ಚುವುದಕ್ಕೆ ಮುಕ್ತ ಆಹ್ವಾನ. ಅದಕ್ಕಿಂತಲೂ ಹೆಚ್ಚಾಗಿ ಮೆದುಳಿನ ಕೆಲವು ನರಗಳ ಮೇಲೂ ದುಷ್ಪರಿಣಾಮ.

ದೀರ್ಘಕಾಲೀನ ನಿಶ್ಚಲತೆ ಒಳ್ಳೆಯದಲ್ಲ. ನಮ್ಮ ಶರೀರ ಚಲನಶೀಲವಾಗಿರಬೇಕು ಎಂಬುದನ್ನು ನಾವು ಮನಗಾಣಬೇಕಿದೆ. ಚಲನಶೀಲತೆಯು ನಮ್ಮ ದೇಹ ದೊಳಗೆ ಎಂಡೊರ್ಫಿನ್ ಹಾರ್ಮೋನ್‌ಗಳನ್ನು ಸ್ರವಿಸಿ ನಮಗೆ ಹಿತಾನುಭವ ಆಗುವಂತೆ, ಹೃದಯ ಮತ್ತು ಮೆದುಳನ್ನು ಸುಸ್ಥಿತಿಯಲ್ಲಿಡುವಂತೆ ಮಾಡುತ್ತದೆ. ಕೆಲಸಕ್ಕಾಗಿ ಗಂಟೆಗಟ್ಟಲೆ ಕುಳಿತುಕೊಂಡೇ ಇದ್ದಾಗ, ಕಂಪ್ಯೂಟರ್ ಮೇಲೋ ಇನ್ನಿತರ ಪರಿಕರಗಳ ಮೇಲೋ ಗಮನ ಕೇಂದ್ರೀಕೃತವಾಗಿದ್ದಾಗ, ನಮ್ಮ ಉಸಿರಾಟ ಬಿಗಿಗೊಳ್ಳುತ್ತದೆ. ಶರೀರಕ್ಕೆ ಆಮ್ಲಜನಕ ಪೂರೈಕೆ ಸಾಕಾಗುವುದಿಲ್ಲ. ಪರಿಣಾಮವಾಗಿ ಬಸವಳಿದ ಅನುಭವ.

ಯೋಚಿಸುವ ಶಕ್ತಿ ಕ್ಷೀಣ. ಏಕಾಗ್ರತೆಯೂ ಕಷ್ಟ. ಇದಕ್ಕಾಗಿ ಜಿಮ್‌ಗೆ ಹೋಗಿ ಗಂಟೆಗಟ್ಟಲೆ ವ್ಯಾಯಾಮ ಮಾಡಿ ಎನ್ನುತ್ತಿಲ್ಲ. ಅರ್ಧ ಗಂಟೆಗೊಮ್ಮೆ ದೇಹಕ್ಕೆ ಸ್ವಲ್ಪವೇ ಚಲನೆ ಕೊಟ್ಟರೂ ಸಾಕು. ದಿನಕ್ಕೆ 10000 ಹೆಜ್ಜೆಗಳಷ್ಟು, ಬೇಕಿದ್ದರೆ ಮನೆಯೊಳಗೇ ಅಥವಾ ತಾರಸಿಯ ಮೇಲೆ, ನಡೆದರೂ ಸಾಕು. ಅದಕ್ಕೆಲ್ಲ ಸಮಯವಿಲ್ಲ ಎನ್ನುತ್ತೀರಾದರೆ ಅದೊಂದು ಸುಳ್ಳು. ದೂರವಾಣಿಯಲ್ಲಿ ಮಾತಾಡುವಾಗಲೂ ನಡೆದಾಡುತ್ತಲೇ ಮಾತಾಡಬಹುದಲ್ಲ? ಕುರ್ಚಿಯ ಮೇಲೆ ಕುಳಿತುಕೊಂಡು ಕೆಲಸ ಮಾಡುವುದಕ್ಕಿಂತ ಡೆಸ್ಕ್ ಮುಂದೆ ನಿಂತುಕೊಂಡು ಕೆಲಸ ಮಾಡುವುದು ಸಾಧ್ಯವಾದರೆ ಅದಕ್ಕಿಂತ ಒಳ್ಳೆಯ ಉಪಾಯ ಬೇರೆ ಬೇಡ. ದೇಹಕ್ಕೆ ಚಲನೆಯೂ
ಸಿಗುತ್ತದೆ, ಒಂದಿಷ್ಟು ಕ್ಯಾಲೊರಿಗಳೂ ಕರಗುತ್ತವೆ.

ಎರಡನೆಯದು ಮೆದುಳಿನ ಮೇಲೆ ಮಾಹಿತಿಯ ಜಡಿಮಳೆ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ವ್ಯಕ್ತಿಯೊಬ್ಬನು- ಆತ ಅಮೆರಿಕನ್ನನಿರಲಿ, ಆಫ್ರಿಕದವನಿರಲಿ, ಭಾರತದವನಿರಲಿ- ದಿನವೊಂದಕ್ಕೆ ಸರಾಸರಿ 34 ಗಿಗಾಬೈಟ್‌ಗಳಷ್ಟು ‘ಮಾಹಿತಿ’ಯು ತನ್ನ ಮೆದುಳಿನ ಮೇಲೆ ಸುರಿಯಲಿಕ್ಕೆ ಅನುವು ಮಾಡಿಕೊಡುತ್ತಾನೆ. ಸೋಶಿಯಲ್ ಮೀಡಿಯಾ, ವಿವಿಧ ಆಪ್ ಗಳ ನೋಟಿಫಿಕೇಶನ್‌ಗಳು, ಜಂಗಮವಾಣಿ ಕರೆಗಳು, ಅಹರ್ನಿಶಿ ಸುದ್ದಿವಾಹಿನಿಗಳು… ಒಂದೇ ಎರಡೇ!

ಇಂಥ ಮಾಹಿತಿಯ ಮುಸಲಧಾರೆಯು ಮೂರು ದಶಕಗಳ ಹಿಂದೆ ಇದ್ದುದಕ್ಕಿಂತ ಸುಮಾರು ೩೫೦ ಪ್ರತಿಶತ ಹೆಚ್ಚಾಗಿದೆ ಎನ್ನುತ್ತದೆ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಒಂದು ಸಂಶೋಧನಾ ವರದಿ. ಇಷ್ಟೆಲ್ಲ ಮಾಹಿತಿಗೆ ತೆರೆದುಕೊಳ್ಳುವುದು ನಮ್ಮ ಮೆದುಳಿನ ಏಕಾಗ್ರತೆಯ ಶಕ್ತಿಯನ್ನು ಸರ್ವನಾಶ ಗೊಳಿಸುತ್ತದೆ. ಏಕೆಂದರೆ, ಮಾಹಿತಿಯ ಚಿಕ್ಕದೊಂದು ತುಣುಕು ಸಹ ಮೆದುಳಿನ ಏಕಾಗ್ರತೆಯನ್ನು ಕೆಡಿಸಬಲ್ಲದು.

ಬೇಕಿದ್ದರೆ ನೋಡಿ: ಏನೋ ಒಂದು ಕೆಲಸವನ್ನು ಗಮನವಿಟ್ಟು ಮಾಡುತ್ತಿದ್ದೀರಿ. ಪಕ್ಕದಲ್ಲಿರುವ ಮೊಬೈಲ್ ಫೋನ್ ನಲ್ಲೇನೋ ನೋಟಿಫಿಕೇಶನ್ ಕಾಣಿಸುತ್ತದೆ/ಕೇಳಿಸುತ್ತದೆ, ಅಥವಾ ಯಾವುದೋ ಐಕಾನ್ ಮೇಲೆ ಕೆಂಪು ವೃತ್ತದಲ್ಲೊಂದು ಸಂಖ್ಯೆ ಮೂಡುತ್ತದೆ. ತತ್‌ಕ್ಷಣವೇ ಅದೇನೆಂದು ನೋಡುವ ತವಕ. ನೀವು ಗಮನವಿರಿಸಬೇಕಿದ್ದ ಕೆಲಸಕ್ಕೆ ಧಕ್ಕೆ. ಆದ್ದರಿಂದ, ‘ಕ್ಷಣಿಕ ಮಾಹಿತಿ’ಗಳ ಒಳ ಹರಿವನ್ನು ಸಾಧ್ಯವಾದಷ್ಟೂ ತಗ್ಗಿಸಿ. ಅದಕ್ಕಿಂತ, ಸಮಯವನ್ನು ಪುಸ್ತಕದ
ಓದಿನಂಥ ದೀರ್ಘಕಾಲೀನ ಮಾಹಿತಿಯ ಒಳ ಹರಿವಿಗೆ ವಿನಿಯೋಗಿಸಿ.

ಫೇಸ್‌ಬುಕ್‌ನ ಆ ಪೋಸ್ಟ್ ನೋಡು ಈ ಪೋಸ್ಟ್ ನೋಡು ಆ ವಿಡಿಯೊ ಮೇಲೆ ಕ್ಲಿಕ್ಕಿಸು, ನಡುವೆ ಅಲ್ಲೊಂದಿಷ್ಟು ಟ್ವೀಟ್‌ಗಳನ್ನು ಓದು, ವಾಟ್ಸಪ್‌ನಲ್ಲಿ ಮೆಸೇಜು ಗಳಿಗಾಗಿ ಹಪಹಪಿಸು, ಬಿಸಿಬಿಸಿ ಗಾಸಿಪ್ ಏನಿದೆಯೆಂದು ಇಣುಕು. (ಶಿವೇಂದ್ರ ಮಿಶ್ರಾ ಆ ಲೇಖನ ಬರೆದದ್ದು ನಾಲ್ಕಾರು ತಿಂಗಳ ಹಿಂದೆ ಎಂದು ಕಾಣುತ್ತದೆ, ಆಗಿನ್ನೂ ‘ಕ್ಲಬ್‌ಹೌಸ್’ ಕ್ರೇಜ್‌ನ ಕಾಳ್ಗಿಚ್ಚು ಹರಡಿರಲಿಲ್ಲ.

ಈಗಲಾದರೆ ಕ್ಲಬ್‌ಹೌಸ್‌ಅನ್ನೂ ಅನಿಷ್ಟಗಳ ಪಟ್ಟಿಗೆ ಸೇರಿಸುತ್ತಿದ್ದರೇನೋ. ಮತ್ತು, ವೈಯಕ್ತಿಕವಾಗಿ ಕ್ಲಬ್‌ಹೌಸ್ ಬಗ್ಗೆ ನನ್ನದೂ ಅದೇ ಅಭಿಪ್ರಾಯ. ಕೆಲವರಿಗೆ ಅದೊಂದು ಭಯಂಕರ ಚಟವಾಗಿ ಹತ್ತಿರುವುದು, ವಾಚಾಳಿಗಳಿಗೆ ಮತ್ತು ವಾದಶೂರರಿಗೆ ವೇದಿಕೆಯಾಗಿರುವುದು, ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರ ನಡುವೆ ಭಾವನಾತ್ಮಕ ಕಂದಕವೊಂದು ಮೇಲರಿಮೆ-ಕೀಳರಿಮೆ-ಹತಾಶೆ ರೂಪದಲ್ಲಿ ಹೆಚ್ಚಿರುವುದು, ಕೆಲವರಿಗೆ ಬೇರೆ ಕಾರ್ಯಕ್ಷೇತ್ರಗಳಲ್ಲಿದ್ದ ಕೌಶಲ ಮತ್ತು
ಕ್ರಿಯಾಶೀಲತೆಗೆ ನೋಡ ನೋಡುತ್ತಿದ್ದಂತೆಯೇ ಕುಠಾರಾಘಾತ ಬಿದ್ದಿರುವುದು… ಎಲ್ಲವನ್ನೂ ಕಳೆದಕೆಲ ದಿನಗಳಿಂದ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ). ಇವೆಲ್ಲಕ್ಕಿಂತ ದೀರ್ಘಕಾಲೀನ ಮಾಹಿತಿಗಷ್ಟೇ ತೆರೆದುಕೊಳ್ಳುವುದು ಮೆದುಳಿಗೆ ತುಂಬ ಆರೋಗ್ಯಕರ.

ಶಾಂತ ವಾತಾವರಣ ಮತ್ತು ಮೌನ ಸಾಧ್ಯವಾದರೆ ಮತ್ತೂ ಒಳ್ಳೆಯದು. ದೇಹಕ್ಕೆ ಮನಸ್ಸಿಗೆ ಆತ್ಮಕ್ಕೆ ಹಾಯೆನಿಸುತ್ತದೆ. ‘ಡಿಜಿಟಲ್ ಡಯಟ್’ ಮತ್ತು ‘ಡೇಟಾ
ಉಪವಾಸ’ ಈಗಿನ ಕಾಲದ ತುರ್ತು ಅಗತ್ಯ. ಮೂರನೆಯದು ಕರ್ಣಕಠೋರ ಸಂಗೀತ. ಜಿಮ್‌ನಲ್ಲಿ ವರ್ಕ್‌ ಔಟ್ ಮಾಡುವಾಗ, ಕಿಚನ್‌ನಲ್ಲಿ ಅಡುಗೆ ಮಾಡು ವಾಗ, ಮತ್ತ್ಯಾವುದೇ ದೈನಂದಿನ ಚಟುವಟಿಕೆ ವೇಳೆಯಲ್ಲೂ ದೊಡ್ಡದಾಗಿ ಮ್ಯೂಸಿಕ್ ಹಾಕಿಕೊಂಡಿರೋದು ಹಲವರ ಅಭ್ಯಾಸ. ಕೆಲವರಂತೂ ಹೆಡ್‌ಫೋನ್ಸ್‌ ಧಾರಿಗಳಾಗಿ ಕಿವಿ ತಮಟೆಗಳಿಗೆ ಅವಿರತ ಶ್ರಮ ಕೊಡುತ್ತಿರುತ್ತಾರೆ.

ಒಂದು ಮಟ್ಟದ ವಾಲ್ಯೂಮ್‌ಗೆ ಕಿವಿಗಳು ಒಗ್ಗಿಕೊಂಡರೆ ಆಮೇಲೆ ಕಡಿಮೆ ವಾಲ್ಯೂಮ್ ರುಚಿಸುವುದೇ ಇಲ್ಲ. ಮ್ಯೂಸಿಕ್‌ನದೇ ಗದ್ದಲ ಹೆಚ್ಚಾದರೆ ನಮ್ಮ ಸುತ್ತಮುತ್ತಲಿನ ಬೇರೆ ಚಟುವಟಿಕೆಗಳ ಶಬ್ದಗಳನ್ನು ಕಿವಿಗಳು ಗ್ರಹಿಸುವುದೇ ಇಲ್ಲ. ಅವು ಕ್ಷಿಪ್ರವಾಗಿ ಮೆದುಳನ್ನು ತಲುಪುವುದೂ ಸಾಧ್ಯವಾಗುವುದಿಲ್ಲ. ಆದ್ದರಿಂದ
ಹೆಡ್‌ಫೋನ್ಸ್ ಹಾಕಿಕೊಳ್ಳುವವರು ವಾಲ್ಯೂಮ್ ತಗ್ಗಿಸಿಡಿ. ಮೇಲಿಂದ ಮೇಲೆ ಒಂದು ಸ್ವಲ್ಪ ಹೊತ್ತಾದರೂ ಕಿವಿಗಳಿಗೆ ವಿರಾಮ ಕೊಡಿ. ಕ್ಲಬ್ಬುಗಳಲ್ಲಿ-ಪಬ್ಬುಗಳಲ್ಲಿ, ಸ್ಟುಡಿಯೊಗಳಲ್ಲಿ, ಕನ್ಸರ್ಟ್ ಹಾಲ್‌ಗಳಲ್ಲಿ ಗಂಟೆಗಟ್ಟಲೆ ದೊಡ್ಡ ವಾಲ್ಯೂಮ್‌ನಲ್ಲಿ ಸಂಗೀತದ ಅಬ್ಬರ ಮೆದುಳನ್ನು ಜರ್ಜರಿತಗೊಳಿಸುತ್ತದೆಂದು ಗೊತ್ತಿರಲಿ.

ಹಾಗಂತ ಸಂಗೀತವೇ ಬೇಡವೆಂದಲ್ಲ. ಮೆಲುವಾಗಿ, ಮಿತವಾಗಿ ಇದ್ದರೆ ಮೆದುಳಿಗೆ ಒಳ್ಳೆಯದೇ. ನಾಲ್ಕನೆಯದು ಟಿವಿ ವೀಕ್ಷಣೆ, ಅದರಲ್ಲೂ ರಿಯಾಲಿಟಿ ಶೋಗಳು ಮತ್ತು ಅಹರ್ನಿಶಿ ಸುದ್ದಿವಾಹಿನಿಗಳು. ನಿಜ ಹೇಳಬೇಕೆಂದರೆ ಎಲ್ಲ ನಮೂನೆಯ ‘ಜಂಕ್ ಫುಡ್’ ಹೇಗೆ ನಮ್ಮ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೋ, ಟಿವಿಯಲ್ಲಿ ಬರುವ ರಿಯಾಲಿಟಿ ಶೋಗಳು (ಅಸಲಿಗೆ ಅವು ರಿಯಾಲಿಟಿ ಅಲ್ಲವೇ ಅಲ್ಲ, ಫೇಕ್‌ನ ಪರಮಾವಧಿ) ಮತ್ತು ಉತ್ಪ್ರೇಕ್ಷಿತ ಅತಿರಂಜಿತ ಸುದ್ದಿಗಳ ಭೋರ್ಗರೆತ ನಮ್ಮ ಮೆದುಳನ್ನು ಕೊಳೆತು ನಾರುವಂತೆ ಮಾಡುತ್ತವೆ.

ಟಿವಿಯಲ್ಲಿ ನಾವು ಏನನ್ನು ವೀಕ್ಷಿಸುತ್ತೇವೆ ಎಂಬುದು ನಮ್ಮ ಮೆದುಳಿನ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ದೇಶಭಕ್ತಿಯದೊಂದು ಒಳ್ಳೆಯ ಸಿನಿಮಾ, ಪ್ರಕೃತಿಯ ವಿಸ್ಮಯಗಳ ಬಗೆಗೊಂದು ಸಾಕ್ಷ್ಯಚಿತ್ರ, ಸುಂದರವಾದೊಂದು ಪ್ರವಾಸಿ ತಾಣ… ಇತ್ಯಾದಿಯನ್ನು ನೋಡಿದರೆ ಮೆದುಳಿಗೂ ಹಿತಕರವೇ. ಆದರೆ ಅಂಥವುಗಳಲ್ಲಿ ನಮ್ಮ ಆಸಕ್ತಿ, ನೋಡುವ ವ್ಯವಧಾನ ಎಷ್ಟರ ಮಟ್ಟಿಗಿದೆ? ನಮಗೆ ಬೇಕಿರುವುದು ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್, ಕಿರುಚಾಟದ ಪ್ಯಾನೆಲ್
ಡಿಸ್ಕಷನ್‌ಗಳು, ಕೆಟ್ಟಾಕೊಳಕ ಬಿಗ್‌ಬಾಸ್ ಬಕ್ವಾಸ್‌ಗಳು.

ಇಂಥ ಕಸವನ್ನು ಮೆದುಳಿನ ಮೇಲೆ ಸುರಿಯುತ್ತಲೇ ಇದ್ದರೆ ಅದರ ಅವಸ್ಥೆ ಏನಾಗಬೇಡ? ಸಹಜವಾಗಿಯೇ ಆ ಕೆಟ್ಟ ಕಾರ್ಯಕ್ರಮಗಳ ಕೆಟ್ಟತನವು ನಮಗೆ
ಗೊತ್ತೇ ಆಗದಂತೆ ನಮ್ಮಲ್ಲಿ ಬೆಳೆಯುತ್ತದೆ. ಒಬ್ಬ ವ್ಯಕ್ತಿ ಯಾವ ಥರದ ಪುಸ್ತಕಗಳನ್ನು ಓದುತ್ತಾನೆ, ಯಾವ ಥರದ ಸಂಗೀತ ಕೇಳುತ್ತಾನೆ ಅನ್ನೋದರ ಮೇಲೆ ಆತನ ವ್ಯಕ್ತಿತ್ವದ ಸತ್ತ್ವವನ್ನು ಅಳೆಯಬಹುದು ಎನ್ನುವ ಕಾಲವೊಂದಿತ್ತು. ಈಗ ಯಾವ ಥರದ ಟಿವಿ ಕಾರ್ಯಕ್ರಮಗಳನ್ನು ಎಷ್ಟು ಹೊತ್ತು ನೋಡುತ್ತಾನೆ
ಅನ್ನೋದರ ಮೇಲೆ ವ್ಯಕ್ತಿತ್ವವನ್ನು ಅಳೆಯಬಹುದಾಗಿದೆ.

ತೊಟ್ಟಿಕ್ಕುತ್ತಿರುವ ನಳವು ಹೇಗೆ ದಿನವೊಂದಕ್ಕೆ ಗ್ಯಾಲನ್‌ಗಟ್ಟಲೆ ನೀರನ್ನು ಪೋಲು ಮಾಡುತ್ತದೋ, ನಿರಂತರ ಟಿವಿ ವೀಕ್ಷಣೆಯು ನಮ್ಮ ಮೆದುಳಿನ ಸಾಮರ್ಥ್ಯ ವನ್ನು ಅದೇ ರೀತಿಯಾಗಿ ಪೋಲುಮಾಡುತ್ತದೆ. ದುರ್ದೈವವೆಂದರೆ ನಮಗದು ಗೊತ್ತೂ ಆಗುವುದಿಲ್ಲ. ನಿಧಾನಗತಿಯ ವಿಷ ಏರಿದ ಹಾಗೆ. ಐದನೆಯದು ‘ಮಲ್ಟಿ ಟಾಸ್ಕಿಂಗ್’- ಒಂದೇ ಸಲಕ್ಕೆ ಒಂದಕ್ಕಿಂತ ಹೆಚ್ಚು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು. ಹಾಗೆ ಮಾಡಿದರೆ ಎಲ್ಲವನ್ನೂ ಒಟ್ಟು ಬೇಗ ಮುಗಿಸಬಲ್ಲೆ ಎನ್ನುವುದು ಭ್ರಮೆ ಅಷ್ಟೇ.

ಇತ್ತೀಚಿನ ವರ್ಷಗಳಲ್ಲಿ ‘ಮಲ್ಟಿಟಾಸ್ಕಿಂಗ್’ ಕೌಶಲವನ್ನು ಉದ್ಯೋಗಾಕಾಂಕ್ಷಿಗಳಲ್ಲಿ ನಿರೀಕ್ಷಿಸುವುದು ಮಾಮೂಲಿಯಾಗಿಬಿಟ್ಟಿದೆ. ಆ ಸಾಮರ್ಥ್ಯ ಅತ್ಯಗತ್ಯ ಎಂದು
ಜಾಹಿರಾತಿನಲ್ಲಿ ಹುದ್ದೆಯ ವಿವರ ಕೊಡುವಾಗಲೇ ಸೇರಿಸಿದ್ದಿರುತ್ತದೆ. ಆದರೆ ಮೂಲತಃ ಮನುಷ್ಯಜೀವಿಯೂ ಮಲ್ಟಿಟಾಸ್ಕಿಂಗ್‌ಗೆ ಹೇಳಿಮಾಡಿಸಿದ್ದಲ್ಲ. ಒಂದು ಸಲಕ್ಕೆ ಒಂದು ಕೆಲಸದ ಮೇಲಷ್ಟೇ ಗಮನ ಕೇಂದ್ರೀಕರಣ ಸಾಧ್ಯ.

ಮಲ್ಟಿಟಾಸ್ಕಿಂಗ್ ಮಾಡಬಲ್ಲೆವು ಎಂದು ಹೇಳುವವರೂ ನಿಜವಾಗಿ ಸಮಯವನ್ನು ಪೋಲು ಮಾಡುತ್ತಾರೆಯೇ ವಿನಾ ಉಳಿತಾಯವಲ್ಲ. ಮಾತ್ರವಲ್ಲ, ಕ್ರಮೇಣ ವಾಗಿ ಅಂಥವರಲ್ಲಿ ಆಲೋಚನಾಶಕ್ತಿ, ಕ್ರಿಯೇಟಿವಿಟಿಗಳೆಲ್ಲ ದುರ್ಬಲವಾಗುತ್ತ ಹೋಗುತ್ತವೆ. ಸಾಲದೆಂಬಂತೆ ಇತರರ ಭಾವನೆ ಮತ್ತು ಅನುಭವಗಳನ್ನು ಗ್ರಹಿಸುವ ಶಕ್ತಿ, ಅನುಭೂತಿ, ತನ್ಮಯತೆ ಎಲ್ಲದಕ್ಕೂ ಹೊಡೆತ. ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಕೆಲವು ಸಂಶೋಧನೆಗಳು ಇದನ್ನು ಸಾಬೀತುಪಡಿಸಿವೆ.
ತಾತ್ಪರ್ಯವೆಂದರೆ ಮಲ್ಟಿಟಾಸ್ಕಿಂಗ್ ಮಾಡುತ್ತೇನೆಂದು ಹೊರಟಷ್ಟೂ ನಮ್ಮ ಮೆದುಳಿಗೆ ನುಕ್ಸಾನು ಜಾಸ್ತಿ. ಇದರಿಂದ ಬಚಾವಾಗಬೇಕಾದರೆ, ಆಗಬೇಕಾದ ಕೆಲಸಗಳನ್ನು ಪ್ರಾಶಸ್ತ್ಯ ಪ್ರಕಾರ ವಿಂಗಡಿಸಿಕೊಳ್ಳಬೇಕು.

ಸಾಧ್ಯವಾದವುಗಳನ್ನಷ್ಟೇ ಒಂದೊಂದಾಗಿ ಮಾಡಬೇಕು. ಒತ್ತಡ ಕಡಿಮೆಯಿದ್ದರೆ ಸಹಜವಾಗಿಯೇ ಏಕಾಗ್ರತೆ, ದಕ್ಷತೆ, ಕ್ಷಮತೆ ಎಲ್ಲವೂ ಹೆಚ್ಚುತ್ತವೆ. ಮಾಡಲಿ ಕ್ಕಾದ ಕೆಲವೇಕೆಲವು ಕೆಲಸಗಳಾದರೂ ಅಚ್ಚುಕಟ್ಟಾಗಿ ಮುಗಿಯುತ್ತವೆ. ಆರನೆಯದು ನಾವು ಸೇವಿಸುವ ಆಹಾರದಲ್ಲಿ ಸಕ್ಕರೆಯ ಪ್ರಮಾಣ. ಹೌದು, ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮತ್ತು ರಕ್ತಕ್ಕೆ ಮಾತ್ರವಲ್ಲ, ಮೆದುಳಿಗೂ ಮಾರಕ. ಈಗಂತೂ ಸಂಸ್ಕರಿತ ಆಹಾರಪದಾರ್ಥಗಳಲ್ಲಿ ಸಕ್ಕರೆಯಂಶ ವಿಪರೀತವಾಗಿ ಇರುತ್ತದೆ.

ಅದು ಜಿಹ್ವಾಚಾಪಲ್ಯಕ್ಕೂ, ಹೊಟ್ಟೆಬಾಕತನಕ್ಕೂ ಕಾರಣವಾಗುತ್ತದೆ. ಸಕ್ಕರೆ ಸೇವನೆ ಹೆಚ್ಚಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿದರೆ ಮೆದುಳಿಗೆ ರಕ್ತಸಂಚಲನೆಯಲ್ಲಿ
ಏರುಪೇರು. ಹಾಗೆಯೇ ‘ಆಕ್ಸಿಡೇಟಿವ್ ಸ್ಟ್ರೆಸ್’ ಹೆಚ್ಚುವುದರಿಂದ ಖಿನ್ನತೆ, ಜ್ಞಾಪಕಶಕ್ತಿಯ ಕ್ಷೀಣತೆ, ಆಲೋಚನೆಗಳಲ್ಲಿ ಗೊಂದಲ, ಯೋಚನಾಶಕ್ತಿಯಲ್ಲಿ ಮಂದಗತಿ. ಮೆದುಳಿನ ಕಾರ್ಯಕ್ಷಮತೆ ತಗ್ಗುತ್ತದೆ. ಇಲ್ಲೂ ಅಷ್ಟೇ, ಇಂಥದೊಂದು ಅವಸಾನ, ಅಧಃಪತನ ಆಗುತ್ತಲೇ ಇದೆ ಎಂದು ನಮಗೆ ಗೊತ್ತೂ ಆಗುವುದಿಲ್ಲ. ಕಾರಣ ಕಂಡುಕೊಳ್ಳುವ ಮಾತಂತೂ ದೂರವೇ ಉಳಿಯಿತು. ಮತ್ತೆ ಇದನ್ನು ತಡೆಗಟ್ಟುವುದು ಹೇಗೆ? ಆಹಾರಸೇವನೆಯಲ್ಲಿ ಹೆಚ್ಚಿನ ಕಾಳಜಿ ವಹಿಸುವುದರಿಂದ, ಸಂಸ್ಕರಿತ ಆಹಾರದ ಬದಲಿಗೆ ತಾಜಾ ತರಕಾರಿಗಳು, ಪೌಷ್ಟಿಕ ಧಾನ್ಯಗಳು, ಹಾಗೂ ಒಣಹಣ್ಣುಗಳ ಸೇವನೆಯಿಂದ, ಯಥೇಚ್ಛ ನೀರು ಕುಡಿಯುವುದರಿಂದ, ದೇಹಾರೋಗ್ಯದ ಜೊತೆಜೊತೆಗೇ ಮೆದುಳಿನ ಠಾಕುಠೀಕುತನವನ್ನೂ ಖಾತ್ರಿಪಡಿಸಬಹುದು.

ಒಟ್ಟಿನಲ್ಲಿ, ಇವೆಲ್ಲ ನಾವೆಲ್ಲರೂ ಮೈಗೂಡಿಸಿಕೊಂಡಿರುವ ದುರಭ್ಯಾಸಗಳು. ಕೆಲವರಿಗೆ ಹೆಚ್ಚು ಇನ್ನು ಕೆಲವರಿಗೆ ಕಡಿಮೆ ಇರಬಹುದು ಅಷ್ಟೇ ಹೊರತು ಈ ಅಭ್ಯಾಸಗಳಾವುವೂ ಇಲ್ಲವೇ ಇಲ್ಲ ಎನ್ನುವವರು ಯಾರೂ ಇರಲಿಕ್ಕಿಲ್ಲ. ನಾವು ಈಗಿಂದೀಗಲೇ ಅರಿತುಕೊಳ್ಳಬೇಕಾದ್ದೆಂದರೆ ಮೆದುಳಿನ ಪಾಲನೆ-ಪೋಷಣೆ ನಮ್ಮ ಮುಖ್ಯ ಜವಾಬ್ದಾರಿಗಳಲ್ಲೊಂದು. ಮೆದುಳು ತನ್ನ ಆರೈಕೆಯನ್ನು ತಾನೇ ನೋಡಿಕೊಳ್ಳುತ್ತದೆ ಎಂದುಕೊಂಡು ನಾವು ‘ಮನಬಂದಂತೆ’ ಜೀವನ ನಡೆಸಿದರೆ
ಒಂದಲ್ಲಒಂದು ದಿನ ಅಪಾಯ ನಿಶ್ಚಿತ. ಹಾಗಾಗದಂತೆ ಇಂದಿನಿಂದಲೇ ಮಸ್ತಿಷ್ಕವನ್ನು ಮಸ್ತ್‌ಗೊಳಿಸುವುದಕ್ಕೆ ಶುಭಮಸ್ತು.