Saturday, 23rd November 2024

ಹಣ ಗಳಿಕೆಯೇ ಮೂಲ ಉದ್ದೇಶ ಆಗದಿರಲಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 55

ವಿಶ್ವವಾಣಿ ಕ್ಲಬ್‌ ಹೌಸ್‌’ನಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸಂದೇಶ

ಬೆಂಗಳೂರು: ಎಲ್ಲರನ್ನೂ ಪ್ರೀತಿ ಮಾಡುವುದು ದೊಡ್ಡ ಮೌಲ್ಯ. ಜೀವನದ ಮೌಲ್ಯ ನಂಬಿಕೆ. ಹಣ ಗಳಿಕೆಯೇ ಮೂಲ ಉದ್ದೇಶವಾದರೆ ಜೀವನದ ಮೌಲ್ಯಕ್ಕೆ
ಸ್ಥಾನವಿಲ್ಲ ಎಂದು ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು, ಬಂಗಾರ ಅವಶ್ಯಕತೆ ಪೂರೈಸ ಬಹುದು. ಹೃದಯದ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನಕ್ಕೆ ಅರ್ಥ ಬರುತ್ತದೆ. ಜಾತಿ, ಮತ, ಲಿಂಗ, ಭಾಷೆಯನ್ನು ಭೌಗೋಳಿಕವಾಗಿ ತುಂಡು ತುಂಡಾಗಿಸಿದ್ದೇವೆ. ದ್ವೇಷ ಎಂಬುದು ಬೆಂಕಿ ಇದ್ದ ಹಾಗೆ.

ಹಾಗಾಗಿ ಇವತ್ತಿನ ಕಾಲಕ್ಕೆ ಮೌಲ್ಯ ಕಲಿಸುವುದು ಬಹಳ ಮುಖ್ಯ ಎಂದು ಹೇಳಿದರು. ನಾವು ಯಾರೂ ಅಪ್ಲಿಕೇಶನ್ ಹಾಕಿಕೊಂಡು ಹುಟ್ಟಿದವರಲ್ಲ. ಜನನ ಆಕಸ್ಮಿಕ, ಮರಣ ನಿಶ್ಚಿತ ನಡುವಿನ ಸಂಬಂಧವೇ ಜೀವನ. ಬದುಕು ಅಂದರೆ ಉಸಿರಾಡುವುದಲ್ಲ. ಏನಾದರೂ ಒಂದು ಸಾಧನೆ ಮಾಡಬೇಕು. ಭಗವಂತ ನಮಗೆ ಟೋಕನ್ ಕೊಟ್ಟು ಸಾಧನೆ ಮಾಡಲು ಭೂಮಿಗೆ ಕಳುಹಿಸಿದ್ದಾನೆ. ಅದನ್ನು ವ್ಯರ್ಥ ಮಾಡಬಾರದು. ಜೀವನ ದಲ್ಲಿ ಗುರಿ ಇರಬೇಕು. ಕಳ್ಳತನ ಮಾಡುವುದು, ಮೋಸ ಮಾಡುವುದು ಜೀವನವಲ್ಲ. ಬದುಕಿದರೆ ಮೌಲ್ಯದಿಂದ ಬದುಕಬೇಕು ಎಂದರು.

ಗಾಂಧಿ ಹೇಗೆ ಮಹಾತ್ಮರಾದರು? ಜನರು ಅವರನ್ನು ಏಕೆ ಸ್ಮರಿಸುತ್ತಾರೆ? ಯಾವ ಗುಣಗಳಿಂದ ಮನುಷ್ಯ ದೊಡ್ಡವನಾಗುತ್ತಾನೋ ಆ ಗುಣಗಳನ್ನು ಮೌಲ್ಯ ಎನ್ನುತ್ತೇವೆ. ಯಾರು ಮೌಲ್ಯಯುತ ಜೀವನ ನಡೆಸುತ್ತಾರೋ ಅವರು ಕೊನೆಯಲ್ಲಿ ದೈವತ್ವ ಪಡೆಯಬಹುದು ಎಂದರು. ಸಮಾಜದಲ್ಲಿ ನಮ್ಮ ನಡವಳಿಕೆ ಹೇಗಿರ ಬೇಕು, ಎಂತಹ ನಡವಳಿಕೆಗಳನ್ನು ನಾವು ಹೊಂದಿರಬೇಕು, ಯಾವ ನಡವಳಿಕೆಗಳನ್ನು ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಅಳವಡಿಸಿಕೊಂಡರೆ ಉತ್ತಮ ಎಂದು ಸೂಕ್ತವಾದ ಉದಾಹರಣೆಗಳೊಂದಿಗೆ ತಿಳಿಸಿದರು.

ಕರ್ಜಗಿ ಕೊಟ್ಟ ಸಲಹೆಗಳು

? ಜೀವನದಲ್ಲಿ ಗುರಿ ಇರಬೇಕು. ಆ ಗುರಿ ಈಡೇರಿಕೆಯತ್ತ ಗಮನ ಇರಬೇಕು. ನಾನು ಮಾಡುವ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಇರಬೇಕು.
? ಇಂದಿನ ಬಹಪಾಲು ಶಿಕ್ಷಣ ಹೆಚ್ಚಿನ ಗಳಿಕೆಯ ಪಾಸ್‌ಪೋರ್ಟ್ ಆಗಿದೆ. ಜೀವನ ಅರಳಿಸುವ ಶಿಕ್ಷಣ ಪಡೆಯಬೇಕು.
? ಕಳ್ಳತನ ಮಾಡುವುದು, ಮೋಸ ಮಾಡುವುದು ಜೀವನವಲ್ಲ. ಬದುಕಿದರೆ ಮೌಲ್ಯದಿಂದ ಬದುಕಬೇಕು.
? ನಾವು ಸಾಮಾಜಿಕವಾಗಿ, ವೈಯಕ್ತಿಕವಾಗಿ ಎಂತಹ ನಡವಳಿಕೆ ಹೊಂದಿದರೆ ಉತ್ತಮ ಎಂಬ ಅರಿವಿರಬೇಕು.

***

ನಮ್ಮ ದಿನನಿತ್ಯದ ಬದುಕಿಗೆ ತೀರಾ ನಿಕಟವಾದ ವಿಚಾರ ನೀಡುವವರು ಗುರುರಾಜ ಕರ್ಜಗಿ. ಯಾವುದೇ ವಿಷಯವಾದರೂ ಸೊಗಸಾಗಿ, ಪರಿಣಾಮಕಾರಿ
ಯಾಗಿ ಪ್ರಸ್ತುತಪಡಿಸುತ್ತಾರೆ. ಅಪರೂಪದ ಶಿಕ್ಷಣ ತಜ್ಞರು. ಶಿಕ್ಷಣದಲ್ಲಿ ಧನಾತ್ಮಕ ಬದಲಾವಣೆ ತರಲು ಅವರ ಪರಿಶ್ರಮ ಹೆಚ್ಚು. ಶಿಕ್ಷಣ, ಕಲಿಕೆಗೆ ಕರ್ಜಗಿ
ಅವರ ಬಹುದೊಡ್ಡ ಯೋಗದಾನವಿದೆ. ಜಗತ್ತಿನೆಡೆ ಅವರಿಗೆ ಅಭಿಮಾನಿಗಳಿದ್ದಾರೆ. ‘ಕರುಣಾಳು ಬಾ ಬೆಳಕೆ’ ಅಂಕಣದಿಂದ ನಮಗೆ ನಿತ್ಯವೂ ಪ್ರೇರಣೆ ಸಿಗುತ್ತಿದೆ. -ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು