Friday, 20th September 2024

ಪುಟಿನ್‌ ಔತಣಕೂಟದಲ್ಲಿ ಡಾ.ಕಲಾಂ ಆಕ್ಷೀ…ಆಕ್ಷೀ ಎಂದು ಸೀನಿದಾಗ…

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

vbhat@me.com

ಪತ್ರಕರ್ತರಲ್ಲಿ ಇರುವಷ್ಟು ಕತೆಗಳು, ಪ್ರಸಂಗಗಳು, ಸ್ಟೋರಿಗಳು ಮತ್ತು ದೃಷ್ಟಾಂತ (anecdotes) ಗಳು ಬೇರೆಯವರಲ್ಲಿ ಇರಲು ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜಕಾರಣಿಗಳು ಸಹ ಕಮ್ಮಿಯೇನಲ್ಲ. ಆದರೆ ಅವರು ಪತ್ರಕರ್ತರು ನೋಡಿದ ರೀತಿಯಲ್ಲಿ ಪ್ರಸಂಗಗಳನ್ನು ಗ್ರಹಿಸುವುದಿಲ್ಲ. ಪತ್ರಕರ್ತರು ಹಾಗಲ್ಲ. ಅವರು ಸುದ್ದಿಯನ್ನು ಒಂದು ಕತೆ (story)ಯಾಗಿ ನೋಡುತ್ತಾರೆ.

ಅವರು ಯಾವತ್ತೂ ಸ್ವಾರಸ್ಯಕರ ಸಂಗತಿಗಳನ್ನು ಗ್ರಹಿಸುವುದರಲ್ಲಿ ಉತ್ಸುಕರಾಗಿರುತ್ತಾರೆ. ಅಷ್ಟೇ ಅಲ್ಲ, ಅವುಗಳನ್ನು ಟಿಪ್ಪಣಿ ಮಾಡಿಕೊಂಡಿರುತ್ತಾರೆ. ಅದರಲ್ಲೂ ಸಂಪಾದಕರು ಬರೆಯುವುದು ಅಪರೂಪ ಮತ್ತು ಅವರು ತಮ್ಮ ಆತ್ಮಕತೆಗಳನ್ನು ಬರೆಯುವುದಂತೂ ಇನ್ನೂ ಅಪರೂಪ. ಈ ದೃಷ್ಟಿಯಿಂದ ಪತ್ರಕರ್ತರು ಅಥವಾ ಸಂಪಾದಕರು ಹೊಸ ಪುಸ್ತಕ ಬರೆದರೆ, ತಮ್ಮ ಆತ್ಮಕತೆಗಳನ್ನು ಬರೆದರೆ, ನನ್ನ ಆಂಟೆನಾ ತಕ್ಷಣ ಜಾಗೃತವಾಗುತ್ತದೆ. ಆ ಪುಸ್ತಕಬಿಡುಗಡೆಯಾದ ತಕ್ಷಣ, ಅದು ನನ್ನ ಮೇಜಿನ ಮೇಲೆ ಇಲ್ಲದಿದ್ದರೆ, ಅದನ್ನು ಓದಿ ಮುಗಿಸದಿದ್ದರೆ ಸಮಾಧಾನವಿಲ್ಲ.

ಇತ್ತೀಚೆಗೆ ನಾನು ಇಬ್ಬರು ಸಂಪಾದಕರ ಆತ್ಮಕತೆಗಳನ್ನು ಓದಿದೆ. ಮೊದಲನೆಯದಾಗಿ, ಅಲೋಕ್ ಮೆಹ್ತಾ ಬರೆದ Power, Press and Politics ಮತ್ತು ವೀರ್ ಸಾಂಘವಿ ಬರೆದ A Rude Life. ಇಬ್ಬರೂ ’ಲುಟಿನ್ಸ್ ದಿಲ್ಲಿಯ ಪತ್ರಕರ್ತ’ರು. ಅದು ನನಗೆ ಮುಖ್ಯವಲ್ಲ. ಅವರು ಹೇಳುವ ಕತೆಗಳಷ್ಟೇ ಮುಖ್ಯ. ಅಲೋಕ್ ಮೆಹ್ತಾ ಸುಮಾರು ಐವತ್ತು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದವರು, ಅಷ್ಟೇ ಅಲ್ಲ, ’ದೈನಿಕ್ ಭಾಸ್ಕರ್’, ’ನಯೀ ದುನಿಯಾ’ ಸೇರಿದಂತೆ ’ಟೈಮ್ಸ್ ಆಫ್ ಇಂಡಿಯಾ’, ’ಹಿಂದೂಸ್ತಾನ್ ಟೈಮ್ಸ್’ ಮತ್ತು ’ಔಟ್‌ಲುಕ್’ ಗ್ರೂಪ್ ಹಿಂದಿ ಪತ್ರಿಕೆಗಳ ಸಂಪಾದಕರಾಗಿದ್ದವರು.

ಇನ್ನೊಬ್ಬರಾದ, ವೀರ್ ಸಾಂಘವಿ ದಿಲ್ಲಿಯ ಪ್ರಭಾವಿ ’ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿದ್ದವರು. ಭಾರತದಲ್ಲಿಯೇ ಅತಿ ಕಡಿಮೆ ವಯಸ್ಸಿನಲ್ಲಿ (ಇಪ್ಪತ್ತೆರಡನೇಯ) ಸಂಪಾದಕ (’ಬಾಂಬೆ’ ಮ್ಯಾಗಜಿನ್) ರಾದ ಅಗ್ಗಳಿಕೆ ಅವರದು. ನಂತರ ಅವರು ’ಇಂಪ್ರಿಂಟ್’ ಮತ್ತು ’ಸಂಡೇ’ ನಿಯತಕಾಲಿಕಗಳ ಸಂಪಾದಕರಾಗಿಯೂ ಕೆಲಸ ಮಾಡಿದವರು. ಈ ಇಬ್ಬರು ಸಂಪಾದಕರೂ ದಿಲ್ಲಿ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡವರು. ದಿಲ್ಲಿಯಲ್ಲಾಗಲಿ, ಬೆಂಗಳೂರಿ ನಲ್ಲಾಗಲಿ ಸಂಪಾದಕರಾಗಿದ್ದರೆ, ಅಧಿಕಾರ ಕೇಂದ್ರದಿಂದ ದೂರ ಉಳಿಯಲು ಸಾಧ್ಯವಿಲ್ಲ. ಅದು ನಮ್ಮ ಕೆಲಸದ ಗುಣಲಕ್ಷಣ.

ರಾಜಕಾರಣಿಗಳು, ಮಂತ್ರಿಗಳಿಂದ ದೂರ ಉಳಿದು ಅಥವಾ ಅಂತರ ಕಾಪಾಡಿ, ಸಂಪಾದಕರಾಗಬಯಸುವವರನ್ನು ಕಂಡರೆ, ನನಗೆ ಪ್ರಯೋಗ ಶಾಲೆಯಲಿರುವ ಅಸ್ಥಿಪಂಜರದ ನೆನಪಾಗುತ್ತದೆ. ಅಂಥವರನ್ನು ಪತ್ರಿಕೋದ್ಯಮ ಹೇಗೆ ಸಹಿಸಿಕೊಳ್ಳುವುದೋ ಗೊತ್ತಿಲ್ಲ. ಅದು ಅವರವರಿಗೆ ಬಿಟ್ಟಿದ್ದು, ಇರಲಿ. ಅರವೊತ್ತೊಂದು ಅಧ್ಯಾಯಗಳಿರುವ ತಮ್ಮ ಆತ್ಮಕಥೆ ಯಲ್ಲಿ, ವೀರ್ ಸಾಂಘವಿ The man Who Farted At A Funeral  ಎಂಬ ಒಂದು ಅಧ್ಯಾಯ ಬರೆದಿದ್ದಾರೆ. ಇದು ಅವರ ಪ್ರಧಾನಿ ಮತ್ತು ರಾಷ್ಟ್ರಪತಿ ಜತೆಗಿನ ವಿದೇಶ ಪ್ರಯಾಣ, ವಿಮಾನಯಾನ ಮತ್ತು ವಿದೇಶಿ ಗಣ್ಯರ ಜತೆಗಿನ ಔತಣಕೂಟದ ಅನುಭವಗಳನ್ನು ದಾಖಲಿ ಸಿದ್ದಾರೆ.

ಸಂಪಾದಕನೊಬ್ಬನಿಗೆ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿಗಳಂಥ ಅತಿ ಗಣ್ಯರೊಡನೆ, ಪ್ರವಾಸ ಮಾಡಲು ಸಿಗುವ ಅವಕಾಶ ಮರೆಯಲಾಗದ್ದು. ಹಿಂದೆಂದೂ ನೋಡಿ ರದ, ವಿದೇಶಿ ಗಣ್ಯರೊಡನೆ ನಮ್ಮ ಪ್ರಧಾನಿ ಅಥವಾ ರಾಷ್ಟ್ರಪತಿಗಳು ತೀರಾ ಹತ್ತಿರದಿಂದ ಒಡನಾಡುವುದನ್ನು, ಅವರೊಂದಿಗೆ ಔತಣಕೂಟದಲ್ಲಿ ಭಾಗ ವಹಿಸುವುದನ್ನು ಪ್ರತ್ಯಕ್ಷದರ್ಶಿಯಾಗಿ ನೋಡುವುದು ಒಂದು ಅನೂಹ್ಯ ಅವಕಾಶವೇ. ಶಿಷ್ಟಾಚಾರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರೊಡನೆ ವ್ಯವಹರಿಸುವ ರೀತಿಯಿಂದಲೂ ಇದೊಂದು ಅಪೂರ್ವ ಅವಕಾಶವೇ. ಅದರಲ್ಲೂ ವಿದೇಶಗಳಿಗೆ ಹೋದಾಗ ಅಥವಾ ನಮ್ಮ ದೇಶಕ್ಕೆ ಆಗಮಿಸುವ ವಿದೇಶಿ ಗಣ್ಯರ ಗೌರವಾರ್ಥ ಏರ್ಪಡಿಸುವ ಔತಣಕೂಟದಲ್ಲಿ ಸಂಪಾದಕರಿಗೆ ಭಾಗವಹಿಸುವ ಅವಕಾಶ ಸಿಕ್ಕಾಗ ಅದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು.

ಕಾರಣ ಅಂಥ ಅವಕಾಶ ಜೀವನದಲ್ಲಿ ಮತ್ತೊಮ್ಮೆ ಅಥವಾ ಪದೇ ಪದೆ ಸಿಗುವುದಿಲ್ಲ. ಒಬ್ಬ ಸಂಪಾದಕನಾದವನಿಗೆ ಸಿಗಬಹುದಾದ ವೃತ್ತಿಸಂಬಂಧಿ ಅಪರೂಪದ ಅವಕಾಶವೂ ಹೌದು. ದಿಲ್ಲಿಯಲ್ಲಿದ್ದು, ಪತ್ರಿಕೆಯ ಸಂಪಾದಕರಾಗಿ ವೀರ್ ಸಾಂಘವಿ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಜತೆಗೆ ವಿದೇಶಪ್ರವಾಸ ಮಾಡಿದ್ದನ್ನು ಸ್ವಾರಸ್ಯವಾಗಿ ವಿವರಿಸಿದ್ದಾರೆ. ವಾಜಪೇಯಿ ಅಮೆರಿಕಕ್ಕೆ ಭೇಟಿ ನೀಡಿದಾಗ, ಅವರ ಗೌರವಾರ್ಥ ಅಂದಿನ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ವೈಟ್ ಹೌಸ್‌ಸಿನಲ್ಲಿ ಔತಣಕೂಟ ಏರ್ಪಡಿಸಿದ್ದರಂತೆ. ಆ ಔತಣಕೂಟವೇ ಕ್ಲಿಂಟನ್ ಅವರ ಅಂಥ ಕೊನೆಯ ಕೂಟವಾದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಭಾಗವಹಿಸಿದ್ದರು. ಅಮೆರಿಕದಲ್ಲಿ ನೆಲೆಸಿದ ಭಾರತೀಯ ಮೂಲದ ಗಣ್ಯರೆಲ್ಲಾ ಭಾಗವಹಿಸಿದ್ದರು.

ಕ್ಲಿಂಟನ್ ಎಲ್ಲರನ್ನೂ ತಮ್ಮ ಮನೆಗೆ ಬಂದ ಅತಿಥಿಗಳೇನೋ ಎನ್ನುವ ರೀತಿಯಲ್ಲಿ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸಿದರಂತೆ. ಹಿಲ್ಲರಿ ಕೂಡ ಅಲ್ಲಿ ಆಗಮಿಸಿದ
ಪ್ರತಿಯೊಬ್ಬರನ್ನೂ ಮಾತಾಡಿಸಿದರಂತೆ. ವೀರ್ ಸಾಂಘವಿ ಹತ್ತಿರ ಆಗಮಿಸಿದ ಕ್ಲಿಂಟನ್ ಪತ್ನಿಯನ್ನು ಪರಿಚಯಿಸಿದರಂತೆ. ನಿಮ್ಮ ಪತ್ನಿ ಯಾರಿಗೆ ಪರಿಚಯವಿಲ್ಲ? ಎಂದು ಹೇಳಿದಾಗ, ಆಕೆ ನಿಜಕ್ಕೂ ಗ್ರೇಟ್ ಇರಬೇಕು ಅಲ್ಲವಾ? ಎಂದು ಕ್ಲಿಂಟನ್ ನಗುತ್ತಾ ಹೇಳಿದರಂತೆ. ಪ್ರಾಯಶಃ ಅವರಿಬ್ಬರಿಗೂ ನಾನು ಯಾರು ಎಂಬುದು
ಗೊತ್ತಿರಲಿಕ್ಕಿಲ್ಲ. ಇಂಥ ಔತಣಕೂಟ ತೀರಾ ನಾಟಕೀಯ. ಮರುದಿನ ನೀವು ವೈಟ್ ಹೌಸ್ ಹತ್ತಿರ ಹೋದರೆ, ಅಲ್ಲಿನ ಭದ್ರತಾ ಪಡೆಯ ಸಿಬ್ಬಂದಿ ಹತ್ತಿರವೂ ಬಿಟ್ಟು ಕೊಳ್ಳಲಾರ.

ನಿನ್ನೆ ನಿಮ್ಮ ಅಧ್ಯಕ್ಷ ಮತ್ತು ಅವನ ಪತ್ನಿಯ ಜತೆ ಔತಣಕೂಟದಲ್ಲಿ ಭಾಗಿಯಾಗಿದ್ದೆ ಎಂದರೂ ಅವರು ನಂಬುವುದಿಲ್ಲ. ಸ್ವತಃ ಕ್ಲಿಂಟನ್ ಎದುರಿಗೆ ಸಿಕ್ಕರೂ ನಿಮ್ಮ ಗುರುತು ಹಿಡಿಯಲಿಕ್ಕಿಲ್ಲ. ಭಾರತಕ್ಕೆ ಬಂದು ಸ್ನೇಹಿತರ ಮುಂದೆ ಹೇಳಿದರೂ, ಅವರೂ ನಂಬುವುದಿಲ್ಲ ಅಥವಾ ಸುಮ್ಮನೆ ನಂಬಿದಂತೆ ನಟಿಸಬಹುದು ಅಥವಾ ಇವನು ಏನು ಛೋಡ್ತಾನಪ್ಪ ಎಂದು ಅಂದುಕೊಳ್ಳಬಹುದು, ಅದಕ್ಕೆ ಪೂರಕ ಪುರಾವೆ, ಸಾಕ್ಷ್ಯ ನೀಡದಿದ್ದರೆ. ಇಂಥ ಪಾರ್ಟಿಗಳಿಗೆ ಹೋದರೆ, ನಾವಾಗಿಯೇ
ಯಾರ ಹತ್ತಿರವೂ ಹೇಳಬಾರದಂತೆ. ಆದರೆ ಬೇರೆಯವರು ನಮ್ಮ ಬಗ್ಗೆ ಹೇಳುವಂತೆ ನೋಡಿಕೊಳ್ಳಬೇಕಂತೆ.

ಒಮ್ಮೆ ಲಂಡನ್‌ನಲ್ಲಿ ಬ್ರಿಟಿಷ್ ಪ್ರಧಾನಿ, ಭಾರತದ ಪ್ರಧಾನಿ ಡಾ.ಮನಮೋಹನ ಸಿಂಗ್ ಗೌರವಾರ್ಥ ಬಾಂಕ್ವೆಟ್ ಏರ್ಪಡಿಸಿದಾಗ, ವೀರ್ ಸಾಂಘವಿ ಕೂಡ ಹೋಗಿದ್ದರಂತೆ. ಆ ಪಾರ್ಟಿಯಲ್ಲಿ ಬ್ರಿಟನ್ ಸಂಪುಟದಲ್ಲಿದ್ದ ಎಲ್ಲಾ ಸಚಿವರು, ಸಂಸದರು, ಮಾಜಿ ಪ್ರಧಾನಿಗಳು ಮತ್ತು ಇನ್ನಿತರ ಗಣ್ಯರು ಭಾಗವಹಿಸಿದ್ದರಂತೆ. ಬ್ರಿಟನ್‌ನಲ್ಲಿ ನಡೆಯುವ ಇಂಥ ಔತಣಕೂಟದಲ್ಲಿ ಪ್ರತಿಯೊಬ್ಬರೂ ಅವರ ಹೆಸರು ಬರೆದ ಟ್ಯಾಗ್ ಧರಿಸುವುದು ಕಡ್ಡಾಯ. ಕೆಲವೊಮ್ಮೆ ಪಾರ್ಟಿಯಲ್ಲಿ ಭಾಗವಹಿಸಿ
ದಾಗ ಎಲ್ಲರಿಗೂ ಎಲ್ಲರೂ ಪರಿಚಯವಿರುವುದಿಲ್ಲ. ಇವರು ಎಂದುಕೊಂಡು ಇನ್ಯಾರನ್ನೋ ಮಾತಾಡಿಸಿ ಫಜೀತಿ, ಮುಜುಗರವನ್ನು ತಪ್ಪಿಸಲು, ಇದು ಸಹಾಯಕ. ಆ ಪಾರ್ಟಿಯಲ್ಲಿ ಭಾಗವಹಿಸಿದ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಸಹ ತಮ್ಮ ಹೆಸರಿರುವ ನೇಮ್ ಪ್ಲೇಟ್ ಧರಿಸಿದ್ದರಂತೆ!

ಒಮ್ಮೆ ಟೋಕಿಯೋದಲ್ಲಿ, ಜಪಾನ್ ಪ್ರಧಾನಿ ಏರ್ಪಡಿಸಿದ ಔತಣಕೂಟದಲ್ಲಿ, ಒಂದೇ ಟೇಬಲ್ ನಲ್ಲಿ, ಸೋನಿ ಕಂಪನಿಯ ಅಧ್ಯಕ್ಷರ ಜತೆ ವೀರ್ ಸಾಂಘವಿ ಕುಳಿತಿದ್ದರಂತೆ. ಅಲ್ಲಿ ಅತಿಗಣ್ಯರಿಗೆ ಬಡಿಸುತ್ತಿದ್ದ ಆಹಾರ- ಖಾದ್ಯಗಳನ್ನು ನೋಡಿದ ಸೋನಿ ಕಂಪನಿಯ ಅಧ್ಯಕ್ಷರು, ನಮ್ಮ ಪ್ರಧಾನಿಯ ಔತಣಕೂಟ ಅಂದ್ರೆ ಹೀಗೆ.. ಅತಿ ಕೆಟ್ಟ ಆಹಾರವನ್ನು ವಿದೇಶಿ ಗಣ್ಯರಿಗೆ ನೀಡುತ್ತಾರೆ. ವಿದೇಶಿ ಗಣ್ಯರು ಇದೇ ನಿಜವಾದ ಜಪಾನಿ ಆಹಾರ ಎಂದು ಸೇವಿಸುತ್ತಾರೆ. ಆದರೆ ಇದು ಅಷ್ಟೇನೂ ಒಳ್ಳೆಯ ಆಹಾರವಲ್ಲ. ನನಗಂತೂ ಇಂಥ ಔತಣಕೂಟಗಳಲ್ಲಿ ಭಾಗಿಯಾಗಿ ಬೇಸರವಾಗಿಬಿಟ್ಟಿದೆ. ಕೆಟ್ಟ ಆಹಾರ ಸೇವಿಸಲು ಇಂಥ ಪಾರ್ಟಿಗೆ ಬರಬೇಕಾ? ಎಂದು ಹೇಳಿದರಂತೆ.

ವಾಜಪೇಯಿ ಅವರ ಜತೆ ವಿದೇಶ ಪ್ರವಾಸ ಒಂದು ವಿಭಿನ್ನ ಅನುಭವ ನೀಡುವಂಥದ್ದು. ಅವರು ತಾವು ಉಳಿದುಕೊಂಡ ಸೂಟ್ ರೂಮಿನಿಂದ ಹೊರಬಂದು, ಆ
ನಗರದ ಒಳ್ಳೆಯ ರೆಸ್ಟೋರೆಂಟುಗಳಿಗೆ ಹೋಗುತ್ತಿದ್ದರು. ಅದರಲ್ಲೂ ಅವರಿಗೆ ಚೈನೀಸ್ ಆಹಾರ ಅಂದ್ರೆ ಪಂಚಪ್ರಾಣ. ತಮ್ಮ ಜತೆಗೆ ಆಯ್ದ ಪತ್ರಕರ್ತರನ್ನೂ ಕರೆದುಕೊಂಡು ಹೋಗುತ್ತಿದ್ದರು. ಆಗ ಅವರು ಬಹಳ ಆರಾಮವಾಗಿ ಇರುತ್ತಿದ್ದರು. ಆ ಸಮಯದಲ್ಲಿ ಅವರು ತಾವು ಪ್ರಧಾನಿ ಎಂಬ ಬಿಗುಮಾನ, ಡೌಲು ಮರೆತು ಎಲ್ಲರೊಂದಿಗೆ ರಿಲ್ಯಾಕ್ಸ್ ಆಗಿರಲು ಬಯಸುತ್ತಿದ್ದರು. ಆ ವೇಳೆ ಅವರ ಬಾಯಲ್ಲಿ ಜೋಕುಗಳು, ಹಳೆ ತಮಾಷೆ ಪ್ರಸಂಗಗಳು, ಶಾಯರಿಗಳು ಬರುತ್ತಿದ್ದವು. ಆಫ್ ದಿ ರೆಕಾರ್ಡ್ ಅನೇಕ ಹಳೆಯ ಘಟನೆಗಳನ್ನು ಅವರು ಮೆಲುಕು ಹಾಕುತ್ತಿದ್ದರು.

ವಾಜಪೇಯಿ ಅವರ ಹಾಗೆ, ವಿದೇಶ ಪ್ರವಾಸಗಳಲ್ಲಿ, ಮುಕ್ತವಾಗಿ ಬೆರೆಯುವ ಮತ್ತೊಬ್ಬ ಪ್ರಧಾನಿ ಸಿಗಲಿಕ್ಕಿಲ್ಲ. ವಿದೇಶ ಪ್ರವಾಸಕ್ಕೆಂದು ವಿಶೇಷ ವಿಮಾನವನ್ನು
ಅಣಿಗೊಳಿಸುವಾಗ, ಪತ್ರಕರ್ತರಿಗೆ ಬಿಸಿನೆಸ್ ಕ್ಲಾಸ್‌ನಲ್ಲಿರುವ ದೊಡ್ಡ ಆಸನಗಳನ್ನು ಏರ್ಪಡಿಸುವಂತೆ ಸೂಚಿಸಿದರು ವಾಜ ಪೇಯಿ. ಅದಕ್ಕಿಂತ ಮೊದಲು, ಪತ್ರಕರ್ತರಿ ವಿಮಾನದ ಕೊನೆಯಲ್ಲಿ ಎಕಾನಮಿ ಕ್ಲಾಸಿನಲ್ಲಿರುವಂಥ ಸಣ್ಣ ಆಸನಗಳಿ ರುತ್ತಿದ್ದವು. ಕಾಲು ಗಳನ್ನು ಬಿಡುಬೀಸಾಗಿ ಚಾಚಿಕೊಳ್ಳಲು ಸಹ ಆಗುತ್ತಿರ ಲಿಲ್ಲ. ವಿಮಾನದಲ್ಲಿ ಪತ್ರಕರ್ತರು ಮಾತ್ರ ಅನುಭವಿಸುತ್ತಿರುವ ಈ ಕಷ್ಟವನ್ನು ಗಮನಿಸಿದ ವಾಜಪೇಯಿ, ಅವರಿಗೆ (ಪತ್ರಕರ್ತರಿಗೆ) ಬಿಜಿನೆಸ್ ಕ್ಲಾಸ್ ಸೀಟು ಗಳನ್ನು ಅಳವಡಿಸುವಂತೆ ಸೂಚಿಸಿದರು. ನಂತರ ಈ ಪರಂಪರೆ ಮುಂದುವರಿಯಿತು.

ನಾನು ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ಅಽಕಾರದಲ್ಲಿರುವ ಎಲ್ಲಾ ಪ್ರಧಾನಿ, ರಾಷ್ಟ್ರಪತಿ ಮತ್ತು ಕೆಲವು ವಿದೇಶಾಂಗ ಸಚಿವರೊಂದಿಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೇಶಗಳಿಗೆ ಹೋಗಿದ್ದೇನೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರ ಜತೆ ಹದಿನಾರು ದಿನಗಳ ಕಾಲ ನಾಲ್ಕು ದೇಶಗಳಿಗೆ ಹೋಗಿದ್ದೆ. ಹಾಗೆ ವಾಜಪೇಯಿ ಸೇರಿದಂತೆ ಮೂವರು ಪ್ರಧಾನಿಗಳ ಜತೆ ವಿದೇಶ ಪ್ರವಾಸಕ್ಕೆ ಹೋಗಿದ್ದೆ. ರಷ್ಯಾದ ರಾಜಧಾನಿ ಮಾಸ್ಕೋದ ಕ್ರಿಮ್ಲಿನ್ ನಲ್ಲಿರುವ ಬಂಗಾರದ ಅರಮನೆಯಲ್ಲಿ ಅಧ್ಯಕ್ಷ ಪುಟಿನ್, ಡಾ.ಕಲಾಂ ಗೌರವಾರ್ಥ ಔತಣಕೂಟ ಏರ್ಪಡಿಸಿದ್ದರು.

ಪುಟಿನ್ ಮತ್ತು ಡಾ.ಕಲಾಂ ಅವರ ಟೇಬಲ್‌ನಿಂದ ನಾಲ್ಕು ಮೀಟರ್ ಅಂತರದಲ್ಲಿ ನಮ್ಮ ಟೇಬಲ್ ಇತ್ತು. ಅವರಿಬ್ಬರೂ ಮಾತಾಡುವುದು ನಮಗೆ ಸ್ಪಷ್ಟವಾಗಿ
ಕೇಳುವಷ್ಟು ಹತ್ತಿರದಲ್ಲಿದ್ದೆವು. ಡಾ.ಕಲಾಂ ಮಿತಾಹಾರಿ. ಅವರು ಔತಣಕೂಟದಲ್ಲಿ ಟೋಸ್ಟಿಂಗ್‌ಗೆಂದು ಗ್ಲಾಸನ್ನು ಎತ್ತುವವರಲ್ಲ. ಚಿಯರ್ಸ್ ಎಂದು ಹೇಳಿದವರಲ್ಲ.
ಆ ದಿನ ಡಾ.ಕಲಾಂ ಅವರಿಗೆಂದು, ಪುಟಿನ್ ಸರಳವಾದ ಅಡುಗೆ ಸಿದ್ಧಪಡಿಸಿದ್ದರು. ಆದರೆ ಅದನ್ನು ಸಿದ್ಧಪಡಿಸಿದವರು ರಷ್ಯನ್ ಅಡುಗೆಭಟ್ಟರು. ಆಗ ತಾನೇ ಒಗ್ಗರಣೆ ಹಾಕಿದ ಖಾದ್ಯವನ್ನು ಟೇಬಲ್ ಮೇಲೆ ತಂದಿಟ್ಟರು.

ಅದರ ಘಾಟು ಎಷ್ಟಿತ್ತೆಂದರೆ, ಡಾ.ಕಲಾಂ ತಕ್ಷಣ ಆಕ್ಷೀ.. ಆಕ್ಷೀ…ಆಕ್ಷೀ …. ಎಂದರು. ಅವರ ಕಣ್ಣುಗಳಲ್ಲಿ ನೀರಿಳಿಯಲಾ ರಂಭಿಸಿತ್ತು. ಇಡೀ ಔತಣಕೂಟ ದಲ್ಲಿದ್ದವರೆಲ್ಲ ರಾಷ್ಟ್ರಪತಿಗಳ ಕಡೆಗೆ ನೋಡಲಾರಂಭಿಸಿದರು. ತಕ್ಷಣ ರಾಷ್ಟ್ರಪತಿಗಳು ಹತ್ತಿರದಲ್ಲಿರುವ ರೆಸ್ಟ್‌ರೂಮಿಗೆ ಹೋಗಿ, ಸಾವರಿಸಿಕೊಂಡು ಬಂದರು. ರಾಷ್ಟ್ರಪತಿಗಳು ಅತ್ತ ಹೋದಾಗ, ಇತ್ತ ಪುಟಿನ್ ಕೂಡ, ಆಕ್ಷೀ …ಆಕ್ಷೀ ಎನ್ನಲಾರಂಭಿಸಿದರು. ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ಭಾಗವಹಿಸಿದ ಔತಣಕೂಟದಲ್ಲಿ, ಇಂಥ ಖಾದ್ಯಗಳನ್ನು ಇಡುವುದಿಲ್ಲ. ರಾಷ್ಟ್ರಪತಿಗಳ ಜತೆಯಲ್ಲಿರುವ ಅಡುಗೆ ಭಟ್ಟರು ಕೂಡ ಈ ಎಲ್ಲಾ ಸಂಗತಿಗಳ ಬಗ್ಗೆ ನಿಗಾವಹಿಸಿರುತ್ತಾರೆ.

ಸಾಕಷ್ಟು ಎಚ್ಚರಿಕೆ ವಹಿಸಿರುತ್ತಾರೆ. ಆದರೆ ಅಂದು ಅಚಾತುರ್ಯವಾಗಿತ್ತು. ಈ ಬಗ್ಗೆ ಪುಟಿನ್ ಕ್ಷಮೆಯಾಚಿಸಿದರು. ಆದರೆ ತಕ್ಷಣ ಡಾ.ಕಲಾಂ, ನೋ..ನೋ..
ಪ್ರೆಸಿಡೆಂಟ್ ಪುಟಿನ್… ನನ್ನ ಮೂಗುಬಹಳ ಸೂಕ್ಷ್ಮ. ನಾನು ಉಪ್ಪನ್ನು ತಂದಿಟ್ಟರೂ ಕೆಲವೊಮ್ಮೆ ಸೀನುತ್ತೇನೆ… ನೀವು ತಪ್ಪು ಭಾವಿಸಬೇಡಿ… ಆಹಾರ ತಣ್ಣಗಾಗುತ್ತದೆ.. ನಾವೆಲ್ಲಾ ನಮ್ಮ ಮುಂದಿಟ್ಟ ಆಹಾ ರವನ್ನು ಸೇವಿಸೋಣ ಎಂದು ಅಲ್ಲಿಗೆ ಇಡೀ ಮುಜುಗರದ ಪ್ರಸಂಗಕ್ಕೆ ಮಂಗಳ ಹಾಡಿದರು. ಎರಡೂ ದೇಶಗಳ ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿಗಳು ಬಂದು, ಈ ಘಟನೆಯನ್ನೇ ಹೆಡ್ ಲೈನ್ ಮಾಡಬೇಕಿಲ್ಲ ಎಂದು ತೇಪೆ ಹಚ್ಚಿದರು. ನನ್ನಲ್ಲೂ ಇಂಥ ಅವೆಷ್ಟೋ ಸ್ವಾರಸ್ಯ ಕತೆಗಳಿವೆ.. ಮುಂದೆ ಯಾವತ್ತಾದರೂ ಹೇಳೋಣ..