Saturday, 23rd November 2024

ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ: ಏರ್‌ಲೈನ್ಸ್‌ನ ಸಿಬ್ಬಂದಿಗಳ ಬಂಧನ

ನವದೆಹಲಿ: ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್‌ ಇಲಾಖೆ ಅಧಿಕಾರಿಗಳನ್ನು ಶನಿವಾರ ಬಂಧಿಸಲಾಗಿದೆ.

ಆರೋಪಿಗಳು ಸೌದಿ ಅರೇಬಿಯಾದ ಜೆಡ್ಡಾದಿಂದ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಬಂಧಿಸಲಾಗಿದೆ. ₹72.46 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ದೇಶದಲ್ಲಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ ಚಿನ್ನದ ₹22 ಲಕ್ಷ ಮೌಲ್ಯದ 517.2 ಗ್ರಾಂ ತೂಕದ ಬಿಸ್ಕತ್‌ ಮತ್ತು ಎರಡು ತುಣುಕುಗಳು ಪತ್ತೆಯಾದವು. ತನಿಖೆಯಲ್ಲಿ ಒಬ್ಬ ಪ್ರಯಾಣಿಕ 160 ಗ್ರಾಂ ತೂಕದ ಚಿನ್ನವನ್ನು ಇಂಡಿಗೊ ಏರ್‌ಲೈನ್ಸ್‌ ಸಿಬ್ಬಂದಿಯೊಬ್ಬರಿಗೆ ನೀಡಿರುವುದು ಪತ್ತೆಯಾಯಿತು.

ಈ ಜಾಲದಲ್ಲಿ ಭಾಗಿಯಾಗಿರುವುದಾಗಿ ಸ್ಪೈಸ್‌ಜೆಟ್‌ ಮತ್ತು ಇಂಡಿಗೊ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಎಲ್ಲ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.