Thursday, 19th September 2024

ಸಾಮರ್ಥ್ಯವೇ ಸಕ್ಸಸ್’ನ ಸಾರೋಟು, ಇದಕ್ಕಿಲ್ಲ ಯಾವುದೇ ಕಟ್‌’ರೂಟು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ -49

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಐಎಎಸ್ ಆಕಾಂಕ್ಷಿಗಳಿಗೆ ಶಾಲಿನಿ ರಜನೀಶ್ ಕಿವಿಮಾತು

ಬೆಂಗಳೂರು: ನಮ್ಮ ಸಾಮರ್ಥ್ಯದ ಮೂಲಕ ನಾವು ಯಶಸ್ಸು ಗಳಿಸಲು ಪ್ರಯತ್ನ ಮಾಡಬೇಕೆ ವಿನಃ ಸುತ್ತಲಿನವರು ಸರಿಯಿಲ್ಲ ಎಂದುಕೊಂಡು ಕೈಕಟ್ಟಿ ಕೂರುವುದು ಸರಿಯಲ್ಲ. ನಮ್ಮ ಬಲದಲ್ಲಿ ನಂಬಿಕೆಯಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್
ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್ ಆಯೋಜಿಸಿದ್ದ ಸಂವಾದದಲ್ಲಿ ಐಎಎಸ್ ಅಧಿಕಾರಿಯಾಗುವುದು ಹೇಗೆ ? ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಐಎಎಸ್ ಅಽಕಾರಿಯಾಗುವ ಆಕಾಂಕ್ಷಿಗೆ ಸರಕಾರದ ಆಸ್ತಿಯನ್ನು ನಮ್ಮ ಸ್ವಂತ ಆಸ್ತಿಯಂತೆ ಬಳಸಿಕೊಳ್ಳಬೇಕು ಎಂಬ ಬಯಕೆ ಇರಬೇಕು ಎಂದರು.

ಸಮುದಾಯದಲ್ಲಿ ಇರುವುದನ್ನು ಬಳಸಲು ನನ್ನ ಪಾತ್ರವೇನು ಎಂಬುದನ್ನು ಚಿಂತನೆ ಮಾಡಬೇಕು. ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ಆಸೆಯಿದ್ದವರು ಮಾತ್ರವೇ ಐಎಎಸ್ ಗೆ ಬರಬೇಕು. ಹಣ ಗಳಿಸುವ ಆಸೆ ಯಿದ್ದರೆ ಬೇರೆ ಕಡೆ ಹೋಗಿ, ವ್ಯಾಪಾರ ಮಾಡಬಹುದು. ಇಲ್ಲಿ ಸೇವೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.

ನಾವು ಎಷ್ಟು ಜ್ಞಾನ ಪಡೆಯುತ್ತೇವೆ, ಅಷ್ಟು ಅಂಕಗಳನ್ನು ಪಡೆಯುತ್ತೇವೆ ಎಂಬ ವಿಚಾರದಲ್ಲಿ ಕಾಂಪ್ರಮೈಸ್ ಬೇಡ ಎಂಬುದು ನನ್ನ ಸಲಹೆ. ನಮ್ಮ ಸ್ಪರ್ಧೆ ನಮ್ಮ ಜತೆಯಲ್ಲೇ ಇರಬೇಕು, ದಿನೇ ದಿನೆ ನಾವು ಉತ್ತಮರಾಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು. ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ನಮ್ಮ ಮಕ್ಕಳು ಕಲಿಯುತ್ತಾರೆ. ಮಕ್ಕಳ ಮುಂದೆ ನಾವು ಸುಳ್ಳು ಹೇಳಿ, ಮಕ್ಕಳಿಗೆ ಹೇಳುವುದು ಬೇಡ ಎಂಬುದನ್ನು ಹೇಳಿದರೆ ಅವರು ಕಲಿಯುವು ದಿಲ್ಲ, ನಾವೇ ಅವರಿಗೆ ಮಾದರಿಯಾಗಬೇಕು. ಸಣ್ಣವರಾಗಿದ್ದಾಗಲೇ ಅವರನ್ನು ಸಿದ್ಧಗೊಳಿಸಬೇಕು. ಮೊಬೈಲ್ ಸೇರಿದಂತೆ ಅನೇಕ ತಂತ್ರಜ್ಞಾನಗಳಿದ್ದು, ಅವುಗಳಲ್ಲಿ ನಾವು ಸಿನಿಮಾ ನೋಡಿ ಟೈಂ ಪಾಸ್ ಮಾಡಲೂಬಹುದು, ಜ್ಞಾನ ಸಂಪಾದನೆಯನ್ನೂ ಮಾಡ ಬಹುದು. ಆದರೆ, ಆಯ್ಕೆ ನಮ್ಮದಾಗಿರುತ್ತದೆ ಎಂದು ತಿಳಿಸಿದರು.

ಬಾಲ್ಯವೇ ನನಗೆ ಪ್ರೇರಣೆ: ನಮ್ಮ ತಾಯಿ ‘ನಾನು ಸ್ವತಂತ್ರವಾಗಲು ಸಾಧ್ಯವಾಗಲಿಲ್ಲ, ನೀವು ಆಗ್ತೀರಾ ಎಂದು ಆಸೆಪಟ್ಟರು. ಅದರಂತೆ ನಾನು ನಡೆದೆ. ತಂದೆ ಬಹಳ ಕಷ್ಟದಿಂದ ಮೇಲೆ ಬಂದವರು, ಅವರ ಜೀವನವೇ ನನಗೊಂದು ಸಂದೇಶ. ತಂದೆಯ ಕುಟುಂಬ ಪಾಕಿಸ್ತಾನದಲ್ಲಿತ್ತು. ಕುಟುಂಬವೆಲ್ಲ ಹರಿಯಾಣಕ್ಕೆ ಬಂದು ನಿರಾಶ್ರಿತರ ಶಿಬಿರದಲ್ಲಿದ್ದರು.

ಹೊಸದಾಗಿ ಜೀವನ ಮಾಡಬೇಕಾಯಿತು. ಹಣ್ಣಿನ ಮಾರಾಟ ಮಾಡಿ ಬದುಕು ಕಟ್ಟಿಕೊಂಡರು. ನಾನು ಬಾಲ್ಯದಲ್ಲಿ ಶಾಲೆಯಲ್ಲಿ ಓದುವಾಗ ಒಬ್ಬ ಹಣವಂತರ ಮಗಳು ಬಾಸಿಸಂ ಮಾಡುತ್ತಿದ್ದಳು. ಜತೆಗೆ ಎಲ್ಲದರಲ್ಲೂ ಮೊದಲು ಬರುತ್ತಿದ್ದಳು. ಆಗ ಅದನ್ನು ವಿರೋಧಿಸಿ, ನಾನು ಮೊದಲು ಬರಬೇಕು ಎಂದು ಉದ್ದೇಶಿಸಿ ಪ್ರಯತ್ನ ನಡೆಸಿದೆ. ೧೦ನೇ ತರಗತಿಯಲ್ಲಿಯೇ ನನ್ನನ್ನು ಗೆಳೆಯರು ಶಾಲಿನಿ ಐಎಎಸ್ ಎಂದು ಕರೆಯುತ್ತಿದ್ದರು. ಹೀಗಾಗಿಯೇ ನಾನು ಭಾರತೀಯ ನಾಗರಿಕ ಸೇವೆಗೆ ಬಂದೆ ಎಂದು ತಿಳಿಸಿದರು.

ನಿವೃತ್ತಿ ನಂತರವಷ್ಟೇ ಕೋಚಿಂಗ್ ಬಗ್ಗೆ ಯೋಚನೆ: ಮೈಸೂರಿನಲ್ಲಿ ಒಬ್ಬ ಶಾಲಾ ಶಿಕ್ಷಕ ಜಯನಹಳ್ಳಿ ಸತ್ಯನಾರಾಯಣ ಗೌಡ ಎಂಬುವವರು, ಅವರು ತಮ್ಮ ಪರಿಚಯಸ್ಥ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಬಡ ಮಕ್ಕಳಿಗೆ ತರಬೇತಿ ಕೊಡುತ್ತಿದ್ದಾರೆ. ಉಚಿತವಾಗಿ ಐಎಎಸ್ ಸಿದ್ಧತಾ ಸಲಕರಣೆಗಳನ್ನು ನೀಡುತ್ತಿದ್ದಾರೆ.
ಇಂತಹವರ ಜತೆ ಕೈಜೋಡಿಸುತ್ತೇನೆ. ನಾನು ಸೆಂಟರ್ ತೆರೆಯಲು ಸಾಧ್ಯವಿಲ್ಲ. ಹಲವು ಜಾಗದಲ್ಲಿ ಇಂತಹ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ಸಲಹೆ ನೀಡು ತ್ತೇನೆ. ಅವಕಾಶ ಸಿಕ್ಕ ಕಡೆ ಮಾತನಾಡುತ್ತೇನೆ. ಸರಕಾರದಿಂದ ಇಂತಹ ಯೋಜನೆಯನ್ನು ಜಾರಿಗೆ ತರಲು ಪೈಲಟ್ ಯೋಜನೆ ರೂಪಿಸಿದ್ದೇವೆ. ಬಹುಶಃ
ನಿವೃತ್ತಿ ನಂತರ ಈ ಬಗ್ಗೆ ಯೋಚನೆ ಮಾಡುತ್ತೇನೆ.

ನನ್ನ ಪತಿಯೇ ನನ್ನ ಗುರು !
ಕನ್ನಡ ಕಲಿಕೆಯ ಜತೆಗೆ ಅನೇಕ ವಿಚಾರಗಳಲ್ಲಿ ಪತಿ ರಜನೀಶ್ ಅವರೇ ನನ್ನ ಗುರು ಎಂದ ಶಾಲಿನಿ ಅವರು, ಕಾರ್ಯಕ್ರಮದಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡುವ ಮೂಲಕ ತಾವು ಕನ್ನಡಿಗರೇ ಆಗಿರುವ ಬಗ್ಗೆ ತಿಳಿಸಿದರು. ಮೂಲತಃ ಹರಿಯಾಣದವರಾದರೂ ಕನ್ನಡ ಕಲಿಸಿದ್ದು ಪತಿ ರಜನೀಶ್. ರಜನೀಶ್, ನನಗಿಂತ ಮೂರು ವರ್ಷ ಮೊದಲು ಕರ್ನಾಟಕಕ್ಕೆ ಬಂದಿದ್ದರು. ಪುತ್ತೂರಿನಲ್ಲಿ ಎಸಿಯಾಗಿದ್ದರು. ಕರ್ನಾಟಕದಲ್ಲಿ ಕೆಲಸ ಮಾಡಲು ಕನ್ನಡ ಕಲಿಯಬೇಕು. ನಿಮ್ಮ ಗುರಿ ಮುಟ್ಟಲು ಇಲ್ಲಿನ ಭಾಷೆ ಕಲಿಯಬೇಕು ಎಂದು ಹೇಳುತ್ತಿದ್ದರು. 3 ದಿನಗಳಲ್ಲಿ ವ್ಯಾಕರಣ ಕಲಿಸಿದ್ದರು. ಕನ್ನಡಿಗರಿಂದ ಸಿಗುವ ಪ್ರೀತಿ ನಾನು ಮರೆಯುವಂತಿಲ್ಲ.  ಅಷ್ಟೊಂದು ಅದ್ಭುತ ಪ್ರೀತಿಯನ್ನು ಇಲ್ಲಿನ ಜನ ನನಗೆ ಕೊಟ್ಟಿದ್ದಾರೆ ಎಂದರು.

ಐಎಎಸ್ ಕೋಚಿಂಗ್ ಟಿಪ್ಸ್
? ಪ್ರಸ್ತುತ 136 ಕೋಟಿಗೆ ಜನಸಂಖ್ಯೆಗೆ 5000 ಐಎಎಸ್ ಅಧಿಕಾರಿಗಳು ಮಾತ್ರ ಇರೋದು.
? ವಿದ್ಯಾಭ್ಯಾಸಕ್ಕಿಂತ ಮಾನಸಿಕ ಧೃಢತೆ, ಸೇವಾಭಾವ, ದೇಶಭಕ್ತಿ, ಸ್ವಾರ್ಥವಿರದ ಮನೋಭಾವ ಮುಖ್ಯ.
? ಒಳ್ಳೆಯ ಆಡಳಿತ, ಸಮಾನತೆ, ತಂತ್ರಜ್ಞಾನ, ಸಾಮಾಜಿಕ ಜ್ಞಾನ ಅರಿವು ಮುಖ್ಯ.
? ಈ ಸ್ಥಾನದಲ್ಲಿ ಸಮಾಜದ ಎಲ್ಲ ರಂಗದಲ್ಲಿಯೂ ಕೆಲಸ ಮಾಡುವ ಯೋಗ ಸಿಗುತ್ತದೆ.
? ‘ನನ್ನ ಭವಿಷ್ಯ ನನ್ನ ಕೈಯಲ್ಲಿ’ ಮತ್ತು ‘ಐಎಎಸ್ ಕನಸು’ ಓದಲೇಬೇಕಾದ ಎರಡು ಪುಸ್ತಕಗಳು.
? ನನ್ನ ಮನೆಯೇ ಮೊದಲ ಪಾಠಶಾಲೆ, ತಂದೆಯೇ ನನ್ನ ಗುರು.
? ಐಎಎಸ್ ಪರೀಕ್ಷೆಗೆ ಹತ್ತನೇ ತರಗತಿಯಿಂದಲೇ ಪೂರ್ವಸಿದ್ಧತೆ ಮಾಡುವುದು ಒಳಿತು. ಪದವಿ ಮುಗಿಯುವುದರಷ್ಟೊತ್ತಿಗೆ ಹೆಚ್ಚಿನ ಒತ್ತಡವಿರುವುದಿಲ್ಲ.
? ಆತ್ಮವಿಶ್ವಾಸ, ಪರಿಶ್ರಮ, ಗುರಿ, ಸಾಧನೆ ಮೂಲಮಂತ್ರವಾಗಬೇಕು.

***

ಶಾಲಿನಿ ಅವರು ವಿಧಾನಸೌಧದಲ್ಲಿ ನಡೆಯುವುದನ್ನು ನಾನು ನೋಡಿಯೇ ಇಲ್ಲ. ಯಾವಾಗಲೂ ಓಡುತ್ತಲೇ ಇರುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ಕೆಲಸದ ಉತ್ಸಾಹವಿದೆ. ಯಾವುದೇ ಕೆಲಸವನ್ನು ಮರುದಿನವೇ ಮುಗಿಸುವ ಜಾಯಮಾನ ಅವರದ್ದು. ಅವರು ಮುಖ್ಯಕಾರ್ಯದರ್ಶಿ ಆಗುತ್ತಾರೆ, ಜತೆಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಆದರೆ ಒಳ್ಳೆಯದು.
– ಪ್ರಮೋದ್ ಮಧ್ವರಾಜ್ ಮಾಜಿ ಸಚಿ

Leave a Reply

Your email address will not be published. Required fields are marked *