Thursday, 19th September 2024

ಭೋಜಪತ್ರದ ನಾಡಿಗೆ ಬೆರಗಿನ ಕಾಲ್ನಡಿಗೆ…!

ಅಲೆಮಾರಿ ಡೈರಿ

ಸಂತೋಷ ಕುಮಾರ ಮೆಹೆಂದಳೆ

ಆದಿ ಅನಾದಿಕಾಲದಿಂದಲೂ ಋಷಿ ಮುನಿಗಳೆಲ್ಲ ಬರೆಯುತ್ತಿದ್ದುದೇ ಆ ಮರದ ಹಾಳೆಯ ಮೇಲೆ ಎಂದೆಲ್ಲ ಓದಿದ್ದೆ, ಕೇಳಿದ್ದೆ. ಅದನ್ನೆಲ್ಲ ಬರೆದು ಹಾಳಾಗದಂತೆ ಮತ್ತು ಸುರುಳಿ ಸುತ್ತಿ ಇಡುವುದೂ ಶತಮಾನ ಕಾಲ ಕಾಯ್ದುಕೊಳ್ಳುವುದೂ, ಹಾಗೆ ಕಾಯ್ದುಕೊಂಡ ಹಾಳೆಗಳು ಇನ್ನಷ್ಟು ಗಾಢವಾಗಿ ಪವಿತ್ರ ಭಾವ ಹುಟ್ಟು
ಹಾಕುವುದೂ ಹೀಗೆಲ್ಲ ಭೋಜ ಪತ್ರದ ಬಗ್ಗೆ ಅಪರೂಪದ ಮತ್ತು ಒಹೋ ಎನ್ನುವ ಭಾವಗಳಿಗೆ ನಾನೂ ಪಕ್ಕಾದವನೇ.

ಹಾಗಾಗಿ ಎಲ್ಲಾ ಕೆಲವೊಮ್ಮೆ ಪುರಾತನ ದಾಖಲೆಗಳೆಲ್ಲ  ಅದರ ಇದ್ದವು ಎನ್ನುವಾಗೆಲ್ಲ ಹೀಗೆ ಇರುತ್ತದಾ..? ಎಂದು ಹುಡುಕಾಡಿದವನೇ.. ಇದೆ ಈಗೆಲ್ಲಿ ಸಿಗುತ್ತದೆ ಬಿಡು ನೋಡಲು ಎಂದು ಸಮಾಧಾನಿಸಿಕೊಂಡ ತರುವಾಯ, ಇದ್ದಕ್ಕಿದ್ದಂತೆ ಇನ್ಯಾವಾಗಲೋ ಫಕ್ಕನೆ ಕಾಲ್ತೋಡರಿದ ಕಥಾನಕವೇ ಶೀಯಾಲೇಕ್ ಬಯಲಿನ ಬೆರಗಿನ ಪ್ರಸಂಗ. ಅಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಉದ್ದಾನು ಉದ್ದದ ಬಯಲುಗಳಿವೆ. ಆದರೂ ಕೈಗೆ ನಿಲುಕದ ಅದರ ಅಂಚುಗಳು ಭಯವನ್ನುಂಟು ಮಾಡುತ್ತವೆ. ತೀರ ತುತ್ತಾನು ತುದಿಯವರೆಗೂ ಒಂದೇ ಪಾತಳಿಯಲ್ಲಿರುವ ಪರ್ವತದ ಪಾದಗಳು ಇದ್ದಕ್ಕಿದ್ದಂತೆ ಅಗಾಧ ಕಂದರದತ್ತ ಕೊನೆಯಾಗುವ ಅವುಗಳ ಪರಿಯಿಂದಾಗಿ ವಿಶಾಲತೆ ಕೂಡಾ ಕ್ಷಣಕಾಲ ಭಯವನ್ನುಂಟು ಮಾಡುತ್ತದೆ.

ಬೆರಗುಗೊಳಿಸುವ ಸೈಜಿನ ಬಂಡೆಗಳು ಮಹಾದ್ವಾರದಂತೆ ಕವಲುಗಳಾಗಿ ನಿಂತಿದ್ದರೆ ಅದರ ಮಧ್ಯದಲ್ಲಿ ಹರಿಯುವ ನದಿಗಳು ಅಲ್ಲ ಗಟ್ಟಿಗೊಂಡು ಹಿಮವಾಗಿ ನಿಂತುಬಿಟ್ಟಿರುವ ಪರಿಯಿಂದಾಗಿ ಅದ್ಭುತ ರಮಣೀಯ ದೃಶ್ಯಗಳು ಸುಲಭ ನೋಟಕ್ಕೆ ಲಭ್ಯವಾಗುತ್ತವೆ. ಅತ್ತಲಿನ ನೇಪಾಳ ಮತ್ತು ಚೀನಾ ಪ್ರಾಬಲ್ಯದ ಗಡಿಯನ್ನು ಸಾರಾ ಸಗಾಟಾಗಿ ಕತ್ತರಿಸಿ ಒಂದು ಗಡಿಯನ್ನೇ ನಿರ್ಮಿಸಿರುವ ಈ ಪ್ರದೇಶ ಶೀಯಾಲೇಖ್ ಪ್ರಸ್ತುತ ಅತಿ ಹೆಚ್ಚು ಎತ್ತರದಲ್ಲಿದ್ದೂ ಮರಗಳ ಸಾಲನ್ನು ಹೊಂದಿರುವ ಏಕೈಕ ಪ್ರದೇಶ.

ಡೆಲ್ಲಿಯಿಂದ ಸರಿ ಸುಮಾರು ೯೦೦ ಕಿ.ಮೀ. ದೂರದ, ನೇಪಾಳದ ಭುಜಕ್ಕೆ ಆತುಕೊಂಡಿರುವ ಸರಹದ್ದಿನ ದಾರ್ಚುಲಾ ಎನ್ನುವ ಇತ್ತ ಪಟ್ಟಣವೂ ಅಲ್ಲದ ಅತ್ತ ಹಳ್ಳಿಯೂ ಅಲ್ಲದ ಭಾರತದ ಕೊನೆಯ ಗೂಡಿಗೆ ನಮ್ಮ ವಾಹನ ಪ್ರಯಾಣ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದೆ ತವಾಘಟವರೆಗೂ ಸಣ್ಣ ಜೀಪಿನಲ್ಲಿ ಪ್ರಯಾಣಿಸಿ ನಂತರ ಮುಂದೆ ಕೂಡಾ ಒಂದಷ್ಟು ಖಾಸಗಿ ವಾಹನದಲ್ಲಿ ಪಯಣಿಸುವುದಾದರೆ ಇನ್ನೊಂದು ಹತ್ತು ಕಿ.ಮೀ. ಚಾರಣ ಉಳಿಸಬಹುದಾಗಿತ್ತು. ಆದನ್ನು ಮಾಡದೆ, ಅಲ್ಲಿಂದ ಹದಿನೇಳು ಕಿಮೀ ದೂರದ ಗಾಲ ಎನ್ನುವ ಹಳ್ಳಿಯನ್ನು ತಲುಪುವ ಹೊತ್ತಿಗೆ ಸರಿ ಸುಮಾರು ಆರು ಗಂಟೆಗಳ ಕಾಲ ನಡಿಗೆಯ ಮೊದಲ ಹಂತ
ಏದುಸಿರಿಡುತ್ತಾ ಕ್ರಮಿಸಿದ್ದೇವು.

ಸಂಪೂರ್ಣ ಏರು ಹಾದಿಯ ಆ ದಾರಿಯ ಚಾರಣ ಅನಾಮತ್ತು ಎರಡೂವರೆ ಸಾವಿರ ಅಡಿ ಮೇಲಕ್ಕೇರಿಸುತ್ತದೆ. ಆವತ್ತಿನ ಟೆಂಟ್ ನಲ್ಲಿ ಕಾಲು ಚಾಚಿದ್ದೇ ಎಚ್ಚರ ವಾಗಿದ್ದು ಬೆಳಗಿನ ನಾಲಕ್ಕೆ ಸೀಟಿ ಹೊಡೆದಾಗಲೇ. ಬೆಳ್ಳಂಬೆಳಗ್ಗೆ ಇಲ್ಲಿ ಮೂರೂವರೆ ಸಾವಿರ ಮೆಟ್ಟಿಲು ಇಳಿಯಬೇಕಾದ ಮೊದಲ ಭಾಗವೇ ಅಂಥಾ ವಿಪರೀತ ಚಳಿಯಲ್ಲೂ ನೀರು ನೀರಾಗಿಸುತ್ತದೆ. ಕಾರಣ ಏರಿದಷ್ಟು ಸುಲಭವಲ್ಲ ಇಳಿಯುವಿಕೆ. ಮೊದಲ ಒಂದು ಗಂಟೆಯ ತೀವ್ರವಾದ ಸ್ನಾಯು ಸೆಳೆತಕ್ಕೆ ಒಳಗಾಗಿ ಬಿಡುವ ಚಾರಣಿಗರು ನಂತರದ ಹಾದಿ ಯಲ್ಲಿ ದಿಕ್ಕು ತಪ್ಪಿದಂತಾಗುತ್ತಾರೆ. ಹಾಗಾಗಿ ಮೂರು ಸಾವಿರ ಮೆಟ್ಟಿಲಗಳ ಅಗಾಧ ಇಳಿತಕ್ಕೆ ಅನಾಮತ್ತು ಆರು ತಾಸು ತೆಗೆದು ಕೊಳ್ಳುತ್ತದೆ. ಜೊತೆಗೆ ಮಂಜಿನ ಬೀಸುಗಾಳಿ ಬೇರೆ.

ಕಾರಣ ಪ್ರತಿಯೊಂದು ಹೆಜ್ಜೆಯೂ ಒಂದು ಒಂದೂವರೆ ಅಡಿಯ ಆಳಕ್ಕೆ ಇಳಿಯುತ್ತಲೇ ಒಯ್ಯುವ ದಾರಿ ಎಡಕ್ಕೆ ಅಗಾಧ ಪರ್ವತವಾದರೆ ಬಲಕ್ಕೆ ಸಾವಿರ ಅಡಿಯ ಕಾಳಿ ನದಿಯ ಕಂದರ ಬಾಯ್ದೆರೆದು ಭಯ ಹುಟ್ಟಿಸುತ್ತಲೇ ಇರುತ್ತದೆ. ಆದಾಗ್ಯೂ ಮೊದಲ ಮೂರು ಗಂಟೆಯ ಪಯಣದ ನಂತರ ಕೆಳಗಿಳಿದರೆ ಬಿಸಿಬಿಸಿ ಚಹ ಪೂರೈಸುವ ಲಖನಪುರ ಆ ಕ್ಷಣಕ್ಕೆ ಸ್ವರ್ಗ ಎನ್ನಿಸಿದ್ದು ಸುಳ್ಳಲ್ಲ. ಮಧ್ಯಂತರ ಸ್ಥಳದಂತೆ ಭಾಸವಾಗುವ ಚಿಕ್ಕ ಮೂರೇ ಮೂರು ಮನೆಯ ಈ ಊರಿನಲ್ಲಿ ಸಾಧಾರಣ ಮಟ್ಟದ ತಿಂಡಿ ಲಭ್ಯವಿದ್ದರೂ ಅದೇ ಪರಮಾನ್ನ ಆ ಹೊತ್ತಿಗೆ. ಅಸಾಮಾನ್ಯ ಸುಂದರ ಶೀಯಾಲೇಕ್ ಎಲ್ಲಾ ಮೇಲಿದೆಯಂತೆ ಎನ್ನುತ್ತಿದ್ದರೆ ವಿನಃ ಅದು ಎದುರಿಗೇ
ಬರುತ್ತಿರಲಿಲ್ಲ.

ಇದು ಜೀವ ಕೈಯ್ಯಲ್ಲಿ ಹಿಡಿದು ನಡೆಯುವಂತೆ ಮಾಡುವ ಅನಾಮತ್ತು ಮೃತ್ಯುಕೂಪ. 1998 ಆಗಸ್ಟ್‌ನಲ್ಲಿ ರಾತ್ರಿ ನಡೆದ ಜಾಗತಿಕ ಅತಿ ದೊಡ್ಡ ದುರಂತದ ಸಾಕ್ಷಿಯಾಗಿ ಆ ರಾತ್ರಿ ಅನಾಥ ಶವಾಗಿ ಶಿಲೆಯಡಿಗೆ ಮುಚ್ಚಿ ಹೋದವಳು ಗ್ಲಾಮರಸ್ ನೃತ್ಯಪಟು ಪ್ರತಿಮಾ ಬೇಡಿ. ಯಾರೆಲ್ಲ ಹೆಜ್ಜೆಗಳ ಕೆಳಗೆ ಆಕೆಯ ಶವ ಕದಲುತ್ತಿರುತ್ತದೋ ದೇವರಿಗೇ ಗೊತ್ತು. ನಾವು ಮಾತ್ರ ಎಡಬಿಡದೆ ಉರುಳುವ ಸಣ್ಣಸಣ್ಣ ಕಲ್ಲುಗಳ ದಾಳಿ ತಪ್ಪಿಸುತ್ತಾ ಮೇಲಕ್ಕೇರುತ್ತಿದ್ದೆವು.

ಈಗಲೂ ಆಗಾಗ ಅಲ್ಲಿ ಬೆಟ್ಟಗಳು ಕುಸಿಯುತ್ತಲೇ ಇರುತ್ತವೆ. ಅನಾಮತ್ತು ಕಲ್ಲು ಮಣ್ಣಿನ ಬಂಡೆಗಳು ತೂರಿ ಬರುತ್ತಲೇ ಇರುತ್ತವೆ. ಹಾಗಾಗೇ ಅದು ದಾಟುವ ಚಾರಣಿಗ ಯಾವಾಗ ಎಲ್ಲಿ ಏನಾಗುತ್ತದೋ ಎನ್ನುವ ಭಯದ ಕ್ರಮಿಸ ಬೇಕಾಗುತ್ತದೆ. ಹಾಗೇ ಲಾಮಾರಿಯ ಮೂಲಕ ನಡೆದು ಹೋಗುವ ಮುನ್ನ ಮತ್ತೆ ಮೂರು ಸಾವಿರ ಮೆಟ್ಟಿಲುಗಳ ಇನ್ನೊಂದು ಪರ್ವತ ಏರಿ ನಿಲ್ಲಬೇಕಾಗುತ್ತದೆ. ಹಾಗೆ ಹಾಯ್ದು ಹೋಗುವ ದಾರಿಯಲ್ಲಿ ಅಲ್ಲಲ್ಲಿ ಉದುರುವ ಬೆಟ್ಟಗಳು ಬೆದರಿಸುತ್ತಲೇ ಇರುತ್ತವೆ. ಅಂದು ಬೆಳಗ್ಗೆ ಆರಂಭವಾದ ಚಾರಣ ಮುಗಿದಿದ್ದು ಮಧ್ಯಾಹ್ನ ನಾಲ್ಕು ಗಂಟೆ. ಅನಾಮತ್ತು ಇಪ್ಪತ್ತೇಳು ಕಿ.ಮೀ. ಏರು ಹಾದಿ ಅಲ್ಲಿ ಕ್ರಮಿಸಿದ್ದೆವು ಎರಡು ದಿನದಲ್ಲಿ ಅದರಲ್ಲೂ ಆಕ್ಸಿಜೆನ್ ಹೆಜ್ಜೆ ಹೆಜ್ಜೆಗೂ ಕಡಿಮೆಯಾಗುವ ವಾತಾವರಣದಲ್ಲಿ. ಇದೆ ಆದ ಮರುದಿನ ಏದುರಿಗೆ ಧುತ್ತನೆ ನಿಂತ ಎತ್ತರದ ಪರ್ವತದ ಏರು ದಾರಿ ಅಕ್ಷರಶಃ ಭೂಮಿಯ ಆಚೆ ಬದೀಗೆ ತಳ್ಳುತ್ತದೆ ಏನ್ನಿಸಿದ್ದು ಸುಳ್ಳಲ್ಲ.

ಆದರೆ ಭೂಮಿಗೆ ಅಡ್ಡ ನಿಂತತಿದ್ದ ಬೆಟ್ಟವನ್ನು, ಬೆಳಗಿನ ಹುಮ್ಮಸ್ಸಿನಲ್ಲಿ ಏರಿ ಸಣ್ಣ ಎರಡು ಬೆಟ್ಟಗಳ ಮಧ್ಯ ಬಾಗಿಲಿನಂತಹ ದಾರಿಯಲ್ಲಿ ನುಗ್ಗಿ ಒಳಗೆ ಕಾಲಿಟ್ಟ ಮರುಕ್ಷಣ ಎಲ್ಲರ ಬಾಯಲ್ಲಿ ಒಹೋ.. ಅಹಾ ಎಂಬ ಉದ್ಘಾರ ಮತ್ತು ಬೆರಗು ಮಾತ್ರ. ಅದೊಂದು ವಿಸ್ಮಿತ ಘಳಿಗೆ. ಎದುರಿಗೆ ಅಪರ ಕಪ್ಪು ಕಲ್ಲಿನ ಅಗಾಧ ಎತ್ತರದ ಕಣಿವೆಯ ಮಧ್ಯದಲ್ಲಿ ಹಾಯ್ದು ಬಂದ ನೀರು ಅ ಘನೀಭವಿಸಿ ಬಿಳಿಯ ಸೆರಗಿನಂತೆ ಹಾಸಿದ್ದರೆ ಅದಕ್ಕೆ ಚೆಂದದ ಹಸಿರು ಶಾಲಿನ ಆವರಣ. ಇಳಿಜಾರಿನಲ್ಲಿ ಆ ಎತ್ತರದಲ್ಲಿ ವಿಶಾಲ ತೋಳು ತಬ್ಬಲಾಗದಷ್ಟು ವ್ಯಾಸದ ಭಾರಿ ಎತ್ತರದ ಮರಗಳು.

ಭೋಜಪತ್ರದ ಪವಿತ್ರ ಮರಗಳ ಕಾಂಡ ಮೈಯೊಣಗಿಸಿ ಅಗಲಾತಿಅಗಲ ಹಾಳೆಗಳನ್ನು ಉದುರಿಸಲು ಸಿದ್ಧವಾಗಿ ನಿಂತಿದ್ದವು. ಮಂದವಾದ ಧೂಪದ ವಾಸನೆ. ಸ್ವರ್ಗದ ದಾರಿ ಇಲ್ಲಿಂದಲೇ ಆರಂಭ ಎನ್ನದಿದ್ದರೆ ಅಪಚಾರವಾದೀತು. ಎದುರಿಗೆ ದೇವರು ರುಜು ಹಾಕಲು ಬಳಸುವ ಹಾಳೆಗಳ ಮೈಯ್ಯ ಹೊದಿಕೆ ಹೊದ್ದು ಭೋಜಪತ್ರದ ಮರ ಆಕಾಶಕ್ಕೆ ಮುಖ ಮಾಡಿ ನಿಂತಿದ್ದರೆ, ನಾವು ಉಸಿರು ಮರೆತಿದ್ದೇವು.

ಅದು ಶಿಯಾಲೇಕ್.. ಭೋಜಪತ್ರ ಮತ್ತು ಧೂಪದ ಮರಗಳ ಎತ್ತರದ ಕಣಿವೆ ಕಾಡು. ಹಿಮಾಲಯ ಶ್ರೇಣಿಯ ಭೋಜಪತ್ರದ ನಾಡು ಆ ಚಾರಣದ ಅನಿರೀಕ್ಷಿತ ಬೆರಗು ನನಗೆ. ಗೈಡ್ ಕೂಡಾ ಈ ಸರಪ್ರೈಜ್ ಕೊಡಲು ಇಂಥಾ ಸ್ಥಳದ ಬಗ್ಗೆ ಅಡ್ವಾ ಆಗಿ ಬೇಕೆಂದೆ ಹೇಳಿರಲಿಲ್ಲ ಎಂದ. ಹರವಾದ ಮರದ ಕಾಂಡಗಳು ಬಿಡುಗಡೆ ಗೊಳಿಸುವ ವಿಶಾಲ ಪದರುಗಳೇ ಭೋಜಪತ್ರಗಳು ಎಂದು ವಿವರಿಸಿದ. ಅದನ್ನೆ ಫೋನ್‌ಟ್ಯೂನ್ ಮಾಡಿ, ಅದಕ್ಕೆ ಸೂಕ್ತ ಕಾಲಾವಧಿಯ ಬಾಳಿಕೆಯ ಅರೈಕೆ ನೀಡಿ, ಸಾಹಿತ್ಯ ಮತ್ತಿತರ ಬರವಣಿಗೆಗೆ ಬಳಸುತ್ತಿದ್ದರೆನ್ನಲಾಗುವ ಭೋಜಪತ್ರದ ಕಾಡಿನ ವಿಸ್ಮಿತತೆಯನ್ನು ಇಲ್ಲಿ ಬರೆದು ವಿವರಿಸುವಲ್ಲಿ ವಿಫಲ ನಾನು. ಅಂತಹ ಅಪರೂಪದ ಚೆಂದದ ತಾಣ.

ಭೂಮಿಯಿಂದ ಹತ್ತು ಸಾವಿರದ ಅಡಿಯ ಎತ್ತರದ ಸ್ವರ್ಗ ಸದೃಶ್ಯ ನೋಟ. ವೈಶಿಷ್ಟ್ಯವೆಂದರೆ ಒಂದು ಕಡೆಯಲ್ಲಿ ಅಗಾಧ ಕಂದರವಿದ್ದರೆ, ಅದಕ್ಕೆದುರಾಗಿ ಅನ್ನ ಪೂರ್ಣ ಪರ್ವತದ ಹಿಂಭಾಗವಿದೆ. ಮಗ್ಗುಲಿಗೆ ಗಣೇಶ ಪರ್ವತದ ಬೆನ್ನಿದೆ. ಅದಕ್ಕೆ ಸಮನಾಗಿ ಮಧ್ಯದ ಕಂದರ ಗುಂಜಿಯಲ್ಲಿ ಗಾಳಿ ಅರವತ್ತು ಕಿ.ಮೀ. ವೇಗದಲ್ಲಿ ಸುಳಿ ಒಡೆದು ಬಂದು ಬೆದರಿಸುತ್ತಿರುತ್ತದೆ. ಚಳಿಗೆ ವಿಶೇಷ ವಿವರಣೆ ಬೇಕಿಲ್ಲ. ಹೀಗೆ ಸರ್ವರೀತಿಯ ದೃಶ್ಯಾವಳಿಗಳಿಗೂ ಪ್ರಭಾವಳಿಯಂತೆ ನಿಂತು ಬಿಡುವ ಶೀಯಾಲೇಖ್ ಅಲ್ಲಿಯವರೆಗಿನ ಅಪಾಯಕಾರಿ, ದುರ್ಗಮ 56 ಕಿ.ಮೀ. ಚಾರಣದ ಶ್ರಮವನ್ನು ಮರೆಸಿ ಬಿಡುತ್ತದೆ.

ರಪರಪನೆ ಮುಖಕ್ಕೆ ರಾಚುವಂತೆ ಬರುವ ಮಂಜಿನ ಗಾಳಿಗೆ ಮರೆಯಾಗುತ್ತಾ, ಮಳೆಯಿಂದ ರಕ್ಷಿಸಿಕೊಳ್ಳುತ್ತಾ, ಆಗೀಗ ಗ್ಲೇಶಿಯರ್‌ಗಳು ಒಡೆಯುವ ಭಯಂಕರ ಶಬ್ದಕ್ಕೆ ಗುಂಡಿಗೆ ಹಿಡಿದುಕೊಳ್ಳುತ್ತಾ ಅನುಭವಿಸುವ ಅನುಭೂತಿಗೆ ಶೀಯಾಲೇಕ್ನ ಭೋಜಪತ್ರಗಳ ನಾಡಿನಲ್ಲಿ ಕಾಲಿರಿಸಿ ನಿಂತಿದ್ದು ಬದುಕಿನ ಅಪರೂಪದ ಅನುಭವ ಎನ್ನದಿರಲಾರೆ. ನನ್ನ ಅಲೆಮಾರಿತನ ಸಾರ್ಥಕ ಮಾಡಿದ ಸಂಭ್ರಮ ಅದು. ಅದಕ್ಕಿಂತ ಮಿಗಿಲು ವಿವರಣೆಗಳಿಲ್ಲ ಆ ನಾಡಿನ ಬಗ್ಗೆ.